ಬುಧವಾರ, ಡಿಸೆಂಬರ್ 2, 2020
26 °C
ಸತತ 20 ದಿನಗಳಿಂದ ನೀರು ಹೊರಬಿಡಲಾಗುತ್ತಿದೆ, ಹೆಚ್ಚಿದ ಅಂತರ್ಜಲ, ರೈತರಲ್ಲಿ ಸಂತಸ

ಕಾವೇರಿ ಕೃಪೆ: ದಾಖಲೆ ಬರೆದ ಮೆಟ್ಟೂರು ಜಲಾಶಯ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರಬೆಟ್ಟ (ಚಾಮರಾಜನಗರ ಜಿಲ್ಲೆ): ತಮಿಳುನಾಡಿನ ಮೆಟ್ಟೂರು ಜಲಾಶಯದಿಂದ ಸತತ 20 ದಿನಗಳಿಂದ ನೀರು ಹೊರ ಬಿಡಲಾಗುತ್ತಿದೆ. ಇದು ಹೊಸ ದಾಖಲೆ ಎನಿಸಿದೆ.

ಇದಕ್ಕೂ ಮೊದಲು, 21 ವರ್ಷಗಳ ಹಿಂದೆ 1998ರ ನವೆಂಬರ್‌ನಲ್ಲಿ ಜಲಾಶಯವು ಸತತ ಎಂಟು ದಿನಗಳ ಕಾಲ ಭರ್ತಿಯಾಗಿತ್ತು. ಕರ್ನಾಟಕದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ ಹರಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಈ ಅಣೆಕಟ್ಟು, 93.47 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ: ಮೆಟ್ಟೂರು ಜಲಾಶಯ ಭರ್ತಿ

ಸದ್ಯ ಜಲಾಶಯದಿಂದ 7,400 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಅಷ್ಟೇ ಒಳಹರಿವು ಇದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನ ಸೇಲಂ ಸೇರಿದಂತೆ ಸುತ್ತಮುತ್ತಲಿನ 12 ಜಿಲ್ಲೆಗಳ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಮೆಟ್ಟೂರು ಜಲಾಶಯ ಏಕೈಕ ಜಲಮೂಲವಾಗಿದೆ. ಇದರಿಂದಾಗಿ 16.4 ಲಕ್ಷ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗುತ್ತಿದೆ. 

ಹೆಚ್ಚಿದ ಅಂತರ್ಜಲ: ಜಲಾಶಯದಿಂದ ಎರಡು ಮೂರು ತಿಂಗಳಿಂದ ಉತ್ತಮ ನೀರಿನ ಸಂಗ್ರಹ ಇರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಾಗಿದೆ. ಕೊಳವೆಬಾವಿಗಳಲ್ಲಿ ಮತ್ತೆ ನೀರು ಕಾಣಿಸಿಕೊಳ್ಳಲು ಆರಂಭವಾಗಿದೆ.

ಇದನ್ನೂ ಓದಿ: ಮೆಟ್ಟೂರು ಅಣೆಕಟ್ಟು ಭರ್ತಿ 13 ಜಿಲ್ಲೆಗಳಲ್ಲಿ ಕಟ್ಟೆಚ್ಚರ

‘ನೀರಿಲ್ಲದೇ, ವಾರ್ಷಿಕವಾಗಿ ಎರಡು ಬೆಳೆ ತೆಗೆಯುವುದೇ ಕಷ್ಟವಾಗಿತ್ತು. ಈಗ ನೀರಿನ ಸಂಗ್ರಹ ಉತ್ತಮವಾಗಿರುವುದರಿಂದ ಅಂತರ್ಜಲ ಹೆಚ್ಚಾಗಿದೆ. ನಾಲ್ಕು ಬೆಳೆ ತೆಗೆಯಬಹುದು. ಕೆಲವು ದಿನಗಳಿಂದ ಮಳೆಯೂ ಬೀಳುತ್ತಿರುವುದರಿಂದ ಜಾನುವಾರುಗಳ ನಿರ್ವಹಣೆಗೂ ಅನುಕೂಲವಾಗಿದೆ’ ಎಂದು ಮೆಟ್ಟೂರಿನ ರೈತ ಗೋವಿಂದಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿನ್ನೀರು ವ್ಯಾಪ್ತಿ ವಿಸ್ತಾರ: ಈ ಮಧ್ಯೆ, ಮೆಟ್ಟೂರು ಜಲಾಶಯದ ಹಿನ್ನೀರು ಗಡಿಭಾಗ, ರಾಜ್ಯದ ಪಾಲಾರ್ ಬಳಿ ಇರುವ ಸೋರೆಕಾಯಿ ಮಡು ಹಾಗೂ ಗೋಪಿನಾಥಂನ ಆಸುಪಾಸಿನ ಗ್ರಾಮದವರೆಗೂ ವಿಸ್ತಾರಗೊಂಡಿದೆ. ಹಿನ್ನೀರು ವಿಸ್ತಾರಗೊಂಡಿರುವುದರಿಂದ ಮೀನುಗಾರರ ಮೊಗದಲ್ಲಿ ಮಂದಹಾಸ ಎದ್ದು ಕಾಣುತ್ತಿದೆ.

ಇನ್ನೂ ಒಂದು ವಾರ ಇದೇ ರೀತಿ ನೀರಿನ ಒಳಹರಿವಿದ್ದರೆ, ಹಿನ್ನೀರು ಗೋಪಿನಾಥಂವರೆಗೂ ತಲುಪಲಿದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು