ಶುಕ್ರವಾರ, ಏಪ್ರಿಲ್ 3, 2020
19 °C

ಕರಾವಳಿಯ ಕೋಳಿಸಾರು ಆಹಾ! ಬಾಯಲ್ಲಿ ನೀರು

ಮೇಘಲಕ್ಷ್ಮಿ ಮರುವಾಳ Updated:

ಅಕ್ಷರ ಗಾತ್ರ : | |

Prajavani

ತಟ್ಟೆಯಲ್ಲಿ ರೊಟ್ಟಿ ಚೂರುಗಳ ಮೇಲೆ ಕೋಳಿ ಸಾರು ಹುಯ್ದು ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಖಾರ ಖಾರ... ನಾಲಗೆ ಕತ್ತರಿಸುತ್ತದೆ. ಕಣ್ಣು, ಮೂಗಲ್ಲಿ ನೀರಿಳಿಯುತ್ತದೆ, ಆದರೂ ಕೋಳಿಯ ‘ಪುಳಿಮುಂಚಿ’ ಸಾರು ಸವಿಯುವುದೆಂದರೆ ಕರಾವಳಿ ಜನರಿಗೆ ಕಾತರ.

ಇಲ್ಲಿ ಮೀನು ಸಾಮಾನ್ಯವಾಗಿರುವುದರಿಂದ ಬಹುತೇಕರ ಮನೆಯಲ್ಲಿ ವಾರದಲ್ಲಿ ಮೂರು ದಿನವಾದರೂ ಮೀನಿಗೆ ಮಸಾಲೆ ಅರೆಯುತ್ತಾರೆ. ಆದರೆ, ಕೋಳಿಸಾರಿನ ರುಚಿಗಾಗಿ ವಾರಾಂತ್ಯದವರೆಗೆ ಅಥವಾ ಮನೆಗೆ ಅತಿಥಿಗಳು ಬರುವವರೆಗೆ ಕಾಯಬೇಕು. ಕೋಳಿಗೆ ಮಸಾಲೆ ಒಂದೇ ಆದರೂ ಬ್ರಾಯ್ಲರ್‌, ಟೈಸನ್‌, ಊರಿನ ಕೋಳಿಗಳ (ನಾಟಿ ಕೋಳಿ) ಬೇರೆ ಬೇರೆ ರುಚಿ ನಾಲಗೆಗೆ ಔತಣ. ಇತ್ತೀಚಿನ ದಿನಗಳಲ್ಲಿ ಬ್ರಾಯ್ಲರ್‌ ಕೋಳಿಯನ್ನು ಹೆಚ್ಚು ಬಳಸಲಾಗುತ್ತದೆ. ಮೃದುವಾಗಿ, ತಿನ್ನಲು ಹೆಚ್ಚು ತ್ರಾಸ ಪಡಬೇಕಾಗಿಲ್ಲ. ಆದರೆ, ಹೆಚ್ಚು ರುಚಿ ಊರಿನ ಕೋಳಿ.

ಕರಾವಳಿಯಲ್ಲಿ ನೀರು
ದೋಸೆಗೆ ಮೀನುಸಾರಿನ ಕಾಂಬಿನೇಷನ್‌ನಂತೆಯೇ, ಒತ್ತು ಶಾವಿಗೆ, ಇಡ್ಲಿ, ಕೊಟ್ಟಿಗೆ, ರೊಟ್ಟಿಗೆ ಕೋಳಿಯ ಪುಳಿಮುಂಚಿ ಸಾರು ಅತ್ಯುತ್ತಮ ಕಾಂಬಿನೇಷನ್‌. ಕೆಲವು ಹೋಟೆಲ್‌ಗಳು ಕೋರಿ–ರೊಟ್ಟಿ ಕಾಂಬಿನೇಷನ್‌ನ್ನು ವಿಶೇಷ ಮೆನ್ಯುವಾಗಿಸಿಕೊಂಡಿವೆ. ಇನ್ನು ಹಳ್ಳಿ ಮನೆಗಳಲ್ಲಿ ನಾಳೆ ಶಾವಿಗೆ ಒತ್ತುವುದಿದ್ದರೆ ಇಂದೇ ಕೋಳಿಸಾರು ತಯಾರಾಗುತ್ತದೆ. ಇಲ್ಲಿ ಕೋಳಿ ಪುಳಿಮುಂಚಿ ಸಾರು ತುಂಬಾ ಫೇಮಸ್ಸು. ಆದರ ವೈವಿಧ್ಯಕ್ಕೆ ಕೊರತೆಯಿಲ್ಲ.

ಪುಳಿಮುಂಚಿಯಲ್ಲಿ ಖಾರಕ್ಕೆ ಮೊದಲ ಪ್ರಾಶಸ್ತ್ಯ. ಹೆಚ್ಚು ಖಾರ ಇಷ್ಟ ಪಡದವರು ಇದೇ ಮಸಾಲೆಗೆ ತೆಂಗಿನತುರಿಯನ್ನು ಕಡೆದು ಹಾಕುವುದುಂಟು. ಕೆಲವೊಮ್ಮೆ ಮೆಣಸಿನ ಪ್ರಮಾಣ ಕಡಿಮೆ ಮಾಡಿ ಕರಿಮೆಣಸು ಹಾಕುವವರಿದ್ದಾರೆ. ಕರಿಮೆಣಸು ಖಾರ ಮಾತ್ರವಲ್ಲದೆ ಪದಾರ್ಥಕ್ಕೆ ವಿಶೇಷ ರುಚಿ ನೀಡುತ್ತದೆ. ಕೋಳಿಯ ಹಸಿರು ಪದಾರ್ಥ ತೀರಾ ವಿರಳ, ಅದೇನಿದ್ದರೂ ಹೋಟೆಲ್‌ಗಳಿಗೆ ಸೀಮಿತ. ಹಳ್ಳಿಯವರು ಮೆಚ್ಚುವುದು ಊರಿನ ಕೋಳಿ. ಊರಿನ ಕೋಳಿಯ ನಿಜವಾದ ರುಚಿ ನಾಲಗೆಗೆ ಹತ್ತಬೇಕಾದರೆ ತಿನ್ನುವ ಶೈಲಿಯನ್ನು ಗಟ್ಟಿ ಮಾಡಿಕೊಳ್ಳಬೇಕು. ಬ್ರಾಯ್ಲರ್‌ ಕೋಳಿ ತಿಂದಂತೆ ಊರಿನ ಕೋಳಿಯನ್ನು ತಿನ್ನಲು ಸಾಧ್ಯವಿಲ್ಲ. ಊರ ಕೋಳಿ ತುಂಬಾ ಗಟ್ಟಿ. ರುಚಿ ಎಳೆಯಲು ಹಲ್ಲುಗಳ ಎಲ್ಲ ಬಲ ಹಾಕಿ, ಎಲುಬು ಜಗಿಯಬೇಕು. ಹಾಗಿದ್ದರೂ ಅದರ ಸವಿಯನ್ನೇ ಇಷ್ಟಪಡುತ್ತಾರೆ. ಅದರಲ್ಲೂ ಕೋಳಿ ಅಂಕದಲ್ಲಿ ತಲೆ ಕಡಿಸಿಕೊಂಡ ಕೋಳಿಯ ಸಾರಿನ ರುಚಿ ಇನ್ನೂ ಅಪರೂಪ. ಮುಂಬೈ, ದುಬೈಯಲ್ಲಿರುವವರಿಗೆ ಕೋಳಿ ಸಿಕ್ಕೀತು. ಕೋಳಿ ಅಂಕದ ಕೋಳಿ ಸಿಗಬೇಕಾದರೆ ಊರಿಗೆ ಬರಲೇಬೇಕು. ಅದಕ್ಕೆಂದು ಹಾತೊರೆಯದ ತುಳುವರಿಲ್ಲ.

ಕೋಳಿಸಾರು ಮಾಡುವಾಗ ಕೋಳಿ ಎಷ್ಟು ಪ್ರಾಮುಖ್ಯವೋ, ಅದರ ರುಚಿ ಕಾಪಾಡಿಕೊಳ್ಳಲು ನಾವು ಹಾಕುವ ಮಸಾಲೆ ಪದಾರ್ಥಗಳೂ ಮುಖ್ಯವಾಗುತ್ತವೆ. ಹೆಚ್ಚು ಮಸಾಲೆ ಬೆರೆಸಿ ಕೋಳಿಯ ನೈಜ ರುಚಿಯನ್ನು ಕಳೆದುಕೊಳ್ಳಲು ಜನ ಬಯಸುವುದಿಲ್ಲ. ಹಾಗಾಗಿ ಪರಿಮಳಯುಕ್ತ ಸಾಂಬಾರು ಪದಾರ್ಥಗಳನ್ನು ಆದಷ್ಟು ಕಡಿಮೆ ಬಳಸುತ್ತಾರೆ.

ಕರಾವಳಿಯ ಕೋಳಿ ಖಾದ್ಯದಲ್ಲಿ ಇನ್ನೊಂದು ವಿಶೇಷವೆಂದರೆ ಭೂತಾರಾಧನೆ ಸಂದರ್ಭದಲ್ಲಿ ದೈವಕ್ಕೆ ಮಾಡುವ ಅಗೇಲು ಸೇವೆಯ (ನೈವೇದ್ಯ ಮಾದರಿ) ಕೋಳಿಪದಾರ್ಥ. ಭಿನ್ನವಾದ ಪರಿಮಳ ರುಚಿಯೊಂದಿಗೆ ಪುಳಿಮುಂಚಿಯಂತೆಯೇ ಜನರನ್ನು ಆಕರ್ಷಿಸುತ್ತದೆ. ಅಗೇಲು ದೈವಕ್ಕೆ ನೀಡುವ ಭಕ್ತಿಯ ಸಂಕೇತವಾದರೂ, ಅದರ ರುಚಿಗೆ ಮಾರು ಹೋಗದವರಿಲ್ಲ. ಅದರಲ್ಲಿ ವಿಶೇಷ ರುಚಿಯಿದ್ದರೂ ಈ ರೆಸಿಪಿ ನಮ್ಮ ದಿನನಿತ್ಯದ ಕೋಳಿ ಸಾರಿನ ರೆಸಿಪಿಯಲ್ಲಿ ಸುಳಿಯುವುದಿಲ್ಲ. ಇದಕ್ಕೆ ವಿಭಿನ್ನತೆಯೊಂದಿಗೆ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡಿರುವುದೂ ಕಾರಣವಾಗಿರಬಹುದು. ಈ ಅಡುಗೆಯಲ್ಲಿ ಪ್ರತಿಯೊಂದಕ್ಕೂ ಮಿತಿಯಿದೆ. ದೈವದ ಅಗೇಲಿಗೆ ಊರಿನ ಕೋಳಿಯನ್ನೇ ಬಳಸುವುದು. ಹೆಚ್ಚು ಜನರಿರುವ ಕಾರಣಕ್ಕೆ ಹೆಚ್ಚು ಕೋಳಿಯನ್ನು ಬಳಸುವಂತಿಲ್ಲ. ಆಚರಣೆಯಲ್ಲಿ ಇರುವ ನಂಬಿಕೆಯಂತೆ ಸೀಮಿತ ಸಾಂಬಾರು ಪದಾರ್ಥಗಳನ್ನು ಮಾತ್ರ ಹಾಕುತ್ತಾರೆ. ಈ ಸಾಂಬಾರು ಪದಾರ್ಥಗಳ ಬಳಕೆ ಒಂದು ಊರಿನಿಂದ ಊರಿಗೆ ವ್ಯತ್ಯಾಸಗೊಳ್ಳುತ್ತದೆ.

ಅಗೇಲು ಸೇವೆಯ ಪ್ರಸಾದರೂಪದಲ್ಲಿಯಷ್ಟೇ ಈ ಕೋಳಿಖಾದ್ಯ ತಿನ್ನಬೇಕು. ಹೊಟ್ಟೆ ತುಂಬುವಷ್ಟು ತಿನ್ನಲು ಸಿಗುವುದಿಲ್ಲ. ಆದರೆ, ಯಾವ ಮಸಾಲೆಯನ್ನು ಹಾಕಿದರೂ, ಯಾವ ಮಸಾಲೆಯನ್ನು ಹಾಕದೇ ಇದ್ದರೂ, ಪ್ರತಿ ವರ್ಷ ಒಂದೇ ರುಚಿ. ಮತ್ತೆ ಮತ್ತೆ ತಿನ್ನಬೇಕು ಎನ್ನುವಂತೆ ಆಸೆ ಹುಟ್ಟಿಸುವ ರುಚಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು