ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

Published 27 ಮೇ 2023, 4:44 IST
Last Updated 27 ಮೇ 2023, 4:44 IST
ಅಕ್ಷರ ಗಾತ್ರ

ಅನುಸೂಯ ಎಸ್‌. ಶರ್ಮಾ

ಕೈ ತೋಟ ಮಾಡುವುದು ಸುಲಭ. ಆದರೆ, ನಿರ್ವಹಣೆಯೇ ಸವಾಲು – ಇದು ಬಹುತೇಕ ಕೈತೋಟ ಪ್ರಿಯರ ಮಾತುಗಳು. ಅದರಲ್ಲೂ, ರೋಗ–ಕೀಟಬಾಧೆ ನಿಯಂತ್ರಣವಂತೂ ಬಹಳ ಕಠಿಣವಾದ ಕೆಲಸ.

ರೋಗ–ಕೀಟ ಬಾಧೆ ನಿವಾರಣೆ ಅಥವಾ ನಿಯಂತ್ರಣಕ್ಕಾಗಿ ಸಿಕ್ಕ ಸಿಕ್ಕ ರಾಸಾಯನಿಕ ಕೀಟನಾಶಕ, ರೋಗನಿವಾರಕ ಔಷಧಗಳನ್ನು ಸಿಂಪಡಿಸು ವುದಕ್ಕೂ ಭಯ. ಯಾಕೆಂದರೆ, ಒಮ್ಮೊಮ್ಮೆ ಈ ‘ಕೀಟನಾಶಕ‘ಗಳು ಉಪಕಾರಕ ಕೀಟಗಳನ್ನೂ ಕೊಂದುಬಿಡುತ್ತವೆ. ಕೆಲವು ಮಣ್ಣಿನಲ್ಲಿನ ಸೂಕ್ಷಾಣುಜೀವಿಗಳನ್ನೂ ನಾಶ ಮಾಡಬಹುದು. ಹಾಗಾದರೆ, ಇದಕ್ಕೆ ಪರಿಹಾರವೇನು?

ಚಿಂತಿಸಬೇಡಿ. ಹಿತ್ತಿಲ ಗಿಡಗಳನ್ನು ರೋಗ–ಕೀಟಬಾಧೆಯಿಂದ ರಕ್ಷಿಸಿಕೊಳ್ಳಲು ರಾಸಾಯನಿಕ ಕೀಟನಾಶಕಗಳೇ ಬೇಕಿಲ್ಲ. ನಿಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಕಷಾಯದಂತಹ ಮದ್ದುಗಳನ್ನು ತಯಾರಿಸಬಹುದು. ಇವುಗಳ ತಯಾರಿಗೆ ಸ್ವಲ್ಪ ಸಹನೆ, ಸ್ವಲ್ಪ ಸಮಯ ಬೇಕು. ಅಂಥ ಕೆಲವು ಕಷಾಯಗಳನ್ನು ಇಲ್ಲಿ ವಿವರಿಸಲಾಗಿದೆ.

ಸುವರ್ಣ ಸಿಂಪಡಣೆ

25 ಗ್ರಾಂ, ಸುವರ್ಣ ಗೆಡ್ಡೆಯ ಚೂರಿಗೆ ಒಂದು ಲೀಟರ್ ನೀರು ಹಾಕಿ ಹತ್ತು ಹದಿನೈದು ನಿಮಿಷ ಕುದಿಸಿ ಮುಚ್ಚಿಡಿ. 24 ಗಂಟೆಯ ನಂತರ ಈ ದ್ರಾವಣಕ್ಕೆ ಒಂಬತ್ತು ಲೀಟರ್ ನೀರು ಸೇರಿಸಿ ಬಳ್ಳಿ ತರಕಾರಿಗೆ ಸಿಂಪಡಿಸಿ. ಇದರಿಂದ ಮೊಗ್ಗು, ಹೂವು, ಹೀಚು ಕಾಯಿ ಉದುರುವುದನ್ನು ನಿಲ್ಲಿಸಬಹುದು. ಅಲ್ಲದೆ ಚಿಗುರು ಕೊಳೆಯುವುದನ್ನು ತಪ್ಪಿಸುತ್ತದೆ. ವೆನಿಲ್ಲ, ವೀಳೆಯದೆಲೆಯಂತಹ ಬಳ್ಳಿಗಳಿಗೆ ಇದು ತುಂಬ ಸಹಕಾರಿ.

ಚೆಂಡು ಹೂವಿನ ಚಾತುರ್ಯ

ಒಂದು ಲೀಟರ್ ಕುದಿಯುವ ನೀರಿಗೆ ಒಂದು ಹಿಡಿ (8 ರಿಂದ 10 ದೊಡ್ಡ ಚೆಂಡು ಹೂವು. ಹೂವು ಒಣಗಿದ್ದಾದರೂ ಬಳಸ ಬಹುದು) ಹಾಕಿ ಹದಿನೈದು ನಿಮಿಷ ಕುದಿಸಿ. 24 ಗಂಟೆಗಳ ನಂತರ ಅದನ್ನು ಶೋಧಿಸಿ 8 ರಿಂದ 9 ಲೀಟರ್ ಬೇರೆ ನೀರು ಸೇರಿಸಿ. ಸಸ್ಯಗಳಿಗೆ ಸಿಂಪಡಣೆ ಮಾಡಿ. ಇದರಿಂದ ಹೂವಿನ ಗಿಡಗಳಿಗೆ ಮತ್ತು ತರಕಾರಿಗೆ ಬರುವ ಹೇನು, ಬಿಳಿ ನೊಣಗಳನ್ನು ನಿಯಂತ್ರಿಸಬಹುದು.

ಬೇವಿನ ಬಾಣ

ಬೇವಿನ ಎಣ್ಣೆ ಒಂದು ಚಮಚ, 5 ರಿಂದ 10 ಗ್ರಾಂ ಹಳದಿ ಸೋಪು (ಡಿಟರ್ಜೆಂಟ್ ಬೇಡ) ಹಾಗೂ ಒಂದು ಲೀಟರ್ ನೀರು. ಮೊದಲು ಸೋಪಿನ ದ್ರಾವಣ ಮಾಡಿಕೊಳ್ಳ (ನೀರಿಗೆ ಸೋಪಿನ ಪುಡಿ ಹಾಕಿ ಚೆನ್ನಾಗಿ ಕರಗಿಸಿ). ನಂತರ ಬೇವಿನ ಎಣ್ಣೆ ಬೆರೆಸಿ. ಎಣ್ಣೆ ಸೋಪಿನ ದ್ರಾವಣದಲ್ಲಿ ಚೆನ್ನಾಗಿ ಮಿಶ್ರವಾಗ ಬೇಕು ಎಮಲ್ಶನ್ ತರಹ. ಹಾಲಿನ ಬಣ್ಣ ಬರುತ್ತದೆ. ನಂತರ ಸಸ್ಯಗಳಿಗೆ ಸಿಂಪಡಿಸಿ. ಬಹುತೇಕ ಎಲ್ಲ ಕೀಟ ರೋಗಗಳಿಗೂ ಇದು ಸಿದ್ಧೌಷಧ.

ಎಲೆಗಳ ಕಷಾಯ

500 ಗ್ರಾಂ ನಷ್ಟು ಬೇವಿನ ಎಲೆ, ಹೊಂಗೆ ಎಲೆ, ಸೀತಾಫಲದ ಎಲೆ, ಎಕ್ಕದ ಎಲೆ, ಲಂಟಾನ ಎಲೆಗಳನ್ನು ತೆಗೆದುಕೊಳ್ಳಿ. ಜೊತೆಗೆ ಸ್ವಲ್ಪ ಸಗಣಿ, ಬೆಲ್ಲವೂ ಇರಲಿ. ಇವುಗಳನ್ನು 5 ಲೀಟರ್ ನೀರಿನಲ್ಲಿ ಹಾಕಿ ಮುಚ್ಚಿಡಿ. ಎಂಟು ದಿನಗಳ ಕಾಲ ಬೆಳಿಗ್ಗೆ ಸಂಜೆ ಕಲಕುತ್ತಿರಿ. ಸೋಸಿದ ಈ ದ್ರಾವಣಕ್ಕೆ 1:10ರ (1 ಲೀಟರ್ ದ್ರಾವಣಕ್ಕೆ 10 ಲೀಟರ್ ನೀರು) ಅನುಪಾತದಲ್ಲಿ ನೀರು ಬೆರೆಸಿ ಸಿಂಪಡಿಸಿ. ಇದರ ಕಹಿ ವಾಸನೆಗೆ ಕೀಟಗಳೂ ವಿಕರ್ಷಣೆಗೊಳ್ಳುತ್ತವೆ. ಎಲೆಗಳಿಗೆ ಬೇಕಾದ ಸಾರಜನಕ, ಪೊಟ್ಯಾಶ್ ಸಹ ದೊರೆಯುತ್ತದೆ. ಈ ದ್ರಾವಣ ಬೆಳೆಗಳಿಗೆ ಪೋಷಕಾಂಶಗಳನ್ನೂ ಒದಗಿಸುತ್ತದೆ.

ಬಣ್ಣದ ಹೂವುಗಳನ್ನು ಬೆಳೆಸಿ

ಕೆಲವು ಬೆಳೆಗಳಿಗೆ ಹಾರುವ ಬಿಳಿ ನೊಣಗಳು ಕಂಟಕವಾಗಿರುತ್ತದೆ. ಇವು ರಸ್ತೆ ಬದಿಯ ಮರಗಳಲ್ಲಿ ಆಶ್ರಯ ಪಡೆದಿರುವುದರಿಂದ ಸಾಮೂಹಿಕ ಪ್ರಯತ್ನದಿಂದ ಮಾತ್ರ ನಿರ್ವಹಣೆ ಸುಲಭ. ಇದು ಕಷ್ಟ ಸಾಧ್ಯವೇ. ಸಂಪೂರ್ಣ ನಾಶ ಸಾಧ್ಯವಿಲ್ಲದಿದ್ದರೂ, ನಿಯಂತ್ರಣಕ್ಕೆ ಹೀಗೂ ಮಾಡ ಬಹುದು. ಕೈತೋಟದಲ್ಲಿ ಅಲ್ಲಲ್ಲಿ ಹಳದಿ ಹೂವು ಬಿಡುವ ಕಾಸ್ಮಾಸ್, ಚೆಂಡು ಹೂವಿನ ಗಿಡಗಳನ್ನು ಬೆಳೆಸಿದರೆ, ಇವು ಕೀಟಗಳನ್ನು ಆಕರ್ಷಿಸುತ್ತವೆ.

ತಗಡಿನ ಮುಚ್ಚಳಗಳಿಗೆ ಹಳದಿ ಬಣ್ಣ ಹಚ್ಚಿ ಹರಳೆಣ್ಣೆ ಸವರಿ ಅಲ್ಲಲ್ಲಿ ನೇತು ಹಾಕಿ. ಬಣ್ಣಕ್ಕೆ ಆಕರ್ಷಿತವಾದ ಹುಳುಗಳು ಹಾರಿದಾಗ ಎಣ್ಣೆಗೆ ಅಂಟಿ ಕೊಳ್ಳುತ್ತವೆ. ನಂತರ ಹಾರಲಾರವು. ಸ್ವಲ್ಪ ಮಟ್ಟಿಗೆ ನಿಯಂತ್ರಣ ಸಾಧ್ಯ.

ಬೆಳ್ಳುಳ್ಳಿ ಕಷಾಯ

ಬೆಳ್ಳುಳ್ಳಿಯನ್ನು ಅರೆದು ದ್ರಾವಣ ತೆಳುಗೊಳಿಸಿ ಗಿಡಗಳಿಗೆ ಸಿಂಪಡಣೆ ಮಾಡುತ್ತಿದ್ದರೆ, ಕೀಟ–ರೋಗಗಳು ಬರುವುದನ್ನು ತಪ್ಪಿಸಬಹುದು.

ಡೇಲಿಯ, ಟೊಮೆಟೊ, ಮೆಣಸಿನ ಕಾಯಿ ಬೆಳೆಗೆ ಎಲೆ ಮುರುಟು ರೋಗ ಹೆಚ್ಚಾಗಿ ಬಾಧಿಸುತ್ತದೆ. ಇದಕ್ಕೆ ಪರಿಹಾರವಾಗಿ ರೋಗ ಬಂದ ಗಿಡಗಳಿಗೆ ಬೆಳ್ಳುಳ್ಳಿ ಕಷಾಯ ಸಿಂಪಡಿಸಬಹುದು.

ಬೇವಿನ ಹಿಂಡಿ

ಗಿಡಗಳ ಬೇರಿನ ಸುತ್ತ ಕೆಲವೊಮ್ಮೆ ಶಿಲೀಂದ್ರ ಬರುವುದುಂಟು. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುವುದು. ಇಂಥ ಸಂದರ್ಭದಲ್ಲಿ ಗಿಡದ ಸುತ್ತ ಬೇವಿನ ಹಿಂಡಿ ಹಾಕಿ (ನೀಮ್ ಆಯಿಲ್ ಕೇಕ್) ನೀರು ಹಾಕಿದರೆ ಕ್ರಮೇಣ ಕಮ್ಮಿಯಾಗುತ್ತದೆ.

ಹುಳಿ ಮಜ್ಜಿಗೆ

ಮನೆಯಲ್ಲಿ ಮಜ್ಜಿಗೆ ಉಳಿದು ಹುಳಿಯಾಗಿದ್ದಾಗ ಅದನ್ನು ಎಸೆಯ ಬೇಡಿ. ಇದಕ್ಕೆ ನೀರು ಸೇರಿಸಿ ಕರಿಬೇವಿನ ಗಿಡಕ್ಕೆ ಹಾಕಿ. ಕರಿಬೇವಿನ ಎಲೆಗಳಲ್ಲಿ ಎಣ್ಣೆಯ ಗ್ರಂಥಿಗಳಿರುತ್ತವೆ. ಸುವಾಸನೆಯ ಮೂಲ ಅದೇ. ಮಜ್ಜಿಗೆಯಿಂದಾಗಿ ಅದು ಹೆಚ್ಚು ಸುವಾಸಿತವಾಗುತ್ತದೆ.

ಇಂಥ ಹಲವು ಸಾವಯವ ಔಷಧಗಳನ್ನು ಮನೆಯಲ್ಲೇ ತಯಾ ರಿಸಿಕೊಂಡು, ಹಿತ್ತಿಲು, ಕೈತೋಟದ ಗಿಡಗಳಿಗೆ ಬಳಸಿದರೆ, ತೋಟದ ಗಿಡಗಳು ಹಸಿರಾಗಿರುತ್ತವೆ. ಕೈತೋಟ ನಿರ್ವಹಣೆಗೆ ಒಳಸುರಿ (ಇನ್‌ಪುಟ್ಸ್‌) ಖರ್ಚು ಕಡಿಮೆಯಾಗುತ್ತದೆ. ರಾಸಾಯನಿಕ ಮುಕ್ತ ವಾತಾ ವರಣ, ತಾಜಾ ತರಕಾರಿ ಹಣ್ಣುಗಳನ್ನು ಬೆಳೆದು ಬಳಸಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT