ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಜೆಟ್‌ ಹೌಸ್‌’ಗೆ ಹೆಚ್ಚುತ್ತಿದೆ ಬೇಡಿಕೆ

Last Updated 25 ಜೂನ್ 2018, 20:16 IST
ಅಕ್ಷರ ಗಾತ್ರ

ಸೂರು ಸ್ವಂತದ್ದಾಗಿರಲಿ ಎಂಬುದು ಬಹುತೇಕರ ಕನಸು. ಉದ್ಯಾನನಗರಿ ಬೆಂಗಳೂರಿಗರಲ್ಲೂ ಈ ಬಯಕೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ‘ಬಜೆಟ್‌ ಹೌಸ್‌’ಗೆ (ಮಿತ ದರ) ಬೇಡಿಕೆ ಸೃಷ್ಟಿಯಾಗಿದೆ. ಇದನ್ನು ಆಧರಿಸಿ ಕೆಲ ‘ಬಿಲ್ಡರ್‌ಗಳು’ 1 ಬಿಎಚ್‌ಕೆ ಮನೆಗಳ ನಿರ್ಮಾಣಕ್ಕೂ ಆಸಕ್ತಿ ತೋರುತ್ತಿದ್ದಾರೆ.

‘ಇಂಡಿಪೆಂಡೆಂಟ್‌’ ಮನೆ ಖರೀದಿ, ಅಪಾರ್ಟ್‌ಮೆಂಟ್‌ಗಳಲ್ಲಿ ದೊಡ್ಡ ‘ಫ್ಲ್ಯಾಟ್‌ ಹೌಸ್‌’ಗಳನ್ನು ಖರೀದಿಸಬಯಸುತ್ತಿದ್ದ ನಗರದ ನಿವಾಸಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಚಿಕ್ಕ, ಚೊಕ್ಕ ಮನೆಗಳ ಖರೀದಿಗೂ ಉತ್ಸುಕತೆ ತೋರುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಯುವ ಸಮುದಾಯ ಹಾಗೂ ಅವಿವಾಹಿತರೇ ಹೆಚ್ಚಾಗಿ ಈ ರೀತಿಯ ಮನೆಗಳ ಖರೀದಿಸಲು ಮುಂದಾಗುತ್ತಿದ್ದಾರೆ.

ಯುವ ಜನರ ಆಸಕ್ತಿಯನ್ನು ಅರ್ಥ ಮಾಡಿ ಕೊಂಡಿರುವ ಕೆಲ ಕಟ್ಟಡ ನಿರ್ಮಾಣ ಸಂಸ್ಥೆಗಳು ತಮ್ಮ ಯೋಜನೆಗಳಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಮನೆಗಳ ಜತೆಗೆ ಗ್ರಾಹಕರ ಕೈಗೆಟಕುವ ದರಕ್ಕೆ 1 ಬಿಎಚ್‌ಕೆ ಮನೆಗಳ ನಿರ್ಮಾಣಕ್ಕೂ ಆದ್ಯತೆ ನೀಡುತ್ತಿವೆ. ಈ ಹಿಂದೆ ಬಹುತೇಕ ಬಿಲ್ಡರ್‌ಗಳು 1 ಬಿಎಚ್‌ಕೆ ಮನೆಗಳ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿರಲಿಲ್ಲ.

ಬದಲಾಗುತ್ತಿರುವ ಟ್ರೆಂಡ್‌: ಈಗಿನ ಯುವ ಸಮುದಾಯ ಕೆಲಸಕ್ಕೆ ಸೇರಿದ ಕೆಲ ವರ್ಷಗಳಲ್ಲಿಯೇ ತಮ್ಮದೇ ಆದ ಸ್ವಂತ ಸೂರು ಹೊಂದಲು ಒಲವು ತೋರುತ್ತಿದ್ದಾರೆ. ಇದರಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಗಗಳು ಮತ್ತು ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದವರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಬಿಲ್ಡರ್‌ಗಳು.

ಪ್ರದೀಪ್‌ ಜೊ
ಪ್ರದೀಪ್‌ ಜೊ

‘ಭವಿಷ್ಯದ ದೃಷ್ಟಿಯಿಂದ ವಿವಾಹಕ್ಕೂ ಮುನ್ನವೇ ಕನಿಷ್ಠ 1 ಬಿಎಚ್‌ಕೆ ಮನೆಯನ್ನಾದರೂ ಹೊಂದುವುದು ಉತ್ತಮ ಎಂದು ಯುವ ಸಮುದಾಯ ಬಯಸುತ್ತಿದೆ. ತಾವು ಪಡೆಯುತ್ತಿರುವ ವೇತನ, ದೊರೆಯುವ ಬ್ಯಾಂಕ್‌ ಸಾಲ, ಬಡ್ಡಿದರ, ಕಂತಿನ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ಅವರು ಈ ಕುರಿತು ಪ್ಲಾನ್‌ ಮಾಡುತ್ತಿದ್ದಾರೆ. ಆದರೆ 2 ಬಿಎಚ್‌ಕೆ, 3 ಬಿಎಚ್‌ಕೆ ಮನೆಗಳಿಗೆ ಅತ್ಯಧಿಕ ಹಣ ವಿನಿಯೋಗಿಸಿ ದೊಡ್ಡ ಪ್ರಮಾಣದಲ್ಲಿ ಸಾಲದ ಹೊರೆ ಹೊರಲು ಅವರು ಸಿದ್ಧರಿಲ್ಲ. ಹೆಚ್ಚು ಸೌಕರ್ಯಗಳಿರುವ ಅಪಾರ್ಟ್‌ಮೆಂಟ್‌ಗಳಲ್ಲಿ 1 ಬಿಎಚ್‌ಕೆ ಮನೆ ಸಿಕ್ಕರೆ ಸಾಕು ಎಂಬ ಧೋರಣೆ ಹೊಂದಿದ್ದಾರೆ’ ಎನ್ನುತ್ತಾರೆ ಕಾನ್ಫಿಡರೇಷನ್‌ ಆಫ್‌ ರಿಯಲ್‌ ಎಸ್ಟೇಟ್‌ ಅಸೋಸಿಯೇಷನ್‌ನ (ಸಿಆರ್‌ಇಎ) ಅಧ್ಯಕ್ಷ ಪ್ರದೀಪ್‌ ಜೊ.

ಸಿಇಒ ಶ್ರೀನಿವಾಸನ್‌ ಗೋಪಾಲನ್‌
ಸಿಇಒ ಶ್ರೀನಿವಾಸನ್‌ ಗೋಪಾಲನ್‌

‘ದೆಹಲಿ, ಕೋಲ್ಕತ್ತ, ಪುಣೆ, ಮುಂಬೈ ಸೇರಿದಂತೆ ವಿವಿಧ ಭಾಗದಿಂದ ಬೆಂಗಳೂರಿಗೆ ಉದ್ಯೋಗಕ್ಕೆ ಬಂದಿರುವ ಯುವ ಟೆಕಿಗಳು ಸರ್ಜಾಪುರ, ಹೆಣ್ಣೂರು ಬಳಿ 1 ಬಿಎಚ್‌ಕೆ ಮನೆಗಳನ್ನು ಖರೀದಿಸಲು ಆಸಕ್ತರಾಗಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ ಭಾಗದ ಕೆಲವೆಡೆಗಳಲ್ಲಿ ಇಂಥ ಮನೆಗಳಿಗೆ ಬೇಡಿಕೆಯಿದೆ. ಒಟ್ಟಾರೆ ಬೆಂಗಳೂರಿನಲ್ಲಿ ‘ಬಜೆಟ್‌ ಹೌಸ್‌’ಗಳಿಗೆ ಶೇ 20ರಷ್ಟು ಬೇಡಿಕೆ ಹೆಚ್ಚಾಗಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ.
ಓಜೋನ್‌ ಗ್ರೂಪ್‌: ಈ ಅಂಶಗಳನ್ನು ಗಮನಿಸಿರುವ ‘ಓಜೋನ್‌ ಗ್ರೂಪ್‌’ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ತನ್ನ ಟೌನ್‌ಶಿಪ್‌ನಲ್ಲಿ 1 ಬಿಎಚ್‌ಕೆಯ 230 ಮನೆಗಳನ್ನು ಕಟ್ಟಲು ಮುಂದಾಗಿದೆ. ‘ಇವುಗಳಲ್ಲಿ ಈಗಾಗಲೇ 160 ಮನೆಗಳು ಬುಕ್‌ ಆಗಿವೆ’ ಎಂದು ‘ಓಜೋನ್‌ ಗ್ರೂಪ್‌’ನ ಸಿಇಒ ಶ್ರೀನಿವಾಸನ್‌ ಗೋಪಾಲನ್‌ ತಿಳಿಸುತ್ತಾರೆ.

‘₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳ ರದ್ದತಿಯ ನಂತರ ರಿಯಲ್‌ ಎಸ್ಟೇಟ್‌ ಉದ್ಯಮ ಅಷ್ಟಾಗಿ ಚೇತರಿಕೆ ಕಂಡಿಲ್ಲ. ಆದರೆ ಗ್ರಾಹಕರು 1 ಬಿಎಚ್‌ಕೆ ಮನೆಗಳ ಮೇಲೆ ಹಣ ಹೂಡುತ್ತಿರುವುದು ಸ್ವಲ್ಪ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿದೆ’ ಎನ್ನುತ್ತಾರೆ ಅವರು.

‘ಹೊಸಕೋಟೆ, ಪೀಣ್ಯ, ಎಲೆಕ್ಟ್ರಾನಿಕ್‌ ಸಿಟಿ, ದೇವನಹಳ್ಳಿ, ಆನೇಕಲ್‌ ಸಮೀಪ ಮಿತದರದ ಮನೆಗಳನ್ನು ಖರೀದಿಸಲು ಜನರು ಉತ್ಸುಕರಾಗಿದ್ದಾರೆ. ಅವರಲ್ಲಿ ಶೇ 30ರಷ್ಟು ಜನರು 25ರಿಂದ 32ರ ವಯೋಮಾನದವರಾಗಿದ್ದು, ಮೊದಲ ಬಾರಿಗೆ ಮನೆ ಖರೀದಿಸುವವರಾಗಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಒಟ್ಟು 200 ಎಕರೆ ವ್ಯಾಪ್ತಿಯ ಟೌನ್‌ಶಿಪ್‌ನಲ್ಲಿ ಈಗಾಗಲೇ 1000 ಮನೆಗಳನ್ನು ನಿರ್ಮಿಸಿದ್ದೇವೆ. ಮೂರು ವರ್ಷಗಳಲ್ಲಿ 4,500 ಮನೆಗಳು ನಿರ್ಮಾಣವಾಗಲಿವೆ. ಇವುಗಳಲ್ಲಿ 1 ಬಿಎಚ್‌ಕೆಗೂ (600 ಚ.ಅ) ಆದ್ಯತೆ ನೀಡಿದ್ದೇವೆ. ಸುಮಾರು ತಲಾ ₹ 26 ಲಕ್ಷಕ್ಕೆ ಈ ಮನೆಗಳು ದೊರೆಯಲಿವೆ’ ಎಂದು ಅವರು ವಿವರಿಸುತ್ತಾರೆ. ಭವಿಷ್ಯಕ್ಕಾಗಿ ಯೋಜನೆ: ‘ಓಜೋನ್‌ ಗ್ರೂಪ್‌ 1 ಬಿಎಚ್‌ಕೆ ವಸತಿ ಸಂಕೀರ್ಣದಲ್ಲಿ ಒಂದು ಮನೆಯನ್ನು ಬುಕ್‌ ಮಾಡಿದ್ದೇನೆ. ಈ ಟೌನ್‌ಶಿಪ್‌ನಲ್ಲಿ ಆಸ್ಪತ್ರೆ, ಶಾಲೆ, ಸಮುದಾಯ ಭವನ, ಈಜುಕೊಳ, ಜಿಮ್‌, ಟೆನಿಸ್‌ ಕೋರ್ಟ್‌ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಹಾಗಾಗಿ ಭವಿಷ್ಯಕ್ಕಾಗಿ ಈಗಲೇ ಬುಕ್‌ ಮಾಡಿದ್ದೇನೆ’ ಎನ್ನುತ್ತಾರೆ ಮಾರ್ಕೆಟಿಂಗ್‌ ಸಲಹೆಗಾರ ರಾಘವೇಂದ್ರ.

ಬಾಡಿಗೆಗಿಂತ ಇಎಂಐ ಪಾವತಿಗೆ ಒಲವು

ಶ್ರೀಕಾಂತ ಪಿ ಶಾಸ್ತ್ರಿ
ಶ್ರೀಕಾಂತ ಪಿ ಶಾಸ್ತ್ರಿ

‘ಚಿಕ್ಕವಯಸ್ಸಿನಲ್ಲಿಯೇ ಮನೆ ತೆಗೆದುಕೊಂಡು ಜೀವನದಲ್ಲಿ ಬೇಗ ನೆಲೆ ಕಂಡುಕೊಳ್ಳಬೇಕು ಎಂದು ಬಯಸುವವರು ಹೆಚ್ಚಾಗಿದ್ದಾರೆ. ಮನೆಗೆ ಬಾಡಿಗೆ ಕೊಡುವುದರ ಬದಲಿಗೆ, ಸ್ವಂತ ಮನೆ ಖರೀದಿಸಿ ಸಾಲದ ಕಂತು ಪಾವತಿಸುವುದು ಉತ್ತಮ ಎಂಬುದು ಹಲವು ಟೆಕಿಗಳ ಲೆಕ್ಕಾಚಾರ’ ಎನ್ನುತ್ತಾರೆ ‘ಸಿಟ್ರಸ್‌ ವೆಂಚರ್ಸ್‌’ನ ನಿರ್ದೇಶಕ ಶ್ರೀಕಾಂತ ಪಿ ಶಾಸ್ತ್ರಿ.

‘ನಮ್ಮ ಸಂಸ್ಥೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕೈಗೊಂಡಿರುವ ವಸತಿ ಯೋಜನೆಯಲ್ಲಿ 1 ಬಿಎಚ್‌ಕೆಗೂ ಒತ್ತು ನೀಡಿದೆ. ಈಗಾಗಲೇ ಇಲ್ಲಿನ ಶೇ 40ರಷ್ಟು ಬಜೆಟ್‌ ಹೌಸ್‌ಗಳು ಬುಕ್‌ ಆಗಿವೆ. 600ರಿಂದ 650 ಚ.ಅಡಿಯ ಫ್ಲ್ಯಾಟ್‌ಹೌಸ್‌ ₹ 30 ಲಕ್ಷಕ್ಕೆ ಮಾರಲಾಗುತ್ತಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT