ಶುಕ್ರವಾರ, ಜೂನ್ 5, 2020
27 °C

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎನ್‌ಡಿಎ ಅಂದರೆ ಏನು?

ಎನ್‌ಡಿಎ ಅಂದರೆ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಎಂದು ಅರ್ಥ. ಇದು ಪುಣೆ ಸಮೀಪದ ಖಡಕ್‌ವಾಸ್ಲಾದಲ್ಲಿ ಇದೆ. ಈ ಸಂಸ್ಥೆಯಲ್ಲಿ ಮಿಲಿಟರಿ ತರಬೇತಿ ನೀಡಲಾಗುತ್ತದೆ.

ಇದನ್ನು ಆರಂಭಿಸಿದ್ದು ಯಾವಾಗ ಮತ್ತು ಏಕೆ?

ಇದನ್ನು 1948ರ ಡಿಸೆಂಬರ್ 15ರಂದು ‘ಜಾಯಿಂಟ್ ಸರ್ವಿಸಸ್ ವಿಂಗ್’ ಎಂದು ಆರಂಭಿಸಲಾಯಿತು. ನಂತರ, 1954ರ ಡಿಸೆಂಬರ್ 7ರಂದು ಇದನ್ನು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಂದು ಮರುನಾಮಕರಣ ಮಾಡಿ, ಪುಣೆ ಸಮೀಪದ ಈಗಿನ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು.

ಸಶಸ್ತ್ರ ಪಡೆಗಳ ಎಲ್ಲ ವಿಭಾಗಗಳಲ್ಲಿ – ಅಂದರೆ ಭೂಸೇನೆ, ವಾಯುಸೇನೆ ಮತ್ತು ನೌಕಾದಳ – ಒಂದೇ ಕಡೆ ತರಬೇತಿ ನೀಡುವ ಆಲೋಚನೆ ಇಟ್ಟುಕೊಂಡು ಇದನ್ನು ಶುರು ಮಾಡಲಾಯಿತು.

ಈ ಅಕಾಡೆಮಿಗೆ ಯಾರು ಸೇರಬಹುದು?

12ನೆಯ ತರಗತಿ (ಪಿಯುಸಿ) ಪಾಸಾದವರು, 19 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಅಕಾಡೆಮಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಬಹುದು. ಅಕಾಡೆಮಿ ನಡೆಸುವ ಲಿಖಿತ, ಮೌಖಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಪ್ರವೇಶ ಸಿಗುತ್ತದೆ.

ಅಕಾಡೆಮಿಯಲ್ಲಿ ಯಾವ ರೀತಿಯ ತರಬೇತಿ ನೀಡಲಾಗುತ್ತದೆ?

ಇಲ್ಲಿನ ಕೆಡೆಟ್‌ಗಳು ಮೂರು ವರ್ಷಗಳ ಬಿಎಸ್‌ಸಿ ಅಥವಾ ಬಿಎ ಪದವಿ ಪೂರೈಸುತ್ತಾರೆ. ಈ ಪದವಿಯನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ನೀಡುತ್ತದೆ. ಕೆಡೆಟ್‌ಗಳಿಗೆ ವಿವಿಧ ಹೊರಾಂಗಣ ಕೌಶಲಗಳನ್ನು (ಡ್ರಿಲ್‌, ಪಿ.ಟಿ ಇತ್ಯಾದಿ), ಹಾಕಿ, ಫುಟ್‌ಬಾಲ್‌, ಟೆನಿಸ್‌, ಈಜು, ಕ್ರಿಕೆಟ್‌ನಂತಹ ಆಟೋಟಗಳ ತರಬೇತಿ ನೀಡಲಾಗುತ್ತದೆ.

ಸಾಹಸ ಕ್ರೀಡೆಗಳಾದ ಪರ್ವತಾರೋಹಣ, ರಾಕ್‌ ಕ್ಲೈಂಬಿಂಗ್‌, ಕ್ರಾಸ್‌ಕಂಟ್ರಿ ಮೂಲಕ ಕೆಡೆಟ್‌ಗಳು ದೈಹಿಕ ದೃಢತೆ ಹಾಗೂ ಮಾನಸಿಕ ಗಟ್ಟಿತನ ಬೆಳೆಸಿಕೊಳ್ಳುತ್ತಾರೆ. ಪ್ರತಿ ಕೆಡೆಟ್‌ ಕೂಡ ಭೂಸೇನೆ, ವಾಯುಸೇನೆ ಅಥವಾ ನೌಕಾದಳ ವಿಭಾಗದಲ್ಲಿ ತರಬೇತಿ ಪಡೆಯುತ್ತಾರೆ. ಎನ್‌ಡಿಎಯಿಂದ ಉತ್ತೀರ್ಣರಾದ ನಂತರ ಅವರು ಸೇನೆಯ ಮೂರು ವಿಭಾಗಗಳಲ್ಲಿ ಯಾವುದಾದರೂ ಒಂದಕ್ಕೆ ಸಂಬಂಧಿಸಿದ ಅಕಾಡೆಮಿಯಲ್ಲಿ ಹೆಚ್ಚಿನ ತರಬೇತಿಗೆ ಸೇರಿಕೊಳ್ಳುತ್ತಾರೆ.

ಎನ್‌ಡಿಎಯ ಖ್ಯಾತ ಹಳೆಯ ವಿದ್ಯಾರ್ಥಿಗಳು ಯಾರು?

2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಹುತಾತ್ಮರಾದ ಮೇಜರ್‌ ಸಂದೀಪ್ ಉನ್ನಿಕೃಷ್ಣನ್ ಅವರಂತಹ ಯೋಧರು ಎನ್‌ಡಿಎನಲ್ಲಿ ತರಬೇತಿ ಪಡೆದವರು. ಇಲ್ಲಿ ಪದವಿ ಪಡೆದ ಮೂವರು ಪರಮವೀರ ಚಕ್ರ ಗೌರವಕ್ಕೆ ಪಾತ್ರರಾಗಿದ್ದಾರೆ. ಹನ್ನೊಂದು ಜನರಿಗೆ ಅಶೋಕ ಚಕ್ರ ನೀಡಿ ಗೌರವಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು