7

ಮೋಹಕ ಸುಂದರಿ ಕೇಪ್‌ ಟೌನ್‌

Published:
Updated:
ಮೋಹಕ ಸುಂದರಿ ಕೇಪ್‌ ಟೌನ್‌

ದಕ್ಷಿಣ ಆಫ್ರಿಕಾದಲ್ಲಿ ಮೊದಲ ದಿನ ಕೇಪ್‌ ಟೌನ್‌ ನಗರದ ಸೌಂದರ್ಯವನ್ನು ಸವಿಯುತ್ತಾ ಅನ್ಯಮನಸ್ಕನಾಗಿ ರಸ್ತೆಗೆ ಒಂದು ಹೆಜ್ಜೆ ಇಟ್ಟಿದ್ದೆ. ಅಷ್ಟರಲ್ಲಿ ‘ಕಿರ್ರ್‌’ ಎನ್ನುವ ಸದ್ದು ಕೇಳಿಸಿತು. ತಿರುಗಿ ನೋಡಿದೆ. ಯುವತಿಯೊಬ್ಬಳು ವೇಗವಾಗಿ ಚಲಾಯಿಸುತ್ತಿದ್ದ ಐಷಾರಾಮಿ ಕಾರಿನ ಬ್ರೇಕ್‌ ಒತ್ತಿ ನಿಲ್ಲಿಸಿ ಕಿರುನಗೆಯೊಂದಿಗೆ ರಸ್ತೆ ದಾಟುವಂತೆ ಕೈ ತೋರಿಸಿದಳು. ನಾನು ಕೃತಜ್ಞತಾಪೂರ್ವಕವಾಗಿ ಧನ್ಯವಾದ ಹೇಳಿದೆ. ಆಕೆ ತನ್ನ ಬಲಗೈನ ಹೆಬ್ಬೆರಳನ್ನು ಮೇಲೆತ್ತಿ ಪ್ರತಿಯಾಗಿ ವಂದಿಸಿದಳು. ಮೊದಲ ದಿನವೇ ಕೇಪ್‌ ಟೌನ್‌ ನನ್ನನ್ನು ಹೃದಯ ತುಂಬಿ ಸ್ವಾಗತಿಸಿದಂತೆ ಭಾಸವಾಯಿತು.ಸುದೀರ್ಘ ಪ್ರಯಾಣದ ಆಯಾಸ ದೇಹದಿಂದ ಕಣ್ಣುಗಳಿಗೆ ಒತ್ತರಿಸಿ ಬರುತ್ತಿತ್ತು. ರೆಪ್ಪೆಗಳನ್ನು ಕೂಡಿಸಿದರೆ ಥಟ್ಟನೆ ನಿದ್ರೆ ಆವರಿಸಿಕೊಂಡು ಬಿಡುತ್ತಿತ್ತು. ಇದೇ ಕಾರಣಕ್ಕಾಗಿ ನಾನು ರೆಪ್ಪೆಗಳನ್ನು ಮುಚ್ಚುತ್ತಲೇ ಇರಲಿಲ್ಲ. ಕೇಪ್‌ ಟೌನ್‌ ಪ್ರಕೃತಿ ಸೌಂದರ್ಯದ ಮುಂದೆ ಆಯಾಸ ಮತ್ತು ನಿದ್ರೆ ಶರಣಾಗಿದ್ದವು.ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಅಟ್ಲಾಂಟಿಕ ಮಹಾಸಾಗರ ಕುರಿತು ಓದಿದ್ದೆ. ಗೋಡೆಗೆ ನೇತು ಹಾಕಿದ್ದ ಭೂಪಟದಲ್ಲಿ ನೀಲಿಬಣ್ಣ ತುಂಬಿದ್ದ ಜಾಗದ ಮೇಲೆ ಮೇಷ್ಟ್ರು ಕೋಲಿಟ್ಟು ‘ಇದೆಲ್ಲ ಅಟ್ಲಾಂಟಿಕ ಮಹಾಸಾಗರ’ ಎಂದು ತೋರಿಸಿದಾಗ, ಕೇವಲ ‘ಕೃಷ್ಣರಾಜಸಾಗರ’ ನೋಡಿದ್ದ ನನಗೆ ಮಹಾಸಾಗರ ಕಲ್ಪನೆಗೆ ನಿಲುಕದಾಗಿತ್ತು. ಭೂಪಟದಲ್ಲಿ ನೋಡಿದ್ದ ಅಟ್ಲಾಂಟಿಕ ಮಹಾಸಾಗರದಲ್ಲಿ ಎಷ್ಟೋ ವರ್ಷಗಳ ನಂತರ ಯಾನ ಮಾಡುತ್ತಿದ್ದೆ! ಅಲೆಗಳ ಮೇಲೆ ನಾಟ್ಯವಾಡುತ್ತಾ ಕಿರುನೌಕೆ ಸಾಗುತ್ತಿತ್ತು. ಅದು ಶೀತಲ ಮಹಾಸಾಗರ.ಆಗಸ್ಟ್‌ ಚಳಿಗಾಲವಾಗಿದ್ದರಿಂದ ಇಡೀ ದೇಹ ನಡುಗುತ್ತಿತ್ತು. ಸಾಗರದ ಹನಿಗಳು ಗಾಳಿಯೊಂದಿಗೆ ಸೇರಿ ಮುಖಕ್ಕೆ ರಾಚುತ್ತಿದ್ದವು. ಡೆಕ್ಕ್‌ ಮೇಲೆ ಇದ್ದವರೆಲ್ಲ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಿದ್ದರು. ಅನಂತವಾದ ಜಲರಾಶಿ, ಸಿಂಹ ಮುಖದ ಪರ್ವತದ ಆಕರ್ಷಣೆ ನನ್ನನ್ನು ಅಲ್ಲೇ ಇರುವಂತೆ ಮಾಡಿದವು. ಕಾಲುಗಂಟೆ ಪ್ರಯಾಣದ ನಂತರ ‘ಸೀಲ್‌ ಐಲ್ಯಾಂಡ್‌’ ತಲುಪಿದೆವು. ಅಲ್ಲಿ ಬಂಡೆಗಳ ಮೇಲೆ ನೂರಾರು ಸೀಲ್‌ಗಳಿದ್ದವು. ಕೆಲವು ನಿದ್ರಿಸುತ್ತಿದ್ದವು. ಇನ್ನು ಕೆಲವು ತುಂಟಾಟದಲ್ಲಿ ತೊಡಗಿದ್ದವು.‘ಹಾಟ್‌ ಬೇ’ ದಂಡೆಯ ಮೇಲೆ ಸೈಡ್‌ಕಾರ್‌ಗಳು (ಶೋಲೆ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌ ಮತ್ತು ಧರ್ಮೇಂದ್ರ ಕುಳಿತುಕೊಂಡು ಹೋಗುವ ಬೈಕ್‌ ನೆನಪಿಸಿಕೊಳ್ಳಿ) ನಮಗಾಗಿ ಕಾಯುತ್ತಿದ್ದವು. ಒಂದು ಸೈಡ್‌ಕಾರ್‌ನಲ್ಲಿ ಇಬ್ಬರು ಪ್ರಯಾಣಿಕರು, ಒಬ್ಬ ಚಾಲಕ ಇರುತ್ತಾನೆ. ಇದರ ಮೇಲೆ ಕುಳಿತು ಕೇಪ್‌ ಟೌನ್‌ ಮತ್ತು ‘ಚಾಪ್‌ಮನ್ಸ್‌ ಪೀಕ್‌’ನಲ್ಲಿ ಸುತ್ತುವುದೇ ಮಜಾ.ಸೈಡ್‌ಕಾರ್‌ ಸಾರಥಿ ಡೇವಿಡ್‌ ‘ಚಾಪ್‌ಮನ್ಸ್‌ ಪೀಕ್‌’ನ ಅಂಕುಡೊಂಕಾದ ರಸ್ತೆಯಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಹಾದಿಯಲ್ಲಿ ಪ್ರಯಾಣಿಸುವುದೇ ರೋಮಾಂಚನ. ಅಲ್ಲಿ ವಾಹನ ಚಲಾಯಿಸುವುದು ಎಷ್ಟೋ ಮಂದಿಯ ಕನಸಾಗಿರುತ್ತದೆ.ಮಹಾಸಾಗರದ ಸೌಂದರ್ಯ ಅಪರಿಮಿತ. ವೀಕ್ಷಣಾ ಸ್ಥಳದಲ್ಲಿ ನಿಂತು ಜಲರಾಶಿಯನ್ನು ನೋಡುತ್ತಿದ್ದಾಗ ಡೇವಿಡ್‌, ಶಾಂಪೇನ್‌ ಗ್ಲಾಸನ್ನು ಕೈಗಿತ್ತರು. ಇಳಿಸಂಜೆಯ ಶೀತಗಾಳಿ, ಮುಂದೆ ಮಹಾಸಾಗರ, ಹಿಂದೆ ಟೇಬಲ್‌ ಮೌಂಟನ್‌, ಕೈಯಲ್ಲಿ ಶಾಂಪೇನ್‌! ಮಹಾಸಾಗರದ ಕಿನಾರೆಯಲ್ಲಿ ನಮ್ಮ ತಂಡದ ಆರು ಸೈಡ್‌ಕಾರ್‌ಗಳು ಮೆರವಣಿಗೆಯಂತೆ ಹೊರಟಿದ್ದವು. ಸೈಡ್‌ಕಾರ್‌ಗಳಿಗೆ ಕಟ್ಟಿದ್ದ ತ್ರಿವರ್ಣ ಧ್ವಜ ಗಾಳಿಗೆ ಹಾರಾಡುತ್ತಿತ್ತು. ‘ಲಾಂಗ್‌ ಡ್ರೈವ್‌’ ಹೋಗುವಾಗ ದಾರಿ ಅನಂತವಾಗಿರಲಿ ಎಂದು ಮನಸ್ಸು ಬಯಸುತ್ತಿತ್ತು. ಅಲ್ಲಿ ಮಾತು ಸೋಲುತ್ತಿತ್ತು; ನೋಟ ಗೆಲ್ಲುತ್ತಿತ್ತು.ಮರುದಿನ ಬೆಳಿಗ್ಗೆ ನಮ್ಮ ಸವಾರಿ ‘ಕೇಪ್‌ ಪಾಯಿಂಟ್‌’ನತ್ತ ಸಾಗಿತ್ತು. ಆಕಾಶದಲ್ಲಿ ಕಪ್ಪು ಮೋಡಗಳು ನೇತಾಡುತ್ತಿದ್ದವು. ಕತ್ತಲು ಆವರಿಸಿತ್ತು. ರಸ್ತೆ ಮೇಲೆ ಸಾಗುತ್ತಿದ್ದ ವಾಹನಗಳ ಹೆಡ್‌ಲೈಟ್‌ಗಳು ಬೆಳಗುತ್ತಿದ್ದವು. ‘ಟೇಬಲ್‌ ಮೌಂಟನ್‌’ ಮೋಡಗಳ ಆಕ್ರಮಣಕ್ಕೆ ಒಳಗಾಗಿ ಕಣ್ಮರೆಯಾಗಿತ್ತು. ದಾರಿಯುದ್ದಕ್ಕೂ ಮಳೆ. ಅಲ್ಲಿಗೆ ತಲುಪಿದಾಗಲೂ ಹತ್ತು ಅಡಿಗಳಲ್ಲಿ ಏನಾಗುತ್ತಿದೆ ಎನ್ನುವುದು ತಿಳಿಯದಷ್ಟು ಜೋರಾಗಿತ್ತು.‘ಕೇಪ್‌ ಪಾಯಿಂಟ್‌’ನ ವೀಕ್ಷಣಾ ಗೋಪುರದ ಮೇಲೆ ನಿಂತು ಮಹಾಸಾಗರವನ್ನು ನೋಡುವುದೇ ಬೆರಗು. ಆದ್ದರಿಂದ ಜೊತೆಯಲ್ಲಿದ್ದವರು ‘ಒಂದೂವರೆ ಗಂಟೆ ಪ್ರಯಾಣ ಮಾಡಿದೆವು. ಎಂಥ ಅದ್ಭುತ ದೃಶ್ಯ ನೋಡುವುದು ತಪ್ಪಿಹೋಯಿತು’ ಎಂದು ಗೊಣಗಿದರು. ನನಗೆ ಅದು ‘ಮಿಸ್‌’ ಆಗಿದ್ದರಿಂದ ಬೇಸರವೇನೂ ಆಗಲಿಲ್ಲ. ಸುರಿಯುವ ಮಳೆ ಮತ್ತು ಮೋಡಗಳ ನಡುವೆ ಮಹಾಸಾಗರದ ಕಿನಾರೆಯಲ್ಲಿ ಪ್ರಯಾಣ ಮಾಡುತ್ತಿದ್ದದ್ದು ಮೋಹಕ ಮತ್ತು ಆಹ್ಲಾದವೆನಿಸಿತು. ಮಳೆ ಎಂದರೆ ಮಧ್ಯರಾತ್ರಿಯಲ್ಲಿಯೂ ಎದ್ದು ಕೂರುವ ನನಗೆ ಇಡೀ ವಾತಾವರಣ ಮನಸ್ಸು ತುಂಬಿತ್ತು.ಸಮೀಪವೇ ಇದ್ದ ‘ಕೇಪ್ ಆಫ್ ಗುಡ್ ಹೋಪ್’ಗೆ ಹೋದೆವು. 1488ರಲ್ಲಿ ಮೊದಲ ಬಾರಿಗೆ ಇಲ್ಲಿಗೆ ಪೋರ್ಚುಗೀಸ್ ನಾವಿಕ ಬಾರ್ತೋಲೋಮಿಯೋ ಡಯಾಸ್ ಬಂದನು. ಈತ ಈ ಭೂಪ್ರದೇಶಕ್ಕೆ ‘ಕೇಪ್ ಆಫ್ ಸ್ಟಾರ್ಮ್ಸ್‌’ ಎಂದು ಹೆಸರಿಟ್ಟನು. ಎರಡನೆ ಜಾನ್ ಇಲ್ಲಿಗೆ ಬಂದಾಗ ‘ಕೇಪ್ ಆಫ್ ಗುಡ್ ಹೋಪ್‌’ ಎಂದು ಮರು ನಾಮಕರಣ ಮಾಡಿದನು. ಇದು ಆಫ್ರಿಕಾ ಖಂಡದ ತುತ್ತತುದಿ ಎನ್ನುತ್ತಾರೆ.ಅಂದು ವಾರಾಂತ್ಯ. ವಾಹನಗಳು ಮಹಾಸಾಗರದ ಕಿನಾರೆಯಲ್ಲಿ ಇರುವೆಯಂತೆ ಸಾಗುತ್ತಿದ್ದವು. ಅವುಗಳಿಗೆ ಪೈಪೋಟಿ ನೀಡುವಂತೆ ಓಡುತ್ತಾ ಸಾಗುವವರು, ಸೈಕಲ್‌ ಸವಾರರು ಕಾಣಿಸುತ್ತಿದ್ದರು. ಒಂದು ಕಡೆ ವ್ಯಕ್ತಿ ಮತ್ತು ಆತನ ನಾಲ್ಕು ವರ್ಷದ ಮಗ ಸೈಕಲ್‌ ಸವಾರಿಯ ಖುಷಿಯಲ್ಲಿದ್ದರು. ಮುಂದೆ ಸಾಗುತ್ತಿದ್ದಂತೆ ಸೈಕಲ್‌ ಸವಾರರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು.ಪ್ರಯಾಣದ ಮಧ್ಯೆ ಸಿಕ್ಕ ಸವಾರರನ್ನು ಮಾತನಾಡಿಸಿದಾಗ ‘ನಾವು ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇವೆ. ನಮ್ಮಲ್ಲಿ ಸಾಗರ ಮತ್ತು ಪರ್ವತಗಳು ಇರುವುದರಿಂದ ಅವುಗಳೊಂದಿಗೆ ಬಾಂಧವ್ಯ ಬೆಳೆಸಿಕೊಂಡಿದ್ದೇವೆ. ನಡಿಗೆ, ಓಟ, ಸೈಕಲ್‌ ಸವಾರಿ ನಮ್ಮ ಸಂಸ್ಕೃತಿ. ಕೇಪ್‌್ ಟೌನ್‌ನಲ್ಲಿ ಪ್ರತಿ ವರ್ಷ ಮಾರ್ಚ್‌ ಎರಡನೆ ಭಾನುವಾರ ಸೈಕಲ್‌ ರೇಸ್‌ ನಡೆಯುತ್ತದೆ. ಅದರಲ್ಲಿ ವಿಶ್ವದ ಮೂವ್ವತ್ತೈದು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿದರು. ನಾವು ‘ರಾಬಿನ್‌ ಐಲ್ಯಾಂಡ್‌’ಗೆ ಹೋಗುವುದಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರಯಾನವನ್ನು ರದ್ದುಪಡಿಸಿರುವ ಸುದ್ದಿ ಅಪ್ಪಳಿಸಿತು. ‘ರಾಬಿನ್‌ ಐಲ್ಯಾಂಡ್‌’ಗೆ ಚಾರಿತ್ರಿಕ ಮಹತ್ವವಿದೆ. ಕಪ್ಪುಜನರ ವಿಮೋಚನೆಗಾಗಿ ಇಪ್ಪತ್ತೇಳು ವರ್ಷಗಳ ಕಾಲ ಜೈಲಿನಲ್ಲಿದ್ದ ನೆಲ್ಸನ್‌ ಮಂಡೇಲಾ ಅವರನ್ನು ಹದಿನೆಂಟು ವರ್ಷಗಳ ಕಾಲ ಅಲ್ಲಿ ಇಡಲಾಗಿತ್ತು. ನಮ್ಮ ದೇಶದ ಅಂಡಮಾನ್‌ನಲ್ಲಿ ರಾಜಕೀಯ ಕೈದಿಗಳಿಗೆ ಕರಿನೀರು ಶಿಕ್ಷೆ ಕೊಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ರಾಬಿನ್‌ ಐಲ್ಯಾಂಡ್‌ನಲ್ಲಿ ರಾಜಕೀಯ ಕೈದಿಗಳನ್ನು ಇಡಲಾಗಿತ್ತು.ಸುಮ್ಮನೆ ಕಣ್ಣು ಮುಚ್ಚಿದೆ. ಅಲ್ಲಿನ ಕರಾಳ ವಾತಾವರಣ ಕಣ್ಣುಗಳ ಮುಂದೆ ಬಂದಿತು. ಬೆಚ್ಚಿಬಿದ್ದೆ. ನಮ್ಮ ತಂಡದಲ್ಲಿದ್ದವರೊಬ್ಬರು ಪಂಚತಾರಾ ಹೋಟೆಲ್‌ನಲ್ಲಿ ಒಂಟಿಯಾಗಿ ಮಲಗಲು ಹೆದರಿ ಇಡೀ ರಾತ್ರಿ ದೀಪ ಹಚ್ಚಿಕೊಂಡು ಕುಳಿತಿದ್ದರು! ಅಂತಹುದರಲ್ಲಿ ಮಂಡೇಲಾ ಅಲ್ಲಿ ಹೇಗೆ ಬದುಕಿರಬೇಕು? ಈ ಕಾರಣಕ್ಕಾಗಿಯೇ ಅಲ್ಲಿಗೆ ಭೇಟಿ ನೀಡಲು ಮನಸ್ಸು ತುಡಿಯುತ್ತಿತ್ತು. ಆದರೆ ಹವಾಮಾನಕ್ಕೆ ನನ್ನ ಮಿಡಿತ ಅರ್ಥವಾಗಲಿಲ್ಲ.ನಾವು ಹೆಲಿಕ್ಯಾಪ್ಟರ್‌ ಸವಾರಿ ಹೊರಡುವುದಿತ್ತು. ಎಲ್ಲರೂ ಮೊಬೈಲ್‌ನಲ್ಲಿ ಹವಾಮಾನ ನೋಡುವುದು, ಆಕಾಶವನ್ನು ದಿಟ್ಟಿಸುವುದು, ಗೈಡ್‌ಗೆ ಪದೇ ಪದೇ ‘ಹೆಲಿಕ್ಯಾಪ್ಟರ್‌ ಸವಾರಿ ಇರುತ್ತದೆ ಅಲ್ವಾ?’ ಎನ್ನುತ್ತಾ ಗಂಟುಬಿದ್ದೆವು. ಸಾಯಂಕಾಲ ನಾಲ್ಕು ಗಂಟೆಗೆ ಆಕಾಶ ನೀಲಿಮಯವಾಯಿತು. ಸೂರ್ಯ ಕರುಣೆ ತೋರಿಸಿದ.ಹೆಲಿಕ್ಯಾಪ್ಟರ್‌ ಹದಿನೈದು ನಿಮಿಷಗಳ ಕಾಲ ಗಿರಕಿ ಹಾಕಿತು. ಮೇಲೆ ನೀಲಾಕಾಶ, ಕೆಳಗೆ ನೀಲಿ ಮಹಾಸಾಗರ. ಹಕ್ಕಿಗಳಂತೆ ಹಾರುತ್ತಾ ಭೂಮಿಯನ್ನು ನೋಡುವುದು ಅದ್ಭುತ ಅನುಭವ. ನೀವು ಕ್ರಿಕೆಟ್‌ ಪ್ರೇಮಿಯಾಗಿದ್ದು, ಅಂತರರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಿದ್ದರೆ ‘ನ್ಯೂಲ್ಯಾಂಡ್‌ ಕ್ರಿಕೆಟ್ ಸ್ಟೇಡಿಯಂ’ ನೋಡಿಯೇ ಇರುತ್ತೀರಿ. ಅದು ಟೇಬಲ್‌ ಮೌಂಟನ್‌ ಹಿನ್ನೆಲೆಯಲ್ಲಿದೆ. ವಿಶ್ವದ ಅತೀ ಸುಂದರ ಕ್ರಿಕೆಟ್‌ ಸ್ಟೇಡಿಯಂ ಎನ್ನುವ ಹೆಸರು ಪಡೆದಿದ್ದು ಪ್ರವಾಸಿಗಳನ್ನು ಸೆಳೆಯುತ್ತಿದೆ. ಇದು 1888ರಲ್ಲಿ ಸ್ಥಾಪನೆ ಆಯಿತು.ಸ್ಟೇಡಿಯಂ ಪರಿಚಯ ಮಾಡುತ್ತಿದ್ದ ಆಂಡ್ರ್ಯೂ ರಸ್ಸೆಲ್‌, ‘ಭಾರತದಲ್ಲಿ ಕ್ರಿಕೆಟ್‌ ಆಡುತ್ತಾರೆಯೇ‘ ಎಂದು ಕೆಣಕಿದರು. ನಮ್ಮ ತಂಡ ಒಂದೇ ಸ್ವರದಲ್ಲಿ ‘ಕ್ರಿಕೆಟ್‌ ನಮ್ಮ ಧರ್ಮ’ ಎಂದಿತು. ‘ನಮಗೆ ಭಾರತದ ಬಗ್ಗೆ ಅಪಾರ ಗೌರವ. ಏಕೆಂದರೆ ವರ್ಣಭೇದ ನೀತಿಯಿಂದಾಗಿ 1970ರಿಂದ 1993ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಮ್ಮನ್ನು ನಿಷೇಧಿಸಲಾಗಿತ್ತು. ನಿಷೇಧ ತೆರವಾದ ಕೂಡಲೇ ನಮ್ಮ ತಂಡವನ್ನು ಆಹ್ವಾನಿಸಿದ್ದು ಭಾರತ. ಅದನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಭಾವುಕರಾದರು.ನೀವು ಕ್ರಿಕೆಟ್‌ ಇಷ್ಟಪಡಿ ಅಥವಾ ಬಿಡಿ. ಆದರೆ ಕೇಪ್‌ ಟೌನ್‌ಗೆ ಹೋಗಿ ಸ್ಟೇಡಿಯಂ ನೋಡದೆ ಹಿಂದಿರುಗಿದರೆ ಪ್ರವಾಸವೇ ಅಪೂರ್ಣ ಎನಿಸುತ್ತದೆ. ಕೇಪ್‌ ಟೌನ್‌ ನಗರದ ಜನರು ಸಾಗರ, ಕಿನಾರೆ, ಪರ್ವತಗಳ ಜೊತೆಗಿನ ಒಡನಾಟದ ಬಗೆಗೆ ಹೆಚ್ಚು ಮಾತನಾಡುತ್ತಾರೆ. ಅಲ್ಲಿಯವರ ಮುಂಜಾನೆ ಮತ್ತು ಸಂಜೆ ಅವುಗಳ ಜೊತೆಗೇ ಇರುತ್ತದೆ.ನನಗೆ ಪರಿಚಯವಾದ ಕಲಾವಿದರೊಬ್ಬರು ಬೀಚ್‌ನಲ್ಲಿ ನೋಡಿದ ಹುಡುಗಿಯೊಂದಿಗೆ ಪ್ರೇಮವಾಗಿ ಮದುವೆಯಾದ ಕತೆಯನ್ನು ಹೇಳಿದರು. ಅಲ್ಲಿಯ ಜನರಿಗೆ ಸಾಗರ, ಪರ್ವತ, ಸೈಕಲ್‌, ಓಟ, ನಗು, ಆಹಾರ, ಸಿಗರೇಟ್‌, ಕುಡಿತ, ಕುಣಿತ, ನಡಿಗೆ, ವಾರಾಂತ್ಯ ಪ್ರವಾಸ ಇಲ್ಲದ ಬದುಕು ನೀರಸ.ಐವತ್ತೇಳು ವರ್ಷದ ಹ್ಯಾವ್‌ಲೀನ್‌ ಪೀಟರ್‌ಸನ್‌ ಸ್ವಾರಸ್ಯಕರ ಮನುಷ್ಯ. ಕ್ರೀಡೆ, ಸಂಗೀತ, ತತ್ವಜ್ಞಾನದಲ್ಲಿ ಆಸಕ್ತಿ ಇರುವಾತ. ನಿಜ ಹೇಳಬೇಕು ಎಂದರೆ ನನಗೆ ಇಷ್ಟವಾದ ವ್ಯಕ್ತಿ. ಈತ ನಮ್ಮ ಡ್ರೈವರ್‌ ಕಮ್‌ ಗೈಡ್‌. ‘ಕೇಪ್‌ ಟೌನ್‌ ಮಂದಿ...’ ಎಂದೆ.‘ನಾವು ಕೆಲಸ ಮಾಡುವುದಕ್ಕಾಗಿ ಬದುಕುವುದಿಲ್ಲ, ಬದುಕುವುದಕ್ಕಾಗಿ ಕೆಲಸ ಮಾಡುತ್ತೇವೆ. ನಮಗೆ ಇಲಿಗಳ ಓಟದಲ್ಲಿ ನಂಬಿಕೆ ಇಲ್ಲ. ನಾವು ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಸಮಯ ಇಟ್ಟುಕೊಳ್ಳತ್ತೇವೆ. ಬೇಗನೆ ಕಚೇರಿ ಕೆಲಸ ಮುಗಿಸಿ ಪರ್ವತ, ಸಾಗರದತ್ತ ಹೋಗುತ್ತೇವೆ. ಅವುಗಳು ನಮ್ಮ ಜೀವನದ ಭಾಗವೇ ಆಗಿವೆ’ ಎಂದರು.‘ಕೇಪ್ ಟೌನ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಲೆ ಎತ್ತುತ್ತಿರುವ ಕಟ್ಟಡಗಳಿಗೆ ಕ್ಯಾರೆಕ್ಟರೇ ಇಲ್ಲ ಎನ್ನುತ್ತೀರಿ?’ ನಾನು ಕೆದಕಿದೆ. ‘ನಮ್ಮದು ಕೇಪ್‌–ಡಚ್‌ ವಾಸ್ತುಶಿಲ್ಪ. ನಾವು ಮರದ ನೆಲೆಹಾಸು, ಎತ್ತರದ ಛಾವಣಿ, ವಿಶಾಲವಾದ ಬಾಗಿಲು ಮತ್ತು ಕಿಟಕಿಗಳು, ಮುಂದೆ ಸಾಗರ, ಹಿಂದೆ ಪರ್ವತವನ್ನು ನೋಡಲು ಸಾಧ್ಯವಿರುವಂಹತ ವಿನ್ಯಾಸದ ಮನೆಗಳನ್ನು ಇಷ್ಟಪಡುತ್ತೇವೆ’ ಎಂದು ಖುಷಿಯಿಂದ ವರ್ಣಿಸಿದರು.‘ಇಲ್ಲಿ ಬಹು ಅಂತಸ್ತಿನ ಕಟ್ಟಡಗಳು ತೀರಾ ಕಡಿಮೆ’ ಎಂದು ಕೇಳಿದೆ. ‘ಏಕೆ, ಇನ್ನೂ ಹೆಚ್ಚು ಇರಬೇಕಿತ್ತಾ? ಕೇಪ್‌ ಟೌನ್‌ನಲ್ಲಿರುವ ಟೇಬಲ್‌ ಮೌಂಟನ್‌ಗೆ ವಯಸ್ಸು 443 ದಶಲಕ್ಷ ವರ್ಷಗಳು. ವಿಶ್ವದ ಅತೀ ಪುರಾತನ ಪರ್ವತ ಶ್ರೇಣಿ. ಐವತ್ತು, ಅರವತ್ತು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿದರೆ ಟೇಬಲ್‌ ಮೌಂಟನ್‌ ಮರೆಯಾಗುತ್ತದೆ ಅಲ್ಲವೇ? ಟೇಬಲ್‌ ಮೌಂಟನ್‌ ಹಾಗೂ ಸಾಗರದ ಕಿನಾರೆಯನ್ನು ನಮ್ಮಿಂದ ಎತ್ತರಿಸಲು ಸಾಧ್ಯವೇ? ಇವುಗಳ ಬಗ್ಗೆ ಪ್ರೀತಿ ಮತ್ತು ಗೌರವ ಇಟ್ಟುಕೊಂಡಿರುವುದರಿಂದ ನಗರದ ಯಾವುದೇ ಮೂಲೆಯಲ್ಲಿ ನಿಂತರೂ ಟೇಬಲ್‌ ಮೌಂಟನ್‌ ಕಾಣಿಸುತ್ತದೆ’ ಎಂದು ಅಭಿಮಾನದಿಂದ ಹೇಳಿದರು.ಕೇಪ್‌ ಟೌನ್‌ ದಕ್ಷಿಣ ಆಫ್ರಿಕಾದ ಮೊದಲ ನಗರ. ಇದಕ್ಕೆ ‘ಮದರ್‌ ಸಿಟಿ’ ಎನ್ನುತ್ತಾರೆ. 14ನೇ ಶತಮಾನದಲ್ಲಿ ಭಾರತವನ್ನು ಹುಡುಕಲು ಹೊರಟ ಯುರೋಪಿಯನ್ನರು, ಅವರಲ್ಲಿ ಬ್ರಿಟಿಷರು ಮೊದಲು ಕಂಡುಕೊಂಡ ಭೂ ಭಾಗ ‘ಕೇಪ್ ಆಫ್ ಗುಡ್‌ ಹೋಪ್‌’. ಅವರು ಸಾಗರಯಾನದ ನಡುವೆ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮುಂದೆ ಕೇಪ್‌ ಟೌನ್‌ ನಿರ್ಮಾಣವಾಯಿತು.ಕೇಪ್‌ ಟೌನ್‌ನಲ್ಲಿ ‘ಬೋ–ಕಾಪ್‌’ ಎನ್ನುವ ಬೀದಿ ಇದೆ. ಇಲ್ಲಿನ ಮನೆಗಳು ಸಿನಿಮಾ ಸೆಟ್‌ನಂತಿವೆ. ಪ್ರತಿಯೊಂದು ಮನೆಯೂ ಗಾಢಬಣ್ಣಗಳನ್ನು ಹೊಂದಿವೆ. ಏಕೆ ಎಂದು ಕೇಳಿದರೆ ‘ನಾವು ವರ್ಣಮಯ ಬದುಕು ಇಷ್ಟಪಡುವವರು’ ಎನ್ನುತ್ತಾರೆ. ಇಲ್ಲಿ ಹೆಚ್ಚು ಮುಸ್ಲಿಮರು ಇದ್ದಾರೆ.ನಮ್ಮವರಿಗೆ ದಕ್ಷಿಣ ಆಫ್ರಿಕಾ ಕುರಿತು ಪೂರ್ವಗ್ರಹವಿತ್ತು. ಆದ್ದರಿಂದಲೇ ಪರಸ್ಪರರು ‘ಜೋಪಾನ, ಅಲ್ಲಿ ಒಂಟಿಯಾಗಿ ತಿರುಗಾಡಬೇಡಿ. ಅವರಿಗೆ ನಮ್ಮ ಬಳಿ ಇಯರ್‌ ಫೋನ್‌ ಸಿಕ್ಕರೂ ದೋಚುತ್ತಾರಂತೆ. ಭಾರತೀಯ ಮಹಿಳೆಯರೇ ಅವರ ಗುರಿಯಂತೆ. ಅಪರಾಧ ಜಾಸ್ತಿಯಂತೆ’ ಎಂದು ಮಾತನಾಡಿಕೊಳ್ಳುತ್ತಿದ್ದರು. ಕೆಲವರು ನನಗೂ ಕಿವಿಮಾತನ್ನು ಹೇಳಿದ್ದರು.ಕೇಪ್‌ ಟೌನ್‌ನಲ್ಲಿ ರೂಮ್‌ಬಾಯ್‌ ಟಿಪ್ಸ್‌ ಕೇಳಿದ್ದು ಲೂಟಿಯಂತೆಯೂ ಹೋಟೆಲ್‌ಗಳಲ್ಲಿ ‘ತೊಳೆದುಕೊಳ್ಳಲು’ ವ್ಯವಸ್ಥೆ ಇಲ್ಲದಿದ್ದು ದೊಡ್ಡ ಲೋಪ ಎಂದು ಆಕ್ಷೇಪದ ಧ್ವನಿಯಲ್ಲಿ ಆಡಿಕೊಳ್ಳುತ್ತಿದ್ದರು. ಈ ಮಾತುಕತೆಗೆ ಸಾಕ್ಷಿಯಾಗಿದ್ದ ನಮ್ಮ ಗೈಡ್‌ ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುವಾಗ ‘ನೀವು ಇಲ್ಲಿಂದ ಒಳ್ಳೆಯ ನೆನಪು ಮತ್ತು ವಿಚಾರಗಳನ್ನು ಮಾತ್ರ ನಿಮ್ಮ ದೇಶಕ್ಕೆ ತೆಗೆದುಕೊಂಡು ಹೋಗಿ’ ಎಂದು ಪ್ರೀತಿಯಿಂದಲೇ ತಿವಿದರು.‘ಟೇಬಲ್‌ ಮೌಂಟನ್‌’ ವಿಶ್ವದ ಏಳು ಅದ್ಭುತ ಪ್ರಾಕೃತಿಕ ತಾಣಗಳಲ್ಲಿ ಒಂದು. ಇದರ ಮೇಲ್ಮೈ ಟೇಬಲ್‌ನಂತೆ ಸಮತಟ್ಟಾಗಿದೆ. ಆದ್ದರಿಂದ ಇದಕ್ಕೆ ‘ಟೇಬಲ್‌ ಮೌಂಟನ್‌’ ಎಂದು ಹೆಸರು. ಅಲ್ಲಿ ನೂರಾರು ವೈವಿಧ್ಯಮಯ ಸಸ್ಯಗಳು ಮತ್ತು ಹೂಗಳು ಇವೆ. ‘ಪೈನ್ಬೋಸ್’ ಎನ್ನುವ ಅಪರೂಪದ ‘ಪ್ರೊಟಿಯಾ’ ಎನ್ನುವ ಹೂವಿದೆ. ಇದು ದಕ್ಷಿಣ ಆಫ್ರಿಕಾ ರಾಷ್ಟ್ರೀಯಪುಷ್ಪ. ಈ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಗಿದೆ.ಮೌಂಟನ್‌ ಸಮುದ್ರಮಟ್ಟದಿಂದ 3563 ಅಡಿ ಎತ್ತರದಲ್ಲಿದೆ. ಅಲ್ಲಿಗೆ ಕೇಬಲ್‌ ಕಾರ್‌ನಲ್ಲಿ ಹೋಗಬೇಕು. ನಾಲ್ಕೈದು ನಿಮಿಷಗಳಲ್ಲಿ ಮೇಲೆ ಇರುತ್ತೇವೆ. ಅಲ್ಲಿ ಕೇಬಲ್‌ ಕಾರ್‌ ಶುರುವಾಗಿದ್ದು 1929ರಲ್ಲಿ; ಅಂದರೆ 87 ವರ್ಷಗಳ ಹಿಂದೆ! ಕೇಬಲ್‌ ಕಾರ್‌ ಒಳಗೆ ಮೊದಲಿಗರಾಗಿ ನುಗ್ಗಲು ಸಾಕಷ್ಟು ಪೈಪೋಟಿಯೇ ನಡೆಯಿತು. ಪೈಪೋಟಿಯಲ್ಲಿ ನಾನೂ ಒಬ್ಬನಾಗಿದ್ದೆ. ಕಾರಣವಿಷ್ಟೆ; ಆಯಕಟ್ಟಿನ ಜಾಗದಲ್ಲಿ ನಿಲ್ಲುವುದು.ಭೂಮಿ, ಬಾನು, ಕಣಿವೆ, ಕಂದರ, ಮಹಾಸಾಗರ, ಕೇಪ್‌ ಟೌನ್‌ ನಗರವನ್ನು ಕಣ್ಣು ಮತ್ತು ಕ್ಯಾಮರಾದಲ್ಲಿ ತುಂಬಿಕೊಳ್ಳುವುದೇ ಆಗಿತ್ತು. ಕೇಬಲ್‌ ಕಾರ್‌ ಹೊರಟ ಕೆಲವು ಸೆಕೆಂಡ್‌ಗಳಲ್ಲಿಯೇ ನಮ್ಮ ಪೈಪೋಟಿ ವ್ಯರ್ಥವೆನಿಸಿ, ಯಾರು ಯಾರು ಪೈಪೋಟಿಗೆ ಬಿದ್ದಿದ್ದೆವು ಅವರೆಲ್ಲರೂ ನಾಚಿಕೆಯಿಂದ ಪರಸ್ಪರ ಮುಖ ನೋಡದೆ ಬೇರೆ ಕಡೆ ದೃಷ್ಟಿ ನೆಟ್ಟೆವು. ಏಕೆಂದರೆ ಕೇಬಲ್ ಕಾರ್‌ 360 ಡಿಗ್ರಿಯಲ್ಲಿ  ತಿರುಗುತ್ತಿತ್ತು.ಟೇಬಲ್‌ ಮೌಂಟನ್‌ ಮೇಲೆ ನಿಂತರೆ ಇಡೀ ಕೇಪ್‌ ಟೌನ್‌ ನಗರ ಕಾಣಿಸುತ್ತದೆ. ರಾಬಿನ್‌ ಐಲ್ಯಾಂಡ್‌, ಸಿಂಹ ಮುಖದ ಪರ್ವತ, ಸಿಗ್ನಲ್‌ ಹಿಲ್‌, ಬಂದರು, ಸ್ಟೇಡಿಯಂ, ನಗರವನ್ನು ಸುತ್ತುವರಿದ ಪರ್ವತಗಳು, ಮಹಾಸಾಗರ, ಕಣಿವೆಗಳು....ಅಲ್ಲಿ ಕಾಲುಗಂಟೆ, ಅರ್ಧಗಂಟೆ, ಮುಕ್ಕಾಲುಗಂಟೆ ಸುತ್ತಾಡುವಷ್ಟು ಪ್ರದೇಶದ ವ್ಯಾಪ್ತಿಯನ್ನು ಗುರುತು ಮಾಡಲಾಗಿದೆ. ಪ್ರವಾಸಿಗರ ಆಸಕ್ತಿ ಮತ್ತು ಸಮಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವ್ಯಾಪ್ತಿಯನ್ನು ಗುರುತಿಸಲಾಗಿದೆ. ಪರ್ವತದ ತುತ್ತತುದಿಯಲ್ಲಿ ನಿಂತು ಫೋಟೊ ಮತ್ತು ಸೆಲ್ಫೀ ತೆಗೆದುಕೊಳ್ಳುವುದು  ರೋಮಾಂಚನ.ಮೇಲೆ ಬೀಸುವ ಬಿರುಗಾಳಿಗೆ ಮೈಯೊಡ್ಡಿ ನಿಲ್ಲುವುದು, ಧ್ಯಾನಸ್ಥರಾಗಿ ಕುಳಿತುಕೊಳ್ಳುವುದು, ವರ್ಣ ವೈಭವದೊಂದಿಗೆ ನೇಸರ ಕರಗಿ ಮಹಾಸಾಗರದಲ್ಲಿ ಲೀನವಾಗುವುದು ಅವರ್ಣನೀಯ. ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು. ‘ಓಲ್ಡ್‌ ಬಿಸ್ಕಿಟ್‌ ಮಿಲ್‌’ ಆವರಣದಲ್ಲಿ ಪ್ರತಿ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ‘ಉಲ್ಲಾಸದ ಸಂತೆ’ ನಡೆಯುತ್ತದೆ.ಅಲ್ಲಿ ತಿನ್ನಲು ಬಗೆಬಗೆಯ ಸಸ್ಯ ಮತ್ತು ಮಾಂಸಹಾರ, ಕುಡಿಯಲು ತಾಜಾ ಹಣ್ಣಿನರಸ, ಬಿಯರ್‌, ಸಂಗೀತ, ಹರಟೆ, ಕುಣಿತ, ಪ್ರೇಮಿಗಳ ಅಪ್ಪುಗೆ, ಕುಟುಂಬದವರ ಖುಷಿ...

ವಿಮಾನದಲ್ಲಿ ನನ್ನ ಪಕ್ಕ ಕೇಪ್‌ ಟೌನ್‌ನ ವ್ಯಕ್ತಿಯೊಬ್ಬರು ಕುಳಿತಿದ್ದರು. ಅವರು ವ್ಯವಹಾರ ಕಾರಣದಿಂದಾಗಿ ದೆಹಲಿ, ಮುಂಬೈ, ಜೈಪುರಗಳಿಗೆ ಆಗಾಗ ಭೇಟಿ ನೀಡುತ್ತಾರಂತೆ.ಅವರಿಗೆ ಭಾರತದ ಆತಿಥ್ಯ ಇಷ್ಟವಾಯಿತಂತೆ. ಆದರೆ ಟ್ರಾಫಿಕ್‌ ಮಾತ್ರ ದುಸ್ವಪ್ನವಂತೆ. ‘ಅಷ್ಟೊಂದು ವಾಹನಗಳ ದಟ್ಟಣೆ ಇದ್ದರೂ ಒಬ್ಬರು ಮತ್ತೊಬ್ಬರಿಗೆ ಗುದ್ದಿಗೊಳ್ಳುವುದೇ ಇಲ್ಲ. ಫುಟ್‌ಪಾತ್‌ ಮೇಲೂ ದ್ವಿಚಕ್ರ ವಾಹನಗಳನ್ನು ಓಡಿಸುತ್ತಾರೆ’ ಎಂದು ಚಕಿತರಾಗಿ ಹೇಳಿದ್ದರು.ಅವರು ಹಾಗೆ ಏಕೆ ಹೇಳಿದರು ಎನ್ನುವುದು ಕೇಪ್‌ ಟೌನ್‌ನಲ್ಲಿ ಸುತ್ತಾಡುವಾಗ ತಿಳಿಯಿತು. ಅಲ್ಲಿ ಸಂಚಾರ ನಿಮಯ ಉಲ್ಲಂಘನೆಯ ಒಂದೂ ನಿದರ್ಶನವೂ ಕಾಣಸಿಗಲಿಲ್ಲ. ಹಾರ್ನ್‌ ಸದ್ದು ಕೇಳಿಸಲೇ ಇಲ್ಲ. ನಮ್ಮ ಡ್ರೈವರ್‌ ಅನ್ನು ಕೇಳಿಯೇಬಿಟ್ಟೆ ‘ಇಲ್ಲಿನ ವಾಹನಗಳಲ್ಲಿ ಹಾರ್ನ್‌ ಇರುವುದಿಲ್ಲವೇ?’ ಎಂದು. ಅವರು ‘ನಾವು ಅನಗತ್ಯವಾಗಿ ಹಾರ್ನ್‌ ಮಾಡುವುದೇ ಇಲ್ಲ’ ಎಂದು ನಗೆಯಾಡಿದರು.ನೂರಾರು ಕಿಲೋಮೀಟರ್‌ ಪ್ರಯಾಣಿಸಿದರೂ ಒಂದು ಅಂಗುಲದಷ್ಟೂ ಗುಂಡಿ ಸಿಗಲಿಲ್ಲ. ಎಲ್ಲ ರಸ್ತೆಗಳನ್ನು ಉಜ್ಜಿ ತೊಳೆದಂತೆ ಸ್ವಚ್ಛವಾಗಿದ್ದವು. ನಾವಿದ್ದ ವಾಹನ ವೇಗವಾಗಿ ಸಾಗುತ್ತಿತ್ತು. ಒಂದು ಕಡೆ ಸಣ್ಣದಾಗಿ ನೆಗೆಯಿತು. ಅದು ಮಹಾ ಅಪರಾಧ ಎನ್ನುವಂತೆ ಹೌಹಾರಿದ ಡ್ರೈವರ್‌ ‘ಕ್ಷಮೆ’ ಕೇಳಿದ.ಒಂದು ದಿನ ಸಂಜೆ ನಾನು ಮತ್ತು ಹ್ಯಾವ್‌ಲಿನ್‌ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ವಾಯುವಿಹಾರಕ್ಕೆಂದು ಹೊರಟೆವು. ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಕಿತ್ತಲೆಹಣ್ಣಿನ ಸಿಪ್ಪೆಯನ್ನು ಆರಿಸಿ ಕಸದ ಡಬ್ಬಿಗೆ ಹಾಕಿದರು. ನಾನು  ಅಚ್ಚರಿಯಿಂದ ಅವರನ್ನು ನೋಡಿದೆ. ‘ಇದು ಮಗು ಮಾತ್ರ ಮಾಡಿರಬಹುದಾದ ಕೆಲಸ. ದೊಡ್ಡವರು ಇಂಥ ತಪ್ಪು ಮಾಡಲಾರರು’ ಎಂದು ಹೆಜ್ಜೆ ಹಾಕಿದರು.ಇಲ್ಲಿಯ ಹಿರಿಯರಿಗೆ ಮಹಾತ್ಮಗಾಂಧಿ, ಮಾರ್ಟಿನ್‌ ಲೂಥರ್‌ ಕಿಂಗ್‌ ಹಾಗೂ ನೆಲ್ಸನ್‌ ಮಂಡೇಲಾ ಬಗೆಗೆ ಅಪರಿಮಿತ ಪ್ರೀತಿ ಮತ್ತು ಗೌರವವಿದೆ. ‘ದಕ್ಷಿಣ ಆಫ್ರಿಕಾ ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿದೆ. ವರ್ಷದ ಯಾವುದೇ ಸಮಯದಲ್ಲೂ ಭೇಟಿ ನೀಡಬಹುದು. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಹೆಚ್ಚಾಗಿ ಬರುತ್ತಿದ್ದಾರೆ. ಯಾವ ಪೂರ್ವಗ್ರಹ ಮತ್ತು ಆತಂಕದ ಅವಶ್ಯವಿಲ್ಲ. ಎಲ್ಲ ಪ್ರವಾಸಿ ತಾಣಗಳಂತೆ ಇಲ್ಲಿಯೂ ಜಾಗೃತವಾಗಿರಬೇಕು ಅಷ್ಟೆ’ ಎಂದು ಸದರನ್‌ ಆಫ್ರಿಕಾ 360 ಲಕ್ಸುರಿ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಕಾಲಿನ್‌ ತ್ಯಾವರ್‌ ಹೇಳಿದರು.ನನಗೆ ದಕ್ಷಿಣ ಆಫ್ರಿಕಾ ಮಹಾತ್ಮಗಾಂಧಿ ದೆಸೆಯಿಂದ ಪರಿಚಯವಾಯಿತು. ಕ್ರಿಕೆಟ್‌ನಿಂದ ಹತ್ತಿರವಾಯಿತು. ನೆಲ್ಸನ್‌ ಮಂಡೇಲ ಅವರಿಂದ ಮನಸ್ಸಿನಲ್ಲಿ ಉಳಿದಿತ್ತು.

‘ನಾವು ನಮ್ಮ ಅತಿಥಿಗಳನ್ನು ಕೈ ಕುಲುಕಿ ಸ್ವಾಗತಿಸುವುದಿಲ್ಲ. ಅಪ್ಪಿಕೊಳ್ಳುವ ಮೂಲಕ ಬರಮಾಡಿಕೊಳ್ಳುತ್ತೇವೆ. ನಾವು ಹನ್ನೊಂದು ಅಧಿಕೃತ ಭಾಷೆಗಳನ್ನು ಹೊಂದಿದ್ದೇವೆ.ಆದರೆ ಒಂದೇ ಧ್ವನಿಯಲ್ಲಿ ಸ್ವಾಗತಿಸುತ್ತೇವೆ. ನೀವು ನಮ್ಮ ಪ್ರವಾಸಿಗರು ಮಾತ್ರವಲ್ಲ, ಸ್ನೇಹಿತರು. ನೀವು ಇಲ್ಲಿ ಇರುವ ತನಕ ಕುಟುಂಬದವರು ಎನ್ನುವಂತೆ ನೋಡಿಕೊಳ್ಳುತ್ತೇವೆ.ನೀವು ಪ್ರವಾಸದ ಸಮಯದಲ್ಲಿ ಹಲವಾರು ಅನನ್ಯ ಸಂಗತಿಗಳನ್ನು ಶೋಧಿಸುತ್ತೀರಿ. ನೀವು ಇಲ್ಲಿಗೆ ಆಗಮಿಸುವಾಗ ಏನಾಗಿದ್ದಿರೋ ಹೋಗುವಾಗ ಅದೇ ಆಗಿರುವುದಿಲ್ಲ.ಏಕೆಂದರೆ ಕೇಪ್‌ ಟೌನ್‌ ನಿಮ್ಮ ಹೃದಯದಲ್ಲಿ ಉಳಿದಿರುತ್ತದೆ’ ಎಂದು ಕಾಲಿನ್‌ ತ್ಯಾವರ್‌ ಭಾವನಾತ್ಮಕವಾಗಿ ಹೇಳಿದರು. ನಾನು ಕೇಪ್‌ ಟೌನ್‌ನಿಂದ ಭಾರತಕ್ಕೆ ಮರಳುವಾಗಿ ಅತಿಯಾಗಿ ಮೋಹಿಸಿದ ಸುಂದರ ಯುವತಿಯೊಬ್ಬಳನ್ನು ಬಿಟ್ಟು ಬರುವಂತೆ ಎದೆಭಾರವಾಗಿತ್ತು.

ದಕ್ಷಿಣ ಆಫ್ರಿಕಾ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಆಹ್ವಾನದ ಮೇರೆಗೆ ಲೇಖಕರು ಆ ದೇಶಕ್ಕೆ ಭೇಟಿ ನೀಡಿದ್ದರು

(ಚಿತ್ರಗಳು ಲೇಖಕರವು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry