ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲಿದೆಯೇ ಪಾಕ್‌ ಹಣೆಬರಹ

Last Updated 19 ಸೆಪ್ಟೆಂಬರ್ 2016, 10:52 IST
ಅಕ್ಷರ ಗಾತ್ರ

 ಅಂದಾಜು ಮೂರು ಲಕ್ಷ ಕೋಟಿ ಮೊತ್ತದ  ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆ (ಸಿಪಿಇಸಿ) ಪಾಕಿಸ್ತಾನದ ‘ಹಣೆಬರಹ’ ಬದಲಿಸಲಿದೆ ಮತ್ತು ಆರ್ಥಿಕ, ಸಾಮಾಜಿಕ ಕ್ರಾಂತಿಯನ್ನೇ ತರಲಿದೆ ಎಂದು ಪಾಕ್‌ ಸರ್ಕಾರ ಮತ್ತು ಅಲ್ಲಿಯ ಮಾಧ್ಯಮಗಳು ಹೇಳಿವೆ.
ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನದ ಗ್ವದಾರ್‌ನ ಅರಬಿ ಸಮುದ್ರದಾಳದಲ್ಲಿರುವ ಬಂದರಿಗೆ ಚೀನಾ ಪಶ್ಚಿಮ ಭಾಗವನ್ನು ಸಂಪರ್ಕಿಸುವ ಯೋಜನೆ ಇದಾಗಿದೆ. ಈ ವಿವಾದಾತ್ಮಕ ಆರ್ಥಿಕ ಕಾರಿಡಾರ್ ಒಪ್ಪಂದಕ್ಕೆ ನೆರೆಯ ಚೀನಾ ಮತ್ತು ಪಾಕಿಸ್ತಾನಗಳು ಈಗಾಗಲೇ ಸಹಿ ಹಾಕಿವೆ. ಇಂಧನ, ಮೂಲಸೌಕರ್ಯ, ಭದ್ರತೆ  ಮತ್ತು ಗಡಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯನ್ನು ಈ ಯೋಜನೆ ಒಳಗೊಂಡಿದೆ.

ಇಂಧನ ಕ್ಷೇತ್ರದಲ್ಲಿ (ಕಲ್ಲಿದ್ದಲು, ಜಲ ಮತ್ತು ಸೌರವಿದ್ಯುತ್‌ ಯೋಜನೆ ಒಳಗೊಂಡಿದೆ)  ಮತ್ತು ಮೂಲಸೌಕರ್ಯ ಯೋಜನೆಗಳಿಗೆ (ಬೃಹತ್ ಮತ್ತು ಸಂಕೀರ್ಣ ರಸ್ತೆ ಯೋಜನೆಗಳು, ರೈಲು, ವಾಣಿಜ್ಯ ವಲಯಗಳು ಒಳಗೊಂಡಿದೆ.) ಸಿಪಿಇಸಿ ಯೋಜನೆಯಡಿ ಹಣವನ್ನು ವ್ಯಯಿಸಲಾಗುತ್ತಿದೆ.

ಪಾಕಿಸ್ತಾನದಿಂದ ನೇರವಾಗಿ ಚೀನಾದ ವರೆಗೆ ಕೊಳವೆ ಮಾರ್ಗ ನಿರ್ಮಿಸಿ ಅನಿಲ ಆಮದು ಮಾಡಿಕೊಳ್ಳುವ ಮಾರ್ಗವನ್ನು ಸರಳಗೊಳಿಸುವ ಪ್ರಮುಖ ಉದ್ದೇಶವನ್ನು ಚೀನಾ ಹೊಂದಿದೆ. 1979ರಲ್ಲಿ ಕರಕೋರಂ ಹೆದ್ದಾರಿ ನಿರ್ಮಾಣದ ಬಳಿಕ, ಉಭಯ ದೇಶಗಳ ನಡುವೆ ನಡೆಯುತ್ತಿರುವ ಅತಿ ದೊಡ್ಡ ಯೋಜನೆ ಇದಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಈ 3 ಸಾವಿರ ಕಿ.ಮೀ ಉದ್ದದ ಕಾರಿಡಾರ್‌ ಕುರಿತ ಭಾರತದ ಕಳವಳವನ್ನು ನಿರಾಕರಿಸಿರುವ ಚೀನಾ, ಇದೊಂದು ವಾಣಿಜ್ಯ ಉದ್ದೇಶದ ಯೋಜನೆ ಎಂದು ಹೇಳಿದೆ.

ಸಿಪಿಇಸಿ ಯೋಜನೆಯಿಂದ ನವಾಜ್‌ ಷರೀಫ್‌ ಸರ್ಕಾರಕ್ಕೆ ನಷ್ಟಕ್ಕಿಂತ ಲಾಭವೇ ಹೆಚ್ಚಿದೆ. ಅಪಾರ ಉದ್ಯೋಗಾವಕಾಶ ಮತ್ತು ಆರ್ಥಿಕ ಅನುಕೂಲತೆಗಳನ್ನು ಒದಗಿಸುವುದರಿಂದ 2018ರಲ್ಲಿ ನಡೆಯಲಿರುವ  ಸಾರ್ವತ್ರಿಕ ಚುನಾವಣೆ ಷರೀಫ್‌ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸುವ ಸಾಧ್ಯತೆಗಳಿವೆ. 

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ವೃದ್ಧಿಸಲಿದೆ ಎನ್ನುತ್ತಾರೆ ಚೀನಾ ಆಧ್ಯಕ್ಷ ಕ್ಸಿ ಜಿನ್‌ಪಿಂಗ್.

ಭಾರತ ಸೆಡ್ಡು

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಗೆ ಕಳವಳ ವ್ಯಕ್ತಪಡಿಸಿದ ಭಾರತವು ಇರಾನ್‌ ಚಬಾಹರ್‌ ಬಂದರು ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡು ಚೀನಾಕ್ಕೆ ಸೆಡ್ಡು ಹೊಡೆದಿದೆ.
ಚೀನಾ ಅಭಿವೃದ್ಧಿಪಡಿಸುತ್ತಿರುವ ಪಾಕಿಸ್ತಾನದ  ಗ್ವಾದರ್ ಬಂದರು ಪ್ರದೇಶದದಿಂದ ಸುಮಾರು 70 ಕಿಲೋ ಮೀಟರ್‌ ದೂರದಲ್ಲಿರುವ ಚಬಾಹರ್‌ ಬಂದರು ಅಭಿವೃದ್ಧಿಗೆ ಭಾರತ  56 ಕೋಟಿ ಅಮೆರಿಕನ್ ಡಾಲರ್ (ಅಂದಾಜು ₹ 3,300 ಕೋಟಿ) ವ್ಯಯಿಸಲಿದೆ. ಈ ಬಂದರು ಅಭಿವೃದ್ಧಿಪಡಿಸಿದ ನಂತರ ಭಾರತವೇ ಅದರ ನಿರ್ವಹಣೆ ಮಾಡಲಿದೆ.
ಭಾರತದ ಸರಕುಗಳನ್ನು ಚಬಾಹರ್ ಬಂದರಿಗೆ ಸಾಗಿಸಿ ಅಲ್ಲಿಂದ ರೈಲು, ಟ್ರಕ್‌ಗಳ ಮೂಲಕ ಆಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳಿಗೆ ರವಾನೆ ಈ ಯೋಜನೆಯಿಂದ ಸಾಧ್ಯವಾಗಲಿದೆ.

ಯೋಜನೆಗೆ ಹಿನ್ನಡೆ

ಯೋಜನೆ ಜಾರಿಗೆ ಆರಂಭದಲ್ಲಿ ಭಾರಿ ಉತ್ಸುಕತೆ ತೋರಿದ ಚೀನಾ ಜಟಿಲಗೊಳ್ಳುತ್ತಿರುವ  ಪ್ರಾದೇಶಿಕ ಸಮಸ್ಯೆಗಳು ಹಾಗೂ ರಕ್ಷಣಾ ವೆಚ್ಚ ವಿಪರೀತವಾಗಿ ಹೆಚ್ಚುತ್ತಿರುವ ಕಾರಣ ಯೋಜನೆಯ ಬಗ್ಗೆ ಹಿಂದಿನಷ್ಟೇ ಉತ್ಸುಕತೆ ತೋರುತ್ತಿಲ್ಲ ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ಲೇಖನ ಉಲ್ಲೇಖಿಸಿದೆ.  

ಈ ಕಾರಿಡಾರ್‌ನಲ್ಲಿ ಚೀನಾದ ಸುಮಾರು 7,036  ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ರಕ್ಷಣೆಗಾಗಿ ಪಾಕಿಸ್ತಾನ ಸೇನೆ ವಿಶೇಷ ಭದ್ರತಾ ವಿಭಾಗ  ನಿರ್ಮಾಣವೂ ಯೋಜನೆಯಲ್ಲಿ ಸೇರಿದೆ.  ಕಾರ್ಮಿಕರ ರಕ್ಷಣೆಗಾಗಿ ಮೇಜರ್‌ ಜನರಲ್‌ ನೇತೃತ್ವದಲ್ಲಿ 14 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿರುವುದು ಚೀನಾದ ಹಿನ್ನಡೆಗೆ ಕಾರಣ ಎನ್ನಲಾಗಿದೆ.

ಹೀಗಾಗಿ ‘ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡುವುದು ಮೂರ್ಖತನವಾಗಬಹುದು’ ಎಂಬ ನಿರ್ಧಾರಕ್ಕೆ ಚೀನಾ ಬಂದಂತಿದೆ. ಇದೂ ಅಲ್ಲದೇ ಈ ಯೋಜನೆ ಚೀನಾ–ಭಾರತ ಸಂಬಂಧದ ಮೇಲೂ ಪರಿಣಾಮ ಬೀರಬಹುದು ಎಂಬ ಅಂಶ ಲೇಖನದಲ್ಲಿ ಉಲ್ಲೇಖವಾಗಿರುವುದು ಗಮನಾರ್ಹ.

ಪಾಕ್‌ ಆಕ್ರಮಿಕ ಕಾಶ್ಮೀರ ಜನರ ಆಕ್ರೋಶ

ಮೂರು ಸಾವಿರ ಕಿಲೋ ಮೀಟರ್‌ ಉದ್ದದ ಈ ಯೋಜನೆ ಪಾಕ್‌ ಆಕ್ರಮಿಕ ಕಾಶ್ಮೀರದ, ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನದ ಮೂಲಕ ಹಾದು ಹೋಗುತ್ತದೆ.
ಯೋಜನೆಗೆ ಮುಂದಾಗಿರುವ ಎರಡೂ ದೇಶಗಳು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಗಿಲ್ಗಿಟ್‌ ಬಾಲ್ಟಿಸ್ತಾನ ಮತ್ತು   ಪಿಓಕೆ ಭಾಗದ ಜನರು ಆರೋಪಿಸಿದ್ದಾರೆ.  

ಕಾರಕೋರಂ  ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಯ ಪರಿಹಾರ ಇನ್ನೂ ಸಿಕ್ಕಿಲ್ಲ ಎನ್ನುವುದು ಅಲ್ಲಿಯ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಯೋಜನೆಯ ವಿರುದ್ಧ ಧ್ವನಿ ಎತ್ತಿದ್ದಾರೆ.
 

ಈ ಯೋಜನೆ ಪಾಕಿಸ್ತಾನ ಸೇರಿದಂತೆ ಇಡೀ ದಕ್ಷಿಣ ಏಷ್ಯಾದ ಅದೃಷ್ಟವನ್ನು ಬದಲಿಸಲಿದೆ.
ನವಾಜ್‌ ಷರೀಫ್‌  ಪ್ರಧಾನಿ, ಪಾಕಿಸ್ತಾನ

ಎರಡೂ ದೇಶಗಳ ಮಧ್ಯೆ ಪರಸ್ಪರ ಬಾಂಧವ್ಯ ವೃದ್ಧಿಗೆ ಈ ಯೋಜನೆ ಸಹಕಾರವಾಗಲಿದೆ.

ಕ್ಸಿ ಜಿನ್‌ಪಿಂಗ್‌
ಅಧ್ಯಕ್ಷ, ಚೀನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT