ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತ್ರು ಪಾಳಯದೊಳಗೇ ನುಗ್ಗುವ ವಿಶೇಷ ಪಡೆ

Last Updated 12 ಅಕ್ಟೋಬರ್ 2016, 9:54 IST
ಅಕ್ಷರ ಗಾತ್ರ

ಭಾರತದ ಬಗ್ಗೆ ‘ಟೈಮ್‌’ ನಿಯತಕಾಲಿಕವು 1989 ಏಪ್ರಿಲ್ 3ರ ಸಂಚಿಕೆಯಲ್ಲಿ ‘ಸೂಪರ್ ಪವರ್ ರೈಸಿಂಗ್’ ಎಂಬ ಲೇಖನವೊಂದನ್ನು ಪ್ರಕಟಿಸಲು ಕಾರಣವಾದದ್ದು ಆಪರೇಷನ್ ಕ್ಯಾಕ್ಟಸ್.

1988ರ ನವೆಂಬರ್ 3ರ ಮುಂಜಾನೆ ಹೊತ್ತಿಗೆ ಸಣ್ಣ ದ್ವೀಪರಾಷ್ಟ್ರ ಮಾಲ್ಡೀವ್ಸನ್ನು ಪೀಪಲ್ಸ್ ಲಿಬರೇಷನ್ ಆರ್ಗನೈಸೇಷನ್ ಆಫ್ ತಮಿಳು ಈಳಂ ಉಗ್ರರು ವಶಕ್ಕೆ ಪಡೆದುಕೊಂಡಿದ್ದರು. ರಾಜಧಾನಿ ಮಾಲೆಯನ್ನು ಸುತ್ತುವರಿದಿದ್ದರು. ಆಗಷ್ಟೇ ಶೇ 98.5ರಷ್ಟು ಬಹುಮತದೊಂದಿಗೆ ಮೂರನೇ ಬಾರಿ ಅಧ್ಯಕ್ಷ ಸ್ಥಾನಕ್ಕೇರಿದ್ದ ಮೌಮೂನ್ ಅಬ್ದುಲ್ ಗಯೂಂ ಅವರ ಅರಮನೆಯನ್ನು ಸುತ್ತುವರಿದಿದ್ದರು. ಅರಮನೆಯಿಂದ ತಪ್ಪಿಸಿಕೊಂಡಿದ್ದ ಗಯೂಂ ಸುರಕ್ಷಿತವಾದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು.

ದಿಕ್ಕೆಟ್ಟ ಗಯೂಂ ನೆರವಿಗಾಗಿ ಜಗತ್ತಿನ ಎಲ್ಲ ಸೂಪರ್ ಪವರ್‌ಗಳಿಗೆ ಮೊರೆಯಿಟ್ಟರು. ನೆರವಿಗಾಗಿ ಅವರು ಪಾಕಿಸ್ತಾನವನ್ನೂ ಕೋರಿದ್ದರು. ಆದರೆ ಸಮಯಕ್ಕೆ ನೆರವಿಗೆ ಧಾವಿಸಿದ್ದು ಭಾರತ ಮಾತ್ರ. ನೆರವಿಗಾಗಿ ಕರೆ ಬಂದ 16 ತಾಸಿನಲ್ಲಿ ಇಡೀ ಕಾರ್ಯಾಚರಣೆಯನ್ನು ಗಣಿತದ ಲೆಕ್ಕಾಚಾರದ ನಿಖರತೆಯಲ್ಲಿ ಯಶಸ್ವಿಗೊಳಿಸಿದ ಹೆಮ್ಮೆ ಪ್ಯಾರಾಚೂಟ್ ರೆಜಿಮೆಂಟ್‌ನ ವಿಶೇಷ ಕಮಾಂಡೊಗಳದ್ದು.

ಮಾಲ್ಡೀವ್ಸನ್ನು ಒಮ್ಮೆಯೂ ಕಂಡಿಲ್ಲದ, ಆ ದೇಶದ ಒಂದು ನಕ್ಷೆಯನ್ನೂ ಹೊಂದಿಲ್ಲದ ಯೋಧರು ಅಧ್ಯಕ್ಷ ಗಯೂಂ ಅವರನ್ನು ರಕ್ಷಿಸಿ ಉಗ್ರರ ಹೆಡೆಮುರಿ ಕಟ್ಟಿ ಅಲ್ಲಿನ ಸೇನೆಗೆ ಒಪ್ಪಿಸಿದರು. ಈ ಕಾರ್ಯಾಚರಣೆಯನ್ನು ‘ಶಸ್ತ್ರಚಿಕಿತ್ಸೆಯಷ್ಟು ನಿಖರ’ ಎಂದು ‘ಟೈಮ್‌’ ನಿಯತಕಾಲಿಕ ಬಣ್ಣಿಸಿತ್ತು. ಇದು ಭಾರತ ಬೇರೊಂದು ದೇಶಕ್ಕಾಗಿ ಸ್ವತಂತ್ರವಾಗಿ ನಡೆಸಿದ ಮೊದಲ ಕಾರ್ಯಾಚರಣೆ. ಕಾರ್ಯಾಚರಣೆಯಲ್ಲಿ ಒಬ್ಬನೇ ಒಬ್ಬ ಕಮಾಂಡೊಗೆ ಒಂದು ಸಣ್ಣ ಗಾಯವೂ ಆಗಿರಲಿಲ್ಲ ಎಂಬುದು ದೊಡ್ಡ ಹೆಗ್ಗಳಿಕೆ.

1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಯುದ್ಧತಂತ್ರವನ್ನೇ ಬದಲಾಯಿಸುವಂತೆ ಮಾಡಿದ ಚಾತುರ್ಯ, ಕೆಚ್ಚನ್ನು ಕೂಡ ಎಸ್‍ಎಫ್ ಎಂದು ಕರೆಸಿಕೊಳ್ಳುವ ಪ್ಯಾರಾ ಕಮಾಂಡೊ ವಿಶೇಷ ಪಡೆ (ಸ್ಪೆಷಲ್ ಫೋರ್ಸ್) ತೋರಿದೆ. ಪೂಂಚ್‌ನಿಂದ 18 ಕಿಲೊ ಮೀಟರ್ ನೈರುತ್ಯದ ಮಂಧೋಲ್ ಗ್ರಾಮದಲ್ಲಿ ಚೀನಾ ನಿರ್ಮಿತ ಆರು ಫಿರಂಗಿಗಳನ್ನು ಸ್ಥಾಪಿಸಿ ಭಾರತ ಸೇನೆ ಮುಂದಕ್ಕೆ ಸಾಗದಂತೆ ಪಾಕಿಸ್ತಾನ ಸೇನೆ ಕೈ ಕಟ್ಟಿ ಹಾಕಿತ್ತು.

ಭೂಸೇನೆಗೆ ಅಪಾರ ಹಾನಿಯನ್ನೂ ಮಾಡಿತ್ತು. ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಹೊಣೆಯನ್ನು ಪ್ಯಾರಾ ಕಮಾಂಡೊಗೆ ವಹಿಸಲಾಯಿತು. ಮಂಜುಗಡ್ಡೆಯಂತೆ ತಣ್ಣಗಿದ್ದ ಪೂಂಚ್ ನದಿಯ ಎದೆಮಟ್ಟ ನೀರಿನಲ್ಲಿ ಸಾಗಿದ ಪಡೆ, ಶತ್ರುವಿನ ಹಿಂದಿನಿಂದ ಆಕ್ರಮಿಸಿ ಎಲ್ಲ ಆರು ಫಿರಂಗಿಗಳನ್ನು ನಾಶ ಮಾಡಿತು. ಈ ಕದನದಲ್ಲಿ ಪಾಕಿಸ್ತಾನದ ಹಲವು ಯೋಧರು ಬಲಿಯಾದರು, ಎಸ್‍ಎಫ್‌ನ ಇಬ್ಬರು ಯೋಧರು ಮೃತರಾಗಿ 20 ಮಂದಿ ಗಾಯಗೊಂಡರು.

ಎಸ್‍ಎಫ್‌ ಯೋಧರ ದಿಟ್ಟತನವನ್ನು ಹಾಡಿ ಹೊಗಳಿದ್ದು ಭಾರತವಲ್ಲ, ಬದಲಿಗೆ ಪಾಕಿಸ್ತಾನ ಎಂಬುದು ವಿಶೇಷ. ಮಂಧೋಲ್ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನ ಸೇನೆ ತನ್ನ ಯುದ್ಧಾಸ್ತ್ರಗಳಿಗೆ ರಕ್ಷಣೆ ನೀಡುವುದಕ್ಕಾಗಿ ಎರಡನೇ ಹಂತದ ರಕ್ಷಣಾ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ತನ್ನ ಯುದ್ಧ ನೀತಿಯನ್ನೇ ಬದಲಾಯಿಸಿತು. ಸೇನೆಯ ಅಧಿಕಾರಿಗಳಿಗೆ ತರಬೇತಿ ನೀಡುವ ಡೆಹ್ರಾಡೂನ್‌ನ ಭಾರತೀಯ ಸೇನಾ ಅಕಾಡೆಮಿಯ ಪಠ್ಯಕ್ರಮದಲ್ಲಿ ಮಂಧೋಲ್ ಕಾರ್ಯಾಚರಣೆಯನ್ನು ಸೇರಿಸಲಾಗಿದೆ.

ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯ ಭಾಗವಾಗಿ ಸಿಯೆರಾ ಲಿಯೋನ್‌ನಲ್ಲಿ ಬಂಡುಕೋರರು ಒತ್ತೆ ಇರಿಸಿಕೊಂಡಿದ್ದ ವಿಶ್ವಸಂಸ್ಥೆ ಅಧಿಕಾರಿಗಳು ಮತ್ತು ನಾಗರಿಕರನ್ನು ರಕ್ಷಿಸಿದ ಪ್ಯಾರಾ ಕಮಾಂಡೊದ ಧೈರ್ಯವನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ಕಾರ್ಗಿಲ್ ಯುದ್ಧದಲ್ಲಿ ಮುಷ್‍ಕೋಷ್ ಕಣಿವೆ, ಬಟಾಲಿಕ್ ವಲಯದಿಂದ ಪಾಕಿಸ್ತಾನಿ ಸೇನೆಯನ್ನು ತೆರವುಗೊಳಿಸಿದ್ದು ಕೂಡ ಇದೇ ಪಡೆ.

ಅತ್ಯಂತ ಅಪಾಯಕಾರಿ ಕಾರ್ಯಾಚರಣೆಗೆ ಮಾತ್ರ ಈ ಪಡೆಯನ್ನು ಬಳಸುವುದರಿಂದ ಇವರು ದೈಹಿಕ, ಮಾನಸಿಕ, ಬೌದ್ಧಿಕವಾಗಿ ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕಾಗುತ್ತದೆ.

ಶತ್ರು ದೇಶಕ್ಕೆ ನುಸುಳುವುದು, ಸುರಕ್ಷಿತವಾಗಿ ಹಿಂದಿರುಗುವುದು, ನೆಲ ಮಾರ್ಗದಲ್ಲಿ ನಡೆಸುವಷ್ಟೇ ಸುಲಲಿತವಾಗಿ ವಾಯು, ಜಲ ಮಾರ್ಗದ ಕಾರ್ಯಾಚರಣೆಯನ್ನೂ ನಡೆಸುವುದಕ್ಕೆ ಬೇಕಾದ ತರಬೇತಿಯನ್ನು ನೀಡಲಾಗುತ್ತದೆ. ಚಾಕುವಿನಿಂದ ತೊಡಗಿ ಅತ್ಯಾಧುನಿಕ ಯುದ್ಧಾಸ್ತ್ರಗಳ ಬಳಕೆ, ಮುಚ್ಚಿದ ಕಟ್ಟಡಗಳ ಒಳಪ್ರವೇಶ, ಗೆರಿಲ್ಲಾ ಯುದ್ಧ, ಸಮರ ಕಲೆಯಂತಹವುಗಳನ್ನು ಕರತಲಾಮಲಕ ಮಾಡಿಸಲಾಗುತ್ತದೆ.

ತುಕಡಿಯ ಪರಸ್ಪರರ ಬಗ್ಗೆ ಲವಲೇಶವೂ ಅನುಮಾನವಿಲ್ಲದ ವಿಶ್ವಾಸಕ್ಕಾಗಿ ವಿಶೇಷ ತರಬೇತಿ ಏರ್ಪಡಿಸಲಾಗುತ್ತದೆ. ಯೋಧನೊಬ್ಬನನ್ನು ನಿಲ್ಲಿಸಿ ಆತನ ಕಾಲ ಬಳಿ ಒಂದು ನಾಣ್ಯ ಇರಿಸಲಾಗುತ್ತದೆ. ಇನ್ನೊಬ್ಬ ಯೋಧ ದೂರದಿಂದ ಓಡಿಕೊಂಡು  ಬರುತ್ತಾ ನಾಣ್ಯವನ್ನು ಗುರಿಯಾಗಿರಿಸಿ ಗುಂಡು ಹಾರಿಸುತ್ತಲೇ ಇರಬೇಕು. ಈ ಮಟ್ಟದ ವಿಶ್ವಾಸ ಮತ್ತು ಸಮನ್ವಯ ಪ್ಯಾರಾ ಕಮಾಂಡೊ ಕಾರ್ಯಾಚರಣೆಯಲ್ಲಿಯೂ ಕಾಣಸಿಗುತ್ತದೆ.

ನಮ್ಮ ವಿಶೇಷ ಪಡೆಗಳಿವು
ಮಾರ್ಕೋಸ್: ಇದು ನೌಕಾಪಡೆಯ ವಿಶೇಷ ಪಡೆ. ನೀರು ಮತ್ತು ನೆಲದ ಮೇಲೆ ಒಂದೇ ರೀತಿ ಕಾರ್ಯಾಚರಣೆ ನಡೆಸಬಲ್ಲ ತುಕಡಿ. ಗಡ್ಡ ಬಿಟ್ಟು ವೇಷ ಮರೆಸಿಕೊಂಡು ಗುಪ್ತಚರ ಚಟುವಟಿಕೆ ನಡೆಸುವ ಕಾರಣಕ್ಕಾಗಿ ಇವರನ್ನು ಉಗ್ರರು ‘ದಾಡಿವಾಲಾ ಫೌಜ್’ ಎಂದು ಕರೆಯುತ್ತಾರಂತೆ. ‘ದಿ ಫ್ಯೂ, ದಿ ಫಿಯರ್‌ಲೆಸ್’ (ನಿರ್ಭೀತ ವಿರಳರು) ಎಂಬುದು ಇವರ ಧ್ಯೇಯವಾಕ್ಯ. ತೊಡೆವರೆಗಿನ ಕೆಸರಿನಲ್ಲಿ ತೆವಳುತ್ತಾ 25 ಮೀಟರ್ ದೂರದ ಗುರಿಗೆ ಗುಂಡು ಹಾರಿಸುವುದು ಇವರ ತರಬೇತಿಯ ಭಾಗ.

ಗರುಡ: ವಾಯುಪಡೆಯ ಕಮಾಂಡೊ ಪಡೆಯ ಹೆಸರು ಗರುಡ. ಶೋಧ, ರಕ್ಷಣಾ ಕಾರ್ಯಾಚರಣೆ ಮತ್ತು ಶತ್ರುವಿನ ಹಿಂದೆ ಹೋಗಿ ದಾಳಿ ನಡೆಸುವುದು ಇದರ ವಿಶೇಷ. ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಹೆಚ್ಚುವರಿಯಾಗಿ ಹತ್ತು ಗರುಡ ಪಡೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ.

ಘಾತಕ್ ಪಡೆ: ಇದು ಭೂಸೇನೆಯ ವಿಶೇಷ ಘಟಕ. ನಿರ್ದಿಷ್ಟ ಗುರಿಗೆ ದಿಢೀರ್ ದಾಳಿ ನಡೆಸಿ ಸೇನೆಯ ತುಕಡಿ ಮುನ್ನುಗ್ಗಲು ಇರುವ ತಡೆ ನಿವಾರಿಸುವುದು ಘಾತಕ್‌ನ ಕೆಲಸ.ವೈರಿ ಪಡೆಯ ಚಲನವಲನ ಗಮನಿಸುವುದು, ಗುಪ್ತಚರ ಮಾಹಿತಿ ಸಂಗ್ರಹದಲ್ಲಿ ಪರಿಣತರು.

ಪ್ಯಾರಾ ಕಮಾಂಡೊ: ಪ್ಯಾರಾಚೂಟ್ ರೆಜಿಮೆಂಟ್‌ನ ಪ್ಯಾರಾ ಕಮಾಂಡೊಗಳ ಮುಖ್ಯ ಕೆಲಸ ಹೆಚ್ಚಿನ ಹಾನಿ ಆಗದಂತೆ ಸೇನೆಯು ಶತ್ರುವಿನ ಸಮೀಪ ಸಾಗುವಂತೆ ಮಾಡುವುದು. ಶತ್ರುವಿನ ಹಿಂದಿನಿಂದ ಪ್ಯಾರಾ ಕಮಾಂಡೊಗಳು ನಡೆಸುವ ದಾಳಿ ಶತ್ರುವಿನ ರಕ್ಷಣಾ ವ್ಯೂಹವನ್ನೇ ದುರ್ಬಲಗೊಳಿಸುತ್ತದೆ.

ಪ್ಯಾರಾ ಕಮಾಂಡೊಗಳ ಬಗೆಗಿನ ಒಂದು ಆಸಕ್ತಿಕರ ಅಂಶವೆಂದರೆ, ಭಾರತೀಯ ಸೇನೆಯಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಅವಕಾಶ ಇರುವ ಏಕೈಕ ಪಡೆ ಇದು. ಒಬ್ಬೊಬ್ಬ ಯೋಧನೂ ಒಬ್ಬ ಚಕ್ರವರ್ತಿಗೆ ಸಮಾನ ಎಂಬುದು ಈ ಪಡೆಯ ಧ್ಯೇಯವಾಕ್ಯ.

ಕೋಬ್ರಾ: ಕ್ಷಿಪ್ರ ಕಾರ್ಯಾಚರಣೆ ಕಮಾಂಡೊ ತುಕಡಿ ‘ಕೋಬ್ರಾ’ ಕೇಂದ್ರ ಮೀಸಲು ಪೊಲೀಸ್ ಪಡೆಯ ಭಾಗ. ದಂಗೆಯಂತಹ ಸಂದರ್ಭಗಳನ್ನು ನಿಭಾಯಿಸುವ ತರಬೇತಿ ನೀಡಲಾಗುತ್ತದೆ. ಹೊಂಚು ದಾಳಿ, ಪ್ಯಾರಾಚೂಟ್ ಮೂಲಕ ಇಳಿಯುವುದು, ಅರಣ್ಯ ಯುದ್ಧಗಳಲ್ಲಿ ಈ ಪಡೆ ನಿಸ್ಸೀಮ. ದೇಶದೊಳಗೆ ಕಾನೂನು ಜಾರಿ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಅನುಭವ ಹೊಂದಿದೆ.

ಬ್ಲ್ಯಾಕ್ ಕ್ಯಾಟ್: ಸಂಪೂರ್ಣ ಕಪ್ಪು ಸಮವಸ್ತ್ರ ಧರಿಸುವ ಈ ಪಡೆ ಭಯೋತ್ಪಾದನೆ ಚಟುವಟಿಕೆ ನಿಗ್ರಹದಲ್ಲಿ ವಿಶೇಷ ತರಬೇತಿ ಪಡೆದಿದೆ. ಗಣ್ಯರಿಗೆ ಭದ್ರತೆ ಒದಗಿಸುವ ವಿಶೇಷ ಜವಾಬ್ದಾರಿ ಇದೆ.‌ 

ವಿಶೇಷ ಗಡಿ ಪಡೆ ಅಥವಾ ಎಸ್‍ಎಫ್‍ಎಫ್: ಭಾರತ– ಚೀನಾ ಯುದ್ಧದ ಸಂದರ್ಭದಲ್ಲಿ ರಚಿಸಲಾದ ಈ ಪಡೆ ಅಸಾಂಪ್ರದಾಯಿಕ ಯುದ್ಧದಲ್ಲಿ ಹೆಚ್ಚಿನ ಪರಿಣತಿ ಹೊಂದಿದೆ.

1985-86ರ ಸಿಯಾಚಿನ್ ಸಂಘರ್ಷದಲ್ಲಿ ಮಹತ್ವದ ಪಾತ್ರ ವಹಿಸಿದೆ. ನಂತರದಿಂದ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಎಸ್‍ಎಫ್‍ಎಫ್‌ನ ಒಂದು ತುಕಡಿಯನ್ನು ಕಾಯಂ ಆಗಿ ನಿಯೋಜಿಸಲಾಗಿದೆ.

ಫೋರ್ಸ್ ಒನ್: ಮುಂಬೈ ಮೇಲಿನ ಉಗ್ರರ ದಾಳಿಯ ನಂತರ ಮಹಾರಾಷ್ಟ್ರ ಸರ್ಕಾರ ರಚಿಸಿದ ಪಡೆ ಇದು.  ಮುಂಬೈಯನ್ನು ಯಾವುದೇ ಬೆದರಿಕೆಯಿಂದ ರಕ್ಷಿಸುವುದು ಮುಖ್ಯ ಉದ್ದೇಶ. ಯಾವುದೇ ಸನ್ನಿವೇಶಕ್ಕೆ ಅತ್ಯಂತ ವೇಗವಾಗಿ ಪ್ರತಿಕ್ರಿಯೆ ನೀಡಬಲ್ಲ ಜಗತ್ತಿನ ಕೆಲವೇ ಪಡೆಗಳಲ್ಲಿ ಇದೂ ಒಂದು. ಇಸ್ರೇಲ್‌ನ ವಿಶೇಷ ಪಡೆಯಿಂದ ತರಬೇತಿ ನೀಡಲಾಗಿದೆ.

ಕಮಾಂಡೊ ಆಯುಧ
ಎಸ್‌ಎಫ್‌ ಕಮಾಂಡೊಗಳು ಮುಖ್ಯವಾಗಿ ಬಳಸುವ ಆಯುಧ ಟವೊರ್‌–21 ರೈಫಲ್‌. ಜಲ ನಿರೋಧಕ ವ್ಯವಸ್ಥೆ ಇರುವ ಈ ರೈಫಲ್‌ ನಿಮಿಷಕ್ಕೆ 750–900 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದೆ. 400 ಮೀಟರ್‌ ದೂರದವರೆಗೆ ನಿಖರವಾಗಿ ಗುಂಡು ಹಾರಿಸಬಹುದು. ಈಗ ಲಭ್ಯ ಇರುವ ಅತ್ಯಾಧುನಿಕ ಬಂದೂಕುಗಳಲ್ಲಿ ಒಂದಾಗಿರುವ ಇದರ ತೂಕ 3.27 ಕಿಲೊ. ಇದಲ್ಲದೆ ಅರೆ ಸ್ವಯಂಚಾಲಿತ ಪಿಸ್ತೂಲುಗಳನ್ನೂ ಕಮಾಂಡೊಗಳು ಸಾಮಾನ್ಯವಾಗಿ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT