ಇರಾನ್‌ ಎದುರು ಅಬ್ಬರಿಸಿದ ಪೋಲೆಂಡ್‌

7
ವಿಶ್ವಕಪ್ ಕಬಡ್ಡಿ: ಆಸ್ಟ್ರೇಲಿಯ ಎದುರು ಬಾಂಗ್ಲಾದೇಶಕ್ಕೆ ಏಕಪಕ್ಷೀಯ ಗೆಲುವು

ಇರಾನ್‌ ಎದುರು ಅಬ್ಬರಿಸಿದ ಪೋಲೆಂಡ್‌

Published:
Updated:
ಇರಾನ್‌ ಎದುರು ಅಬ್ಬರಿಸಿದ ಪೋಲೆಂಡ್‌

ಅಲಹಾಬಾದ್‌:  ಪೋಲೆಂಡ್ ದೇಶವು ಯುರೋಪ್‌ನ ಕಬಡ್ಡಿ ಶಕ್ತಿ ಕೇಂದ್ರವಾಗುವ ಎಲ್ಲಾ ಲಕ್ಷಣಗಳು ಅನಾವರಣಗೊಂಡಿವೆ. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿಯ ಸೋಮವಾರದ ಪಂದ್ಯದಲ್ಲಿ ಏಷ್ಯಾದ ಪ್ರಬಲ ತಂಡ ಇರಾನ್‌ 25–41ರಿಂದ ಮೈಕೆಲ್‌ ಸ್ಪಿಸ್ಕೊ ಬಳಗಕ್ಕೆ ತಲೆಬಾಗಿದ್ದು ಅನಿರೀಕ್ಷಿತ.

ಪಂದ್ಯಕ್ಕೆ ಮೊದಲು ಇರಾನ್‌ ನೆಚ್ಚಿನ ತಂಡವಾಗಿದ್ದು, ಏಕಪಕ್ಷೀಯ ಫಲಿತಾಂಶ ಬರುವ ಸಾಧ್ಯತೆ ಇದ್ದುದರಿಂದ ಕುತೂಹಲ ಕಳೆದುಕೊಂಡಿತ್ತು.ಆದರೆ ಕಬಡ್ಡಿ ಜಗತ್ತಿನ ‘ಶಿಶು’ ಪೋಲೆಂಡ್‌ ಆರಂಭದಿಂದಲೂ ಮೇಲುಗೈ ಸಾಧಿಸಿದ್ದರಿಂದ ಇರಾನ್‌ ಆಟಗಾರರು ದಿಗ್ಭ್ರಮೆಗೆ ಒಳಗಾಗಿದ್ದು ಕಂಡು ಬಂದಿದ್ದು.

ಮೊದಲ ನಿಮಿಷದಲ್ಲೇ ರೈಡಿಂಗ್‌ ಹೋದ ಪ್ಯೋಟರ್‌ ಪಾಮುಲಕ್‌ ಅನು ಭವಿ ಆಟಗಾರ ಅಬೊಜರ್‌ ಮಿಘಾನಿಯ ಹೆಗಲನ್ನು ಮುಟ್ಟಿ ಬಂದು ಪೋಲೆಂಡ್‌ನ ಪಾಯಿಂಟ್ಸ್‌ ಖಾತೆ ತೆರೆದರು. ಆದರೆ ಇರಾನ್‌ ತಮ್ಮ ಎಂದಿನ ಆಟವಾಡುತ್ತಾ ಮುನ್ನಡೆ ಗಳಿಸಿದರು. ಆದರೆ 7ನೇ ನಿಮಿಷದಲ್ಲಿ ಪೋಲೆಂಡ್‌ ಅಂತರವನ್ನು 5–5 ರಿಂದ ಸಮ ಮಾಡಿಕೊಂಡಿತು. ಅಲ್ಲಿಂದ ಕೊನೆಯವರೆಗೂ ಪೋಲೆಂಡ್‌ ಆಟಗಾರರ ಅದ್ಭುತ ಆಟ ಕಂಡು ಪ್ರೇಕ್ಷಕರು ಹುಚ್ಚೆದ್ದು ಕುಣಿದರು.ಪಾಮುಲಕ್‌ 3ನೇ ನಿಮಿಷದಲ್ಲಿ ರೈಡಿಂಗ್‌ನಲ್ಲಿ ಪ್ರೊ ಕಬಡ್ಡಿಯ ಅನುಭವಿ ಗಳಾದ ಮೆರಾಜ್‌ ಷೇಕ್‌ ಮತ್ತು ಅಬೊಜರ್‌ನನ್ನು ಹೊರ ಕಳಿಸಿದರು. ಮೈಕೆಲ್‌ ಸ್ಪಿಸ್ಕೊ, ಕ್ಲೊಸ್ಕೊವ್‌ಸ್ಕಿ ಜಾಕೂಬ್‌, ಸೆಸೆಸ್ಕಿ ಫಿಲಿಪ್‌, ಪಾಮುಕ್‌ ಅವರ ಅತ್ಯುತ್ತಮ ಪಾದಚಲನೆ, ನುರಿತ ತಂತ್ರಗಳು ಬೆರಗು ಮೂಡಿಸಿತು.ಈಗಾಗಲೇ ಲೀಗ್‌ನ ಬಿ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ಇರಾನ್‌ನ ಆ ಪಟ್ಟಕ್ಕೆ ಈ ಸೋಲಿನಿಂದ ಸಂಚಕಾರ ಬರುವ ಸಾಧ್ಯತೆ ಇದೆ. ಮಂಗಳವಾರ ನಡೆಯ ಲಿರುವ ಪಂದ್ಯದಲ್ಲಿ ಜಪಾನ್‌ ತಂಡವನ್ನು ಥಾಯ್ಲೆಂಡ್‌ 7ಪಾಯಿಂಟ್‌ಗಳ ಅಂತರದಿಂದ ಸೋಲಿಸಿದರೆ, ಇರಾನ್‌ ಎರಡನೇ ಸ್ಥಾನಕ್ಕಿಳಿಯಲಿದೆ.ಇರಾನ್‌ ತಂಡವನ್ನು ಗಾಯಾಳುಗಳ ಸಮಸ್ಯೆ ಕೂಡಾ ಇನ್ನಿಲ್ಲದಂತೆ ಕಾಡಿತು. ಮೆರಾಜ್‌ ಷೇಕ್‌ ಮತ್ತು ಫಜೆಲ್‌ ಅತ್ರಚಲಿ ಗಾಯಗೊಂಡು ಹೊರ ನಡೆದರು.

ಅದಕ್ಕೆ ಮೊದಲು ಪ್ರೊ ಕಬಡ್ಡಿ ಲೀಗ್‌ನ ‘ತಾರೆ’ ಮೆರಾಜ್‌ ಷೇಕ್‌ನನ್ನು ಪೋಲೆಂಡ್‌ ಆಟಗಾರರು ಹಲವು ಸಲ ಅಂಗಣದಿಂದ ಹೊರ ಕಳಿಸಿದ್ದರು.23ನೇ ನಿಮಿಷದಲ್ಲೊಮ್ಮೆ ಇರಾನ್‌ ಅಂಗಣ ಖಾಲಿಯಾದಾಗ ಸ್ಕೋರು 23–15 ಆಗಿದ್ದರೆ, ಆಟ ಮುಗಿಯಲು 2 ನಿಮಿ ಷಗಳಿವೆ ಎನ್ನುವಾಗಲೂ ಪೋಲೆಂಡ್‌ ಎರಡನೇ ಸಲ ಆಲೌಟ್‌ ಪಾಯಿಂಟ್ಸ್‌ ಗಳಿಸಿತು. ಅನುಭವಿ ಸ್ಪಿಸ್ಕೊ 12 ಪಾಯಿಂಟ್ಸ್‌ ಗಳಿಸಿದರು. ಪೋಲೆಂಡ್‌ ರೈಡಿಂಗ್‌ನಲ್ಲಿ 28 ಪಾಯಿಂಟ್ಸ್‌ ಗಳಿಸಿದರೆ, ಇರಾನ್‌ 17ಪಾಯಿಂಟ್‌ಗಳನ್ನಷ್ಟೇ ಗಳಿಸಿತು.ಬಾಂಗ್ಲಾ ಜಯಭೇರಿ:  ಬಾಂಗ್ಲಾದೇಶದ ಆಟಗಾರರು ಎ ಗುಂಪಿನ ಪಂದ್ಯದಲ್ಲಿ ಆಸ್ಟೇಲಿಯಾವನ್ನು 80–8 ರಿಂದ ಲೀಲಾಜಾಲವಾಗಿ ಸೋಲಿಸಿತು.

ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಆಸ್ಟ್ರೇಲಿಯ 4ನೇ ನಿಮಿಷದಲ್ಲೇ ಆಲೌಟ್‌ ಆಘಾತ ಕಂಡಿತು. ಆಸ್ಟ್ರೇಲಿಯ ಮೊದಲ ಪಾಯಿಂಟ್‌ ಗಳಿಸಲು 9ನೇ ನಿಮಿಷದವರೆಗೆ ಕಾಯಬೇಕಾಯಿತು. ಆಗ ರೈಡಿಂಗ್‌ ಬಂದ ಬಾಂಗ್ಲಾ ನಾಯಕ ಅಬ್ದುಜಮಾನನ್ನು ಬಲೆಗೆ ಕೆಡವುವ ಮೂಲಕ ಕ್ಯಾಂಬೆಲ್‌ ಬ್ರೌನ್‌ ಬಳಗ ಮೊದಲ ಪಾಯಿಂಟ್‌ ಗಳಿಸಿತು. ವಿರಾಮದ ವೇಳೆಗಾಗಲೇ ವಿಜಯೀ ತಂಡ 36–2ರಿಂದ ಮುಂದಿತ್ತು.

ಪೋಲೆಂಡ್‌ ಕಬಡ್ಡಿಯಲ್ಲಿ ‘ಬೆಂಗಳೂರು’

ಪೋಲೆಂಡ್‌ನ ಕಬಡ್ಡಿ ಇತಿಹಾಸದಲ್ಲಿ ಬೆಂಗಳೂರಿನ ಹೆಸರು ಚಿರಸ್ಥಾಯಿಯಾಗಿರುತ್ತದೆ. ಜತೆಗೆ ಮೈಕೆಲ್‌ ಸ್ಪಿಸ್ಕೊ ಹೆಸರು ಕೂಡಾ. ಎರಡು ವರ್ಷಗಳ ಹಿಂದೆ ಸ್ಪಿಸ್ಕೊ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ಪರ ಆಡಲು ಸಹಿ ಹಾಕಿದ್ದರು. ಆಗ ಪೋಲೆಂಡ್‌ನಲ್ಲಿ ಕಬಡ್ಡಿ ಗೊತ್ತಿರಲೇ ಇಲ್ಲ.

ಬಾಲ್ಯದ ದಿನಗಳಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟಗಾರರಾಗಿದ್ದ ಸ್ಪಿಸ್ಕೊ ನಂತರ ಪೋಲೆಂಡ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಆಡಿದ್ದರು. ಅಮೆರಿಕಾ ಫುಟ್‌ಬಾಲ್‌ ಲೀಗ್‌ನಲ್ಲೂ ಪರಿಶ್ರಮ ಪಟ್ಟಿದ್ದರು. ಆಕಸ್ಮಿಕವಾಗಿ ಕಬಡ್ಡಿಗೆ ಬಂದ ಇವರು, ಪ್ರೊ ಕಬಡ್ಡಿ ಋತು ಮುಗಿದ ಮೇಲೆ ತಮ್ಮ ದೇಶಕ್ಕೆ ಹೋಗಿ ಅತ್ಯುತ್ತಮ ಕಬಡ್ಡಿ ತಂಡವನ್ನೇ ಕಟ್ಟಿದ್ದಾರೆ.ರಗ್ಬಿ ಮತ್ತು ಫುಟ್‌ಬಾಲ್‌ನಲ್ಲಿ ಸಾಕಷ್ಟು ಪರಿಶ್ರಮ ಹೊಂದಿರುವ ನೂರಾರು ಮಂದಿಯನ್ನು ಒಗ್ಗೂಡಿಸಿ ಅವರಿಗೆಲ್ಲಾ ಕಬಡ್ಡಿಯ ತಂತ್ರಗಳನ್ನು ಕಲಿಸಿದ್ದಾರೆ. ಅವರ ನಡುವಿನಿಂದಲೇ ರಾಷ್ಟ್ರೀಯ ತಂಡವೊಂದನ್ನು ಆಯ್ಕೆ ಮಾಡಿದ್ದಾರೆ.

ಈ ತಂಡ ಇಲ್ಲಿ ಕೆನ್ಯಾ, ಥಾಯ್ಲೆಂಡ್‌, ಜಪಾನ್‌ ಎದುರು ಸೋತಿದಾದರೂ, ಅಮೆರಿಕಾದ ವಿರುದ್ಧ 75–29 ರಿಂದ ಗೆದ್ದಿತು. ಇದೀಗ ಏಷ್ಯಾದ ಪ್ರಬಲ ಶಕ್ತಿಯನ್ನೇ ಮಣಿಸಿದ ಸಂಭ್ರಮದಲ್ಲಿ ಸ್ಪಿಸ್ಕೊ ಬಳಗ ವಿಶ್ವಕಪ್‌ ಅಂಗಣದಲ್ಲಿ ಕುಣಿದು ಕುಪ್ಪಳಿಸಿತು.

2014ರ ಇಂಚನ್‌ ಏಷ್ಯನ್‌ ಕ್ರೀಡಾಕೂಟದ ಫೈನಲ್‌ನಲ್ಲಿ ಭಾರತದ ಆಟಗಾರರು ಕೇವಲ 2 ಪಾಯಿಂಟ್ಸ್‌ಗಳಿಂದಷ್ಟೇ ಇರಾನ್‌ ತಂಡವನ್ನು ಸೋಲಿಸಲು ಶಕ್ತರಾಗಿ ಚಿನ್ನ ಗೆದ್ದಿದ್ದರು. ಅಂತಹ ಪ್ರಬಲ ಇರಾನ್‌ ಇದೀಗ ಪೋಲೆಂಡ್‌ ಎದುರು ಗಡಗಡ ನಡುಗಿತು.

ಇಂದಿನ ಪಂದ್ಯಗಳು

ಅಮೆರಿಕ–ಕೆನ್ಯಾ

ಆರಂಭ: ರಾತ್ರಿ 8

ಭಾರತ–ಇಂಗ್ಲೆಂಡ್‌

ಆರಂಭ: ರಾತ್ರಿ 9

ಸ್ಥಳ: ಟ್ರಾನ್ಸ್‌ಸ್ಟೇಡಿಯಾ, ಅಹಮದಾಬಾದ್‌

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry