ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ

7

ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ

Published:
Updated:
ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ

ನವೀಕರಿಸಬಹುದಾದ ಶಕ್ತಿ ಸಂಪನ್ಮೂಲವಾಗಿರುವ ಸೌರಶಕ್ತಿಯ ಬಗ್ಗೆ ಇಂದು ಎಲ್ಲಿಲ್ಲದ ಆಸಕ್ತಿ ಸೃಷ್ಟಿಯಾಗಿದೆ. ಸರ್ಕಾರಗಳೂ ಇದರ ಬಳಕೆಗೆ ಪ್ರೋತ್ಸಾಹ ನೀಡುತ್ತಿವೆ.ವೈಯಕ್ತಿಕವಾಗಿಯೂ ಕೆಲವರು ಇದರ ಬಳಕೆಗೆ ಮುಂದಾಗಿದ್ದಾರೆ. ಕ್ರೀಡಾಂಗಣಗಳಲ್ಲಿಯೂ ದೊಡ್ಡಮಟ್ಟದ ಸೌರಫಲಕಗಳೂ ಬಂದಿವೆ.ಕಾಲುವೆಗಳ ಮೇಲೆ ಬೃಹತ್‌ ಸೌರಫಲಕಗಳನ್ನು ಅಳವಡಿಸಿಯೂ ವಿದ್ಯುತ್‌ ಉತ್ಪಾದನೆ ನಡೆಯುತ್ತಿದೆ.

ಸೌರಶಕ್ತಿಯ ಬಳಕೆ ತಂತ್ರಜ್ಞಾನದ ಅಭಿವೃದ್ಧಿಗೆ ಸಾಕ್ಷಿ ಎಂಬಂತೆ ದಕ್ಷಿಣ ಆಫ್ರಿಕಾದ ವಿಮಾನ ನಿಲ್ದಾಣವೊಂದು ಸಂಪೂರ್ಣವಾಗಿ ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುತ್ತಿದೆ. ಜಾರ್ಜ್‌ನಲ್ಲಿರುವ ಪ್ರಾದೇಶಿಕ ವಿಮಾನ ನಿಲ್ದಾಣ ಸಂಪೂರ್ಣ ಸೌರವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ. ‘ಹಸಿರು  ವಿಮಾನ ನಿಲ್ದಾಣ’ ಎಂಬ ಹೆಸರನ್ನೂ ಪಡೆದಿದೆ.

ಈ ನಿಲ್ದಾಣದಲ್ಲಿ ನಿಯಂತ್ರಣ ಗೋಪುರ, ಎಸ್ಕಲೇಟರ್‌, ಚೆಕ್‌ ಇನ್‌ ಡೆಸ್ಕ್‌, ಬ್ಯಾಗೇಜ್‌ ಕ್ಯಾರಸೋಲ್‌, ರೆಸ್ಟೋರೆಂಟ್‌ ಮತ್ತು ಎಟಿಎಂಗಳು ಸಂಪೂರ್ಣವಾಗಿ ಸೌರಶಕ್ತಿಯನ್ನೇ ಅವಲಂಬಿಸಿವೆ. ಸೌರ ಫಲಕಗಳು ಉತ್ಪಾದಿಸುವ ವಿದ್ಯುತ್‌ ಅನ್ನು ವಿಮಾನ ನಿಲ್ದಾಣದ ಬಳಕೆಗೆ ಬಳಸಿಕೊಂಡು ಉಳಿದಿದ್ದನ್ನು ಮುನ್ಸಿಪಲ್‌ ಪವರ್ ಗ್ರಿಡ್‌ಗೆ ಪೂರೈಸಲಾಗುತ್ತದೆ.

ಇತರ ವಿದ್ಯುತ್‌ ಮೂಲಗಳಿಗೆ ಅವಲಂಬಿತವಾಗದೇ ಸೌರಶಕ್ತಿಗೆ ಮೊರೆ ಹೋಗಿರುವುದರಿಂದ ಇಡೀ ವಿಮಾನ ನಿಲ್ದಾಣ ‘ಪರಿಸರ ಸ್ನೇಹಿ’ಯಾಗಿದೆ. ಜಾರ್ಜ್‌ ವಿಮಾನ ನಿಲ್ದಾಣವನ್ನು 1977ರಲ್ಲಿ ಅದೂ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಿರ್ಮಿಸಲಾಗಿದೆ. ಸಚಿವರಾಗಿದ್ದ ಪಿ.ಡಬ್ಲ್ಯೂ.ಬೋಥಾ ಎಂಬುವವರು   ಇದನ್ನು ಆರಂಭಿಸಿದರು. ಸದ್ಯ ಈ ವಿಮಾನ ನಿಲ್ದಾಣವನ್ನು ಪ್ರತಿ ವರ್ಷ 7 ಲಕ್ಷ ಪ್ರಯಾಣಿಕರು ಬಳಸುತ್ತಾರೆ.

ವಿಮಾನ ನಿಲ್ದಾಣಗಳಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ. ಹಲವು ಮೂಲಗಳಿಂದ ಇವುಗಳಿಗೆ ವಿದ್ಯುತ್‌ ಪೂರೈಕೆ ವ್ಯವಸ್ಥೆ ಮಾಡಿಕೊಂಡಿದ್ದರೂ ಕೆಲವು ಬಾರಿ ಕೈಕೊಡುವ ಸಾಧ್ಯತೆ ಇದ್ದೇ ಇದೆ. ಆದರೆ ಜಾರ್ಜ್‌ ವಿಮಾನ ನಿಲ್ದಾಣ ಮಾತ್ರ ಇಂತಹ ಸಂಕಷ್ಟಕ್ಕೆ ಎಂದೂ ಇತ್ತೀಚೆಗೆ ತುತ್ತಾಗಿಲ್ಲ.

‘ಈಗ ವಿದ್ಯುತ್ ಸರಬರಾಜಿನ ತೊಂದರೆ ಎಂದೂ ನಮ್ಮ ಅನುಭವಕ್ಕೆ ಬಂದಿಲ್ಲ. ಇದು ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡಲು ನೆರವಾಗಿದೆ’ ಎಂದು ಖುಷಿ ಪಡುತ್ತಾರೆ ವಿಮಾನ ನಿಲ್ದಾಣದ ಮ್ಯಾನೇಜರ್ ಬ್ರೆಂಡಾ ವೊಸ್ಟರ್‌.

ಸೌರಶಕ್ತಿ ಪ್ಯಾನಲ್‌ಗಳನ್ನು ಅಳವಡಿಸಲು ಸರ್ಕಾರ ಕೋಟ್ಯಂತರ ವೆಚ್ಚ ಮಾಡಿರುವುದರಿಂದ 1229 ಟನ್‌ ಇಂಗಾಲದ ಡೈಆಕ್ಸೈಡ್‌ ಉತ್ಪಾದನೆಯಾ ಗುವುದು ತಪ್ಪಿದೆ. ಇದು  10,3934 ಲೀಟರ್‌ ಇಂಧನ ಬಳಕೆಯನ್ನೂ ತಪ್ಪಿಸಿದೆ.   ಜಾರ್ಜ್‌ ವಿಮಾನ ನಿಲ್ದಾಣದಲ್ಲಿ ಸೌರ ಶಕ್ತಿಯ ಪರಿಣಾಮಕಾರಿ ಬಳಕೆ ಇತರೆ ವಿಮಾನ ನಿಲ್ದಾಣದಲ್ಲೂ ಇದೇ ತಂತ್ರಜ್ಞಾನವನ್ನು ಬಳಸುವಂತೆ ಪ್ರೇರಣೆ ನೀಡಿದೆ.

ಕೊಚ್ಚಿ ನಂತರ ಎರಡನೆಯದು
ಭಾರತದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ಚದ ಮೊದಲ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಹಿಂದೂ ಮಹಾಸಾಗರ ಮತ್ತು ಬೆಟ್ಟಗುಡ್ಡದ ನಡುವಿರುವ ಕೊಚ್ಚಿ ವಿಮಾನ ನಿಲ್ದಾಣ ಸೌರಫಲಕದ ಶಕ್ತಿಯನ್ನೇ ಅವಲಂಬಿತವಾಗಿದೆ. ಈ ನಿಲ್ದಾಣ ಇಡೀ ಕೇರಳದಲ್ಲೇ ಅತ್ಯಂತ ದಟ್ಟಣೆಯ ನಿಲ್ದಾಣವಾಗಿದೆ.

ದೆಹಲಿ,ಚೆನ್ನೈ ಮತ್ತು ಮುಂಬೈ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೇ  ಅತಿ ದಟ್ಟಣೆಯ ನಿಲ್ದಾಣ.  2015 ರ ಆಗಸ್ಟ್‌ 18 ರಂದು  ಸಂಪೂರ್ಣವಾಗಿ ಸೌರಶಕ್ತಿ ನಿಲ್ದಾಣವಾಯಿತು.

* 2000 ಸೋಲಾರ್‌ ಪ್ಯಾನಲ್‌ಗಳ ಬಳಕೆ

* 750 ಕಿಲೊವಾಟ್‌ ಪ್ರತಿದಿನ ಉತ್ಪಾದಿಸುವ ಸೌರ ವಿದ್ಯುತ್‌

* 400 ಕಿಲೊವಾಟ್‌ ವಿಮಾನ ನಿಲ್ದಾಣದ ಬಳಕೆಗೆ

* 274 ನಿಲ್ದಾಣದ ಸಮೀಪದ ಮನೆಗಳಿಗೆ ಸೌರ ವಿದ್ಯುತ್‌ ಪೂರೈಕೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry