ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಟ್ವಿಟರ್ ಯುಗದ ಹ್ಯಾಶ್ ಟ್ಯಾಗ್ ಕಾಳಗ

ಚುನಾವಣಾ ನಾಡಿನಿಂದ-16
Last Updated 27 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಕಾಲ ಸರಿದಂತೆ, ಹೊಸ ಆವಿಷ್ಕಾರಗಳಾದಂತೆ ಮಾಧ್ಯಮ­ಗಳಲ್ಲೂ ಸಾಕಷ್ಟು ಬದ­ಲಾವಣೆಗಳು ಆಗಿವೆ, ನವ ಮಾಧ್ಯಮಗಳು ತೆರೆದುಕೊಂಡಿವೆ. ಮಾಧ್ಯಮಗಳು ಬದಲಾದಂತೆ, ಚುನಾವಣಾ ಪ್ರಚಾರದ ವೈಖರಿಯೂ ಬದಲಾಗಿದೆ.

ಮೊದಲಿಗೆ ಅಧ್ಯಕ್ಷೀಯ ಅಭ್ಯರ್ಥಿ, ದೇಶವ್ಯಾಪಿ ಸಂಚರಿಸಿ, ಮತ ಕೇಳುವ ಪದ್ಧತಿ ಇರಲಿಲ್ಲ. ಅದಕ್ಕೆ ಸಂಪರ್ಕ ವ್ಯವಸ್ಥೆ ಪೂರಕವಾಗಿರಲಿಲ್ಲ. 1869ರ ಹೊತ್ತಿಗೆ, ಅಮೆರಿಕದಲ್ಲಿ ‘ರೈಲ್ ರೋಡ್ ಯೋಜನೆ’ ಪೂರ್ಣಗೊಂಡ ಬಳಿಕ, ಸಂಚಾರ ವ್ಯವಸ್ಥೆ ಸುಗಮವಾಯಿತು.

ಮೊದಲ ಬಾರಿಗೆ, 1869ರಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ವಿಲಿಯಮ್ ಜೆನ್ನಿಂಗ್ಸ್ ‘ವಿಶಲ್ ಸ್ಟಾಪ್ ಟೂರ್’ ಮೂಲಕ, ರೈಲಿನಲ್ಲಿ ದೀರ್ಘ ಸಂಚಾರ ಕೈಗೊಂಡು, ರೈಲು ನಿಲ್ದಾಣಗಳಲ್ಲಿ ಜನಸಮೂಹ ಇದ್ದ ಕಡೆ ಭಾಷಣ ಮಾಡಲು ಆರಂಭಿಸಿದರು. ಇದೇ ಪದ್ಧತಿಯನ್ನು  ನಂತರ ಅಧ್ಯಕ್ಷೀಯ ಅಭ್ಯರ್ಥಿಗಳು ಅನುಸರಿಸಿದರು. ಚುನಾ­ವಣಾ ಪ್ರಚಾರಕ್ಕೆ ಹೊಸ ಆಯಾಮ ಬಂತು. ಬರಬರುತ್ತಾ ಸಂಚಾರ, ಸಾರ್ವಜನಿಕ ಸಭೆಗಳ ಜೊತೆಗೆ ಮಾಧ್ಯಮಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ರೂಢಿ ಆರಂಭವಾಯಿತು.

ಹಾಗೆ ನೋಡಿದರೆ, ಆಯಾ ಕಾಲಘಟ್ಟದ ಪ್ರಮುಖ ಮಾಧ್ಯಮಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳುವ ರಾಜ­ಕಾರಣಿ ಯಶಸ್ವಿಯಾಗುತ್ತಾನೆ ಎಂಬುದು ಸಾಬೀತಾಗುತ್ತಾ ಬಂದಿದೆ. ಸುದ್ದಿ ಪ್ರಸಾರಕ್ಕೆ ಕೇವಲ ಮುದ್ರಣ ಮಾಧ್ಯಮ ಇದ್ದ ಕಾಲಘಟ್ಟದಲ್ಲಿ, ರಾಜಕಾರಣಿಗಳು ಲೇಖಕರೂ ಆಗಿದ್ದರು ಎನ್ನುವುದನ್ನು ಗಮನಿಸಬೇಕು. ನಂತರ ರೇಡಿಯೊ ಮುನ್ನೆಲೆಗೆ ಬಂದಾಗ, ಬರಹಕ್ಕಿಂತ ಮಾತಿಗೆ ಮಹತ್ವ ಬಂತು.

ಅಮೆರಿಕದ ಜನಪ್ರಿಯ ಅಧ್ಯಕ್ಷರಲ್ಲಿ ಒಬ್ಬರಾದ ಫ್ರಾಂಕ್ಲಿನ್ ರೂಸ್ವೆಲ್ಟ್, ರೇಡಿಯೊ ಭಾಷಣಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸಿದ್ದರು. ಕುಟುಂಬದ ಎಲ್ಲ ಸದಸ್ಯರೂ ರೇಡಿಯೊ ಸುತ್ತ ಕುಳಿತು ಆಲಿಸುತ್ತಿದ್ದ ಕಾಲಮಾನದಲ್ಲಿ, ರೂಸ್ವೆಲ್ಟ್ ನೀಡುತ್ತಿದ್ದ ರೇಡಿಯೊ ಭಾಷಣ, ವೈಯಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬರನ್ನೂ ಮುಟ್ಟಲು ಅವರಿಗೆ ಸಾಧ್ಯ­ಮಾಡಿ­ಕೊಟ್ಟಿತ್ತು. ಅದನ್ನೇ ಇತರ ರಾಜ­ಕಾರಣಿಗಳು ನಂತರ ಅನುಸರಿಸಿದರು.

ಹ್ಯಾರಿ ಎಸ್. ಟ್ರೂಮನ್ 1948ರಲ್ಲಿ ತಮ್ಮ ಚುನಾವಣಾ ಪ್ರಚಾರದ ಸಲುವಾಗಿ 30 ಸಾವಿರ ಮೈಲಿ ಕ್ರಮಿಸಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ, ದೂರದರ್ಶನ ವ್ಯಾಪಕವಾಗಿ ಬಳಕೆಗೆ ಬಂದ ಮೇಲೆ, ಕಡಿಮೆ ಅವಧಿಯಲ್ಲಿ, ಹೆಚ್ಚು ಹಣ ಬಳಸದೇ ಐಸೆನ್ ಹೋವರ್, ಟ್ರೂಮನ್ ಅವರಿಗಿಂತ ಹೆಚ್ಚು ಜನರನ್ನು, ಟಿ.ವಿ ಮೂಲಕ ತಲುಪಲು ಸಾಧ್ಯವಾಗಿತ್ತು. ಅದುವರೆಗೆ ಪತ್ರಿಕೆ, ರೇಡಿಯೊ, ಜನಸಂಪರ್ಕ ಸಭೆಗಳಿಗೆ ಸೀಮಿತವಾಗಿದ್ದ ಚುನಾವಣಾ ಪ್ರಚಾರ, ಎಲೆಕ್ಟ್ರಾನಿಕ್ ಮಾಧ್ಯಮಗಳತ್ತ ಹೊರಳಿತು.

1952ರ ಮತ್ತು 1956ರ ಚುನಾವಣೆಯಲ್ಲಿ ಮೊದಲಿಗೆ ಅಭ್ಯರ್ಥಿ ಪರ ಟಿ.ವಿ ಜಾಹೀರಾತುಗಳು ಪ್ರಸಾರಗೊಂಡವು. 1960ರ ನಿಕ್ಸನ್ ಮತ್ತು ಕೆನಡಿ ನಡುವಿನ ಕದನದಲ್ಲಿ ಟಿ.ವಿ ಪ್ರಮುಖ ಪಾತ್ರ ವಹಿಸಿತು. ಅಮೆರಿಕದ ಮಟ್ಟಿಗೆ ದೂರ­ದರ್ಶನವನ್ನು ಯಶಸ್ವಿಯಾಗಿ ಬಳಸಿ­ಕೊಂಡ ಮೊದಲ ರಾಜಕಾರಣಿ ಎಂದರೆ ಜಾನ್ ಎಫ್. ಕೆನಡಿ. ದೃಶ್ಯ ಮಾಧ್ಯಮದ ಶಕ್ತಿ ಮತ್ತು ಮಹತ್ವ ಕೆನಡಿ ಅವರಿಗೆ ತಿಳಿದಿತ್ತು. ಹಿಂದಿನ ಅಧ್ಯಕ್ಷರು ದೂರ­ದರ್ಶನವನ್ನು ಬಳಸಿ­ಕೊಂಡಿದ್ದ­ರಾದರೂ, ನೇರಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

ಐಸೆನ್ ಹೋವರ್ ಟಿ.ವಿ ಸಂದರ್ಶನ ನೀಡುತ್ತಿದ್ದರು, ಆದರೆ ಅದು ಪ್ರಸಾರಗೊಳ್ಳುವ ಮೊದಲು ಶ್ವೇತಭವನದ ಅಧಿಕಾರಿಗಳು ಅದನ್ನು ವೀಕ್ಷಿಸಿ ಸಮ್ಮತಿ ಸೂಚಿಸಬೇಕಿತ್ತು.

ಶೀತಲ ಸಮರದ ದಿನಗಳಲ್ಲಿ ಪ್ರತಿ ಮಾತನ್ನೂ ಅಳೆದು ತೂಗಿ ಆಡಬೇಕಾದ ಸನ್ನಿವೇಶ ಇತ್ತು. ಹಾಗಾಗಿ ನೇರ ಪ್ರಸಾರದ ಸಂದರ್ಶನದಲ್ಲಿ ಭಾಗವಹಿಸಲು ಅಧ್ಯಕ್ಷರು ಹಿಂಜ
ರಿಯುತ್ತಿದ್ದರು. ಆದರೆ ಪತ್ರಕರ್ತ­ರೊಂದಿಗೆ ಹೆಚ್ಚು ಪಳಗಿದ್ದ ಕೆನಡಿ ಅವರಿಗೆ ಆ ಸಮಸ್ಯೆ ಇರಲಿಲ್ಲ. ಯಾವುದೇ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿತ್ತು.

ನಟನೆಯ ಹಿನ್ನೆಲೆಯಿಂದ ಬಂದಿದ್ದ ರೇಗನ್ ಅವರಿಗೆ ದೃಶ್ಯ ಮಾಧ್ಯಮದ ಮಹತ್ವ ತಿಳಿದಿತ್ತು. ರೇಗನ್ ದೃಶ್ಯ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು.ತಮ್ಮ ಉಡುಗೆ ತೊಡುಗೆಗಳ ಬಗ್ಗೆ ಅತಿಯಾದ ಕಾಳಜಿ ತೋರುತ್ತಿದ್ದ ರೇಗನ್, ಮಾಧ್ಯಮಗಳ ಮುಂದೆ ಅಚ್ಚುಕಟ್ಟಾಗಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದರು. ರೇಗನ್ ಅವರ ಆಪ್ತ ಸಹಾಯಕ ‘ನೀವು ರೇಗನ್ ಅವರ ಒಂದಾದರೂ ಕೆಟ್ಟ ಪೋಟೊ ತೋರಿಸಿ ನೋಡೋಣ’ ಎಂದಿದ್ದು ಇದೇ ಹಿನ್ನೆಲೆಯಲ್ಲಿ.

ಕೆನಡಿ, ರೇಗನ್ ದೃಶ್ಯ ಮಾಧ್ಯಮವನ್ನು ಎಷ್ಟು ಪ್ರೀತಿ­ಸುತ್ತಿದ್ದರೋ, ಲಿಂಡನ್ ಜಾನ್ಸನ್ ಮಾಧ್ಯಮವನ್ನು ಅಷ್ಟೇ ದ್ವೇಷಿಸುತ್ತಿದ್ದರು. ಟಿ.ವಿ ಕ್ಯಾಮೆರಾ ಎದುರಿಸುವ ಕಲೆ ಜಾನ್ಸನ್ ಅವರಿಗೆ ಸಿದ್ಧಿಸಿರಲಿಲ್ಲ. ಆ ಕಾರಣದಿಂದಲೇ ಟಿ.ವಿ ಸಂದರ್ಶನದಿಂದ ದೂರ ಉಳಿಯುತ್ತಿದ್ದರು.

ಇದೆಲ್ಲದರ ಜೊತೆ ಹೊಸ ಮಾದರಿಯೊಂದು ಚುನಾವಣಾ ಪ್ರಚಾರಕ್ಕೆ ಸೇರ್ಪಡೆಯಾಯಿತು. ಉದ್ದುದ್ದ ಭಾಷಣಗಳನ್ನು ಕೇಳುವ ಆಸಕ್ತಿಯನ್ನು ಜನ ಕಳೆದುಕೊಂಡಿದ್ದಾರೆ ಎಂದೇನೋ, ಮುಖ್ಯ ಅಂಶಗಳನ್ನು ಒಳಗೊಂಡ, ಸೌಂಡ್ ಬೈಟ್‌ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಆರಂಭವಾಯಿತು.

ಅಮೆರಿಕ ಆರ್ಥಿಕ ಮಹಾಕುಸಿತಕ್ಕೆ ಒಳಗಾದಾಗ, ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ‘My Firm Belief that only thing we have to fear is fear itself' ಎಂದಿದ್ದರು.ಅದನ್ನೇ ಅವರ ಚುನಾವಣೆಯುದ್ದಕ್ಕೂ ಬಳಸಿಕೊಳ್ಳಲಾಗಿತ್ತು. 1961ರಲ್ಲಿ ಜಾನ್ ಎಫ್. ಕೆನಡಿ ಅವರ ‘ದೇಶ ಏನು ನೀಡಿದೆ ಎಂದು ಕೇಳುವ ಮೊದಲು, ದೇಶಕ್ಕಾಗಿ ನಾವು ಏನನ್ನು ನೀಡಿದ್ದೇವೆ ಎಂದು ಕೇಳಿಕೊಳ್ಳಬೇಕು’ ಎಂಬ ಮಾತು ಚುನಾವಣೆಯುದ್ದಕ್ಕೂ ಮೊಳಗಿತ್ತು.

1987ರಲ್ಲಿ ಬರ್ಲಿನ್ ಗೋಡೆ ಬಳಿ, ರೊನಾಲ್ಡ್ ರೇಗನ್ ಐತಿಹಾಸಿಕ ಭಾಷಣ ಮಾಡಿದ್ದರು. ‘If you seek prosperity for Soviet Union and eastern Europe, Mr. Gorbachev, tear down this wall' ಎಂದು ಆಗ್ರಹಿಸಿದ್ದರು. ನಂತರದ ಚುನಾವಣೆಯಲ್ಲಿ ಆ ವಾಕ್ಯವೇ ರೇಗನ್ ಹಿಂದೆ ಪ್ರತಿಧ್ವನಿಸುತ್ತಿತ್ತು.

1988ರಲ್ಲಿ ಜಾರ್ಜ್ ಬುಷ್ ಸೀನಿಯರ್ ‘Read my lips: No New Taxes' ಎಂದು ಜನರಿಗೆ ಭರವಸೆ ನೀಡಿದ್ದರು. ಹೊಸ ತೆರಿಗೆ ಹೇರುವುದಿಲ್ಲ, ಇರುವ ಸುಂಕ ಹೆಚ್ಚಿಸುವುದಿಲ್ಲ ಎಂಬ ಮಾತು, ಜನರ ಮತ ಗೆದ್ದಿತ್ತು. ಒಬಾಮ ಅವರ ‘Yes, We Can' ಘೋಷಣೆ ಇತ್ತೀಚಿನ ವರ್ಷಗಳಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತ್ತು.

ಕಳೆದ 8-10 ವರ್ಷಗಳಲ್ಲಿ, ಇಂಟರ್‌ನಟ್‌  ಬಳಕೆ ಹೆಚ್ಚಾದಂತೆ, ಫೇಸ್ ಬುಕ್, ಟ್ವಿಟರ್‌ನಂತಹ ನವಮಾಧ್ಯಮ­ಗಳು ಹೊಸ ಸಾಧ್ಯತೆಯನ್ನು ತೆರೆ­ದಿಟ್ಟವು. ಸಾಂಪ್ರದಾಯಿಕ ಮಾಧ್ಯಮಗಳನ್ನು ನೆಚ್ಚಿಕೊಳ್ಳದೇ, ಹೆಚ್ಚು ಜನರನ್ನು ತಲು­ಪುವುದು ಅಭ್ಯರ್ಥಿಗಳಿಗೆ ಸುಲಭ­ವಾಯಿತು. 2008ರಲ್ಲಿ ಅತಿಕಡಿಮೆ ಅವಧಿಯಲ್ಲಿ ಒಬಾಮ ಜನಪ್ರಿಯತೆಯ ಉತ್ತುಂಗಕ್ಕೇರಲು ಕಾರಣವಾಗಿದ್ದು ನವಮಾಧ್ಯಮಗಳೇ. ಒಬಾಮ ಟಿ.ವಿ ಜಾಹೀರಾತಿಗಿಂತ ಕಡಿಮೆವೆಚ್ಚದಲ್ಲಿ ಯೂ ಟ್ಯೂಬ್ ಮೂಲಕ ಜನರನ್ನು ತಲುಪಲು ಯತ್ನಿಸಿದರು.

ಟ್ವಿಟರ್ಯುಗದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳು ಅಪ್ರಸ್ತುತವಾಗಲು ಶುರುವಾಯಿತು. ಅಭ್ಯರ್ಥಿಗಳ ಪ್ರತಿಕ್ಷಣದ ಚಲನವಲನ, ನಿಲುವುಗಳು 140 ಅಕ್ಷರಗಳಲ್ಲಿ ನೇರ
ವಾಗಿ ಜನರನ್ನು ತಲುಪುವುದು ಸಾಧ್ಯವಾಯಿತು. ಆದರೆ ಬೆರಳ ತುದಿಗೆ ಎಟಕುವ ನವಮಾಧ್ಯಮ, ಆತುರದ ಪ್ರತಿಕ್ರಿಯೆಗೆ ಪ್ರಚೋದಿಸಿ, ಹಲವು ವಿವಾದಗಳನ್ನೂ ಬೆಳೆಸಿತು.

ಈ ಚುನಾವಣೆಯಲ್ಲೂ ಹಿಲರಿ ಮತ್ತು ಟ್ರಂಪ್ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯವಾಹಿನಿಗಳ ಬಗ್ಗೆ, ಪ್ರಮುಖ ಪತ್ರಿಕೆಗಳ ಬಗ್ಗೆ ಅಸಮಾಧಾನ ಹೊಂದಿರುವ ಡೊನಾಲ್ಡ್ ಟ್ರಂಪ್, ಫೇಸ್ ಬುಕ್, ಟ್ವಿಟರ್ ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಮತ್ತು ಆ ಮೂಲಕ ಹೆಚ್ಚು ಅಮೆರಿಕನ್ನರನ್ನು ತಲುಪಲು ಹವಣಿಸುತ್ತಿದ್ದಾರೆ. ಫೇಸ್ ಬುಕ್ ಲೈವ್ ಸೌಲಭ್ಯವನ್ನು ಬಳಸಿ­ಕೊಳ್ಳುತ್ತಿರುವ ಅಮೆರಿಕದ ಮೊದಲ ಚುನಾವಣೆ ಇದು.

ಟ್ರಂಪ್ ಪ್ರಚಾರ ಸಭೆಗಳನ್ನು, ಸುದ್ದಿಗೋಷ್ಠಿಗಳನ್ನು, ಫೇಸ್ ಬುಕ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ. ಇದೆಲ್ಲದರ ಜೊತೆಗೆ ಹಿಲರಿ, ಟ್ರಂಪ್ ಬೆಂಬಲಿಗರ ನಡುವೆ ಟ್ವಿಟರ್‍‍ನಲ್ಲಿ, ಹ್ಯಾಶ್ ಟ್ಯಾಗ್ (#) ಕಾಳಗ ನಡೆದೇ ಇದೆ. ಟ್ರಂಪ್ ಟ್ವೀಟಿಸಿದಂತೆಲ್ಲಾ ಹಿಲರಿ ಬೆಂಬಲಿಸುವವರ ಸಂಖ್ಯೆ ಬೆಳೆಯುತ್ತಿದೆ ಎಂಬ ಜೋಕ್ ಕೂಡ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT