ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಜಂಜಾಟ ಮರೆಸಿದ ಹಾಸ್ಯ

ಆರ್‌.ವಿ. ದಂತ ಕಾಲೇಜು: ಹಾಸ್ಯದ ರಸಧಾರೆಯಲ್ಲಿ ಮಿಂದ ಜನರು
Last Updated 6 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಹಾಸ್ಯದ ರಸಧಾರೆ ನದಿಯಂತೆ ಹರಿಯಿತು. ಬದುಕಿನ ಜಂಜಾಟಗಳ ನಡುವೆ ವಾರಾಂತ್ಯವನ್ನು ಉಲ್ಲಾಸಮಯವಾಗಿ ಕಳೆದಂತಹ ಭಾವ ಎಲ್ಲರ ಮುಖಗಳಲ್ಲಿ ಮೂಡುತ್ತಿದ್ದ ನಗು ಸಾಕ್ಷೀಕರಿಸುವಂತಿತ್ತು.

ಅಂತರಂಗ ಸಂಸ್ಥೆ ನಗರದ ಆರ್‌.ವಿ. ದಂತ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ‘ಹಾಸ್ಯಮೇಳ– 2016’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು. ಹಾಸ್ಯ ಸಾಹಿತಿ ಎಂ.ಎಸ್‌. ನರಸಿಂಹಮೂರ್ತಿ ಅವರು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಡೆದ ಹಾಸ್ಯ ಪ್ರಸಂಗಗಳನ್ನು ಹೇಳಿ ನಗೆಯುಕ್ಕಿಸಿದರು.

ಅವರು ಹೇಳಿದ ಪ್ರಸಂಗ ಹೀಗಿದೆ– ‘ವ್ಯಕ್ತಿಯೊಬ್ಬ ತಲೆನೋವು ಎಂದು ವೈದ್ಯರ ಬಳಿ ಹೋದ. ಆತನನ್ನು ಪರೀಕ್ಷಿಸಿದ ವೈದ್ಯರು, ‘ನಿನ್ನ ಎರಡು ಹಲ್ಲುಗಳನ್ನು ಕಿತ್ತರೆ ತಲೆನೋವು ಹೋಗುತ್ತದೆ’ ಎಂದರು. ಇದರಿಂದ ಗಾಬರಿಗೊಂಡ ವ್ಯಕ್ತಿ, ‘ಹಲ್ಲಿಗೂ ತಲೆನೋವಿಗೂ ಏನು ಸಂಬಂಧ’ ಎಂದು ಪ್ರಶ್ನಿಸಿದ. ಅದಕ್ಕೆ ವೈದ್ಯರು, ‘ಸಂಬಂಧ ಇದೆ’ ಎಂದು ಮತ್ತೊಬ್ಬ ವೈದ್ಯರನ್ನು ಕರೆದರು.

ಇಬ್ಬರೂ, ‘ನಿಮ್ಮ ಎರಡು ಹಲ್ಲು ಕೀಳಬೇಕು’ ಎಂದು ಒತ್ತಿ ಹೇಳಿದರು. ಆದರೆ, ಯಾವ ಹಲ್ಲು ಕೀಳಬೇಕು ಎಂಬ ಒಮ್ಮತ ಇಬ್ಬರಲ್ಲೂ ಮೂಡಲಿಲ್ಲ. ಇದನ್ನೆಲ್ಲ ನೋಡುತ್ತಿದ್ದ ವ್ಯಕ್ತಿ, ತನ್ನ ಬಾಯಲ್ಲಿದ್ದ ಹಲ್ಲಿನ ಸೆಟ್‌ಅನ್ನು ಕಿತ್ತು ಅವರ ಕೈಗಿಟ್ಟು, ‘ಯಾವ ಹಲ್ಲಾದರೂ ಕಿತ್ತುಕೊಳ್ಳಿ’ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ!

ಉದ್ಯಮಿ ಎಸ್‌.ಷಡಕ್ಷರಿ ಹೇಳಿದ ಪ್ರಸಂಗ ಹೀಗಿದೆ– ಹೋಟೆಲ್‌ವೊಂದರಲ್ಲಿ ಇದ್ದ ಪಾರ್ಲರ್‌ನಲ್ಲಿ ಕ್ಷೌರ ಮಾಡಿಸಿಕೊಳ್ಳಲೆಂದು ಆಟೊದಲ್ಲಿ ಹೋಗುತ್ತಿದ್ದೆ. ಅದೇ ಆಟೊದಲ್ಲಿ ಯುವತಿ ಸಹ ಪ್ರಯಾಣಿಸುತ್ತಿದ್ದಳು. ಆಕೆ ಅದೇ ಹೋಟೆಲ್‌ನಲ್ಲಿ ಕೆಲಸ ಗಿಟ್ಟಿಸಲು ಸಂದರ್ಶನಕ್ಕೆ ಹೋಗುತ್ತಿದ್ದಳು. ‘ನೀವು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದಳು.

ನಾನು ಸುಮ್ಮನೆ ತಲೆ ಅಲ್ಲಾಡಿಸಿದೆ. ‘ಹಾಗಿದ್ದರೆ ನನಗೆ ಕೆಲಸ ಕೊಡಿಸಲು ಸಹಾಯ ಮಾಡಿ’ ಎಂದು ಮನವಿ ಮಾಡಿದಳು. ಹೋಟೆಲ್‌ ಬಂತು. ಬಳಿಕ ನಾನು ಕ್ಷೌರ ಮಾಡಿಸಿಕೊಂಡು ಕುಳಿತಿದ್ದೆ. ಸಂದರ್ಶನ ಮುಗಿಸಿ ನನ್ನ ಬಳಿ ಆಕೆ ಬಂದಳು. ‘ಹೋ.. ನೀವು ಕ್ಷೌರಿಕರೇ’ ಎಂದು ಅಚ್ಚರಿ ವ್ಯಕ್ತಪಡಿಸಿದ ಆಕೆ, ‘ಸಂದರ್ಶಕರಿಗೆ ಹೇಳಿ ನನಗೆ ಕೆಲಸ ಕೊಡಿಸಿ’ ಎಂದಳು!
ಹಾಸ್ಯ ಸಾಹಿತಿಗಳಾದ ವೈ.ವಿ. ಗುಂಡೂರಾವ್‌ ಹಾಗೂ ಎನ್‌. ರಾಮನಾಥ ಅವರು ಅಣಕು ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.

ಸಿದ್ಧಲಿಂಗಯ್ಯ ಹೇಳಿದ ಹಾಸ್ಯ ಪ್ರಸಂಗಗಳು
*ಒಂದು ಹಳ್ಳಿಯಲ್ಲಿ ವ್ಯಕ್ತಿಯೊಬ್ಬರ ಮೈಮೇಲೆ ದೇವರು ಬಂದಿತ್ತು. ಭಕ್ತಾದಿಗಳನ್ನು ಕಂಡ ದೇವರು, ‘ಏನೋ ನಿನ್ನ ಪ್ರಾಬ್ಲಮ್ಮು?’ ‘ಯಾಕಿಷ್ಟು ಲೇಟು?’ ‘ಬಿಡಯ್ಯ ನಿಮ್ಮ ಪ್ರಾಬ್ಲಮ್ಮು ಸಿಂಪಲ್ಲು’, ‘ನೆಕ್ಸ್ಟ್‌ ವೀಕ್‌ ಬಾರಯ್ಯ’ ಎಂದು ಉತ್ತರ ನೀಡುತ್ತಿದ್ದರು. ಅದನ್ನೇ ಬರೆದುಕೊಂಡು ನನ್ನ ಪಿಎಚ್‌.ಡಿ ಮಾರ್ಗದರ್ಶಕರಾಗಿದ್ದ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಬಳಿ ಬಂದೆ. ‘ಸಾರ್‌, ಈ ಗ್ರಾಮ ದೇವತೆಗಳೆಲ್ಲ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿವೆ. ಯಾವ ಕಾನ್ವೆಂಟ್‌ನಲ್ಲಿ ಕಲಿತವೋ ಗೊತ್ತಿಲ್ಲ’ ಎಂದೆ. ಅವರು ಯೋಚನೆ ಮಾಡಿ, ‘ಏನಪ್ಪ, ಈ ಕನ್ನಡವನ್ನು ದೇವರೇ ಕೈಬಿಟ್ಟ ಮೇಲೆ ಈ ಮನುಷ್ಯರ ಕತೆ ಏನು?’ ಎಂದು ನೊಂದುಕೊಂಡರು.

*ಕಲಬುರ್ಗಿಯಲ್ಲಿ ಆಯೋಜಿಸಿದ್ದ  ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದ ಆಯೋಜಕರು, ರೈಲು ಟಿಕೆಟ್‌ ಬುಕ್‌ ಮಾಡಿದ್ದರು. ನಾನು ರೈಲು ನಿಲ್ದಾಣಕ್ಕೆ ಬಂದು ನೋಡಿದರೆ, ಬೋಗಿಗೆ ಅಂಟಿಸಿದ್ದ ಪ್ರಯಾಣಿಕರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಅಲ್ಲಿದ್ದ ಹೆಸರು ‘ದಿಡ್‌ಲಿಂಗ್‌ಡಿ!’ ಸಿದ್ಧಲಿಂಗಯ್ಯ ಹೋಗಿ ದಿಡ್‌ಲಿಂಗ್‌ಡಿ ಆಗಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT