7
ಮೊದಲ ಓದು

ನೆನಪುಗಳ ಜಾತ್ರೆಯಲ್ಲಿ ಇತ್ತು–ಇಲ್ಲಗಳ ಪತಾಕೆ

Published:
Updated:
ನೆನಪುಗಳ ಜಾತ್ರೆಯಲ್ಲಿ ಇತ್ತು–ಇಲ್ಲಗಳ ಪತಾಕೆ

ಖಾನೇಷುಮಾರಿ

ಲೇ:
ಶಿವಾನಂದ ಕರ್ಕಿ

ಪುಟ: 206, ಬೆಲೆ: ₹150

ಪ್ರ: ಧ್ವನಿ ಪ್ರಕಾಶನ, ಸಹಕಾರ ಭವನ, ಆಜಾದ್‌ ರಸ್ತೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ

**

ಲೇಖಕನೊಬ್ಬ ತನ್ನ ಬದುಕಿನ ಕೆಲವು ಅನುಭವಗಳನ್ನು ನಿರೂಪಿಸುವ ಮೂಲಕ, ತನ್ನ ಪ್ರದೇಶದ ಕಥನವನ್ನೂ ಕಟ್ಟಿಕೊಡುವ ಶೈಲಿಗೆ ಶಿವಾನಂದ ಕರ್ಕಿ ಅವರ ‘ಖಾನೇಷುಮಾರಿ’ ಒಳ್ಳೆಯ ಉದಾಹರಣೆ. ಆತ್ಮಕಥೆಯ ಟಿಪ್ಪಣಿಗಳಂತೆ ಕಾಣಿಸುವ ಈ ಕೃತಿಯ ಕಿರುಬರಹಗಳು, ಒಟ್ಟಂದದಲ್ಲಿ ಮಲೆನಾಡಿನ ಪರಿಸರ ಮತ್ತು ಜೀವನವಿಧಾನವನ್ನು ಚಿತ್ರಿಸುವ ಪರಿ ಕುತೂಹಲಕರವಾಗಿದೆ. 


ತೀರ್ಥಹಳ್ಳಿಯ ಶಿವಾನಂದ ಕರ್ಕಿ ವೃತ್ತಿಯಿಂದ ಪತ್ರಕರ್ತ. ಕೃಷಿಕರಾಗಿಯೂ ಗುರ್ತಿಸಿಕೊಂಡವರು. ಪತ್ರಿಕೋದ್ಯಮ ಹಾಗೂ ಕೃಷಿಯ ಆಶಯ ಮತ್ತು ಕಾಳಜಿಗಳನ್ನು ಅವರ ಬರಹದಲ್ಲೂ ಗುರ್ತಿಸಬಹುದು. ಸರಳವಾದ ಆಕರ್ಷಕ ಬರವಣಿಗೆ ಹಾಗೂ ಓದಿಸಿಕೊಳ್ಳುವ ಗುಣದ ಕಥನದ ಮಾದರಿ ಕೃತಿಯ ಮುಖ್ಯ ವಿಶೇಷ. ಲೇಖಕರ ಬಾಲ್ಯದ ಅನುಭವಗಳ ಚಿತ್ರಣ ಹಾಗೂ ಪ್ರಾದೇಶಿಕ ವಿವರಗಳು ಕೃತಿಯ ಚೆಲುವನ್ನು ಹೆಚ್ಚಿಸಿವೆ.

 

ಮಲೆನಾಡಿನ ಸಂಸ್ಕೃತಿಯಲ್ಲಿ ಆಗುತ್ತಿರುವ ಸವಕಳಿಯ ಚಿತ್ರಣ ‘ಖಾನೇಷುಮಾರಿ’ ಬರಹಗಳ ಹೂರಣ. ಒಂದೆಡೆ ಮನುಷ್ಯನ ಬದುಕಿನಲ್ಲಿ ಮೌಲ್ಯಗಳ ಸವಕಳಿಯಾಗುತ್ತಿದ್ದರೆ, ಇನ್ನೊಂದೆಡೆ ಪರಿಸರ ಬಡವಾಗುತ್ತಿದೆ. ಈ ‘ಕಳೆದು’ಕೊಳ್ಳುತ್ತಿರುವುದನ್ನು ದಾಖಲಿಸುವುದು ಇಲ್ಲಿನ ಬರಹಗಳ ಮುಖ್ಯ ಉದ್ದೇಶವಾಗಿದೆ. ಹಾಗೆ ದಾಖಲಿಸುವ ಮೂಲಕ ಬದುಕಿನ ಏನೆಲ್ಲ ಸಂಭ್ರಮಗಳಿಂದ ನಾವು ವಂಚಿತರಾಗುತ್ತಿದ್ದೇವೆ ಎನ್ನುವುದನ್ನು ಸೂಚಿಸಲು ಲೇಖಕರು ಪ್ರಯತ್ನಿಸಿದಂತಿದೆ. 

ಒಂದು ಊರಿನ ಕಂದಾಯ ದಾಖಲೆಯ ಸಮಗ್ರ ವಿವರಗಳ ಚಿತ್ರಣದ ದಾಖಲೆಗೆ ‘ಖಾನೇಷುಮಾರಿ’ ಎಂದು ಹೆಸರು. ಈ ಅರ್ಥದಲ್ಲಿ ಶಿವಾನಂದರ ಕೃತಿ ಒಂದು ಪರಿಸರ ಹಾಗೂ ಜೀವನಧರ್ಮದ ನಕ್ಷೆ. ‘ಮಲೆನಾಡ ಹೆಜ್ಜೆಗುರುತು’ ಎಂದವರು ತಮ್ಮ ಕೃತಿಯನ್ನು ಕರೆದುಕೊಂಡಿದ್ದಾರೆ.

 

‘ಖಾನೇಷುಮಾರಿ’ ಪುಟ್ಟ ಪುಟ್ಟ ಪ್ರಬಂಧಗಳ ಗುಚ್ಛ. ಬಹುತೇಕ ಬರಹಗಳು ಯಾವುದೋ ಒಂದು ಘಟನೆ, ಅನುಭವದ ನಿವೇದನೆಯಲ್ಲಿ ಕೊನೆಗೊಳ್ಳುತ್ತವೆ. ಈ ಘಟನೆ ಹೆಚ್ಚು ಬೆಳೆಯುವುದಿಲ್ಲ. ಲೇಖಕರ ಹಳಹಳಿಕೆ ಹಾಗೂ ವಿಷಾದ ಎಲ್ಲ ಬರಹಗಳ ಸ್ಥಾಯಿಭಾವ ಆಗಿರುವಂತಿದೆ. ಸಾಮಾಜಿಕ ಪಠ್ಯದ ಸ್ವರೂಪ ಈ ಕೃತಿಗಿದ್ದರೂ – ಒಂದು ಅಂತರದಿಂದ ನೋಡುವ ಗುಣದ ಕೊರತೆ ‘ಖಾನೇಷುಮಾರಿ’ಯನ್ನು ಬಾಧಿಸಿದೆ. ಹಾಗೆಯೇ ಪ್ರಬಂಧ ಹೊಸತೊಂದು ಮಗ್ಗುಲು ಪ್ರವೇಶಿಸುತ್ತಿದೆ ಎಂದು ಓದುಗನಿಗೆ ಅನ್ನಿಸುವ ವೇಳೆಗೆ ಮುಗಿದೇಹೋಗುತ್ತದೆ. 

 

ಪುಸ್ತಕದ ಬರಹಗಳು – ‘ಗೋಮಾಳ’, ‘ಕಾನು’, ‘ಖುಷ್ಕಿ’, ‘ತರಿ’, ‘ಪಹಣೆ’, ‘ಭಾಗಾಯ್ತು’ ಎನ್ನುವ ಆರು ಭಾಗಗಳಲ್ಲಿವೆ. ಈ ಶೀರ್ಷಿಕೆಗಳೇ ಬರಹದ ವಸ್ತುವನ್ನು ಸೂಚಿಸುವಂತಿವೆ. ಇವುಗಳಲ್ಲಿ ‘ಕಾನು’ ಭಾಗ ಹೆಚ್ಚು ಸ್ವಾರಸ್ಯಕರವಾಗಿದೆ. ಮಲೆನಾಡಿನ ಸಾಂಪ್ರದಾಯಿಕ ಮಾಂಸದ ಖಾದ್ಯಗಳ ವಿವರ ರುಚಿಕರವಾಗಿದೆ. ಮಲೆನಾಡಿನ ಪರಿಸರದಲ್ಲಿ ಸುಲಭವಾಗಿ ಸಿಗುವ ಏಡಿ, ಮೀನುಗಳನ್ನು ಸಿಕ್ಕಲ್ಲಿಯೇ ತಿನಿಸಾಗಿ ಮೆಲ್ಲುವ ಪ್ರಸಂಗಗಳು, ಮಾಂಸ ಹೊಂಚಿಕೊಳ್ಳಲಿಕ್ಕಾಗಿಯೇ ಶಿಕಾರಿಗೆ ಹೋಗುವ ಕಥನಗಳು ಸ್ವಾರಸ್ಯಕರವಾಗಿವೆ. ತಮ್ಮನ್ನು ‘ಬಾಡುಗಳ್ಳ’ ಎಂದು ಲೇಖಕರು ಬಣ್ಣಿಸಿಕೊಂಡಿದ್ದಾರೆ. ಮಾಂಸದ ಸಂಡಿಗೆಯ ಸೊಗಸನ್ನು ಚಿತ್ರಿಸುವಷ್ಟೇ ಉತ್ಸಾಹದಿಂದ ಆಲೆಮನೆಯ ಸಂಭ್ರಮವನ್ನೂ ಚಿತ್ರಿಸಿದ್ದಾರೆ. 

 

‘ಹಕ್ಕಿ ಶಿಕಾರಿ’ಯಂಥ ಬರಹಗಳು ಭಾವುಕತೆಯಿಂದ ಓದುಗರನ್ನು ಆರ್ದ್ರವಾಗಿಸಬಲ್ಲವು. ಹಕ್ಕಿ ಶಿಕಾರಿಯ ಮೋಜನ್ನು ಉತ್ಸಾಹದಿಂದ ಬಣ್ಣಿಸುವ ಲೇಖಕರು, ಐದು–ಹತ್ತು ಗ್ರಾಂ ತೂಕದ ಮಾಂಸದ ಆಸೆಗಾಗಿ ಹಾಡುವ–ಹಾರುವ ಹಕ್ಕಿಗಳನ್ನು ಕೊಲ್ಲುವ ಅರ್ಥಹೀನತೆಯನ್ನೂ ಮನಗಾಣಿಸುತ್ತಾರೆ. ‘ಕುಟ್ರ, ಪಿಕಳಾರ, ಹಕ್ಕಿಯ ಕಂಠಸಿರಿಯ ಸೊಬಗು ಆ ಹೊತ್ತಿಗೆ ಅಂಥ ಮಹತ್ವದ್ದು ಅಂತ ಅನ್ನಿಸುತ್ತಿರಲಿಲ್ಲ. ಈಗ ಅಂದು ಸಾಯಿಸಿದ ಹಕ್ಕಿಗಳನ್ನು ನೆನೆದರೆ ಮರುಕ ಹುಟ್ಟುತ್ತದೆ’ ಎನ್ನುತ್ತಾರೆ. 

 

ಶಿವಾನಂದ ಕರ್ಕಿ ಅವರ ಬರಹಗಳು ಮಲೆನಾಡಿನ ಯಾವುದೋ ಒಂದು ಭಾಗದ ಬದುಕುಗಳ ವಿವರಗಳಾಗಿ ಉಳಿಯುವುದಿಲ್ಲ. ಅವು ಗ್ರಾಮಭಾರತದ ಯಾವ ಊರಿನ ಚಿತ್ರಣಗಳಾದರೂ ಆಗಬಹುದು. ಇಲ್ಲಿ ಕಾಣಿಸುವ ದನಕರುಗಳು, ಪಶುಪಕ್ಷಿಗಳು, ಕೃಷಿ ಚಟುವಟಿಕೆಗಳು ಹಾಗೂ ಮನುಷ್ಯಸಂಬಂಧಗಳು – ಇವೆಲ್ಲ ನಮ್ಮ ನಡುವಿನ ಪಾತ್ರಗಳು, ಅನುಭವಗಳೇ ಆಗಿವೆ. ಈ ಬರಹಗಳು ಓದುಗರ ಬದುಕು–ಊರುಕೇರಿಯ ದಾಖಲೆಗಳೂ ಹೌದೆನ್ನಿಸುವ ಅನುಭವ ಉಂಟು ಮಾಡುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry