ಖಭೌತ ವಿಜ್ಞಾನಿ ಸಿ.ವಿ. ವಿಶ್ವೇಶ್ವರ ಇನ್ನಿಲ್ಲ

7

ಖಭೌತ ವಿಜ್ಞಾನಿ ಸಿ.ವಿ. ವಿಶ್ವೇಶ್ವರ ಇನ್ನಿಲ್ಲ

Published:
Updated:
ಖಭೌತ ವಿಜ್ಞಾನಿ ಸಿ.ವಿ. ವಿಶ್ವೇಶ್ವರ ಇನ್ನಿಲ್ಲ

ಬೆಂಗಳೂರು:  ಕಪ್ಪು ರಂಧ್ರಗಳ ಕುರಿತ ಸಂಶೋಧನೆ ನಡೆಸುವ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಬೀಜಾಂಕುರ ಮಾಡಿದವರಲ್ಲಿ ಒಬ್ಬರಾಗಿದ್ದ ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್‌) ವಿಜ್ಞಾನಿ, ಕನ್ನಡದ ಸಿ.ವಿ. ವಿಶ್ವೇಶ್ವರ (78) ಸೋಮವಾರ ರಾತ್ರಿ ನಿಧನ ಹೊಂದಿದರು.ಕೆಲವು ತಿಂಗಳಿಂದ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ವಿಶ್ವೇಶ್ವರ ಅವರ ಪತ್ನಿ ಪ್ರೊ. ಸರಸ್ವತಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರೆ, ಅವರ ಪುತ್ರಿಯರಾದ ಸ್ಮಿತಾ ಮತ್ತು ನಮಿತಾ ಸಹ ಸಂಶೋಧನೆಯಲ್ಲಿ ತೊಡಗಿಸಿಕೊಂಡವರು.  ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಅಧ್ಯಯನ ಮಾಡಿದ ವಿಶ್ವೇಶ್ವರ ಅವರು, ತಮ್ಮ ಮೇಷ್ಟ್ರು ಎಚ್‌.ನರಸಿಂಹಯ್ಯ ಅವರೊಂದಿಗೆ ಕೆಲಕಾಲ ಸಹೋದ್ಯೋಗಿಯೂ ಆಗಿದ್ದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅವರು, ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪೂರೈಸಿದ್ದರು.ಪಿಎಚ್‌.ಡಿ ಸಂಶೋಧನೆ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ಚಾರ್ಲ್ಸ್‌ ಮಿಸ್ನರ್‌ ಅವರ ಸೂಚನೆಯಂತೆ ಕಪ್ಪು ರಂಧ್ರಗಳ ಕುರಿತು ಸಂಶೋಧನೆ ನಡೆಸಿದ್ದರು. ನಮಗೆ ದೊರಕುವ, ಕಪ್ಪು ರಂಧ್ರದ ಕಡೆಯಿಂದ ಬರುತ್ತಿರುವ ಅಲೆಗಳು ಸ್ಥಿರ ಕಂಪನಾಂಕವನ್ನು ಹೊಂದಿದ್ದು, ಅವುಗಳ ಪಾರ (ಆ್ಯಂಪ್ಲಿಟ್ಯೂಡ್‌) ಮಾತ್ರ ಕಡಿಮೆ ಆಗುತ್ತಾ ಹೋಗುತ್ತದೆ (ಕ್ವಾಸಿ ನಾರ್ಮಲ್‌ ಮೋಡ್ಸ್‌) ಎಂಬುದನ್ನು ನಿರೂಪಿಸಿದ್ದರು.ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಹಲವು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದರು. ಜವಾಹರಲಾಲ್‌ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಶಾಸ್ತ್ರೀಯ ಸಂಗೀತದ ಬಗೆಗೂ ಅವರಿಗೆ ಆಳವಾದ ಜ್ಞಾನವಿತ್ತು.‘ಐನ್‌ಸ್ಟೈನ್ಸ್‌ ಎನಿಗ್ಮಾ’ (ಬ್ಲ್ಯಾಕ್‌ ಹೋಲ್ಸ್‌ ಇನ್‌ ಮೈ ಬಬಲ್‌ ಬಾತ್‌) ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದರು. ಕನ್ನಡದಲ್ಲೂ ಅವರು ವಿಜ್ಞಾನ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದರು.ವಿಶ್ವೇಶ್ವರ ಅವರ ತಂದೆ ಸಿ.ಕೆ. ವೆಂಕಟರಾಮಯ್ಯನವರು ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾಷಣವನ್ನು ಅನುವಾದಿಸಿ ಓದುತ್ತಿದ್ದರಿಂದ ಜನ ಅವರನ್ನು ಪ್ರೀತಿಯಿಂದ ‘ಕನ್ನಡದ ದಿವಾನ’ರು ಎಂದು ಕರೆಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry