ಗರ್ಭವತಿಯರಾದ 6,807 ಬಾಲಕಿಯರು!

7
ಆರೋಗ್ಯ ಇಲಾಖೆಯಿಂದ ‘ಹೈ ರಿಸ್ಕ್‌ ಪ್ರೆಗ್ನೆನ್ಸಿ’ ಸಮೀಕ್ಷೆ

ಗರ್ಭವತಿಯರಾದ 6,807 ಬಾಲಕಿಯರು!

Published:
Updated:
ಗರ್ಭವತಿಯರಾದ 6,807 ಬಾಲಕಿಯರು!

ಬೆಂಗಳೂರು: ರಾಜ್ಯದಲ್ಲಿ ಕಳೆದ ಏಪ್ರಿಲ್‌ನಿಂದ ಈವರೆಗೆ 6,807 ಬಾಲಕಿಯರು ಗರ್ಭಿಣಿಯರಾಗಿದ್ದಾರೆ.

ವಿಶೇಷವೆಂದರೆ, ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಂದಿ (972) ಇದ್ದಾರೆ. ಎರಡನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ (700) ಇದೆ!

ಉಡುಪಿ ಜಿಲ್ಲೆಯಲ್ಲಿ (44) ಇದ್ದು, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಶೂನ್ಯವಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲೂ ಹದಿನೆಂಟು ವರ್ಷ ತುಂಬುವ ಮೊದಲೇ ಗರ್ಭ ಧರಿಸಿದ ಹದಿಹರೆಯದವರ ಹೆಸರು ಆರೋಗ್ಯ ಇಲಾಖೆಯ ಎಂಸಿಟಿಎಸ್‌ (ಮದರ್ ಚೈಲ್ಡ್‌ ಟ್ರ್ಯಾಕಿಂಗ್‌ ಸಿಸ್ಟಂ) ದಾಖಲೆಗಳಲ್ಲಿ ನೋಂದಣಿ ಆಗಿದೆ.

‘ಹೈ ರಿಸ್ಕ್‌ ಪ್ರೆಗ್ನೆನ್ಸಿ’ (ತೊಡಕಿನಲ್ಲಿರುವ ಗರ್ಭಧಾರಣೆ ಅಥವಾ ಗರ್ಭದಲ್ಲಿರುವ ಶಿಶು ಅಪಾಯದಲ್ಲಿರುವ ಸ್ಥಿತಿ) ಪ್ರಕರಣಗಳಿಗೆ ಸಂಬಂಧಿಸಿ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹದಿಹರೆಯದಲ್ಲಿ ಗರ್ಭ ಧರಿಸಿದವರನ್ನು ಗುರುತಿಸಿದೆ.

ಈ ಮಧ್ಯೆ, ರಕ್ತಹೀನತೆ (ಅನಿಮಿಯಾ), ಅಪೌಷ್ಟಿಕತೆ, ಅಧಿಕ ರಕ್ತದೊತ್ತಡ, ಪ್ರಸವ ಸಂದರ್ಭದಲ್ಲಿ ರಕ್ತಸ್ರಾವ ಮತ್ತಿತರ ಕಾರಣಗಳಿಗೆ ತಾಯಂದಿರು ಸಾವಿಗೀಡಾಗುತ್ತಿರುವ ವಿಷಯವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. 2016 ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ 464 ತಾಯಂದಿರು ಪ್ರಸವ ಸಂದರ್ಭದಲ್ಲೇ ಸಾವಿಗೆ ಶರಣಾಗಿದ್ದಾರೆ.

ಈ ಪೈಕಿ ಶೇ 44ರಷ್ಟು (205) ತಾಯಂದಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿಗೀಡಾದರೆ, ಶೇ 27ರಷ್ಟು (125) ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಶೇ 20ರಷ್ಟು (95) ಮಂದಿ ಚಿಕಿತ್ಸೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ 39 (ಶೇ 8) ತಾಯಂದಿರ ಸಾವು ಮನೆಯಲ್ಲಿ ಸಂಭವಿಸಿದೆ.

ಉತ್ತರ ಕರ್ನಾಟಕ ಭಾಗದಿಂದ ನೂರಾರು ಕುಟುಂಬಗಳು ಕಟ್ಟಡ ಕೆಲಸಗಳಿಗೆ ಬೆಂಗಳೂರಿಗೆ ವಲಸೆ ಬರುತ್ತಿವೆ. ಈ ಕುಟುಂಬಗಳಲ್ಲಿ ಹದಿಹರೆಯದಲ್ಲೇ ವಿವಾಹವಾಗಿರುವ ಪ್ರಕರಣಗಳು ಹೆಚ್ಚು. ಇವರು ಗರ್ಭಿಣಿಯರಾಗುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕಾರಣಕ್ಕೆ ಇಲ್ಲಿನ ಎಂಸಿಟಿಎಸ್‌ ದಾಖಲೆಗಳಲ್ಲಿ ನೋಂದಣಿಯಾಗುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಬಾಲಕಿಯರು ಗರ್ಭಿಣಿಯರಾಗಿರುವ ಪ್ರಮಾಣ ಹೆಚ್ಚು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳುತ್ತವೆ.

ರಾಜ್ಯದಲ್ಲಿ ಈ ವರ್ಷ (2016) ಕಬ್ಬಿಣಾಂಶದ ತೀವ್ರ ಕೊರತೆಯಿಂದ (ಅನಿಮಿಯಾ) ಬಳಲುತ್ತಿರುವ 1,128 ಗರ್ಭಿಣಿಯರನ್ನು ಗುರಿ ಇಟ್ಟು ಕೆಲವು ತುರ್ತು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ತಾಯಿ–ಮಗು ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ತಾಯಂದಿರಲ್ಲಿ ಕಾಣಿಸಿಕೊಳ್ಳುವ ಮೂರ್ಛೆರೋಗ, ವಿಶೇಷವಾಗಿ ಬರುವ ನಂಜು, ರಕ್ತದೊತ್ತಡ, ಜೊತೆಗೆ ಆಕಸ್ಮಿಕ ತೊಂದರೆಗಳು ಹಾಗೂ ರಕ್ತ ಸ್ರಾವದಿಂದ ತಾಯಿ ಮತ್ತು ಶಿಶು ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ ಎಂದೂ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ತಾಯಿ ಭಾಗ್ಯ ಯೋಜನೆ, ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ಶಿಶು ಸುರಕ್ಷಾ ಕಾರ್ಯಕ್ರಮಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಆದರೂ ತಾಯಿ– ಮಗು ಸಾವಿನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಇದೀಗ ಮಾತೃಪುಷ್ಟಿ ವರ್ಧನೆ ಮತ್ತು ಆಯುಷ್‌ –ತಾಯಿ ಆರೋಗ್ಯ ಯೋಜನೆಗಳನ್ನು ಹೊಸತಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry