ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನು ನಿಗಮ್‌ ಮತ್ತು ಆಝಾನ್‌

Last Updated 20 ಏಪ್ರಿಲ್ 2017, 19:32 IST
ಅಕ್ಷರ ಗಾತ್ರ

‘ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. ನಾನು ಮುಸ್ಲಿಮನಲ್ಲ ಮತ್ತು ಬೆಳಿಗ್ಗೆಯ ಆಝಾನ್‌ನಿಂದ ನನಗೆ ಎಚ್ಚರವಾಗುತ್ತಿದೆ. ಈ ಬಲವಂತದ ಧಾರ್ಮಿಕತೆ ಭಾರತದಲ್ಲಿ ಎಂದು ಕೊನೆಯಾಗುತ್ತದೆಯೋ?’

‘ಇಸ್ಲಾಂ ಸ್ಥಾಪಿಸಿದಾಗ ಮುಹಮ್ಮದರಿಗೆ ವಿದ್ಯುತ್‌ ಇರಲಿಲ್ಲ. ಎಡಿಸನ್‌ ಬಳಿಕ ನಾನೇಕೆ ಈ ಕಿರಿಕಿರಿಯ ಧ್ವನಿ ಕೇಳಬೇಕು?’

‘ಧರ್ಮವನ್ನು ಅನುಸರಿಸದ ಜನರನ್ನು ನಿದ್ರೆಯಿಂದ ಎಬ್ಬಿಸಲು ಯಾವುದೇ ದೇವಾಲಯ ಅಥವಾ ಗುರುದ್ವಾರ, ವಿದ್ಯುತ್‌ ಬಳಸುವುದನ್ನು ನಾನು ನಂಬುವುದಿಲ್ಲ. ಮತ್ತೇಕೆ? ಪ್ರಾಮಾಣಿಕತೆ? ಸತ್ಯ?

‘ಗೂಂಡಾಗರ್ದಿ ಅಷ್ಟೆ..’

–ಬಾಲಿವುಡ್‌ನ ಹಿನ್ನೆಲೆ ಗಾಯಕ ಸೋನು ನಿಗಮ್‌ ಮೊದಲ ದಿನ ಟ್ವಿಟರ್‌ನಲ್ಲಿ ಹೇಳಿದ್ದು ಇಷ್ಟೆ. ಅದಾಗಿ  ವಾರವೊಂದರಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿಡಿಲು ಮಿಂಚುಗಳ ಅಬ್ಬರವೇ ನಡೆದಿದೆ. ಪರ, ವಿರೋಧದ ಹೇಳಿಕೆಗಳು ಭಾರತೀಯರ ಸಿಟ್ಟು, ಅಸಹನೆ, ಅಸಹಾಯಕತೆ, ಹಾಸ್ಯಪ್ರಜ್ಞೆ, ದ್ವೇಷ, ವ್ಯಂಗ್ಯ, ಪ್ರಾಮಾಣಿಕತೆ, ಧೈರ್ಯ ಎಲ್ಲವನ್ನೂ ಬಯಲು ಮಾಡುತ್ತಿವೆ.

ಕೋಲ್ಕತ್ತದ ಮೌಲ್ವಿಯೊಬ್ಬರು ‘ಸೋನು ನಿಗಮ್‌ರ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಎಲ್ಲ ಭಾರತೀಯರ ಮನೆ ಮುಂದೆ ಮೆರವಣಿಗೆ ಮಾಡಿದರೆ ₹10 ಲಕ್ಷ ಕೊಡುತ್ತೇನೆ’ ಎಂದರು. ಸಿಟ್ಟಿಗೆದ್ದ ಸೋನು, ತಮ್ಮ ಹೇರ್‌ಸ್ಟೈಲಿಸ್ಟ್‌ ಆಲಿಮ್‌ನನ್ನು ಮನೆಗೇ ಕರೆಸಿ ತಲೆ ಬೋಳಿಸಿಕೊಂಡು, ‘ಸವಾಲು ಸ್ವೀಕರಿಸಿದ್ದೇನೆ. ಮೌಲ್ವಿ ₹10 ಲಕ್ಷ ಆಲಿಮ್‌ಗೆ ನೀಡಲಿ’ ಎಂದರು. ಆ ಮೌಲ್ವಿ ‘ನಾನು ಮೂರು ಷರತ್ತುಗಳನ್ನು ಹಾಕಿದ್ದೆ, ಒಂದು ಮಾತ್ರ ನೆರವೇರಿದೆ, ಹಣ ನೀಡುವುದಿಲ್ಲ’ ಎಂದರು.

ಆರಂಭದಲ್ಲಿ ನಿಜಕ್ಕೂ ಗಂಭೀರ ಎನ್ನಿಸಿದ್ದ ಪ್ರಕರಣ ಈಗ ಹುಚ್ಚಾಟದಂತೆ ಕಾಣತೊಡಗಿದೆ. ಬಹುಸಂಸ್ಕೃತಿಯ ದೇಶವೊಂದರಲ್ಲಿ ಸಾಂಸ್ಕೃತಿಕ ಲೋಕದ ಗಣ್ಯರೊಬ್ಬರ ಹೇಳಿಕೆಗೆ ಸಭ್ಯತೆಯಿಂದ ಪ್ರತಿಕ್ರಿಯೆ ಹೇಗೆ ನೀಡಬೇಕು ಎನ್ನುವುದು ಗೊತ್ತಿಲ್ಲದ ಧರ್ಮಗುರುವಿನ ವರ್ತನೆ  ಬಗ್ಗೆ ಮರುಕ ಪಡಬೇಕೋ... ಅಥವಾ ಅನಾಮಿಕ ಮೌಲ್ವಿಯೊಬ್ಬರ ಹೇಳಿಕೆಗೆ ಸಿಟ್ಟಿಗೆದ್ದು ತಲೆಬೋಳಿಸಿಕೊಂಡ ಸೋನು ನಿಗಮ್‌ ಅಪ್ರಬುದ್ಧತೆಯ ಬಗ್ಗೆ ನಗಬೇಕೋ?

ತೀವ್ರ ಪ್ರತಿಕ್ರಿಯೆ ಬಂದಾಗ ಸೋನು ನಿಗಮ್‌ ಟ್ವಿಟರ್‌ನಲ್ಲೇ ಸ್ಪಷ್ಟೀಕರಣ ನೀಡಿದರು. ‘ನಾನು ಸೆಕ್ಯುಲರ್‌. ಎಡವೂ ಅಲ್ಲ, ಬಲವೂ ಅಲ್ಲ. ಆಝಾನ್‌, ಆರತಿ ಮುಖ್ಯ, ಲೌಡ್‌ಸ್ಪೀಕರ್‌ ಅಲ್ಲ. ಮಸೀದಿ, ದೇವಾಲಯ, ಗುರುದ್ವಾರಗಳಲ್ಲಿ ಲೌಡ್‌ಸ್ಪೀಕರ್‌ ಬಳಸಬಾರದು. ನಾನು ಎತ್ತಿರುವುದು ಸಾಮಾಜಿಕ ವಿಷಯ, ಧಾರ್ಮಿಕ ವಿಷಯ ಅಲ್ಲ. ಧರ್ಮಾಂಧತೆಗೆ ಮಣಿಯುವ ಪ್ರಶ್ನೆಯೇ ಇಲ್ಲ’ ಎಂದರು. ಆದರೂ ವಿವಾದ ಮುಂದುವರಿದಿದೆ. ಸೋನು  ಧ್ವನಿಯಲ್ಲಿದ್ದ ಸಹಜ ಆಶಯ ಕಣ್ಮರೆಯಾಗಿ, ಅದು ಧ್ವನಿಸುವ ಅಸಹನೆಯೇ ಹೆಚ್ಚು ಪ್ರಚಾರವಾಗುತ್ತಿದೆ.

ಅಂತಿಮವಾಗಿ ಏನಾಗಬಹುದು? ಮುಸ್ಲಿಮರ ಕುರಿತ ಅಪನಂಬಿಕೆ ಮತ್ತು ಮುಸ್ಲಿಮರಲ್ಲಿ ಧಾರ್ಮಿಕ ಅಭದ್ರತೆ ಎರಡೂ ಹೆಚ್ಚಾಗಬಹುದು. ಧರ್ಮಾಂಧರ ಸಂಖ್ಯೆ ಏರಬಹುದು. ಇದುವರೆಗೆ ಮನೆಯ ಪಕ್ಕದ ಮಸೀದಿಯಲ್ಲಿ ಆಝಾನ್‌ ಆಗುವಾಗ ಯಾವ ಅಪನಂಬಿಕೆಯೂ ಇಲ್ಲದೆ ಮಸೀದಿ ಮುಂದೆ ಹಾಯಾಗಿ ಓಡಾಡುತ್ತಿದ್ದವರೂ ಇನ್ನು ಮುಂದೆ ಸೋನು ನಿಗಮ್‌ ಹೇಳಿಕೆಯನ್ನು ನೆನಪಿಸಿಕೊಂಡು ‘ಹೌದಲ್ಲ, ಇದು ನಿಜಕ್ಕೂ ಕಿರಿಕಿರಿಯೇ’ ಅಂದುಕೊಳ್ಳಬಹುದು! ರಾಜಕೀಯ ಲಾಭ ಗಳಿಸಲು ಬಯಸುವವರು ವಿವಾದವನ್ನು ಇನ್ನಷ್ಟು ಬೆಳೆಸಬಹುದು. ಇದುವರೆಗೆ ಸೋನು ನಿಗಮ್‌ ಹಾಡುಗಳನ್ನು ಮೆಚ್ಚಿಕೊಂಡ ಒಂದು ಧರ್ಮದ ಜನರು ಇನ್ನು ಮುಂದೆ, ತಾತ್ಸಾರ ಬೆಳೆಸಿಕೊಳ್ಳಬಹುದು. ಬಯಸಿದರೆ ಸೋನು ನಿಗಮ್‌ ರಾಜ್ಯಸಭೆಯ ನಾಮಕರಣ ಸದಸ್ಯರೂ ಆಗಬಹುದು!

ದೇಶದಾದ್ಯಂತ ಮಸೀದಿ, ಮಂದಿರ, ದೇವಾಲಯ, ಚರ್ಚ್‌, ಗುರುದ್ವಾರಗಳಲ್ಲಿ ಲೌಡ್‌ಸ್ಪೀಕರ್‌ ಬಳಕೆ ನಿಲ್ಲಬಹುದೆ? ಖಂಡಿತಾ ಇಲ್ಲ. ಸೋನು ನಿಗಮ್‌ ಬಯಸಿದ ಅದೊಂದನ್ನು ಬಿಟ್ಟು ಬೇರೆ ಏನೆಲ್ಲವೂ ಆಗಬಹುದು!

5–6 ವರ್ಷಗಳ ಹಿಂದೆ ಹಂಪಿ ಉತ್ಸವಕ್ಕೆ ಸೋನು ನಿಗಮ್ ಬಂದಿದ್ದರು. ಭಾರೀ ಜನಸಾಗರ. ಸೋನು ನಿಗಮ್‌ ಅವತ್ತು ಕಾರ್ಯಕ್ರಮಕ್ಕೆ ಬಂದಾಗ ಒಂದು ಗಂಟೆ ತಡವಾಗಿತ್ತು ಅದಕ್ಕೆ ಕಾರಣ ಅವರು ಬಂದ ಸಣ್ಣ  ವಿಮಾನ ನೆಲಕ್ಕಿಳಿಯಲು ತಾಂತ್ರಿಕ ತೊಂದರೆ ಅನುಭವಿಸಿದ್ದು. ವಿಮಾನ ಇಳಿದು, ಸೋನು ನಿಗಮ್‌ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ತೀವ್ರ ಆತಂಕದಲ್ಲಿದ್ದರು.

ಕಾರ್ಯಕ್ರಮದ ವೇದಿಕೆಯ ಹಿಂದೆ ಸ್ವಲ್ಪ ಅಂತರದಲ್ಲಿ ಅವರಿಗೆ ಸಿದ್ಧಗೊಳ್ಳಲು ಪ್ರತ್ಯೇಕ ಟೆಂಟ್‌ಮನೆ ನಿರ್ಮಿಸಿದ್ದರು. ನೇರವಾಗಿ ಸೋನು ಆ ಮನೆಯನ್ನು ಪ್ರವೇಶಿಸಿದರು. ಅವರನ್ನು ಒಬ್ಬನೇ ಮಾತನಾಡಿಸಬೇಕೆಂದು ನಾನು ಮೊದಲೇ  ಮನೆಯೊಳಕ್ಕೆ ಸೇರಿದ್ದೆ. ನಮಸ್ಕಾರ ಎಂದು ಕೈಕುಲುಕಿ, ಪರಿಚಯಿಸಿಕೊಂಡೆ. ‘ನಮಸ್ಕಾರ’ ಎಂದಷ್ಟೇ ಹೇಳಿದ ಸೋನು ವಾಶ್‌ರೂಮ್‌ಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಕೋಣೆಗೆ ಬಂದರು. ಅವರ ಮುಖದಲ್ಲಿ ಗಾಬರಿ, ಆತಂಕ ಎದ್ದು ಕಾಣುತ್ತಿತ್ತು. ಕೋಣೆಯ ಮಧ್ಯೆ ನೆಲದಲ್ಲೇ ಪದ್ಮಾಸನ ಹಾಕಿದರು. ಮೊದಲು ಪ್ರಾಣಾಯಾಮ, ಬಳಿಕ ದೀರ್ಘ ಉಸಿರೆಳೆದುಕೊಂಡು ಧ್ಯಾನ. ಮೊಬೈಲ್‌ನಲ್ಲೇ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಸುಮಾರು 15 ನಿಮಿಷಗಳ ಮೌನ– ಧ್ಯಾನ.
ಬಳಿಕ ಅಲ್ಲೇ ನಿಂತಿದ್ದ ನನ್ನ ಜತೆ ಯಾವ ಮಾತನ್ನೂ ಆಡದೆ ನೇರವಾಗಿ ವೇದಿಕೆಯೇರಿ ಕಾರ್ಯಕ್ರಮ ಆರಂಭಿಸಿದರು. ಎರಡು ಗಂಟೆಗಳ ಕಾಲ ನಿರಂತರ ಕಾರ್ಯಕ್ರಮ. ನಿಜಕ್ಕೂ ಆತ ಅದ್ಭುತ ಷೋಮ್ಯಾನ್‌ ಅನ್ನಿಸಿತು. ಪ್ರತಿ ಹಾಡಿಗೂ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಸಿನಿಮಾ ಹಾಡುಗಳೇ ಬೇಕೆಂದು ಸಭಿಕರು ಕೂಗೆಬ್ಬಿಸಿದರೂ ಸೋನು ಶಾಸ್ತ್ರೀಯದಿಂದಲೇ ಆರಂಭಿಸಿ, ಲಘುಶಾಸ್ತ್ರೀಯಕ್ಕೆ ಹೊರಳಿದರು. ತನ್ನದೇ ಆಯ್ಕೆಯ ಹಾಡುಗಳ ಬಳಿಕ ಕೇಳುಗರ ಆಯ್ಕೆಗಳನ್ನು ಹಾಡಿದರು.

ಅಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ರಾಜ್ಯದ ಮೂವರು ಸಚಿವರು ಸೋನು ಅವರನ್ನು ಸನ್ಮಾನಿಸಲು ಬಯಸಿ ವೇದಿಕೆಗೆ ಚೀಟಿ ಕಳಿಸಿದರು. ಆದರೆ ಸೋನು ಅದಕ್ಕೆ ಪ್ರತಿಕ್ರಿಯೆ ಕೊಡದೆ ಕಾರು ಹತ್ತಿ ಹೊರಟೇ ಹೋದರು.

ಸೋನು ಇರುವುದೇ ಹಾಗೆ. ಅವರ ಸ್ವಯಂಘೋಷಿತ ಗುರು ಮೊಹಮ್ಮದ್‌ ರಫಿ. ಉಸ್ತಾದ್‌ ಸದಾಖತ್‌ ಅಲಿ ಖಾನ್‌ ಮತ್ತು ಸಲಾಮತ್‌ ಅಲಿ ಖಾನ್‌ರ ಶಾಸ್ತ್ರೀಯ ಸಂಗೀತವನ್ನು ಅಪಾರವಾಗಿ ಮೆಚ್ಚಿಕೊಂಡವರು. ಸೋನು ಹಾಡಿರುವ ‘ಮೊಹಮ್ಮದ್‌ ಕೆ ದರ್‌ಪೆ ಚಲಾ ಜಾ ಸವಾಲಿ’ ಅಥವಾ ‘ಸಲಾಮ್‌ ಆಪ್‌ ಪರ್‌ ತಾಜ್‌ದಾರ್‌ ಎ ಮದೀನಾ’ ಖವ್ವಾಲಿಗಳನ್ನು ಕೇಳಿ ತಲೆದೂಗದ ಮುಸ್ಲಿಮರು ಕಡಿಮೆಯೇ. ಆದರೆ ಧರ್ಮದ ಕುರಿತ ತಮ್ಮ ಭಿನ್ನಮತಗಳನ್ನು ಸೋನು ವ್ಯಕ್ತಪಡಿಸಿದಾಗ ನಾವೇಕೆ ಅದನ್ನು ನಿರ್ಮೋಹದಿಂದ ಸ್ವೀಕರಿಸಬಾರದು? ಗೂಂಡಾಗರ್ದಿ ಎನ್ನುವ ಪದಬಳಕೆ ಒರಟು ಅನ್ನಿಸಬಹುದು. ಆದರೆ ಈಗ ನಡೆಯುತ್ತಿರುವುದೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT