ದವಾ, ದುವಾ ಮತ್ತು ದೆವ್ವ!

7

ದವಾ, ದುವಾ ಮತ್ತು ದೆವ್ವ!

Published:
Updated:
ದವಾ, ದುವಾ ಮತ್ತು ದೆವ್ವ!

ದವಾ–ದುವಾ–ದೆವ್ವ! ಹೀಗೆಂದರೇನು? 

ಇದೊಂದು ಅರ್ಥವಿಲ್ಲದ ಸಿನಿಮಾಗೀತೆಯ ಸಾಲು ಎಂದುಕೊಳ್ಳಬೇಡಿ. ಹಿಂದಿಯಲ್ಲಿ ‘ದವಾ’ ಎಂದರೆ ಔಷಧಿ ಎಂದರ್ಥ. ದುವಾ ಎಂದರೆ ದೇವರ ಪ್ರಾರ್ಥನೆ/ಆಶೀರ್ವಾದ. ದೆವ್ವ ಅಂದರಂತೂ ಗೊತ್ತೇ ಇದೆ. 

 

ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾದಾಗ, ಕಷ್ಟ–ಕೋಟಲೆಗಳಿಗೆ ಸಿಲುಕಿದಾಗ, ದೇವರ ಮೊರೆ ಹೋಗುವುದು ಖಂಡಿತ. ಆ ದೇವರು ಎನ್ನುವುದು, ಯಾವುದೋ ಅಚಲವಾಗಿ ನಂಬುವ ಶಕ್ತಿಯಿರಬಹುದು ಅಥವಾ ಯಾವುದಾದರೂ ಧರ್ಮದ ದೇವತೆಯಾಗಿರಬಹುದು ಅಥವಾ ಸ್ವಾಮಿ–ಮೌಲ್ವಿ ಆಗಿರಬಹುದು.

 

ಆರೋಗ್ಯದ ವಿಷಯಕ್ಕೆ ಬಂದಾಗ ವೈದ್ಯರ ಔಷಧಿಯ ಜೊತೆ ಸಣ್ಣಪುಟ್ಟ ಹರಕೆಗಳ ರೂಪದಲ್ಲಿ ದೇವರಿಗೂ ಲಾಭವುಂಟು. ಅದರಲ್ಲೂ ಮಾನಸಿಕ ರೋಗಗಳ ವಿಷಯದಲ್ಲಂತೂ, ವೈದ್ಯರಿಗಿಂತ ದೇವರಿಗೆ, ದೇವರ ದೂತರೆನಿಸಿಕೊಂಡವರಿಗೇ ಮತ್ತು ದೆವ್ವಕ್ಕೆ ಹೆಚ್ಚಿನ ಲಾಭ.

 

ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಧಾರ್ಮಿಕತೆ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿರುವ ಜನರೇ ಇರುವಲ್ಲಿ. ಶೇ.50ಕ್ಕಿಂತ ಹೆಚ್ಚು ಮನೋರೋಗಿಗಳು ಕಾಯಿಲೆ ಪ್ರಾರಂಭವಾದ ನಂತರ ಮೊದಲು ಹೋಗಿ ನೋಡುವುದೇ ದೇವರನ್ನು ಅಥವಾ ದೇವರ ರೂಪದಲ್ಲಿದ್ದಾರೆ ಎಂದು ನಂಬಿಸುವವರನ್ನು. ದೇವರಿಗೆ, ಕೆಲವು ಬಾರಿ ದೆವ್ವಗಳಿಗೆ ಪೂಜೆ–ಪುನಸ್ಕಾರಗಳಾದ ನಂತರವೇ ಮನೋವೈದ್ಯರಲ್ಲಿ ಬರುತ್ತಾರೆ.

 

ನಾನಂತೂ ನನ್ನ ಈ ಏಳು ವರ್ಷಗಳ ಮನೋವೈದ್ಯಕೀಯ ಸೇವೆಯ ಅವಧಿಯಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಗಮನಿಸಿದ್ದೇನೆ.  ಧರ್ಮ–ಜಾತಿಯ ಭೇದವಿಲ್ಲದೇ, ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು, ಮನೋರೋಗಗಳು ದೇವರು–ದೆವ್ವಗಳಿಗೇ ಸಂಬಂಧಪಟ್ಟದೆಂದು ದೃಢವಾಗಿ ನಂಬುತ್ತಾರೆ. ಅವರನ್ನೇ ನೇರವಾಗಿ ಇದರ ಬಗ್ಗೆ ಪ್ರಶ್ನಿಸಿದ್ದೇನೆ. ಉತ್ತರಗಳು ಬೇರೆ ಬೇರೆಯದಿರುತ್ತದೆ. 

 

ಮೂವತ್ತು ವರ್ಷದ ಮಹಿಳೆಯೊಬ್ಬಳು ಕಳೆದ ಒಂದು ತಿಂಗಳಿನಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಒಬ್ಬಳೇ ಮಾತನಾಡುವುದು, ನಿದ್ರೆ ಮಾಡದೇ ಇರುವುದು, ದೇವರು ಮೈಮೇಲೆ ಬಂದ ಹಾಗೆ ಮಾಡುವುದು ಇತ್ಯಾದಿ. ಯಾವಾಗ ದೇವರು ಮೈ ಮೇಲೆ ಬಂದು ಮಾತನಾಡಿತೋ, ಆಗ ಸಂಬಂಧಿಗಳಿಗೆ ಇದು ತಾವು ಹಿಂದೆ ಪೂರೈಸದ ಯಾವುದೋ  ಹರಕೆಯದೇ ಸಮಸ್ಯೆ ಎಂದು ಖಚಿತವಾಗಿ, ಮನೆದೇವರ ದೇವಸ್ಥಾನಕ್ಕೆ ಕರೆದೊಯ್ದು ಹತ್ತು ದಿನಗಳಿರಿಸಿದರು.

 

ದೇವರು ಬರುವುದೇನೋ ನಿಂತಿತು. ಆದರೆ ಅವಳು ಊಟ–ತಿಂಡಿ ಬಿಟ್ಟಳು. ಒಬ್ಬಳೇ ಮಾತನಾಡುವುದು ನಿಲ್ಲಿಸಲಿಲ್ಲ. ರಾತ್ರಿ ನಿದ್ರೆ ಬರಲಿಲ್ಲ. ಅಲ್ಲಿಯ ಅರ್ಚಕರೇನೋ ಹೇಳಿದರು ‘ದೇವರಿಗೆ ಸಿಟ್ಟು ಹೋಗಿದೆ, ಹರಕೆ ತೀರಿತು, ಮನೆಗೆ ಕರೆದುಕೊಂಡು ಹೋಗಿ’ ಎಂದು. ಮನೆಗೆ ಕರೆತಂದು ಹದಿನೈದು ದಿನಗಳಾದರೂ, ಮಂಕಾದಳೇ ಹೊರತು, ಚೆನ್ನಾಗಿ ಆಗಲಿಲ್ಲ. ಪಕ್ಕದ ಮನೆಯವರೊಬ್ಬರ ಸಲಹೆಯ ಮೇರೆಗೆ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆದ ನಂತರ ಅವಳು ಸಹಜ ಸ್ಥಿತಿಗೆ ಬಂದಳು.

 

ಈ ಮಹಿಳೆಗೆ ಇದ್ದುದು ಮಾನಸಿಕ ರೋಗವೇ. ‘ದೇವರು ಮೈ ಮೇಲೆ’ ಬರುವ ಲಕ್ಷಣ ಇರುವುದೇ ದೇವರು/ದೆವ್ವಕ್ಕೆ ಹೋಗಲು ಕಾರಣವೇ? ಗೊತ್ತಿಲ್ಲ. ಆ ಸಂಬಂಧಿಕರಂತೂ ಹೋಗುವಾಗ ನನಗೆ ‘ಮೇಡಮ್, ನಮ್ಮ ಮನೆದೇವರು ಮತ್ತು ನಿಮ್ಮ ಸಹಾಯದಿಂದ ನನ್ನ ಹೆಂಡತಿ ಚೆನ್ನಾಗಿ ಆದಳು’ ಎಂದು ಹೇಳಿ ವಂದಿಸಿ ಹೋದರು.

 

‘ಇದು ದೇವರು–ದೆವ್ವಕ್ಕೆ ಸಂಬಂಧಿಸಿದ್ದಲ್ಲ, ಅವಳ ಮೈ ಮೇಲೆ ದೇವರು ಬಂದಿದ್ದು ಕಾಯಿಲೆಯ ಲಕ್ಷಣವೇ ಹೊರತು ಬೇರೆಯೇನೂ ಅಲ್ಲ. ನೀವು ಇನ್ನೂ ಬೇಗ ನನ್ನ ಬಳಿ ಬಂದಿದ್ದರೆ ಚಿಕಿತ್ಸೆ ಬೇಗ ಆಗುತ್ತಿತ್ತು. ಅಲ್ಲಿ, ದೇವಸ್ಥಾನಕ್ಕೆ ಹೋಗಿದ್ದರಿಂದ, ಅವಳು ಊಟ–ತಿಂಡಿ ಮಾಡದೇ, ರಕ್ತಹೀನಳಾದಳು’ ಎಂದು ಹೇಗೆ ತಿಳಿಸಿ ಹೇಳಲಿ? ಹೇಳಿದರೆ ನಂಬುವರೇ? ಏನು ಸಾಕ್ಷ್ಯ ತೋರಿಸಲಿ?

 

ಅದಕ್ಕೇ ಒಮ್ಮೊಮ್ಮೆ ನಮ್ಮ ವಿಜ್ಞಾನದ ಬಗ್ಗೆ ಮನೋವೈದ್ಯಳಾಗಿ ಬೇಸರವೂ ಆಗುತ್ತದೆ. ಒತ್ತಡ, ಸೂಕ್ಷ್ಮ ಸ್ವಭಾವ, ಇವುಗಳು ಮಾನಸಿಕ ರೋಗ ಉಂಟು ಮಾಡುವುದರಲ್ಲಿ ಕಿರಿದಾದ ಪಾತ್ರ ವಹಿಸಿದರೂ, ಬೇರೆಯ ದೈಹಿಕ ಕಾಯಿಲೆಗಳಂತೆ, ಮಾನಸಿಕ ರೋಗಗಳೂ ಮಿದುಳಿನಲ್ಲಿ ಆಗುವ ರಾಸಾಯನಿಕ ಪ್ರಕ್ರಿಯೆ / ನರವಾಹಕಗಳ ಏರುಪೇರಿನಿಂದ ಉಂಟಾಗುತ್ತದೆ ಎನ್ನುವುದು ನಮ್ಮ ಸಂಶೋಧನೆಗಳು ಸಿದ್ಧಪಡಿಸಿವೆ.

 

ಆದರೆ ಯಾಕೆ ಮನೋರೋಗಗಳಿಗೆ ಬೇರೆಯ ದೈಹಿಕ ರೋಗಗಳಿರುವಂತೆ ಪರೀಕ್ಷೆಗಳಿಲ್ಲ? ಉದಾಹರಣೆ, ರಕ್ತಪರೀಕ್ಷೆ ಮಾಡಿ ಮಧುಮೇಹ ಕಂಡುಹಿಡಿಯುವುದು, ಮಿದುಳಿನ ರಕ್ತನಾಳದ ಸ್ಕ್ಯಾನ್ ಮಾಡಿ ‘stroke’ ಆಗಿದೆ ಎಂದು ಹೇಳುವಂತೆ ಮನೋರೋಗಗಳನ್ನೂ ಪರೀಕ್ಷೆಯ ಮೂಲಕ ಪತ್ತೆಹಚ್ಚುವಂತಿದ್ದರೆ? ಮುಂದಾದರೂ ಆಗಬಹುದೇನೋ. ಆಶಾದಾಯಕವಾಗಿರೋಣ.

 

ದವಾ–ದುವಾ–ದೆವ್ವ ಎಂದಾಗ ಇನ್ನೂ ಒಂದು ವಿಷಯ ಹೇಳಲೇಬೇಕು. ನನಗೆ ತಿಳಿದಂತೆ ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿರುವ ಧಾರ್ಮಿಕ ಚಿಕಿತ್ಸಾ ಕೇಂದ್ರಗಳು ಈಗ ಸ್ವಲ್ಪ ಎಚ್ಚೆತ್ತುಕೊಂಡಿವೆ ಎನ್ನಬಹುದು. ಕಾರಣ, ಪ್ರಾಯಶಃ ಈ ಮಲೆನಾಡಿನಲ್ಲಿರುವ ಎಲ್ಲಾ ಹಿರಿಯ ಮನೋವೈದ್ಯರು ಮಾಡಿರುವ ಸಮುದಾಯ ಅರಿವು ಕಾರ್ಯಕ್ರಮಗಳು. ಈ ಸಾಮೂಹಿಕ ಜಾಗೃತಿಯಿಂದ ಧಾರ್ಮಿಕ ಕೇಂದ್ರಗಳಿಗೆ ಕೂಡ ತಮ್ಮ ಮಿತಿ ಅರಿವಾಗಿರಬಹುದು.

 

ಒಮ್ಮೆ 24 ವರ್ಷದ ಯುವಕನನ್ನು ನಮ್ಮ ಆಸ್ಪತ್ರೆಗೆ ಕರೆತಂದಿದ್ದರು. ಆತ ‘ಉನ್ಮಾದ’ (Mania) ಎಂಬ ಮನೋರೋಗದಿಂದ ಬಳಲುತ್ತಿದ್ದ. ಕಾಯಿಲೆ ಪ್ರಾರಂಭವಾದ ಒಂದೇ ವಾರದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಹಾಜರಿದ್ದರು. ನನಗಂತೂ ಆಶ್ಚರ್ಯ. ಸಾಮಾನ್ಯವಾಗಿ  ಮನೋವೈದ್ಯರಲ್ಲಿ ಬೇಗ ಬಂದಿದ್ದಾರೆಂದರೆ, ಆ ವ್ಯಕ್ತಿ ತುಂಬಾ  ಆಕ್ರಮಣಕಾರಿ ಆಗಿರಬೇಕು ಅಥವಾ ಆ ವ್ಯಕ್ತಿಗೆ ಆತ್ಮಹತ್ಯೆಯ ಯೋಚನೆಗಳಿರಬೇಕು.

 

ಇವೆರಡೂ ಇಲ್ಲದ ಈ ವ್ಯಕ್ತಿ ಈ ಬೇಗ ನನ್ನ ಬಳಿ ಬಂದುದಾದರೂ ಹೇಗೆ? ಅವರ ತಂದೆ ಚೆನ್ನಾಗಿ ವಿವರಿಸಿದರು: ‘ಮೇಡಮ್, ನಮ್ಮ ದೇವರಲ್ಲಿ ಹೋಗಿದ್ದೆವು. ಅಲ್ಲಿ ಪೂಜಾರಿಗಳ ಮೇಲೆ ದೇವರು ಬಂದಾಗ, ದೇವರೇ ಹೇಳಿತು: ನನಗೆ ಈ ಪೂಜೆ ಮಾಡಿಸು. ನಂತರದಲ್ಲಿ ತಡ ಮಾಡದೇ ಶಿವಮೊಗ್ಗದಲ್ಲಿರುವ ಈ ನರ್ಸಿಂಗ್‌ಹೋಂಗೆ ಹೋಗಿ ಚಿಕಿತ್ಸೆ ಕೊಡಿಸು ಎಂದು. ದೇವರಿಗೆ ಗೊತ್ತಿಲ್ಲದ್ದು ಏನಿದೆ? ಅದಕ್ಕೆ ತಕ್ಷಣ ಬಂದೆವು’.

 

 

ವೈದ್ಯರ ಬಳಿ ಬೇಗ ಬರಲು ದೇವರೇ ಕಾರಣ ಎಂದು ತಿಳಿದು ಆಶ್ಚರ್ಯಪಟ್ಟೆ. ಮೈಮೇಲೆ ಬಂದು ಸಮಸ್ಯೆಗೆ ಪರಿಹಾರ ನೀಡುವ ದೇವರು–ದೆವ್ವಗಳೂ ಪ್ರಚಲಿತ ವಿದ್ಯಮಾನಗಳನ್ನು (Current affairs) ಅರಿತಿರುತ್ತಾರೇನೋ? ಈ ವಿಷಯ ನನಗೆ ತಿಳಿದಿದ್ದೇ ರೋಗಿಗಳಿಂದ. 

 

ನಮ್ಮ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ಮನೋವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ನಮ್ಮ ತಂದೆ ಮತ್ತು ಕಳೆದ 5–10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾವಿಬ್ಬರು ಮನೋವೈದ್ಯ ಸಹೋದರಿಯರು ಇದ್ದೇವೆ. ಮುಂಚೆ ಸಾಮಾನ್ಯವಾಗಿ, ಮೈಮೇಲೆ ಬರುವ ದೇವರು – ‘ಶ್ರೀಧರ್ ಡಾಕ್ಟ್ರ ಹತ್ತಿರವೇ ಹೋಗಿ’ ಎಂದು ಹೇಳಿಕಳಿಸುತ್ತಿತ್ತು.

 

ಕಳೆದ ಮೂರ್ನಾಲ್ಕು ವರ್ಷಗಳಿಂದ ‘ಶ್ರೀಧರ್ ಆಸ್ಪತ್ರೆಗೆ  ಹೋಗು, ಅಲ್ಲಿನ ಯಾರಾದರೂ ವೈದ್ಯರಲ್ಲಿ ತೋರಿಸು’ ಎನ್ನುತ್ತಿತ್ತು. ಇತ್ತೀಚೆಗೆ ತಾನೇ ಯಾವ ವೈದ್ಯರಿಗೆ ಯಾವ ಕೇಸು ಎಂಬುದನ್ನು ನಿರ್ಧರಿಸಿ ಕಳಿಸಲಾರಂಭಿಸಿದೆ. ಇದು ತಿಳಿದದ್ದು ಹೀಗೆ. ನಾಲ್ಕು ವರ್ಷದ ಮಗುವನ್ನು ಓದಿನ ಸಮಸ್ಯೆಗಳು ಎಂದು ದೇವರಲ್ಲಿ ಕರೆದೊಯ್ದಿದ್ದರು.

 

ಆಗ ಆ ದೇವರು ‘ಈ ಹೋಮ ಮಾಡಿಸು, ನಂತರ ಶಿವಮೊಗ್ಗದಲ್ಲಿ ಈ ಆಸ್ಪತ್ರೆಯಲ್ಲಿ ಮಕ್ಕಳ ವಿಷಯವನ್ನೇ ನೋಡುವ ಈ ಹೆಣ್ಣಮ್ಮನನ್ನೇ ಕಾಣಬೇಕು’ ಎಂದು ನನ್ನಲ್ಲಿಗೇ ಕಳಿಸಬೇಕೇ? ಮಕ್ಕಳ ಮನೋವೈದ್ಯಕೀಯ ನನ್ನ ವಿಶೇಷ ಪರಿಣತಿಯ ವಿಷಯ ಎನ್ನುವುದು ಈ ದೇವರಿಗೂ ತಿಳಿದಿದೆಯಲ್ಲ! ಇನ್ನೊಮ್ಮೆ 24 ವರ್ಷದ ವಿವಾಹಿತೆ ಮಾನಸಿಕ ಒತ್ತಡ ಮತ್ತು ತೀವ್ರತರಹದ ಖಿನ್ನತೆಯಿಂದ ಬಳಲುತ್ತಿದ್ದವಳನ್ನು ದೇವರ ಹತ್ತಿರ ಕರೆದೊಯ್ದಿದ್ದರು.

 

ಆ ಕೇಸಿಗೆ ಪೂಜಾರಿಯ ಮೈಮೇಲೆ ಬಂದ ದೇವರು – ‘ಮೊದಲು ಇವಳ ಗಂಡ ದೇವಸ್ಥಾನದಲ್ಲಿ ಹತ್ತು ದಿನಗಳಿದ್ದು ಸೇವೆ ಮಾಡಬೇಕು. ಅದೇ ಸಮಯದಲ್ಲಿ ಈಕೆಯನ್ನು ಶಿವಮೊಗ್ಗದಲ್ಲಿ ಈ ಆಸ್ಪತ್ರೆಯಲ್ಲಿರುವ ಎರಡು ಹೆಣ್ಣಮ್ಮ ವೈದ್ಯರಲ್ಲಿ ಒಬ್ಬರಿಗೆ  ತೋರಿಸಿ’ ಎಂದುಬಿಟ್ಟಿತು. ಇದನ್ನು ಕೇಳಿ ಗಂಡನಿಗೆ ಕೈ–ಕಾಲು ನಡುಕ.

 

ಯಾಕೆಂದರೆ ಒಂದು ದಿನವೂ ಮದ್ಯ ಕುಡಿಯದೇ ಇರುವುದಕ್ಕಾಗುವುದಿಲ್ಲ ಅವನಿಗೆ. ಅವನ ಮದ್ಯವ್ಯಸನವೇ ಆಕೆಗೂ ಒತ್ತಡ. ಒಂದು ಕಲ್ಲಿಗೆ ಎರಡು ಹಕ್ಕಿ ಬಿದ್ದ ಹಾಗಾಯಿತಲ್ಲಾ? ನಿಜವಾಗಿ ‘ಮದ್ಯದ ಅಮಲಿನ ದೆವ್ವ’  ಇರುವುದು ಗಂಡನಿಗೇ ಎಂದು ತಿಳಿದೇ ಈ ಪೂಜಾರಿಯ ಮೂಲಕ ದೇವರು ಅವನನ್ನು ದೇವಸ್ಥಾನದಲ್ಲಿರಿಸಿತೇ? ಹಾಗಾದರೆ ದೆವ್ವ ಎಂದರೇನು? ದೆವ್ವ ಎಂದವರಾರು?’ ಯಾವುದೂ ಸ್ಪಷ್ಟವಿಲ್ಲ. 

 

ಇನ್ನೊಂದು ಬಾರಿ ನನ್ನ ಮಹಿಳಾ ರೋಗಿಯೊಬ್ಬರು ‘ಗಂಟಲಿನಲ್ಲಿ ಏನೋ ಸಿಕ್ಕಿಕೊಂಡ ಹಾಗಾಗುತ್ತೆ’ ಎಂದು ಎಲ್ಲಾ ತರಹದ ತಜ್ಞವೈದ್ಯರಲ್ಲಿ ಹೋಗಿ, ಅವರಿಂದ ಎಲ್ಲಾ ಪರೀಕ್ಷೆಗಳೂ ಸಹಜವೆಂದು ತಿಳಿದು, ಈ ಮನೆದೇವರಲ್ಲಿ ಹೋದರು. ಅಲ್ಲಿರುವಾಗ ಪವಾಡ ಆದಂತೆ ಆಯಿತು. ದೇವರ ಸಾನಿಧ್ಯದಲ್ಲೇ, ಆ ಮಹಿಳೆಯ ಮೇಲೆ ಚಂಡಿ ದೆವ್ವ ಬರಬೇಕೇ? ನಾಲ್ಕು ತಿಂಗಳು ಕಾಲ ಯಾವ ವೈದ್ಯರಿಗೂ ಹೊಳೆಯದ್ದು, ಆ ಚಂಡಿ ದೆವ್ವಕ್ಕೆ ಹೊಳೆಯಿತು.

 

“ತಕ್ಷಣ ಈ ಯಮ್ಮನನ್ನು ಶಿವಮೊಗ್ಗದ ನರ–ವೈದ್ಯರಿಗೆ ತೋರಿಸಿ, ಅದರ ಜೊತೆಗೆ ಈ ಯಮ್ಮನ ಗಂಡ ಇನ್ನೊಬ್ಬ ಹೆಂಗಸಿನ ಸಂಬಂಧ ಮಾಡುವುದು ನಿಲ್ಲಿಸಬೇಕು” ಎಂದು ಹೇಳಿತು. ಎಲ್ಲರೂ ಭಯ ಬಿದ್ದರು. ಗಂಡನೂ ಅಲ್ಲೇ ತಾನು ಅನೈತಿಕ ಸಂಬಂಧ ಇಟ್ಟುಕೊಳ್ಳುವುದಿಲ್ಲವೆಂದು ಪ್ರಮಾಣ ಮಾಡಿದ. ತಕ್ಷಣ ಆ ಮಹಿಳೆಯನ್ನು ನನ್ನ ಬಳಿ ಕರೆತಂದರು.

 

ನಿಧಾನವಾಗಿ ಮಾತನಾಡಿದಾಗ, ಆ ಮಹಿಳೆಗೆ ಇದ್ದುದ್ದು ಗಂಡನ ಅನೈತಿಕ ಸಂಬಂಧದಿಂದ ಆಗಿದ್ದ ಖಿನ್ನತೆ. ಅದರ ಜೊತೆಗೆ ನರಗಳ ದೋಷದಿಂದ, ಮೈಕೈ ನೋವು, ಹಸಿವು ಇಲ್ಲದಿರುವಿಕೆ, ಆತಂಕದಿಂದ ಯಾವಾಗಲೂ ಗಂಟಲಿನಲ್ಲಿ ಏನೋ ಸಿಕ್ಕಿಕೊಂಡ ಅನುಭವ.

 

ಆ ಹೆಂಗಸು ಎಷ್ಟೋ ಬಾರಿ ಮುಂಚೆಯೇ, ತನ್ನನ್ನು ಮನೋವೈದ್ಯರ ಬಳಿ ಕರೆದೊಯ್ಯಿರೆಂದರೆ ಯಾರೂ ಕೇಳಿರಲಿಲ್ಲ. ಗಂಡನ ಅನೈತಿಕ ಸಂಬಂಧ ಬಿಡಿಸುವ ಪ್ರಯತ್ನವೂ ಸಫಲ ಆಗಿರಲಿಲ್ಲ. ಅಂತೂ ಚಂಡಿ ದೆವ್ವದ ಮುಖಾಂತರ ಎಲ್ಲದಕ್ಕೂ ಪರಿಹಾರ ಸಿಕ್ಕಿತೆನ್ನಿ. ಅದಕ್ಕೇ ಪ್ರತೀ ಬಾರಿ ಇಂತಹ ಕತೆಗಳನ್ನು ಕೇಳಿದಾಗ ಈ ದೇವರು–ದೆವ್ವಗಳ ಅಗಾಧ ಜ್ಞಾನದ ಕುರಿತು ಆಶ್ಚರ್ಯವಾಗುತ್ತದೆ.

 

ಈ ದೇವರು–ದೆವ್ವಗಳಿಂದಲೂ ನಮಗೆ ಲಾಭವುಂಟು ಎಂದು ಅರಿತೇ ಗುಜರಾತಿನಲ್ಲಿ ಹೊಸ ಯೋಜನೆಯನ್ನೇ ರೂಪಿಸಲಾಗಿದೆ. ‘ಆಲ್‌ಟ್ರುಯಿಸ್ಟ್’ (Altruist) ಎಂಬ ಸ್ವಯಂಸೇವಕ ಸಂಸ್ಥೆ ‘ದವಾ ಮತ್ತು ದುವಾ’ ಎಂಬ ಯೋಜನೆ ರೂಪಿಸಿದೆ. ಈ ಯೋಜನೆಯಡಿಯಲ್ಲಿ, ಮೊದಲ ಹಂತದಲ್ಲಿ ಎಲ್ಲಾ ಧಾರ್ಮಿಕ ಮುಖಂಡರನ್ನು ಒಟ್ಟುಗೂಡಿಸಿ, ಅವರಿಗೆ ಮನೋರೋಗಗಳನ್ನು ಗುರುತಿಸುವುದರ ಬಗ್ಗೆ ಶಿಕ್ಷಣ ನೀಡಲಾಯಿತು.

 

ನಂತರದಲ್ಲಿ ಆ ದೇವಸ್ಥಾನ–ದರ್ಗಾಗಳಲ್ಲೇ ಮನೋರೋಗಗಳಲ್ಲಿ ತರಬೇತಿ ಹೊಂದಿದ ತಜ್ಞರು, ಮನಶಾಸ್ತ್ರಜ್ಞರು, ಆಪ್ತಸಮಾಲೋಚಕರು ಕ್ಯಾಂಪ್ ಹೂಡಿ, ಅಲ್ಲಿ ಬಂದವರಿಗೆ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಆಸ್ಪತ್ರೆಗೆ ಕಳಿಸಿದರು. ಆ ಸ್ಥಳದ ಪೋಲೀಸ್ ಅಧಿಕಾರಿ, ಮಾಜಿಸ್ಟ್ರೇಟ್‌ಗಳನ್ನು ಒಳಗೊಂಡ ಕಮಿಟಿ ಮಾಡಿ, ಮೇಲ್ವಿಚಾರಣೆ ಅವರಿಗೆ ವಹಿಸಲಾಯಿತು.

 

ಅಹಮದಾಬಾದಿನಲ್ಲಿ ನಡೆದ ಈ ಯೋಜನೆಯ ಯಶಸ್ಸಿನಿಂದ ತಮಿಳುನಾಡಿನ ಯರವಾಡಿ ಮತ್ತು ಹೈದರಾಬಾದಿನ ದರ್ಗಾಗಳಲ್ಲೂ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಒಂದು ವರದಿಯ ಪ್ರಕಾರ – ಕಳೆದ 8 ವರ್ಷಗಳಲ್ಲಿ, ಈ ದರ್ಗಾಗಳಿಗೆ ಪ್ರಾರ್ಥನೆಗೆ ಆಗಮಿಸಿದ್ದ 38,500 ಮನೋರೋಗಿಗಳಿಗೆ ಯಶಸ್ವೀ ಚಿಕಿತ್ಸೆ ನೀಡಲಾಗಿದೆ.

 

ಮನೋವೈದ್ಯರ ದವಾ ಕೆಲಸ ಮಾಡಲು, ಮೈಮೇಲೆ ಬರುವ ದೇವರು ಮತ್ತು ದೆವ್ವಗಳಿಗೂ ನಾವು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಉಪಯುಕ್ತವೇನೋ? ಯಾಕೆಂದರೆ ವೈದ್ಯರ ಮಾತಿಗಿಂತ ದೇವರು–ದೆವ್ವದ ಮಾತಿಗೆ ಹೆಚ್ಚು ಬೆಲೆ ಕೊಡುವ ಜನರಿರುವ ರಾಷ್ಟ್ರ ನಮ್ಮದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry