ನಿಸರ್ಗದ ಸ್ನಾನಶಾಲೆ ‘ಪಮುಕ್ಕಲೆ’

7

ನಿಸರ್ಗದ ಸ್ನಾನಶಾಲೆ ‘ಪಮುಕ್ಕಲೆ’

Published:
Updated:
ನಿಸರ್ಗದ ಸ್ನಾನಶಾಲೆ ‘ಪಮುಕ್ಕಲೆ’

ಟರ್ಕಿಷ್‌ ಭಾಷೆಯಲ್ಲಿ ‘ಪಮುಕ್ಕಲೆ’ ಅಂದರೆ ‘ಹತ್ತಿಯ ಕೋಟೆ’ ಎಂದರ್ಥ. ಟರ್ಕಿ ದೇಶದ ನೈಋತ್ಯದಲ್ಲಿರುವ ಡೆನಿಜ್ಲಿ ಪ್ರಾಂತ್ಯದಲ್ಲಿ ಪಮುಕ್ಕಲೆ ಇದೆ. ಈ ನೈಸರ್ಗಿಕ ತಾಣ ನೋಡಲು ಅಕ್ಷರಶಃ ಹತ್ತಿಯ ಕೋಟೆಯಂತೆಯೇ ಕಾಣುತ್ತದೆ.ಇಲ್ಲಿನ ಬಿಸಿನೀರು ಬುಗ್ಗೆಗಳು ನೂರಾರು ವರ್ಷಗಳಿಂದ ಹರಿಯುತ್ತಾ ತಮ್ಮೊಂದಿಗೆ ತಂದ ಸುಣ್ಣಗಲ್ಲುಗಳಿಂದ ಹಲವಾರು ಕಾರ್ಬೊನೇಟ್ ಖನಿಜಗಳ ತೊಟ್ಟಿಗಳನ್ನು ನಿರ್ಮಿಸಿವೆ. ಈ ತೊಟ್ಟಿಗಳಲ್ಲಿ ಸ್ನಾನ ಮಾಡಲು ಕ್ರಿಸ್ತ ಪೂರ್ವ 2ನೇ ಶತಮಾನದಿಂದಲೂ ಜನರು ಬರುತ್ತಿದ್ದಾರೆ. ಈ ಖನಿಜಯುಕ್ತ ನೀರಿನಲ್ಲಿ ಗ್ರೀಕ್‌, ರೋಮನ್ನರೂ ಮಿಂದಿದ್ದರು.ಚೀನಾ, ಇರಾನ್‌, ಅಮೇರಿಕಾ, ಆಫ್ಘಾನಿಸ್ತಾನ ಮುಂತಾದೆಡೆಯೂ ಬಿಸಿನೀರಿನ ಬುಗ್ಗೆಗಳಿವೆ. ಆದರೆ, ಆ ಬುಗ್ಗೆಗಳನ್ನು ಇಷ್ಟೊಂದು ಸುಂದರವಾಗಿ ಪ್ರಕೃತಿ ರೂಪಿಸಿಲ್ಲ. ಟರ್ಕಿಯಲ್ಲಿ ಹವಾಮಾನವೂ ಉತ್ತಮವಾಗಿರುವ ಕಾರಣ ವರ್ಷಪೂರ್ತಿ ಪ್ರವಾಸಿಗರು ಆಗಮಿಸುತ್ತಾರೆ.

ವಾರ್ಷಿಕ 20 ಲಕ್ಷ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಗ್ರೀಕ್‌–ರೋಮನ್ನರು ಪಮುಕ್ಕಲೆಯ ಮಹತ್ವವನ್ನು ಅರಿತು, ಇಲ್ಲಿಗೆ ಸನಿಹದಲ್ಲಿ ಹೀರಾಪೊಲಿಸ್‌ ಎಂಬ ನಗರವನ್ನು ನಿರ್ಮಿಸಿದ್ದರು.

ಭಾರತೀಯರಿಗೆ ಪಮುಕ್ಕಲೆ ತೀರಾ ಅಪರಿಚಿತವೇನೂ ಅಲ್ಲ. ರಜನೀಕಾಂತ್‌ ನಟನೆಯ ತಮಿಳುಚಿತ್ರ ‘ಚಂದ್ರಮುಖಿ’ ಹಾಗೂ ವೆಂಕಟೇಶ್‌ ನಟನೆಯ ‘ಸಂಕ್ರಾಂತಿ’ ತೆಲುಗು ಸಿನಿಮಾದ ಹಾಡುಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಹಿಂದಿಯ ‘ಅಜಬ್‌ ಪ್ರೇಮ್‌ಕಿ ಗಜಬ್‌ ಕಹಾನಿ’ ಚಿತ್ರದ ಗೀತೆಯೊಂದರ ಚಿತ್ರೀಕರಣವೂ ಇಲ್ಲಿ ನಡೆದಿದೆ.ನೈಸರ್ಗಿಕ ತೊಟ್ಟಿಯಲ್ಲಿ ಮಿಂದು, ಖನಿಜಯುಕ್ತ ನೀರಿನಿಂದ ತೋಯಿಸಿಕೊಳ್ಳಲು ಪ್ರಪಂಚದ ಮೂಲೆ ಮೂಲೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತರೆ. ಔಷಧಿಗುಣವೋ ಸುಖವೋ ಮೋಕ್ಷದ ಹಂಬಲವೋ – ನೀರಿನ ಸೆಳೆತ ಜಗತ್ತಿನ ಎಲ್ಲೆಡೆ ಇದೆ ಎನ್ನುವುದಕ್ಕೆ ಪಮುಕ್ಕಲೆ ಒಂದು ಉದಾಹರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry