ಭಾನುವಾರ, ಮಾರ್ಚ್ 26, 2023
31 °C

ಮಿಂಚಿನ ನೋಟ, ಕೋಲ್ಮಿಂಚಿನ ಚೆಲುವು

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಮಿಂಚಿನ ನೋಟ, ಕೋಲ್ಮಿಂಚಿನ ಚೆಲುವು

ಗಂಧದ ಮೈಬಣ್ಣದ ಈ ಚೆಲುವೆಯ ತುಟಿಬಟ್ಟಲಿನಿಂದ ತುಳುಕುವ ನಗೆಯ ಸೊಗಸಿಗಿಂತಲೂ ನಮ್ಮನ್ನು ಹೆಚ್ಚಾಗಿ ಆಕರ್ಷಿಸುವುದು ಕಣ್ಣುಗಳು. ಕಂಗಳಲ್ಲೇ ನೂರು ಭಾವಗಳನ್ನು ಅಭಿವ್ಯಕ್ತಿಗೊಳಿಸುವ ಈಕೆ ‘ಮಿಸ್‌ ಬ್ಯೂಟಿಫುಲ್‌ ಐಸ್‌’ ಕಿರೀಟದ ಒಡತಿಯೂ ಹೌದು.

 

ಮಾಡೆಲಿಂಗ್‌ ನಂಟನ್ನೇ ಚಿಮ್ಮು ಹಲಗೆಯಾಗಿಸಿಕೊಂಡು ‘ಕೋಸ್ಟಲ್‌ವುಡ್‌’ ಪ್ರವೇಶಿಸಿರುವ ಸ್ವಾತಿ ಬಂಗೇರಾ ತುಳು ಚಿತ್ರರಂಗದ ಹೊಸ ಫಸಲು.

 

ಅಂದಹಾಗೆ, ಗ್ಲ್ಯಾಮರ್‌ ಹಾಗೂ ಟ್ರೆಡೀಷನಲ್‌ ಪಾತ್ರಗಳೆರಡಕ್ಕೂ ಜೀವ ತುಂಬುವ ಚೆಲುವು ಹೊಂದಿರುವ ಸ್ವಾತಿ ಅಭಿನಯದ ಮೊದಲ ಚಿತ್ರ ‘ರಂಗ್‌ ರಂಗ್‌ದ ದಿಬ್ಬಣ’. ಚೊಚ್ಚಿಲ ಚಿತ್ರದ ಬಗ್ಗೆ ಅಪಾರ ಕನಸುಗಳನ್ನು ಕಟ್ಟಿಕೊಂಡಿರುವ ಸ್ವಾತಿ ‘ರಂಗ್‌ ರಂಗ್‌ದ ದಿಬ್ಬಣ’ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗೆ, ತಮ್ಮ ಸೌಂದರ್ಯದ ಗುಟ್ಟು ಹಾಗೂ ನೆಚ್ಚಿನ ಹವ್ಯಾಸ ಕುರಿತು ಮಾಹಿತಿ ಹಂಚಿ ಕೊಂಡಿದ್ದಾರೆ. 

 

* ನಮಸ್ತೆ ಸ್ವಾತಿ, ನಿಮ್ಮ ಪರಿಚಯ ಹೇಳಿ? 

ನಾನು ಹುಟ್ಟಿದ್ದು ಭದ್ರಾವತಿಯಲ್ಲಿ. ಬೆಳೆದಿದ್ದು ಓದಿದ್ದು ಉಡುಪಿಯಲ್ಲಿ. ಸದ್ಯಕ್ಕೆ ಮಾಡೆಲಿಂಗ್‌ ಮತ್ತು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೇನೆ.

 

*‘ರಂಗ್‌ ರಂಗ್‌ದ ದಿಬ್ಬಣ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ? 

ಪದವಿ ವ್ಯಾಸಂಗದ ದಿನಗಳಿಂದಲೂ ಮಾಡೆಲಿಂಗ್ ಮಾಡುತ್ತಿದ್ದೆ. ಬಿಗ್‌ಬಜಾರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಧರ್ಮಸ್ಥಳದ ಸಿರಿ ಬ್ರ್ಯಾಂಡ್‌ ಹಾಗೂ ಬೆಂಗಳೂರಿನ ಕೆಲವು ಬ್ರ್ಯಾಂಡ್‌ಗಳಿಗೆ ರ್‍ಯಾಂಪ್‌ವಾಕ್ ಮಾಡಿದ್ದೇನೆ. ಈ ನಡುವೆ ರ್‌್ಯಾಂಪ್‌ನಲ್ಲಿ ನನ್ನನ್ನು ನೋಡಿದ ನಿರ್ದೇಶಕರೊಬ್ಬರಿಂದ ಕರೆ ಬಂತು. ಆಡಿಷನ್‌ನಲ್ಲಿ ಪಾಲ್ಗೊಂಡೆ. ‘ರಂಗ್‌ ರಂಗ್‌ದ ದಿಬ್ಬಣ’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾದೆ.

 

* ಮೊದಲ ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು? 

ಮಾಡೆಲಿಂಗ್ ಬಿಟ್ಟರೆ ನನಗೆ ಅಭಿನಯಿಸಿದ ಅನುಭವ ಇಲ್ಲ. ಇಡೀ ಚಿತ್ರತಂಡ ನನಗೆ ಸ್ಫೂರ್ತಿ ತುಂಬಿತು. ಸಹಾಯಕ ನಿರ್ದೇಶಕರಾದ ರಂಜಿತ್ ಸುವರ್ಣ ಮತ್ತು ಕಿಶೋರ್ ಮೂಡುಬಿದ್ರೆ ಅವರನ್ನು ನೆನೆಯಬೇಕು. ನನ್ನ ನಟನೆಯನ್ನು ತಿದ್ದಿ ತೀಡಿದವರಲ್ಲಿ  ಪ್ರಮುಖರು.

 

* ನೀವು ಗುರುತಿಸಿದಂತೆ, ಮಾಡೆಲಿಂಗ್‌ಗೂ– ಸಿನಿಮಾಕ್ಕೂ ಇವರು ವ್ಯತ್ಯಾಸ ಏನು?

ಮಾಡೆಲಿಂಗ್‌ನಲ್ಲಿ ನಾವು ಒಂದು ಬ್ರ್ಯಾಂಡ್‌ಗಾಗಿ ರ್‍ಯಾಂಪ್‌ವಾಕ್ ಮಾಡುತ್ತೇವೆ. ವಸ್ತ್ರ, ಆಭರಣಗಳನ್ನು ಬ್ರ್ಯಾಂಡಿಂಗ್‌ ಮಾಡುವಾಗ ನಡು ಬಳುಕಿಸುತ್ತಾ ಕ್ಯಾಟ್‌ವಾಕ್‌ ಮಾಡಿ ಕೊನೆಗೆ ರ್‌್ಯಾಂಪ್‌ನ ತುದಿಯಲ್ಲಿ ನಿಂತು ಆತ್ಮವಿಶ್ವಾಸದಿಂದ ಎದೆಯುಬ್ಬಿಸಿ ಫೋಸು ಕೊಡುತ್ತೇವೆ. ರ್‌್ಯಾಂಪ್‌ ಮೇಲೆ ನಿಂತು ಎಲ್ಲರನ್ನು ಆಕರ್ಷಿಸುವುದಕ್ಕೆ ನಮ್ಮ ಕಣ್ಣುಗಳಲ್ಲಿ ಒಂದು ಮಿಂಚಿನ ನೋಟ, ಕೋಲ್ಮಿಂಚಿನಂತಹ ಚೆಲುವು ಇದ್ದರೆ ಸಾಕು. ಆದರೆ, ಸಿನಿಮಾದ ಗ್ರಾಮರ್‌ ಇದಕ್ಕಿಂತ ಭಿನ್ನ. ಫಿಲ್ಮ್‌ ಇಂಡಸ್ಟ್ರಿ ಗ್ಲ್ಯಾಮರ್‌ ಜತೆಗೆ ಅಭಿನಯವನ್ನೂ ಬೇಡುವ ಉದ್ಯಮ. ಅಭಿನಯದ ಬಗ್ಗೆ ತಿಳಿದುಕೊಂಡಿರಬೇಕು.

 

* ನೋಡಲಿಕ್ಕೆ ತುಂಬ ಅಂದವಾಗಿದ್ದೀರಿ. ನಿಮ್ಮ ಸೌಂದರ್ಯದ ಗುಟ್ಟೇನು? ಫಿಟ್‌ನೆಸ್‌ಗಾಗಿ ಏನೆಲ್ಲಾ ಮಾಡುತ್ತೀರಿ?

ಥ್ಯಾಂಕ್ಯೂ, ಗುಟ್ಟೇನೂ ಇಲ್ಲ. ಉತ್ತಮ ಜೀವನಶೈಲಿ ರೂಢಿಸಿಕೊಂಡಿದ್ದೇನೆ ಅಷ್ಟೇ. ಪ್ರತಿದಿನ ಬೆಳಿಗ್ಗೆ ತಪ್ಪದೇ ವಾಕ್‌ ಮಾಡುತ್ತೇನೆ. ಎದ್ದ ತಕ್ಷಣ ಒಂದು ಲೋಟ ಬಿಸಿನೀರಿಗೆ ಜೇನು, ನಿಂಬೆ ಹಣ್ಣಿನ ರಸ ಹಾಕಿಕೊಂಡು ಕುಡಿಯುತ್ತೇನೆ. ಮನೆಯಲ್ಲೇ ಮಿನಿ ಜಿಮ್ ಇದೆ. ಅಲ್ಲಿ ಸೈಕ್ಲಿಂಗ್ ಮಾಡುತ್ತೇನೆ. ಆಗಾಗ, ಯೋಗ ಕೂಡ ಮಾಡುತ್ತೇನೆ.

 

* ಸಿನಿಮಾ ಬಿಟ್ಟು ಇತರೆ ಹವ್ಯಾಸ?

ಫೋಟೊಗ್ರಫಿ ಅಂದರೆ ತುಂಬ ಇಷ್ಟ. ಫ್ಯಾಷನ್ ಫೋಟೊಗ್ರಫಿಗೆ ಸಂಬಂಧಪಟ್ಟಂತೆ ನನ್ನದೊಂದು ಫೇಸ್‌ಬುಕ್ ಪೇಜ್ ಕೂಡ ಇದೆ. ನಾನು ಕ್ಲಿಕ್ಕಿಸಿದ ಚಿತ್ರಗಳೆಲ್ಲವನ್ನೂ ಅದರಲ್ಲಿ ಅಪ್‌ ಲೋಡ್ ಮಾಡುತ್ತೇನೆ. ಉಳಿದಂತೆ ಸಂಗೀತ ಕೇಳುವುದು, ಪ್ರಾಣಿಗಳನ್ನು ಸಾಕುವುದು ಅಂದರೆ ತುಂಬ ಇಷ್ಟ.

ಸ್ವಾತಿ ಬಂಗೇರಾ ಫೇಸ್‌ಬುಕ್‌ ಪುಟ

facebook.com/swathi.bangera

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.