ವಜಿರೋದ್ದಿನ್‌ಸಾಬ್‌ ಹೊಲದಲ್ಲಿ ನೀರು ಬ್ಯಾಂಕ್!

7

ವಜಿರೋದ್ದಿನ್‌ಸಾಬ್‌ ಹೊಲದಲ್ಲಿ ನೀರು ಬ್ಯಾಂಕ್!

Published:
Updated:
ವಜಿರೋದ್ದಿನ್‌ಸಾಬ್‌ ಹೊಲದಲ್ಲಿ ನೀರು ಬ್ಯಾಂಕ್!

ಜನವಾಡ: ಬೀದರ್ ತಾಲ್ಲೂಕಿನ ಮಲ್ಕಾಪುರದ ಪ್ರಗತಿಪರ ರೈತ ಮಹಮ್ಮದ್‌ ವಜಿರೋದ್ದಿನ್‌ಸಾಬ್‌ ನೀರಿಗಾಗಿ ತಮ್ಮ ಹೊಲದಲ್ಲಿ 44 ಕೊಳವೆಬಾವಿಗಳನ್ನು ಕೊರೆಸಿ ಕೊನೆಗೆ ಸಾಂಪ್ರದಾಯಿಕ ವಿಧಾನದಲ್ಲೇ ಜಲ ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಲದಲ್ಲಿ ನೀರು ಬ್ಯಾಂಕ್‌ ಸ್ಥಾಪನೆ ಮಾಡಿ ಅಗತ್ಯಕ್ಕೆ ಅನುಗುಣವಾಗಿ ನೀರು ಪಡೆಯುತ್ತಿದ್ದಾರೆ. ಈ ಮೂಲಕ ನೀರು ಉಳಿಸಿಕೊಳ್ಳುವ ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರಯತ್ನ ನಡೆಸಿದ್ದಾರೆ. ಗುಡ್ಡದ ಇಳಿಜಾರು ಪ್ರದೇಶದಲ್ಲಿ ಜಮೀನು ಇರುವುದರಿಂದ ಹೊಲದಲ್ಲಿ ಕೊಂಚವೂ ನೀರು ನಿಲ್ಲುತ್ತಿರಲಿಲ್ಲ.

ಬೆಳೆ ಒಣಗಲು ಆರಂಭವಾದಾಗ ಕೊಳವೆಬಾವಿ ಕೊರೆಸುತ್ತಿದ್ದರು. ಹೊಲದಲ್ಲಿ ಕೊರೆದ ಕೊಳವೆಬಾವಿಗಳ ಸಂಖ್ಯೆ 44ಕ್ಕೆ ಏರಿತು. ಬಹುತೇಕ ಕೊಳವೆಬಾವಿಗಳು ಬತ್ತಿದವು. 15 ಕೊಳವೆಬಾವಿಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರಿದೆ.

ಕೊಳವೆಬಾವಿಯಿಂದ ಹೆಚ್ಚು ಪ್ರಯೋಜನ ಆಗಲಾರದು ಎನ್ನುವುದು ಮನವರಿಕೆ ಆದಾಗ ಹೊಲದಲ್ಲಿ ದೊಡ್ಡ ಬಾವಿ ತೋಡಿಸಿದರು. ಹೊಲದ ಪಕ್ಕದಲ್ಲಿಯೇ ಇನ್ನೊಂದು ಹೊಂಡ ತೆಗೆದು ಅದಕ್ಕೆ ಒಡ್ಡು ಹಾಕಿಸಿದರು. ಕಳೆದ ಬಾರಿ ಚೆನ್ನಾಗಿ ಮಳೆ ಬಂದು ಬಾವಿಯಲ್ಲಿ  ಹಾಗೂ ಹೊಂಡದಲ್ಲಿ  ಬೇಸಿಗೆಯಲ್ಲೂ ನೀರು ನಿಂತಿದೆ.

ಏಪ್ರಿಲ್ ಹಾಗೂ ಮೇ ನಲ್ಲಿ ಬಳಸಲೆಂದೇ ತೋಟಗಾರಿಕೆ ಇಲಾಖೆಯ ನೆರವಿನಿಂದ ಬೃಹತ್ ಕೃಷಿಹೊಂಡ ನಿರ್ಮಿಸಿದ್ದಾರೆ. ಕೆಳಗಡೆ ಪ್ಲಾಸ್ಟಿಕ್‌ ಹಾಳೆ ಹಾಕಿ ನೀರು ಸಂಗ್ರಹಿಸಿರುವುದರಿಂದ ಅಗತ್ಯವಿರುವಾಗ ನೀರು ಪಡೆಯಲು ಸಾಧ್ಯ.

‘ನೀರು ಬಹಳ ಅಮೂಲ್ಯವಾದದ್ದು. ಅದನ್ನು ಹಿತಮಿತವಾಗಿ ಬಳಸಬೇಕು. ನಾನು ನೀರು ಸಂಗ್ರಹಿಸಲು ತೆರೆದಬಾವಿ, ಕೊಳವೆಬಾವಿ ಹಾಗೂ ಕೃಷಿ ಹೊಂಡಗಳನ್ನು ಬಳಸಿಕೊಂಡಿದ್ದೇನೆ. ಈಗ ನನ್ನ ಬಳಿ 2 ಕೋಟಿ ಲೀಟರ್ ನೀರು ಸಂಗ್ರಹವಿದೆ. ಮೇ ತಿಂಗಳಲ್ಲಿ ನೀರಿನ ಅಭಾವ ಎದುರಾದರೆ ಮಾತ್ರ ಬಳಸಿಕೊಳ್ಳುತ್ತೇನೆ’ ಎನ್ನುತ್ತಾರೆ ಮಹಮ್ಮದ್‌.

‘ಹೊಲದಲ್ಲಿರುವ 15 ಕೊಳವೆಬಾವಿಗಳಲ್ಲಿ ಒಂದು ಇಂಚು ನೀರಿದೆ. ನೀರು ಪೋಲು ಮಾಡಿಲ್ಲ. ದ್ರಾಕ್ಷಿ, ದಾಳಿಂಬೆ ಬೆಳೆಗೆ ಹನಿ ನೀರಾವರಿ ಮೂಲಕ ನೀರು ಕೊಡುತ್ತಿದ್ದೇನೆ. ಮಿತವಾಗಿ ಬಳಸುತ್ತಿರುವ ಕಾರಣ ನೀರಿನ ಅಭಾವ ಆಗಿಲ್ಲ. ಉತ್ತಮ ಬೆಳೆ ಬೆಳೆದು ಆದಾಯ ಪಡೆಯಲು ಸಾಧ್ಯವಾಗಿದೆ. ಈ ವರ್ಷ ನನ್ನ ಹೊಲದಲ್ಲಿ 200 ಟನ್‌ ದ್ರಾಕ್ಷಿ ಬೆಳೆದಿದ್ದೇನೆ. ದಾಳಿಂಬೆ ಬೆಳೆಯೂ ಉತ್ತಮ ರೀತಿಯಲ್ಲಿ ಬೆಳೆದಿದೆ’ ಎಂದು ಖುಷಿಯಿಂದ ವಿವರಿಸುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry