‘ಆಕಾಶಗಂಗೆ’ಗೆ ಬೊಗಸೆಯೊಡ್ಡಿ ಗೆದ್ದವರು...

7

‘ಆಕಾಶಗಂಗೆ’ಗೆ ಬೊಗಸೆಯೊಡ್ಡಿ ಗೆದ್ದವರು...

Published:
Updated:
‘ಆಕಾಶಗಂಗೆ’ಗೆ ಬೊಗಸೆಯೊಡ್ಡಿ ಗೆದ್ದವರು...

ಕುಷ್ಟಗಿ: ‘ಬಾಯಾರಿದಾಗ ಕುಡಿಯಲು ಕೊಡಪಾನದಲ್ಲಿ ನೀರು ತುಂಬಿ ಇಟ್ಟಂಗಾಗೇತ್ರಿ’  ಬರದ ಭೀಕರತೆಯ ನಡುವೆಯೂ ಇತ್ತೀಚಿನ ಒಂದೇ ಮಳೆಗೆ ಕೃಷಿಭಾಗ್ಯ ಯೋಜನೆಯಲ್ಲಿನ ಹೊಂಡಗಳು ತುಂಬಿರುವುದಕ್ಕೆ ತಾಲ್ಲೂಕಿನ ದೊಣ್ಣೆಗುಡ್ಡ ಗ್ರಾಮದ ರೈತ ಕಳಕಯ್ಯ ಹಿರೇಮಠ ತಮ್ಮ ಸಂತೋಷವನ್ನು ಹಂಚಿಕೊಂಡದ್ದು ಹೀಗೆ.

ಗುಬ್ಬಚ್ಚಿ ಕುಡಿಯುವುದಕ್ಕೂ ಹನಿ ನೀರು ದೊರಕದ ಎರೆ ಜಮೀನಿನಲ್ಲಿ ಈಗ ನಿರ್ಮಾಣಗೊಂಡಿರುವ ನೂರಾರು ಕೃಷಿ ಹೊಂಡಗಳು ಇಲ್ಲಿನ ರೈತರಲ್ಲಿ ಸಂತಸ ಮೂಡಿಸಿವೆ.

ಕೃಷಿ ಇಲಾಖೆ ಕೃಷಿಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿ ಸಿದ್ದರಿಂದ  ಸಾವಿರ ಅಡಿ ಕೊರೆದರೂ ತೇವ ಸಹ ದೊರಕದ ಪ್ರದೇಶದಲ್ಲಿ ನೀರಿನಿಂದ ಭರ್ತಿಯಾಗಿರುವ ಕೃಷಿ ಹೊಂಡಗಳು ಕಾಣುತ್ತಿವೆ.

‘ಕೊಳವೆ ಬಾವಿ ಕೊರೆದರೆ ಹನಿ ನೀರು ಬರುವುದಿಲ್ಲ ಆದರೆ, ಬೊಗಸೆಯೊಡ್ಡಿದಂತೆ ಈ ರೀತಿ ಹೊಂಡಗಳನ್ನು ನಿರ್ಮಿಸಿಕೊಂಡರೆ ಆಕಾಶ ಗಂಗೆ ಮೋಸ ಮಾಡಂಗಿಲ್ರಿ’ ಎಂಬ ಅನುಭವದ ಮಾತು ಕೆ.ಗೋನಾಳ ಗ್ರಾಮದ ಹನುಮಪ್ಪ ಅವರದು.

ನಿರುತ್ಸಾಹ:  2014ರಲ್ಲಿ ಕೃಷಿಭಾಗ್ಯ ಯೋಜನೆ ಆರಂಭಗೊಂಡಾಗ ರೈತರು ಉತ್ಸಾಹ ತೋರಲಿಲ್ಲ. ಆದರೆ, ಕೃಷಿಹೊಂಡದ ಪ್ರತಿಫಲದ ಅರಿವಾಗುತ್ತಿದ್ದಂತೆ ಬೇಡಿಕೆ ಹೆಚ್ಚುತ್ತಿದೆ. ಮೂರು ವರ್ಷಗಳಲ್ಲಿ ಈ ತಾಲ್ಲೂಕಿನಲ್ಲಿ ಕೇವಲ 643 ಕೃಷಿಹೊಂಡಗಳು ನಿರ್ಮಾಣಗೊಂಡರೆ 2016–17ನೇ ವರ್ಷದ ಫೆಬ್ರುವರಿ– ಏಪ್ರಿಲ್‌ ಅವಧಿಯಲ್ಲಿ 791 ಹೊಂಡಗಳು ನಿರ್ಮಾಣವಾಗಿವೆ. ಈ ವರ್ಷ ಸುಮಾರು 3 ಸಾವಿರ ರೈತರು ಕೃಷಿಹೊಂಡಕ್ಕೆ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಯೋಜನ ಹೀಗೆ: ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ಮಳೆ ಕೈಕೊಟ್ಟಾಗ ಬೆಳೆ ಒಣಗಿ ಹಾಳಾಗುವುದು ಸಾಮಾನ್ಯ. ಆಗಾಗ್ಗೆ ಮಳೆ ಬಂದರೂ ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗುತ್ತದೆ. ಬೆಳೆಗಳು ಬಾಡುವ ಹಂತ ತಲುಪಿದಾಗ ಎರೆ ಮತ್ತು ಮಸಾರಿ ಜಮೀನಿನ ರೈತರು ಕೃಷಿ ಇಲಾಖೆ ನೀಡಿದ ಡೀಸೆಲ್‌ ಎಂಜಿನ್‌ ಪಂಪ್‌ ಬಳಸಿಕೊಂಡು ಕನಿಷ್ಠ ಎರಡು ಬಾರಿ ನೀರು ಹನಿಸಿ ಬೆಳೆಗಳನ್ನು ಬದುಕಿಸಿಕೊಳ್ಳುವ ಮೂಲಕ ಬದುಕುವ ದಾರಿ ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ ಮೇಲ್ಮಣ್ಣು ಕೊಚ್ಚಿಹೋಗುವುದಿಲ್ಲದಿ ರುವು ಕೃಷಿಹೊಂಡಗಳು ಅಂತರ್ಜಲ ಹೆಚ್ಚಳಕ್ಕೆ ಸಹ ಕಾರಣವಾಗಿವೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ.

**

ಬೇಸಿಗೆ ಬೆಳೆ

ಅಡವಿಯೊಳಗ ಕುಡಿಯಲು ಒಂದು ಕೊಡ ನೀರು ಸಿಗಂಗಿಲ್ಲ, ಕೃಷಿಹೊಂಡ ದಲ್ಲಿನ ಮಳೆ ನೀರಿನಿಂದಲೇ ಅದು ಬೇಸಿಗೆಯಲ್ಲಿ ಒಂದು ಎಕರೆಯಲ್ಲಿ ಗೋಧಿ ಬೆಳೆದಿರುವೇ. ದನಗಳಿಗೆ ಹೊಟ್ಟು ಸಿಕ್ಕಿದೆ. ವರ್ಷದಲ್ಲಿ ಕನಿಷ್ಠ ಎರಡು ಮೂರು ಎಕರೆಯಲ್ಲಿ ಎರಡು ಬೆಳೆ ಬೆಳೆಯಬಹದು ಎನ್ನುತ್ತಾರೆ ಕಾಟಾಪುರ ಗ್ರಾಮದ ರೈತ ಶಿವಾನಂದ ಸಜ್ಜನ.

ಹೆಚ್ಚಿದ ಉತ್ಸಾಹ

ಈ ವರ್ಷ ಹೊಂಡದ ನೀರಿನಲ್ಲಿಯೇ 31 ಕ್ವಿಂಟಲ್‌ ಜೋಳ, 15 ಕ್ವಿಂಟಲ್‌ ಕಡಲೆ ಬೆಳೆಯಲಾಗಿದೆ. ಇದನ್ನು ಕಂಡು ಉಳಿದ ರೈತರೂ ಕೃಷಿಹೊಂಡ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುತ್ತಾರೆ ಟೆಂಗುಂಟಿ ಗ್ರಾಮದ ಅಲ್ಲಾಸಾಬ್‌ ನದಾಫ್‌.

**

ಮಸಾರಿ ಜಮೀನಿನಲ್ಲಿ ಹೊಂಡ ನಿರ್ಮಿಸಿಕೊಂಡರೆ. ಹಂತ ಹಂತವಾಗಿ ಬೆಳೆಗಳಿಗೆ ನೀರು ಕೊಡಬಹುದು

-ವೀರಣ್ಣ ಕಮತರ

ಸಹಾಯಕ ಕೃಷಿ ನಿರ್ದೇಶಕ

*

-ನಾರಾಯಣರಾವ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry