ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

7

ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

Published:
Updated:
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ಒಂಟಿ ಕಾಲಿನ ನಡಿಗೆ

ಲೇ:
ಡಾ. ಎಲ್. ಹನುಮಂತಯ್ಯ

ಪ್ರ: ಚಾರುಮತಿ ಪ್ರಕಾಶನ, ನಂ. 224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು– 18

**

ನಾನು ಪದವಿಯಲ್ಲಿರುವಾಗಲೇ ನಾಟಕ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದುದರಿಂದ ಅನೇಕರ ಪರಿಚಯವಾಗಿತ್ತು. ಪರಿಚಯದಿಂದ, ನಮ್ಮ ವೈಚಾರಿಕ ಚಳವಳಿಗಳಿಂದ, ನಮ್ಮ ವಾದಸರಣಿಗೆ ಬೇರೆಯ ದಿಕ್ಕು ಲಭಿಸಿತ್ತು. ಲೋಕ ಯೋಚಿಸುವ ರೀತಿ ಒಂದಾದರೆ, ಅದಕ್ಕೆ ತದ್ವಿರುದ್ಧವಾಗಿ ಚಿಂತಿಸುವ ಯೋಚನಾಲಹರಿ ನಮ್ಮನ್ನು ವಿಶೇಷ ವ್ಯಕ್ತಿಗಳನ್ನಾಗಿ ಮಾಡಿತ್ತು. ಇದರಿಂದ ನಮ್ಮನ್ನು ಇಷ್ಟಪಡುವ ಸ್ನೇಹಿತರು ಮತ್ತವರ ಕುಟುಂಬಗಳ ಪರಿಚಯವಾಯಿತು. ನಾನವರ ಮನೆಗೆ ಆಗಾಗ್ಗೆ ಹೋಗಿಬರುತ್ತಿದ್ದೆ. ಹೋದಾಗಲೆಲ್ಲ ನಮ್ಮ ಮಾತುಕತೆ ಲೋಕಾಭಿರಾಮವಾಗಿರದೆ ವಿಶಿಷ್ಟ ವಿಷಯಗಳ ಕುರಿತೇ ಇರುತ್ತಿತ್ತು. ಅದರಲ್ಲಿ ಒಂದು ಬ್ರಾಹ್ಮಣ ಕುಟುಂಬಕ್ಕೆ ನಾನು ತುಂಬಾ ಹತ್ತಿರದವನಾದೆ. ದಲಿತನ ಸ್ನೇಹದಿಂದ ಅವರಿಗೆಷ್ಟು ಪ್ರಯೋಜನವಾಯಿತೋ ನನಗೆ ಮಾತ್ರ ಅವರ ಸಹವಾಸದಿಂದ ಅನೇಕ ಹೊಸ ಸಂಗತಿಗಳು ತಿಳಿದವು. ನಾವು ಅಂದರೆ ದಲಿತ ಸಮುದಾಯ ಯೋಚಿಸುವ ಅನೇಕ ವಿಚಾರಗಳು ಬ್ರಾಹ್ಮಣರು ಚಿಂತಿಸುವ, ಅವರ ಮನೆಯಲ್ಲಿ ನಡೆದುಕೊಳ್ಳುವ ನಡವಳಿಕೆಗಳಿಗಿಂತ ತುಂಬಾ ವಿಭಿನ್ನವಾಗಿದ್ದವು. ಹೀಗೂ ಇರಲು ಸಾಧ್ಯವೇ ಎಂದು ನಾನು ಯೋಚಿಸುವಂತಾಯಿತು. ಬ್ರಾಹ್ಮಣರು ಮಡಿವಂತರೆಂದು ತಿಳಿದಿದ್ದ ನಾನು, ಉದಾರವಾದಿ ಬ್ರಾಹ್ಮಣ ಕುಟುಂಬ ನೋಡಿ ಆಶ್ಚರ್ಯಚಕಿತನಾಗಿದ್ದೆನು.

ಇಡೀ ಕುಟುಂಬ ತುಂಬ ವೈಚಾರಿಕವಾಗಿ ಚಿಂತಿಸುವ, ಹಾಗೆಯೇ ನಡೆದುಕೊಳ್ಳುವ ರೀತಿ ನನಗೆ ಇಷ್ಟವಾಯಿತು. ಯಾರನ್ನೂ ಜಾತಿಯ ಹಿನ್ನೆಲೆಯಿಂದ ನೋಡದ ಅವರು ಭಿನ್ನರಾಗಿದ್ದರು. ಮೂರು ಜನ ಹೆಣ್ಣುಮಕ್ಕಳು, ಒಬ್ಬ ಗಂಡು ಮಗನಿದ್ದ ಕುಟುಂಬದ ಹಿರಿಯರು ಕೂಡ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿ ಬಂದಿರಲಿಲ್ಲ. ತಮ್ಮ ಮಕ್ಕಳಿಗೆ ಶಕ್ತ್ಯಾನುಸಾರ ಶಿಕ್ಷಣ ಕೊಡಿಸುತ್ತಿದ್ದರು. ಮೊದಲನೆ ಮಗಳು ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಉಳಿದವರು ವಿವಿಧ ತರಗತಿಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದರು. ಈ ನಡುವೆ ನಾನು ನನ್ನ ಪದವಿ ಮುಗಿಸಿ ಬ್ಯಾಂಕ್‌ ಉದ್ಯೋಗಕ್ಕೆ ಸೇರಿದ್ದೆ. ಅಲ್ಲಿ ಕೂಡ ಬಹುತೇಕ ಬ್ರಾಹ್ಮಣರೇ ಇದ್ದುದರಿಂದ ನನ್ನ ಒಡನಾಟ ಬ್ರಾಹ್ಮಣರ ಜೊತೆಗೆ ಹೆಚ್ಚಾಗಿದ್ದುದು ನನ್ನ ದೃಷ್ಟಿಕೋನವನ್ನು ಬದಲಿಸಿತು ಎನ್ನಬೇಕು. ನಾನು ಬ್ರಾಹ್ಮಣ ಕುಟುಂಬದ ಜೊತೆಗೆ ನಿಕಟ ಸಂಪರ್ಕಕ್ಕೆ ಬಂದ ಮೇಲೆ ಇಡೀ ಕುಟುಂಬ ನನ್ನನ್ನು ಪ್ರೀತಿ–ವಿಶ್ವಾಸಗಳಿಂದ ನೋಡಿಕೊಳ್ಳುತ್ತಿತ್ತು. ನಾನು ಕೂಡ ಅವರ ಗೆಳೆತನಕ್ಕೆ ದ್ರೋಹ ಬಗೆದಿರಲಿಲ್ಲ. ನಮ್ಮ ಚರ್ಚೆ ಹಳ್ಳಿಯ, ರಾಜ್ಯದ–ದೇಶದ ವಿದ್ಯಮಾನಗಳನ್ನು ಕುರಿತದ್ದಾಗಿರುತ್ತಿತ್ತು. ಬಡವರ ಬದುಕೆಷ್ಟು ದುಸ್ತರವಾಗಿದೆ ಎಂದು ಚರ್ಚಿಸಿ ಕಮ್ಯುನಿಸ್‌್ಟ ಸಿದ್ಧಾಂತ ಮಾತ್ರ ಪರಿಹಾರವೆಂಬ ತೀರ್ಮಾನಕ್ಕೆ ಬಂದರೂ ಅನುಮಾನಗಳನ್ನೂ ಚರ್ಚಿಸುತ್ತಿದ್ದೆವು.

ಆಗ ಕಮ್ಯುನಿಸ್ಟ್‌ ಪಕ್ಷದ ನಾಯಕತ್ವ ಬ್ರಾಹ್ಮಣರ ಕೈಯಲ್ಲಿರುವುದರಿಂದಲೇ ಜಾತಿ ತಾರತಮ್ಯ, ಅದರ ಕಾರಣದಿಂದ ನಡೆಯುವ ಶೋಷಣೆ ಕಮ್ಯುನಿಸ್ಟರಿಗೆ ಕಾಣುವುದಿಲ್ಲವೆಂದೂ ಚರ್ಚಿಸುತ್ತಿದ್ದೆವು. ಈ ಚರ್ಚೆಯಿಂದ ಸ್ವಲ್ಪ ಮುಜುಗರ ಅನುಭವಿಸುತ್ತಿದ್ದ ಅವರು ತೀರ ಅಸಹನೆ ವ್ಯಕ್ತಮಾಡುತ್ತಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಮಾತು, ನಡೆ, ಹೋರಾಟಗಳೂ ಮಾತಿನ ನಡುವೆ ಬಂದುಹೋಗುತ್ತಿದ್ದವು. ಒಮ್ಮೆ ಎಂಡಿಎನ್‌ ಅವರಿಗೆ ಗೆಳೆಯರೊಬ್ಬರನ್ನು ಪರಿಚಯಿಸುತ್ತಾ, ‘ಇವರು ಕ್ರಾಂತಿಕಾರಿ ಬ್ರಾಹ್ಮಣ. ಜನಿವಾರವನ್ನು ಕಿತ್ತೆಸೆದು ಬಂದವರು. ಇಂಥವರನ್ನೂ ಅನುಮಾನಿಸಿದರೆ ಹೇಗೆ?’ ಎಂದು ಕೇಳಿದರಂತೆ. ಅದಕ್ಕೆ ಪ್ರೊ. ಎಂಡಿಎನ್‌ – ‘ಜಾತೀಯತೆ ಇರುವುದು ಜನಿವಾರದಲ್ಲಲ್ಲ. ಒಂದು ಬ್ಲೇಡ್‌ ತಾ ತೋರಿಸುತ್ತೇನೆ’ ಎಂದರಂತೆ. ‘ಅದು ಹೇಗೆ?’ ಎಂದು ಕೇಳಿದವರಿಗೆ ಬ್ಲೇಡಿನಿಂದ ಕುಯ್ದು – ‘ದೇಹದಿಂದ ಬರುವ ರಕ್ತದೊಳಗೆ ಜಾತಿ ಇರುವುದು, ಜನಿವಾರ, ಶಿವದಾರದಲ್ಲಲ್ಲ’ ಎಂದು ಹೇಳಿದರಂತೆ. ಕಮ್ಯುನಿಸ್ಟರನ್ನೂ ಬ್ರಾಹ್ಮಣರನ್ನೂ ಏಕಕಾಲಕ್ಕೆ ವಿರೋಧಿಸುತ್ತಿದ್ದ ಲೋಹಿಯಾವಾದಿಯಾದ ಪ್ರೊ. ಎಂಡಿಎನ್‌ ಅವರ ಜಾತಿ ಕುರಿತ ವ್ಯಾಖ್ಯಾನ ಇದಾಗಿತ್ತು.

ಇಂತಹ ಚರ್ಚೆಗಳು ಬಂದಾಗಲೂ ತಮ್ಮ ತಣ್ಣನೆ ಅಭಿಪ್ರಾಯವನ್ನು ಆರೋಗ್ಯಪೂರ್ಣವಾಗಿ ಚರ್ಚಿಸುತ್ತಿದ್ದ ಕುಟುಂಬವಾದ್ದರಿಂದ, ಎಂದೂ ಜಾತೀಯತೆ ಪಾಲಿಸದ ಅವರು ನನಗೆ ತುಂಬಾ ಇಷ್ಟವಾಗಿದ್ದರು. ಅತಿಯಾದ ಆತ್ಮೀಯತೆಯೂ ಬೆಳೆಯಿತು. ಇದರಿಂದ ನಮ್ಮ ಸಲುಗೆಯೂ ಹೆಚ್ಚಾಯಿತು. ಅದೇ ಸಲುಗೆಯಿಂದ ನಾನು ಒಮ್ಮೆ ಅವಳನ್ನು, ‘ಬೊಮ್ಮನ್‌ ಕೆ ಬಚ್ಚಿ’ ಎಂದುಬಿಟ್ಟೆ. ತುಂಬಾ ನೊಂದುಕೊಂಡ ಆಕೆ ಒಂದು ಇಡೀ ದಿನ ಅಳಲು ಪ್ರಾರಂಭಿಸಿದಳು. ಅವಳಿಗೆ ತುಂಬಾ ನೋವಾಗಿತ್ತು. ನಾನೆಷ್ಟು ಬಾರಿ ‘ಸಾರಿ’ ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇಡೀ ದಿನ ಸಮಾಧಾನಪಡಿಸಿ ‘ಎನ್‌ಎಂಎಚ್‌ ಹೋಟೆಲ್‌’ನಲ್ಲಿ ಕಾಫಿ ಕುಡಿಸಿ ಸಮಾಧಾನಪಡಿಸುವಷ್ಟರಲ್ಲಿ ಸಾಕಾಯಿತು. ಈಕೆಯ ಹೆಸರು ವಾಣಿ. ನನಗಿಂತ ವಯಸ್ಸಿನಲ್ಲಿ ಹಿರಿಯಳಾಗಿದ್ದ ವಾಣಿ ವಯಸ್ಸನ್ನು ಲೆಕ್ಕಿಸದೆ ನನ್ನ ಸ್ನೇಹವನ್ನು ಅತಿ ಎನ್ನುವಂತೆ ಹಚ್ಚಿಕೊಂಡಿದ್ದಳು.

ನಾನಾಗ ಜೆ.ಸಿ. ರಸ್ತೆಯ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಹತ್ತಿರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ವಾಣಿ ಪ್ರತಿನಿತ್ಯ ನನ್ನ ಬ್ಯಾಂಕಿಗೆ ಬರುತ್ತಿದ್ದಳು. ಇಬ್ಬರೂ ‘ಎನ್‌ಎಂಎಚ್‌ ಹೋಟೆಲ್‌’ಗೆ ಹೋಗಿ ಬೈಟು ಕಾಫಿ ಕುಡಿದು ಹೊರಡುತ್ತಿದ್ದೆವು. ಬೈಟು ಕಾಫಿ ಕುಡಿಯುತ್ತಿದ್ದಾಗ ಕನಿಷ್ಠ ಒಂದು ಗಂಟೆ ಸಮಯ ನಮ್ಮ ಚರ್ಚೆ ನಡೆಯುತ್ತಿತ್ತು. ನಮ್ಮ ಸ್ನೇಹ ಪ್ರೇಮವಾಗಿ ತಿರುಗುವ ಹಾದಿಯಲ್ಲಿದ್ದುದರ ಸೂಚನೆ ನನಗೆ ತಿಳಿಯುವುದು ಬಹಳ ದಿನ ಬೇಕಾಗಲಿಲ್ಲ.

ಒಮ್ಮೆ ವಾಣಿ, ‘ನೀನು ನನಗಿಂತಲೂ ದೊಡ್ಡವನಾಗಿದ್ದರೆ ನಾವಿಬ್ಬರೂ ಮದುವೆ ಮಾಡಿಕೊಳ್ಳಬಹುದಾಗಿತ್ತು’ ಎಂದಳು. ಇದರಿಂದ ಪುಳಕಿತನಾದ ನಾನು, ‘ವಯಸ್ಸು ಚಿಕ್ಕದಾದರೇನಂತೆ. ಮದುವೆಯಾಗಲು ವಯಸ್ಸು ಪ್ರಮುಖ ವಿಷಯವಲ್ಲ. ಎಷ್ಟೋ ಜನ ಖ್ಯಾತನಾಮರು ತಮಗಿಂತ ವಯಸ್ಸಾದವರನ್ನು ಮದುವೆಯಾಗಿಲ್ಲವೆ?’ ಎಂದು ಉಡಾಫೆ ಮಾತುಗಳನ್ನಾಡಿದೆ. ಇದರಿಂದ ಅವಳಿಗೆ ಮತ್ತಷ್ಟು ಖುಷಿಯಾಯಿತು. ಆ ಸಂತೋಷದಿಂದ ಆ ವಿಷಯವನ್ನು ಪದೇ ಪದೇ ಚರ್ಚಿಸುತ್ತಿದ್ದಳು. ನಾನಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಇದರಿಂದ ಉತ್ತೇಜಿತಳಾಗಿದ್ದ ಆಕೆ ದಿನದಿಂದ ದಿನಕ್ಕೆ ನನ್ನನ್ನು ಮದುವೆಯಾಗಬೇಕೆಂಬ ಹಂಬಲವನ್ನು ಗಟ್ಟಿ ಮಾಡಿಕೊಂಡಿದ್ದಳು.

ನಮ್ಮ ಮದುವೆಯ ವಿಚಾರವನ್ನು ಒಮ್ಮೆ ಪ್ರಸ್ತಾಪಿಸಿದಾಗ, ನಾನು ಸ್ವಲ್ಪ ಜಾಗೃತನಾಗಿ, ‘ವಾಣಿ, ನಾನು ನನ್ನ ತಂದೆ–ತಾಯಿಗೆ ಒಬ್ಬನೇ ಮಗ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಮೇಲಾಗಿ ನೀನು ಶುದ್ಧ ಸಸ್ಯಾಹಾರಿ. ನನ್ನ ಕುಟುಂಬ ಮಾಂಸಾಹಾರಿಯಾದ್ದರಿಂದ ನಮ್ಮ ಸಂಸ್ಕೃತಿ ಕೂಡ ಹೊಂದಾಣಿಕೆಯಾಗುವುದಿಲ್ಲ. ಆದ್ದರಿಂದ ಈ ಮದುವೆ ವಿಚಾರದಲ್ಲಿ ಮರುಚಿಂತನೆ ಮಾಡುವುದು ನಮ್ಮಿಬ್ಬರ ದೃಷ್ಟಿಯಿಂದಲೂ ಒಳಿತು’ ಎಂದು ತಿಳಿಹೇಳಿದೆ. ಇದನ್ನು ಆಕೆ, ‘ನಾನು ಮಾಂಸಾಹಾರಿಯಾಗಿ ಬದಲಾವಣೆಯಾಗಬಲ್ಲೆ’ ಎಂದು ಪರಿಪರಿಯಾಗಿ ಹೇಳಿದಳು. ನನಗೆ ಪ್ರಾಮಾಣಿಕವಾಗಿ ನಮ್ಮ ಸಂಸ್ಕೃತಿ ಹೊಂದುವುದಿಲ್ಲವಾದ್ದರಿಂದ ಈ ಮದುವೆ ಪ್ರಾಯೋಗಿಕವಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ಸ್ನೇಹವಿರಬೇಕೆಂದು ಮುಂದುವರೆಸಿದ್ದೆ.

ಒಮ್ಮೆ ಮಧ್ಯಾಹ್ನ ನನ್ನ ಬ್ಯಾಂಕಿಗೆ ಬಂದ ವಾಣಿ ಊಟಕ್ಕೆ ಜೊತೆಯಾಗಿ ಹೋಗೋಣವೆಂದು ಹೊರಟಳು. ನಮ್ಮ ಬ್ಯಾಂಕಿನ ಸುತ್ತಮುತ್ತ ನಾನ್‌ವೆಜಿಟೇರಿಯನ್‌ ಹೋಟೆಲ್‌ಗಳೇ ಹೆಚ್ಚಿದ್ದವು. ವೆಜಿಟೇರಿಯನ್‌ ಹೋಟೆಲ್‌ ‘ಕಾಮತ್‌’ ಮಾತ್ರವಿದ್ದುದರಿಂದ, ಅದು ಬ್ಯಾಂಕಿನ ಪಕ್ಕದಲ್ಲೇ ಇದ್ದುದರಿಂದ ದೂರ ಹೋದೆವು. ನಾನ್‌–ವೆಜಿಟೇರಿಯನ್‌ ಹೋಟೆಲ್‌ಗೆ ಹೋಗೋಣವೆಂದು ಅವಳೇ ಒತ್ತಾಯಿಸಿದಳು. ಒಂದು ಸುಮಾರಾದ ಕಾಕಾ ಹೋಟೆಲ್‌ಗೆ ಹೋಗಿ ಪರೋಟ ಬೇಕೆಂದು ಹೇಳಿದೆವು. ಅವಳೂ ಕೂಡ ‘ನನಗೂ ಪರೋಟ ಆರ್ಡರ್‌ ಮಾಡು’ ಎಂದಳು. ಪರೋಟ, ಚಿಕನ್‌ ಸೇರವಾ ಕೊಟ್ಟ. ಇಬ್ಬರೂ ಪರೋಟ ತಿಂದು ಹೊರಗೆ ಬಂದೆವು.

ಹೋಟೆಲ್‌ನಿಂದ ಹೊರಗೆ ಬಂದ ಮೇಲೆ, ‘ನೋಡಿದ್ಯೇನೋ, ನಾನು ನಾನ್‌–ವೆಜಿಟೇರಿಯನ್‌ ತಿನ್ನೋದಿಲ್ಲ ಅಂತಿಯಾ, ಈಗ ನಿನ್ನ ಮುಂದೇನೆ ತಿಂದೆನಲ್ಲಪ್ಪಾ, ಮುಂದೆ ಕೂಡ ನಾನೇ ನಾನ್‌–ವೆಜಿಟೇರಿಯನ್‌ ಮಾಡ್ತೇನೆ. ನಿಮ್ಮ ಮನೆಮಂದಿಗೆಲ್ಲ ಬಡಿಸುತ್ತೇನೆ. ನಾನೂ ತಿಂತೇನೆ. ಆದ್ದರಿಂದ ನನ್ನ ಮದುವೆಯಾಗುವುದನ್ನು ಬೇಡ ಎನ್ನಬೇಡ’ ಎಂದಳು. ನನಗೆ ಆಗ ಅರ್ಥವಾಯಿತು. ಜೀವನದಲ್ಲಿ ಎಂದೂ ಮಾಂಸಾಹಾರ ತಿನ್ನದ ವಾಣಿ ನನಗಾಗಿ ನಾನ್‌ ವೆಜ್ ಊಟ ಮಾಡಿದ್ದು ತಿಳಿದು ಮನಸ್ಸಿಗೆ ಮುಜುಗರವಾಯಿತು. ಆದರೂ ನಾನು ಮದುವೆಯಾಗುವ ಸ್ಥಿತಿಯಲ್ಲಿರಲಿಲ್ಲ. ನನ್ನ ಕುಟುಂಬದ ಪರಿಸ್ಥಿತಿ ಬೇರೆಯೇ ಇತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಒಂದು ಕಡೆಯಾದರೆ, ನನ್ನನ್ನೇ ನಂಬಿದ್ದ ಮತ್ತು ಇಂತಹ ಯೋಚನೆಯನ್ನು ತಲೆಗೆ ತಂದುಕೊಳ್ಳದ ಮುಗ್ಧ ತಂದೆಯ ಜೊತೆಯಲ್ಲಿದ್ದ ನಾನು ಬೇರೆ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆದರೂ ವಾಣಿ ನನ್ನನ್ನು ಮದುವೆ ಮಾಡಿಕೊಳ್ಳುವ ನಿರ್ಧಾರವನ್ನು ಕೈಬಿಟ್ಟಿರಲಿಲ್ಲ. ಮುಂದೆ ನಡೆದ ಘಟನೆ ಇನ್ನೂ ಭಯಂಕರವಾಗಿತ್ತು, ಹೃದಯ ಕಲಕುವಂತಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry