ಬತ್ತಿದ ಕೊಳವೆ ಬಾವಿಯಲ್ಲೂ ಕಂಡಳು ಜಲದೇವಿ

7

ಬತ್ತಿದ ಕೊಳವೆ ಬಾವಿಯಲ್ಲೂ ಕಂಡಳು ಜಲದೇವಿ

Published:
Updated:
ಬತ್ತಿದ ಕೊಳವೆ ಬಾವಿಯಲ್ಲೂ ಕಂಡಳು ಜಲದೇವಿ

ಹುಬ್ಬಳ್ಳಿ: ವಿಫಲ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡುವ ನಿಟ್ಟಿನಲ್ಲಿ, ಮಹಾರಾಷ್ಟ್ರದ ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನವು ರಾಜ್ಯದಲ್ಲಿ ‘ಜಲ ಪುನರ್‌ ಭರಣ್’ ಅಭಿಯಾನ ಆರಂಭಿಸಿದೆ.

ಈಗಾಗಲೇ ತಮ್ಮ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಐದು ಸಾವಿರ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಕಾಣುವಂತೆ ಮಾಡಿರುವ ಪ್ರತಿಷ್ಠಾನದ ಸದಸ್ಯರು, ಇದೀಗ ರಾಜ್ಯದ ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯಲ್ಲಿ  ಈ ಕೆಲಸ ಆರಂಭಿಸಿದ್ದಾರೆ. ಇಲ್ಲಿಯವರಗೆ ರಾಜ್ಯದ 25 ಕೊಳವೆ ಬಾವಿಗಳನ್ನು ಜಲ ಪುನರ್‌ ಭರಣ ವ್ಯವಸ್ಥೆಗೆ ಅಣಿಗೊಳಿಸಿದ್ದಾರೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯದ ಇವರು, ತಮ್ಮದೇ ಖರ್ಚಿನಲ್ಲಿ ಬಂದು ತಾಂತ್ರಿಕ ನೆರವು ನೀಡುವುದು ವಿಶೇಷ.

ಹುಬ್ಬಳ್ಳಿ ತಾಲ್ಲೂಕಿನ ದೇವರ ಗುಡಿಹಾಳದ ಮಹಾಲಿಂಗಪ್ಪ ಲಕ್ಕುಂಡಿ 1983ರಲ್ಲಿ ಕೊಳವೆಬಾವಿ ಕೊರೆಯಿಸಿದ್ದರು. 2002ರವರೆಗೂ ಸುಸ್ಥಿತಿಯಲ್ಲಿದ್ದ ಅದು ಆ ಬಳಿಕ ವಿಫಲಗೊಂಡಿತು. ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದ ಸಂಜೀವ ಗಾಂವ್ಕರ್ ತಮ್ಮ ಮೂರು ಎಕರೆ ಜಮೀನಿಗೆ ನೀರುಣಿಸಲು ಕೊರೆದಿದ್ದ ಕೊಳವೆಬಾವಿಯಲ್ಲಿ ಮೊದಲು ಮೂರು ಇಂಚು ನೀರು ಇತ್ತು. ಅದು ಈಗ ಅರ್ಧ ಇಂಚಿಗೆ ಇಳಿದಿದೆ. ಧರ್ಮಾಧಿಕಾರಿ ಪ್ರತಿಷ್ಠಾನದವರ ಕೆಲಸ ನಡೆದದ್ದು ಇಂಥ ಕಡೆಗಳಲ್ಲಿಯೇ.

ಕಾರ್ಯವಿಧಾನ: ಕೊಳವೆಬಾವಿ ಸುತ್ತಲೂ ಐದು ಅಡಿ ಆಳ ಮತ್ತು ಅಗಲದ ತಗ್ಗು ತೋಡಿ, ಕೇಸಿಂಗ್ ಪೈಪ್‌ ಸುತ್ತಲೂ ಸುಮಾರು 20ರಿಂದ 25 ರಂಧ್ರಗಳನ್ನು ಕೊರೆಯುತ್ತಾರೆ. ನಂತರ ಪೈಪ್‌ನ ಒಳಗೆ ಮಣ್ಣು ಹೋಗುವುದನ್ನು ತಡೆಯಲು ಸೊಳ್ಳೆ ಪರದೆ ಅಥವಾ ಅಗಲ ರಂಧ್ರವುಳ್ಳ ಸೆಣಬಿನ ಚೀಲ ಸುತ್ತುತ್ತಾರೆ. ನಂತರದ ಕೆಲಸ ಐದು ಅಡಿ ಆಳದ ತಗ್ಗನ್ನು ಮುಚ್ಚುವುದು. ಇದಕ್ಕೂ ವೈಜ್ಞಾನಿಕ ವಿಧಾನವನ್ನು ಅನುಸರಿಸುವ ಪ್ರತಿಷ್ಠಾನದ ಕಾರ್ಯಕರ್ತರು ತಳಭಾಗದಲ್ಲಿ ದಪ್ಪ ಕಲ್ಲುಗಳನ್ನೂ, ಅದರ ನಂತರ ಜಲ್ಲಿ ಕಲ್ಲು (ಕಡಿ)ಗಳನ್ನೂ, ಅದರ ಮೇಲ್ಭಾಗದಲ್ಲಿ ಮರಳನ್ನು ಹಾಕಿ ಮುಚ್ಚುತ್ತಾರೆ.

ಇದು ಕೊಳವೆಬಾವಿಯ ಕೆಲಸವಾದರೆ, ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಬಾವಿಯ ತನಕ ತರುವುದು ಮತ್ತೊಂದು ಕೆಲಸ. ಇದಕ್ಕಾಗಿ, ಮೂರು ಹಂತದಲ್ಲಿ ಕಾಲುವೆಗಳನ್ನು ಒಂದಷ್ಟು ಅಡಿ ಆಳದವರೆಗೆ ತೋಡುತ್ತಾರೆ. ಪುಟ್ಟ ಕಾಲುವೆಯು ಹಂತ ಹಂತವಾಗಿ ಇಳಿಜಾರಾಗುವಂತೆ ನೋಡಿಕೊಳ್ಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರತಿಷ್ಠಾನದ ಸದಸ್ಯ ವಿಜಯಕುಮಾರ್‌ ಲಕ್ಕುಂಡಿ, ‘ಜಮೀನಿನ ಮೇಲ್ಭಾಗದಲ್ಲಿ ಬಿದ್ದ ನೀರು ಕೆಳಗೆ ಬರುತ್ತದೆ. ಈ ಹಂತದಲ್ಲಿ ಮಳೆ ನೀರಿನೊಂದಿಗೆ ಬರುವ ಮಣ್ಣು ಕೊಳವೆಬಾವಿಗೆ ಹೋಗುವುದನ್ನು ತಪ್ಪಿಸಲು ಮೂರು ಹಂತದ ಸೋಸುವ ವ್ಯವಸ್ಥೆ ಮಾಡಲಾಗಿದೆ. ಮಣ್ಣು ಕೊಳವೆಬಾವಿಯ ಪಕ್ಕದ ಮರಳನ್ನು ಸೇರಿಕೊಳ್ಳುತ್ತದೆ. ಅದನ್ನೂ ಮೀರಿ ಹೋದ ಒಂದಷ್ಟು ಮಣ್ಣು ಜಲ್ಲಿಕಲ್ಲಿನಲ್ಲಿ ಸೇರುತ್ತದೆ. ಅದರ ಕೆಳಭಾಗದ ಕಲ್ಲುಗಳ ಮಧ್ಯೆ ಹೋಗುವ ನೀರು ಸಂಪೂರ್ಣ ಸೋಸಿ ಬಾವಿ ಸೇರುತ್ತದೆ. ನೆಲದ ಮೇಲೆ ಬಿದ್ದ ನೀರು ಹೆಚ್ಚೆಂದರೆ 10 ಅಡಿ ಆಳದವರೆಗೆ ಸೇರುತ್ತದೆ. ಆದರೆ, ಕೊಳವೆಬಾವಿ ಮೂಲಕ ಒಳಹೋಗುವ ನೀರುವ 300 ಅಡಿ ಆಳ ತಲುಪುತ್ತದೆ. ಇದರಿಂದ ಬತ್ತುವ ಸಮಸ್ಯೆಯೇ ಇರುವುದಿಲ್ಲ’ ಎಂದರು.

‘ಇದಕ್ಕಾಗಿ ರೈತರಿಗೆ ಹೆಚ್ಚೆಂದರೆ ಎರಡು ಸಾವಿರ ಖರ್ಚು ಬರಬಹುದು. ಕಲ್ಲು, ಮರಳು ಹಾಗೂ ಮರಳು ರೈತರ ಬಳಿಯೇ ಇದ್ದರೆ ಆ ಖರ್ಚೂ ಉಳಿಯುತ್ತದೆ’ ಎಂದು ವಿವರಿಸಿದರು.

ಇದೇ ಮಾದರಿಯನ್ನು ನಗರ  ಪ್ರದೇಶಗಳಲ್ಲಿಯೂ ಅಳವಡಿಸುವುದಕ್ಕೂ ಪ್ರತಿಷ್ಠಾನದವರು ತಾಂತ್ರಿಕ ನೆರವು ನೀಡುತ್ತಾರೆ.

ಚಾವಣಿ ಮೇಲೆ ಬಿದ್ದ ನೀರನ್ನು ಮನೆಯ ಕೆಳಭಾಗದಲ್ಲಿರುವ ಜಲ ಸಂಗ್ರಹಾಗಾರಕ್ಕೆ ಸೇರಿಸುವ ಯೋಜನೆಗೂ ತಾಂತ್ರಿಕ ನೆರವು ನೀಡಿದ್ದಾರೆ. ಸೊಲ್ಲಾಪುರ ಜಿಲ್ಲೆಯಲ್ಲಿ ಕಳೆದ ವರ್ಷ 3 ಸಾವಿರ ಮನೆಗಳ ಮೇಲ್ಚಾವಣಿಯಿಂದ ನೀರು ಸಂಗ್ರಹಿಸುವ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಸೊಲ್ಲಾಪುರದಿಂದ ಬಂದಿದ್ದ ವೃತ್ತಿಯಲ್ಲಿ ವೈದ್ಯರಾಗಿರುವ ಸದಸ್ಯರೊಬ್ಬರು ತಿಳಿಸಿದರು.

ತಮ್ಮ ಜಮೀನಿನಲ್ಲಿ ‘ಜಲ ಪುನರ್‌ ಭರಣ್‌’ ವ್ಯವಸ್ಥೆ ಅಳವಡಿಸಿಕೊಳ್ಳಬಯಸುವ ರೈತರು ವಿಜಯಕುಮಾರ್‌ ಲಕ್ಕುಂಡಿ (98674 62066) ಅವರನ್ನು ಸಂಪರ್ಕಿಸಬಹುದು.

**

ಮಳೆ ಕಡಿಮೆ ಬೀಳುವ ಜಿಲ್ಲೆಗಳೇ ಆದ್ಯತೆ

ವಾರ್ಷಿಕವಾಗಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಿಗೇ ಹೆಚ್ಚಿನ ಆದ್ಯತೆ ನೀಡಲು ಪ್ರತಿಷ್ಠಾನದ ಕಾರ್ಯಕರ್ತರು ಮುಂದಾಗಿದ್ದಾರೆ. ಈಗಾಗಲೇ ಬಿರುಬಿಸಿಲಿನ ಜಿಲ್ಲೆಗಳಾದ ಕಲಬುರ್ಗಿ, ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಕೊಳವೆಬಾವಿಗಳ ಮರು ಪೂರಣ ಮಾಡಿದ್ದಾರೆ. ಪ್ರತಿ ತಂಡದಲ್ಲಿ 15ರಿಂದ 20 ಸದಸ್ಯರಿದ್ದು, ಪ್ರಾತ್ಯಕ್ಷಿಕೆ ತೋರಿಸಲು ರೈತರ ಜಮೀನುಗಳಿಗೆ ತಮ್ಮದೇ ಖರ್ಚಿನಲ್ಲಿ ತೆರಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry