ಮಂಗಳವಾರ, ಜೂನ್ 22, 2021
24 °C

ತಲಾಖ್, ಖುಲಾ ಮತ್ತು ಮುಸ್ಲಿಂ ಪುರುಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಾಖ್, ಖುಲಾ ಮತ್ತು ಮುಸ್ಲಿಂ ಪುರುಷ

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಮಹಿಳೆಗೆ ರಕ್ಷಣೆ ಇಲ್ಲ ಎಂದು ವಾದಿಸುವವರಿಗೆ ಪುರುಷರ ‘ತಲಾಖ್’ ನಂತೆ ಮಹಿಳೆಯರ ‘ಖುಲಾ’ ಸ್ವಾತಂತ್ರ್ಯವೇಕೆ ಕಾಣುತ್ತಿಲ್ಲ? ತ್ರಿವಳಿ ತಲಾಖ್‌ಅನ್ನು ರದ್ದುಗೊಳಿಸಿದ ತಕ್ಷಣ ಮಹಿಳೆಗೆ ಎಲ್ಲಾ ರೀತಿಯ ರಕ್ಷಣೆ ಲಭಿಸಿಬಿಡುತ್ತದೆಯೇ? ಮುಸ್ಲಿಂ ಪುರುಷರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಹೇಗೆ ತಾನೇ ಸುರಕ್ಷಿತವಾಗಿ ಇರಬಲ್ಲಳು? ಇಂಥ ಸ್ಥಿತಿಯಲ್ಲಿ ಮಹಿಳೆಗಾಗಿ ಅನುಷ್ಠಾನಗೊಂಡಿರುವ ‘ಖುಲಾ’ ಸ್ವಾತಂತ್ರ್ಯವನ್ನು ಕಾರ್ಯರೂಪಕ್ಕೆ ತರಲು ಹೋರಾಡಬೇಕೇ ವಿನಾ ಪುರುಷರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದಕ್ಕಲ್ಲ.

ಪುರುಷ ಬಹಳ ಸುಲಭವಾಗಿ ‘ತಲಾಖ್’ ನೀಡಿ ಸ್ವತಂತ್ರನಾಗುತ್ತಾನೆ.  ಇದು ಸಾಧ್ಯವಾಗುವುದು ಹೇಗೆ ಎಂದು ಚಿಂತಿಸಬೇಕು. ಪುರುಷ ತಲಾಖ್‌ ಕೊಡುತ್ತಿದ್ದಾನೆ ಎಂದರೆ ಅವನು ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮರ್ಥನಾಗಿರುತ್ತಾನೆ ಎಂದು ಅರ್ಥೈಸಬಹುದು. ಆದರೆ ‘ಖುಲಾ’ ಕೊಡಬಯಸುವ ಮಹಿಳೆಯೂ ಅಷ್ಟೇ ಸಮರ್ಥಳಾಗಿರುತ್ತಾಳೆಯೇ? ಮಹಿಳೆಗೆ ಇಂಥ ಒಂದು ಅವಕಾಶವನ್ನು ವೈಯಕ್ತಿಕ ಕಾನೂನು  ಕೊಟ್ಟಿದ್ದರೂ ಅದು ಬಳಕೆಯಾಗುತ್ತಿಲ್ಲ. ಮಹಿಳೆಗೆ ತನ್ನ ಅಧಿಕಾರದ ಬಗ್ಗೆ ಅರಿವು ಇಲ್ಲದಿರುವುದು ಇದಕ್ಕೆ ಕಾರಣ. ಖುಲಾ ಮತ್ತು ತಲಾಖ್‌ ನಡುವೆ ಕೆಲಸ ಮಾಡುವುದು ಪುರುಷ ಪ್ರಧಾನತೆ ಮತ್ತು ಪುರೋಹಿತಶಾಹಿ ವ್ಯವಸ್ಥೆಯೇ ವಿನಾ ವೈಯಕ್ತಿಕ ಕಾನೂನಲ್ಲ.

ಧರ್ಮಗ್ರಂಥ ಹಾಗೂ ಪುರಾಣಗಳನ್ನು ಸರಿಯಾಗಿ  ಪಾಲಿಸದೆ, ಸಂವಿಧಾನವನ್ನು ಸಹ ಅರ್ಥಮಾಡಿಕೊಳ್ಳದೆ ಮಹಿಳೆಯರು ಪುರುಷರ ಮೇಲೆ ಪುರುಷರು ಮಹಿಳೆಯರ ಮೇಲೆ ಅಪವಾದಗಳನ್ನು ಹೊರಿಸಿ ಅರ್ಥಹೀನ ಕಾನೂನುಗಳನ್ನು ಜಾರಿಗೊಳಿಸುವುದರಲ್ಲಿ ಅರ್ಥವಿದೆಯೇ? ಇಸ್ಲಾಂ ಮತ ಮಹಿಳೆಗೆ ಪುರುಷರಿಗೆ ಸರಿಸಮಾನವಾದ ಸ್ವಾತಂತ್ರ್ಯ ನೀಡಿದೆ. ವಿಧವಾ ವಿವಾಹ, ಆಸ್ತಿ ಹೊಂದುವ ಹಕ್ಕು, ವ್ಯಾಪಾರ ಮಾಡಿ ಆದಾಯಗಳಿಸುವ ಹಕ್ಕು, ಮದುವೆಗೆ ಗಂಡನ್ನು ಆರಿಸುವ ಹಕ್ಕು ಮುಂತಾದವು.

ಬೀಬಿ ಖತೀಜ (ರ.ಅ) ಪ್ರವಾದಿ ಮುಹಮ್ಮದರ ಮೊದಲ ಮಡದಿ. ಇಸ್ಲಾಂ ಧರ್ಮದ ಪ್ರಗತಿಪರ ಮಹಿಳೆ.  ಆಕೆ ತನ್ನ 40ನೇ ವಯಸ್ಸಿನಲ್ಲಿ 25 ವರ್ಷದ ಪ್ರವಾದಿಯವರಿಗೆ(ರ) ಮೂರನೇ ವಿವಾಹದ ಪ್ರಸ್ತಾಪವನ್ನು ಕಳುಹಿಸಿದರು. ಪ್ರವಾದಿಗೆ ಇದು ಮೊದಲನೇ ಮದುವೆ. ಅದಾದ ನಂತರ ಪ್ರವಾದಿ ನಾಲ್ಕು ಮದುವೆಗಳನ್ನು ಮಾಡಿಕೊಂಡರು. ಅದರಿಂದ ಪುರುಷರು ನಾಲ್ಕು ಮದುವೆಗಳನ್ನು ಮಾಡಿಕೊಳ್ಳಬಹುದೆಂಬ ಕಾನೂನಾಯಿತು. ಬಹುಪತ್ನಿತ್ವಕ್ಕೆ ಇದನ್ನೇ ಮಾದರಿ ಎನ್ನುವುದಾದರೆ, ಪುರುಷರು ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಮಹಿಳೆಯನ್ನು ಮದುವೆ ಮಾಡಿಕೊಳ್ಳಬೇಕೆಂದು ನಿಯಮ ಯಾಕೆ ರಚಿಸಲಿಲ್ಲ?

‘ನಿಕಾಹ’ ಎಂಬುದು ಧಾರ್ಮಿಕ ನಿಯಮವಲ್ಲ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ನಡೆಯುವ ಒಂದು ಒಪ್ಪಂದ. ಇಸ್ಲಾಂ ಮತಾನುಸಾರ ‘ನಿಕಾಹ’ ‘ಫರ್ಜ್’ (ಕಡ್ಡಾಯ) ಅಲ್ಲ. ಹುಡುಗ ತನಗೆ ಬೇಡವೆಂದಾಗ ತಲಾಖ್ ಮೂಲಕ, ಹುಡುಗಿ ತನಗೆ ಬೇಡವೆಂದಾಗ ‘ಖುಲಾ’ ಮೂಲಕ ಈ ಒಪ್ಪಂದವನ್ನು ಮುರಿಯುವ ಸ್ವಾತಂತ್ರ್ಯ ಪಡೆದಿರುತ್ತಾರೆ. ನಿಕಾಹ ಆಗುವಾಗ ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ ನಿಕಾಹ ನಾಮಕ್ಕೆ (ಮದುವೆ ಕರಾರು ಪತ್ರ) ಮೊದಲಿಗೆ ಸಹಿ ಮಾಡಬೇಕಾಗಿರುವುದು ಮದುವೆ ಆಗುವ ಹೆಣ್ಣೇ ವಿನಾ ಗಂಡಾಗಲೀ  ಗಂಡಿನ ಕಡೆಯವರಾಗಲೀ ಅಲ್ಲ. ಆ ಕೊನೆಯ ಗಳಿಗೆಯಲ್ಲೂ ಹೆಣ್ಣು ಮದುವೆಯನ್ನು ತಿರಸ್ಕರಿಸುವ ಅಧಿಕಾರ ಹೊಂದಿರುತ್ತಾಳೆ. ಮದುವೆಯ ವೇಳೆ ನಿರ್ಧರಿತವಾಗುವ ‘ಮಹರ್’ ಮೊಬಲಗನ್ನು ಹೆಣ್ಣಿಗೆ (ಹೆಂಡತಿಗೆ) ಕೊಟ್ಟ ನಂತರವೇ ಗಂಡಸು ಆಕೆಯನ್ನು ಮುಟ್ಟುವ ಅಧಿಕಾರ ಪಡೆಯುವುದು.  ಆದರೆ ‘ತಲಾಖ್’ ನಿಯಮವನ್ನು ಪಾಲಿಸುವಂತೆ ಈ ನಿಯಮವನ್ನು ಪಾಲಿಸಲಾಗುತ್ತಿದೆಯೇ?

ಇಸ್ಲಾಂ ಧರ್ಮ ಮಹಿಳೆಗೆ ಪಕ್ಷಪಾತ ಮಾಡುತ್ತದೆ ಎಂದು ಹೇಳಿ ದೈವಶಾಸ್ತ್ರವನ್ನು ವಿಕೃತಗೊಳಿಸಲಾಗುತ್ತಿದೆ.  ಆದರೆ ಧರ್ಮಗ್ರಂಥದ ಹೇಳಿಕೆಗಳು ಮತ್ತು ಅವುಗಳ ಸುತ್ತ ಹೆಣೆಯಲಾದ ದೈವಶಾಸ್ತ್ರದ ನಡುವಣ ವ್ಯತ್ಯಾಸವನ್ನು ಗುರುತಿಸಬೇಕಾಗಿದೆ. ದೈವಶಾಸ್ತ್ರವು ಹೊಸ ಸವಾಲುಗಳು ಮತ್ತು ಹೊಸದಾಗಿ ಉದ್ಭವಿಸುವ ಸಂದರ್ಭಗಳಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ. ‘ಹೆಣ್ಣು ಗಂಡಸಿನ ಸುಖ ಸಂತೋಷಕ್ಕಾಗಿ ದೇವರು ಸೃಷ್ಟಿಸಿದ ಜೀವಿ’ ಎಂದಷ್ಟೇ  ತಿಳಿದಿದ್ದರಿಂದ ಮನಸೋ ಇಚ್ಛೆ  ಹಿಂಸಿಸಿ ಆನಂದ ಪಡೆಯುವ ಪರಂಪರೆ ಇನ್ನೂ ಜೀವಂತವಾಗಿದೆ. 

ಪ್ರವಾದಿಯವರ ಕಾಲಾವಧಿಯಲ್ಲಿ  ಅವತರಿಸಿದ ಕುರ್‌ಆನ್ ಲಿಖಿತ ರೂಪಕ್ಕೆ ಬಂದದ್ದು ಸೈಯದ್ ಅಬುಬಕರ್ ಸಿದ್ದಿಕ್‌ ಕಾಲಕ್ಕೆ. ಈ ಅವಧಿಯಲ್ಲಿ ನಮ್ಮ  ಪುರಾಣಗಳು ತಿರುಚಲ್ಪಟ್ಟವು. ಏಕೆಂದರೆ ಪುರೋಹಿತಶಾಹಿಗಳು ಮತ್ತು ಮೂಲಭೂತವಾದಿಗಳಿಗೆ ಧರ್ಮದ ಆಂತರಿಕ ಸಮೃದ್ಧಿ ಆಧ್ಯಾತ್ಮಿಕ ಮೂಲವಾಗುವುದಕ್ಕೆ ಬದಲಾಗಿ ತಮ್ಮ ಹಿತಾಸಕ್ತಿಗಳನ್ನು ಪೋಷಿಸುವುದು ಮುಖ್ಯವಾಗಿತ್ತು.  ಇಸ್ಲಾಮಿನಲ್ಲಿ  ಷರಿಯಾ ಅಪೌರುಷೇಯವಾಗಿದೆ ಹಾಗೂ ಆ ಕಾರಣಕ್ಕಾಗಿ ಅಪರಿವರ್ತನೀಯವಾಗಿದೆ ಎನ್ನುವುದು ಸಾಮಾನ್ಯ ನಂಬಿಕೆ. 

ಷರಿಯಾ ನಿಸ್ಸಂದೇಹವಾಗಿ ಪವಿತ್ರ ಕುರ್‌ಆನ್ ಆಧರಿಸಿದ್ದರೂ ಅದು ದೈವೀ ಸಂಕಲ್ಪವನ್ನು ಅರ್ಥೈಸಿಕೊಳ್ಳುವ ಮನುಷ್ಯ ಪ್ರಯತ್ನವಾಗಿದೆ ಎನ್ನುವುದು ಮಹತ್ವದ ವಿಚಾರ. ಅದು ದೈವೀ ಸಂಕಲ್ಪವನ್ನು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗವೇ ವಿನಾ ಅದೇ ದೈವೀ ಸಂಕಲ್ಪವಲ್ಲ.  ಅದನ್ನೇ ದೈವೀ ಸಂಕಲ್ಪ ಎಂದು ಪುರೋಹಿತಶಾಹಿ ಬಿಂಬಿಸುತ್ತದೆ.

ಮುಸ್ಲಿಂ  ಮಹಿಳೆಯರು ‘ಖುಲಾ’ವನ್ನು ಕಾರ್ಯರೂಪಕ್ಕೆ ತರದೆ ತ್ರಿವಳಿ ತಲಾಖ್‌ನ ಮೇಲೆ ನಿರ್ಬಂಧ ಹೇರಲು ಹೊರಟಿರುವುದು ಏಕೆ? ತ್ರಿವಳಿ ತಲಾಖ್‌ಅನ್ನು ನಿರ್ಬಂಧಿಸಬೇಕಾದರೆ ‘ಖುಲಾ’ವನ್ನು ಹೆಚ್ಚು ಹೆಚ್ಚು ಚಾಲ್ತಿಗೆ  ತರಬೇಕು.  ‘ಖುಲಾ’ಅನ್ನು ಹೆಚ್ಚು ಚಾಲ್ತಿಯಲ್ಲಿ ತರಬೇಕೆಂದರೆ ಮಹಿಳೆ ಸದೃಢಳಾಗಬೇಕು.  ಮಹಿಳೆ ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಸದೃಢಳಾಗದೆ ‘ತಲಾಖ್‌’ನ ಮೇಲೆ ನಿರ್ಬಂಧ ಹೇರುವುದು ತನ್ನ ಜವಾಬ್ದಾರಿಯಿಂದ ವಿಮುಖಳಾಗಿ  ಬೇರೆಯವರ ಹಕ್ಕನ್ನು ಕಸಿದುಕೊಂಡಂತೆ.  ಇಸ್ಲಾಂ ಧರ್ಮ ಬೇರೆಯವರ ಹಕ್ಕನ್ನು ಕಸಿದುಕೊಳ್ಳಲು ಹೇಳಿಲ್ಲ.

ಮಹಿಳೆಯರಲ್ಲಿ ಸಾಮರ್ಥ್ಯದ ಕೊರತೆಯಿಂದಾಗಿಯೇ ಪುರುಷರು ಬಲಾಢ್ಯರಾಗುತ್ತಿರುವುದು. ಇದನ್ನು ಎದುರಿಸಲು ಮಹಿಳೆ ಬಲಿಷ್ಠಳಾಗಬೇಕು.  ಅದರ ಬದಲು ಮುಸ್ಲಿಂ ವೈಯಕ್ತಿಕ ಕಾನೂನನ್ನು ಪರಿವರ್ತಿಸುವ ಹಪಾಹಪಿಯಲ್ಲಿರುವುದು ಸರಿಯೇ?

ದೇಶದಲ್ಲಿ ತ್ರಿವಳಿ ತಲಾಖ್‌ಗಿಂತ ಮುಖ್ಯವಾದ, ಮಹಿಳೆಯರಿಗೇ ಸಂಬಂಧಿಸಿದ ಅನೇಕ ಗುರುತರ ಸಮಸ್ಯೆಗಳು ತಾಂಡವವಾಡುತ್ತಿವೆ. ಮುಸ್ಲಿಂ ಮಹಿಳೆಗೆ ನಿಜವಾಗಿಯೂ ನ್ಯಾಯ ಒದಗಿಸಬೇಕೆಂಬ ಇರಾದೆ ಇದ್ದಿದ್ದೇ ಆದರೆ ಮುಸ್ಲಿಂ ಹೆಣ್ಣು ಮಕ್ಕಳನ್ನು  ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಖ್ಯವಾಗಿ ಮಾನಸಿಕವಾಗಿ ಸದೃಢಗೊಳಿಸಲಿ. ಆಗ ತಲಾಖ್ ಎನ್ನುವ ಗುಮ್ಮನನ್ನು ಮುಸ್ಲಿಂ ಹೆಣ್ಣು ಮಕ್ಕಳೇ ಧೈರ್ಯವಾಗಿ ಅಳಿಸಿ ಹಾಕಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡುತ್ತಾರೆ.

-ಡಾ. ಷಾಕಿರಾ ಖಾನಂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.