ಎಲ್ಲರಂಥಲ್ಲದ ಶಾಲಿನಿ

7

ಎಲ್ಲರಂಥಲ್ಲದ ಶಾಲಿನಿ

Published:
Updated:
ಎಲ್ಲರಂಥಲ್ಲದ ಶಾಲಿನಿ

‘ಸಿನಿಮಾ ಬಿಡುಗಡೆಯಾಗುವವರೆಗೆ ನನ್ನ ಪಾತ್ರದ ಗುಟ್ಟನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಚಿತ್ರ ಬಿಡುಗಡೆಯಾದಾಗಲೇ ನಾನು ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಗೊತ್ತಾಗಿದ್ದು. ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹುಡುಗಿಯಾಗಿ ನಾನು ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಿಶ್ರ ಪ್ರತಿಕ್ರಿಯೆಗಳೂ ಬಂದಿವೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ, ಒಂದೊಳ್ಳೆ ಪಾತ್ರ ಮಾಡಿದ ತೃಪ್ತಿ ನನಗಿದೆ...’

ಇತ್ತೀಚೆಗೆ ತೆರೆಕಂಡ ‘ಕರಾಲಿ’ ಚಿತ್ರದಲ್ಲಿನ ಮಂಗಳಮುಖಿ ಪಾತ್ರದ ಮೂಲಕ ಗಮನ ಸೆಳೆದಿರುವ ನಟಿ ಶಾಲಿನಿ ಭಟ್ ಆತ್ಮವಿಶ್ವಾಸದ ಮಾತುಗಳಿವು. ಇಂತಹದ್ದೊಂದು ಪಾತ್ರವೆಂದರೆ ನಟಿಯರು ಮೈಲು ದೂರ ಓಡಿ ಹೋಗುವ ಕಾಲವಿದು. ಆದರೆ, ‘ಕಲಾವಿದರಾದವರು ನಿರ್ದಿಷ್ಟ ಪಾತ್ರದ ಹಂಗಿಗೆ ಬೀಳಬಾರದು’ ಎಂಬ ಮಾತಿನಂತೆ ಮಂಗಳಮುಖಿ ಪಾತ್ರಕ್ಕೆ ಜೀವ ತುಂಬಿರುವ ಶಾಲಿನಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಶೃಂಗೇರಿಯವರಾದ ಶಾಲಿನಿ, ಕಾಲೇಜು ದಿನಗಳಿಂದಲೇ ನಾಟಕದ ನಂಟು ಬೆಳೆಸಿಕೊಂಡವರು. ಓದಿದ್ದು ಬಿಎಸ್ಸಿ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದ ಅವರಿಗೆ ಅಭಿನಯದ ಅವಕಾಶಗಳೂ ಇಲ್ಲಿ ದೊರೆತವು. ನಾಗರಾಜ ಕೋಟೆ ಅವರ ರಂಗಭೂಮಿ ತಂಡ ‘ಬಣ್ಣ’ದಲ್ಲಿ ಒಂದಷ್ಟು ದಿನ ಪಳಗಿದರು. ಹಲವು ನಾಟಕಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯ ಸಂಪರ್ಕ ಸಿಕ್ಕಿತು.

‘ಕರಾಲಿ’ಗೆ ಮಂಗಳಮುಖಿಯರ ಸಾಥ್

ಶಾಲಿನಿಗೆ ‘ಕರಾಲಿ’ ಚಿತ್ರದಲ್ಲಿ ಅವಕಾಶ ಸಿಕ್ಕ ಪ್ರಸಂಗವೂ ಆಸಕ್ತಿಕರವಾಗಿದೆ. ಧಾರಾವಾಹಿಯೊಂದರ ಸೆಟ್‌ನಲ್ಲಿದ್ದಾಗ ಸ್ನೇಹಿತರೊಬ್ಬರು ಕರೆ ಮಾಡಿ ‘ಕರಾಲಿ’ ಚಿತ್ರದ ಆಡಿಷನ್‌ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಶಾಲಿನಿ ಆಡಿಷನ್ ಸ್ಥಳಕ್ಕೆ ಹೋಗುವ ಹೊತ್ತಿಗಾಗಲೇ, ಚಿತ್ರದಲ್ಲಿರುವುದೇ ನಾಲ್ಕು ಪಾತ್ರಗಳ ಪ್ರವೇಶ ಪರೀಕ್ಷೆ ಮುಗಿದಿತ್ತು.

ಉದಾರಿ ನಿರ್ದೇಶಕರು ಸಿಡುಕದೆ ಪಾತ್ರದ ಸ್ವಭಾವ ಕುರಿತು ಹೇಳಿ, ಚಿತ್ರದ ಒಂದೆರಡು ಸೆಂಟಿಮೆಂಟ್ ಡೈಲಾಗ್ ಹೇಳುವಂತೆ ಸೂಚಿಸಿದರು. ಡೈಲಾಗ್ ಜತೆಗೆ ನಟಿಸಿ ತೋರಿಸಿದಾಗ ನಾಲ್ವರ ಪೈಕಿ ಪ್ರಮುಖ ಪಾತ್ರಕ್ಕೆ ಶಾಲಿನಿ ಆಯ್ಕೆಯಾದರು.

‘ಆರಂಭದಲ್ಲಿ ಕಥೆ ಕೇಳಿದಾಗ ಸ್ವಲ್ಪ ಹಾಗೆ, ಹೀಗೆ ಬಂದು ಹೋಗುವ ಮಂಗಳಮುಖಿಯ ಪಾತ್ರವಿರಬಹುದು ಅಂದುಕೊಂಡೆ. ಆದರೆ, ಶೂಟಿಂಗ್ ಆರಂಭವಾದಾಗಲೇ ಗೊತ್ತಾಗಿದ್ದು ಆ ಪಾತ್ರಕ್ಕಿರುವ ಆಳ ಎಷ್ಟಿದೆ ಅಂತ. ಚಿತ್ರದ ಆಡಿಷನ್ ಮುಗಿದ ಕೆಲವೇ ದಿನಗಳಲ್ಲಿ ಚಿತ್ರ ಆರಂಭವಾದ್ದರಿಂದ, ತಯಾರಿಗೆ ಹೆಚ್ಚು ಸಮಯ ಸಿಗಲಿಲ್ಲ’ ಎನ್ನುವ ಶಾಲಿನಿಗೆ ‘ಕರಾಲಿ’ ಪಾತ್ರದ ಪರಕಾಯ ಪ್ರವೇಶ ಮಾಡಲು ನೆರವಾಗಿದ್ದು ಮಂಗಳಮುಖಿಯರೇ ಎಂಬುದು ವಿಶೇಷ.

‘ಮಂಗಳಮುಖಿಯರಂತೆ ಚಪ್ಪಾಳೆ ಹೊಡೆಯುವುದೇ ಕಷ್ಟವಾಗುತ್ತಿತ್ತು. ಅವರ ಕುರಿತು ಸ್ವಲ್ಪ ಓದಿ ತಿಳಿದುಕೊಂಡು, ಕೆಲ ವಿಡಿಯೊ ತುಣುಕುಗಳನ್ನು ನೋಡಿದೆ. ಅಲ್ಲದೆ, ಸೆಟ್‌ನಲ್ಲಿದ್ದ ಒಂದಿಬ್ಬರು ಮಂಗಳಮುಖಿಯರು ಸಹ ನನ್ನ ಹಾವಭಾವಗಳನ್ನು ತಿದ್ದಿದರು. ಶೂಟಿಂಗ್‌ ಸೆಟ್‌ನಲ್ಲಿ ಮಂಗಳಮುಖಿಯರ ಜತೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರಿಂದ, ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದೆ. ಡಬ್ಬಿಂಗ್ ಕೂಡ ನಾನೇ ಮಾಡಿದ್ದೇನೆ’ ಎಂದು ಶಾಲಿನಿ ‘ಕರಾಲಿ’ಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಸಾರ್ಥಕ ಕ್ಷಣ

ಸಿನಿಮಾ ಬಿಡುಗಡೆಯಾದಾಗಿನಿಂದ ಶಾಲಿನಿ ಏಳೆಂಟು ಸಲ ಸಿನಿಮಾ ವೀಕ್ಷಿಸಿದ್ದಾರೆ. ಆದರೆ, ಮಂಗಳಮುಖಿಯರು ಬಂದು ಸಿನಿಮಾ ನೋಡಿದಾಗಲೇ ಅವರಿಗೆ ತಮ್ಮ ಪಾತ್ರದ ಬಗ್ಗೆ ಸಾರ್ಥಕ ಭಾವ ಮೂಡಿದ್ದಂತೆ.

‘ಚಿತ್ರ ನೋಡಿದವರೆಲ್ಲರೂ ಚನ್ನಾಗಿ ನಟಿಸಿದ್ದೀರಿ ಎನ್ನುತ್ತಿದ್ದರು. ಆದರೆ, ನನಗೆ ‘ಹೌದಾ’ ಎನಿಸಿದ್ದು ಮಂಗಳಮುಖಿಯರ ಜತೆಗೆ ಸಿನಿಮಾ ನೋಡಿದಾಗ. ನನ್ನ ದೃಶ್ಯ ಬಂದಾಗ ಅವರು ಅಳುತ್ತಿದ್ದರು. ಅಲ್ಲದೆ, ಚಿತ್ರ ಮುಗಿದ ಮೇಲೆ ‘ನಿಜವಾಗಿಯೂ ಮಂಗಳಮುಖಿಯಂತೆಯೇ ನಟಿಸಿದ್ದೀರಿ’ ಅಂತ ಬೆನ್ನು ತಟ್ಟಿದರು. ಆಗ ನನಗೆ ಒಂದು ರೀತಿಯ ಸಾರ್ಥಕ ಭಾವ ಮೂಡಿತು’ ಎಂದು ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

‘ಕರಾಲಿ’ಯನ್ನು ಮೊದಲ ದಿನವೇ ನೋಡಿದ ಅಣ್ಣ, ಅತ್ತಿಗೆ, ತುಂಬಾ ಚೆನ್ನಾಗಿ ನಟಿಸಿದ್ದೀಯಾ’ ಎಂದು ಕರೆ ಮಾಡಿ ಹೇಳಿದರು. ಇಷ್ಟು ವರ್ಷ ನಾನು ನಟಿಸಿದ ಧಾರಾವಾಹಿ ಮತ್ತು ಚಿತ್ರಗಳನ್ನು ನೋಡಿ ಏನೂ ಹೇಳದ ಅಣ್ಣ, ಈ ಚಿತ್ರದ ನಟನೆಗೆ ಹಾಗೆ ಹೇಳಿದ್ದು ಕೇಳಿ ಕಣ್ಣುಗಳು ತುಂಬಿ ಬಂದವು’ ಎಂದು ಅವರು ಸಂತೋಷ ವ್ಯಕ್ತಪಡಿಸುತ್ತಾರೆ.

ಸಿನಿಮಾಗಳಲ್ಲಿ ನಾನು ನಾಯಕಿ ನಟಿಯಾಗಬೇಕು ಎಂಬ ಬಯಕೆ ಸಾಮಾನ್ಯವಾಗಿ ಎಲ್ಲ ನಟಿಯರದು. ಆದರೆ, ಶಾಲಿನಿ ಅವರು ಯೋಚಿಸುವ ಬಗೆ ಸ್ವಲ್ಪ ಭಿನ್ನ. ‘ನಾನು ಇಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳಬೇಕು ಅಂತ ಎಂದಿಗೂ ಯೋಚಿಸಿಲ್ಲ. ಹಾಸ್ಯ ನಟಿಯಾಗಬೇಕು ಎಂಬುದು ಮಾತ್ರ ನನ್ನ ಮನಸ್ಸಿನಲ್ಲಿದೆ. ಉಮಾಶ್ರೀ, ರೇಖಾದಾಸ್ ಸೇರಿದಂತೆ ಕನ್ನಡದಲ್ಲಿ ಹಿಂದೆ ಅಂತಹ ಹಾಸ್ಯನಟಿಯರಿದ್ದರು.

ಇತ್ತೀಚೆಗೆ ಹೆಣ್ಣುಮಕ್ಕಳ ಹಾಸ್ಯಪಾತ್ರಗಳು ತೀರಾ ಕಡಿಮೆಯಾಗಿವೆ. ಈಗ ಪುರುಷರಿಗೇ ಹೆಚ್ಚಿನ ಆದ್ಯತೆ ಇದೆ. ಯಾಕೆಂದರೆ, ಅವರೆಲ್ಲರೂ ಸಿನಿಮಾ ಬರಹಗಾರರ ಮನಸ್ಸಿನಲ್ಲಿ ಗುರುತಾಗಿದ್ದಾರೆ. ಅದೇ ರೀತಿ ಹಾಸ್ಯನಟಿಯರೂ ಯಾವುದಾದರೂ ಒಂದೆರಡು ಸಿನಿಮಾದಲ್ಲಿ ಗಮನ ಸೆಳೆದರೆ, ಖಂಡಿತಾ ಅಂತಹವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕೇ ಸಿಗುತ್ತವೆ ಎಂಬುದು ನನ್ನ ನಂಬಿಕೆ’ ಎನ್ನುತ್ತಾರೆ ಶಾಲಿನಿ.

ನಾಟಕಗಳಲ್ಲಿ ಶಾಲಿನಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದದ್ದು ಹಾಸ್ಯ ಪಾತ್ರಗಳಲ್ಲೇ. ಹಾಸ್ಯದ ಲೇಪ ಇರುವ ‘ಗಬ್ಬರ್’ ನಾಟಕದ ಮೂಕಿ ಪಾತ್ರ ಅವರಿಗೆ ಅಚ್ಚುಮೆಚ್ಚು. ಈ ಪಾತ್ರವೇ ಕಿರುತೆರೆಯ ಪ್ರವೇಶಕ್ಕೆ ಏಣಿಯೂ ಆಯಿತು. ‘ರೋಬೊ ಫ್ಯಾಮಿಲಿ’ ಶಾಲಿನಿ ನಟಿಸಿದ ಮೊದಲ ಧಾರಾವಾಹಿ. ಸದ್ಯ ‘ಗುಂಡ್ಯನ ಹೆಂಡ್ತಿ’ ಮತ್ತು ‘ಗಂಗಾ’ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಶಕ್ತಿದೇವತೆ ಕಬ್ಬಾಳಮ್ಮ’, ‘ಸತ್ಯನಾರಾಯಣ’, ‘ಅಲ್ಲಮ’, ‘14 ಡೇಸ್’, ‘ಔಲಾ ಔಲಾ’ ಹಾಗೂ  ‘ಬಿಎಂಡಬ್ಲ್ಯೂ’ ಚಿತ್ರಗಳಲ್ಲಿ ಶಾಲಿನಿ ಕಾಣಿಸಿಕೊಂಡಿದ್ದಾರೆ. ‘ಕರಾಲಿ’ ಅವರ ಏಳನೇ ಚಿತ್ರ. ಈ ಪೈಕಿ ಇನ್ನೂ ಮೂರು ಬಿಡುಗಡೆಯಾಗಬೇಕಿದೆ. ‘ಕರಾಲಿ’ಗೆ ಮೆಚ್ಚುಗೆ ಹರಿದುಬರುತ್ತಿರುವ ಬೆನ್ನಲ್ಲೇ, ಇನ್ನೂ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

*

‘ನನ್ನ ವಯಸ್ಸಿನಲ್ಲಿರುವವರಿಗೆ ನಾಯಕಿ ನಟಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ತವಕವೇ ಹೆಚ್ಚು. ಆದರೆ, ನನಗೆ ಅಂತಹ ಯಾವುದೇ ಬಯಕೆ ಇಲ್ಲ. ಬದಲಿಗೆ, ಎಲ್ಲರನ್ನು ನಗಿಸುವ ಹಾಸ್ಯ ನಟಿಯಾಗಬೇಕು. ಅದಕ್ಕೆ, ನನಗಿರುವ ಉದ್ದನೆಯ ಮೂಗು ಕೂಡ ಕಾರಣ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry