ಹೊರದೇಶದಲ್ಲಿ ಮುಜುಗರಕ್ಕೀಡಾದ ಮುಜರಾಯಿ ಸಚಿವ ಲಮಾಣಿ

7

ಹೊರದೇಶದಲ್ಲಿ ಮುಜುಗರಕ್ಕೀಡಾದ ಮುಜರಾಯಿ ಸಚಿವ ಲಮಾಣಿ

Published:
Updated:
ಹೊರದೇಶದಲ್ಲಿ ಮುಜುಗರಕ್ಕೀಡಾದ ಮುಜರಾಯಿ ಸಚಿವ ಲಮಾಣಿ

ಯಲವಿಗಿ (ಹಾವೇರಿ ಜಿಲ್ಲೆ): ಸ್ವಚ್ಛತೆ ಕಾಯ್ದುಕೊಳ್ಳುವ ವಿಷಯವಾಗಿ ವಿದೇಶದವರಿಂದ ಬೆರಳು ತೋರಿಸಿಕೊಳ್ಳಬೇಕಾಗಿ ಬಂದ ಕ್ಷಣ ಹಾಗೂ ಆಗ ತಾವು ಎದುರಿಸಿದ ಮುಜುಗರದ ಪ್ರಸಂಗವನ್ನು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಶುಕ್ರವಾರ ಇಲ್ಲಿ ಹೊರಹಾಕಿದರು.

ಸವಣೂರ ತಾಲ್ಲೂಕು ಯಲವಿಗಿ ಗ್ರಾಮದಲ್ಲಿ ‘ನರೇಗಾ’ ಅಡಿ ನಡೆದ ಹೊಲದ ಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ ಕೂಲಿ ಕಾರ್ಮಿಕರೊಂದಿಗೆ ತಾವೂ ಗುದ್ದಲಿ ಹಿಡಿದು ಕೆಲಸ ಮಾಡಿದ ಅವರು ಕೂಲಿಕಾರರನ್ನು ಹುರಿದುಂಬಿ ಸಿದರು. ಆ ಬಳಿಕ  ಅವರ ಸಮಸ್ಯೆಗಳನ್ನು ಆಲಿಸುತ್ತ, ತಾವು ನ್ಯೂಜಿಲೆಂಡ್‌ ಪ್ರವಾಸದಲ್ಲಿ ಪಟ್ಟ ಪಾಡನ್ನೂ ಹಂಚಿಕೊಂಡರು.

‘ಸರೋವರವೊಂದರಲ್ಲಿ ಸ್ನಾನ ಮಾಡಿ, ಬದಿಯಲ್ಲೇ ಅಂಗಿ ಮತ್ತು ಲುಂಗಿ ಹಾಕಿಕೊಂಡೆ. ತಕ್ಷಣವೇ, ಬಳಿಗೆ ಬಂದ ಪೊಲೀಸರೊಬ್ಬರು, ‘ನೀವು ಇಂಡಿಯಾದಿಂದ ಬಂದಿದ್ದೀರಾ?’ ಎಂದು ಕೇಳಿದರು. ‘ಹೌದು’ ಎಂದೆ. ‘ಗೊತ್ತಾಯಿತು, ಇಂಡಿಯಾದವರು ಸುಪ್ರಸಿದ್ಧರು’ ಎಂದರು. ಯಾಕೆ ಎಂದು ಕೇಳಿದಾಗ ‘ಬಟ್ಟೆ ಹಾಕಲು ಪ್ರತ್ಯೇಕ ಸ್ಥಳವಿದ್ದರೂ, ಇಲ್ಲೇ ಬದಲಾಯಿಸುತ್ತೀರಲ್ಲಾ?’ ಎಂದರು.

‘ಇನ್ನೊಮ್ಮೆ, ಬೋಟಿಂಗ್ ವೇಳೆ ನಮ್ಮ ಜೊತೆಗಾರರು ಐಸ್‌ಕ್ರೀಂ ತಿಂದ ಕಾಗದವನ್ನು ಸಮುದ್ರಕ್ಕೆ ಎಸೆದರು.  ತೀರಕ್ಕೆ ಬಂದ ತಕ್ಷಣವೇ ಪೊಲೀಸರೊಬ್ಬರು, ‘ಇಂಡಿಯಾದಿಂದ ಬಂದಿದ್ದೀರಾ? ಕಂಡ ಕಂಡಲ್ಲಿ ಕಸ ಹಾಕುವುದನ್ನು ಕಂಡಾಗಲೇ ಗೊತ್ತಾಯಿತು’ ಎಂದಾಗಲೂ ಹಾಗೇ ಆಯಿತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry