ಆಹಾರದ ಹಕ್ಕನ್ನೇ ಕಸಿದ ಕೇಂದ್ರ ಸರ್ಕಾರ

7
ಗೋಹತ್ಯೆ ನಿಷೇಧದ ಸಾಧಕ ಬಾಧಕ ಕುರಿತ ಚಿಂತನ ಮಂಥನ ಸಭೆಯಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕಿಡಿ

ಆಹಾರದ ಹಕ್ಕನ್ನೇ ಕಸಿದ ಕೇಂದ್ರ ಸರ್ಕಾರ

Published:
Updated:
ಆಹಾರದ ಹಕ್ಕನ್ನೇ ಕಸಿದ ಕೇಂದ್ರ ಸರ್ಕಾರ

ಕೋಲಾರ: ‘ಕೇಂದ್ರ ಸರ್ಕಾರ ಜಾನುವಾರುಗಳ ಮಾರಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸುವ ಮೂಲಕ ಜನರ ಆಹಾರದ ಹಕ್ಕನ್ನೇ ಕಸಿದುಕೊಂಡಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕಿಡಿಕಾರಿದರು.

ಗೋಹತ್ಯೆ ನಿಷೇಧದ ಸಾಧಕ ಬಾಧಕಗಳ ಕುರಿತು ಪ್ರಗತಿಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, ‘ಜಾಗತಿಕ ಮಾರುಕಟ್ಟೆಗೆ ಪ್ರತಿನಿತ್ಯ ಗೋಮಾಂಸ ರಫ್ತಾಗುತ್ತಿದೆ. ಇದನ್ನು ನಿಲ್ಲಿಸಿದರೆ ಎದುರಾಗುವ ಪರಿಣಾಮಗಳೇನು ಎಂಬ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸದೆ ತರಾತುರಿಯಲ್ಲಿ ಜಾನುವಾರು ಮಾರಾಟ ನಿರ್ಬಂಧಿಸಿದೆ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರಕ್ಕೆ ಅಧಿಕಾರದ ಮದವೇರಿದೆ. ಸರ್ಕಾರದ ಭಾಗವಾಗಿರುವ ಪ್ರಧಾನ ಮಂತ್ರಿ ಹಾಗೂ ಸಚಿವರಿಗೆ ಅಧಿಕಾರದ ಅಹಂಕಾರ ನೆತ್ತಿಗೇರಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಆಹಾರವು ಸಂವಿಧಾನಬದ್ಧ ಹಕ್ಕು. ಕೇಂದ್ರವು ಹತ್ಯೆ ಉದ್ದೇಶಕ್ಕಾಗಿ ಜಾನುವಾರು ಮಾರಾಟ ನಿರ್ಬಂಧಿಸುವ ಮೂಲಕ ಆಹಾರದ ಹಕ್ಕನ್ನೇ ದಮನ ಮಾಡಲು ಹೊರಟಿದೆ’ ಎಂದು ವಾಗ್ದಾಳಿ ನಡೆಸಿದರು.

ತಾತ್ವಿಕ ನೆಲೆಯಿಲ್ಲ: ‘ದಿನ ಬೆಳಗಾದರೆ ಸಂಘಟನೆಗಳು ಸ್ಥಾಪನೆಯಾಗುತ್ತಿವೆ. ಇವುಗಳ ಹೋರಾಟಕ್ಕೆ ತಾತ್ವಿಕ ನೆಲೆಯಿಲ್ಲ. ಇನ್ನು ಈ ಸಂಘಟನೆಗಳು ಹೋರಾಟದಲ್ಲಿ ಗೆಲುವು ಕಂಡಿದ್ದನ್ನು ನೋಡಿಯೇ ಇಲ್ಲ. ಹೋರಾಟದಲ್ಲಿ ಸೋಲುವುದಕ್ಕಾಗಿಯೇ ಈ ಸಂಘಟನೆಗಳು ಸಿದ್ಧವಾಗಿವೆ. ವಾಕಾರಿಕೆ ಬರುವ ಹೆಸರಿಟ್ಟುಕೊಂಡು ಹಾದಿ ಬೀದಿಯಲ್ಲಿ ಹೋರಾಟ ಮಾಡುವ ಸಂಘಟನೆಗಳ ಸದಸ್ಯರು ಸರ್ಕಾರಗಳ ಕಿವಿ ಹಿಂಡುವ ಕೆಲಸ ತಮ್ಮಿಂದಲೇ ಆಗಬೇಕೆಂದು ಭಾಷಣ ಮಾಡುತ್ತಾರೆ. ಇವೆಲ್ಲಾ ಹಣ ಸಂಪಾದನೆಯ ಪ್ರಯತ್ನಗಳು’ ಎಂದು ಟೀಕಿಸಿದರು.

ಪ್ರಸ್ತಾಪವಿಲ್ಲ: ‘ಗೋಹತ್ಯೆ ನಿಷೇಧವು ಆಯಾ ರಾಜ್ಯ ನಿರ್ದೇಶಕ ತತ್ವಗಳ ಒಳಪಟ್ಟ ವಿಚಾರ. ಈ ಬಗ್ಗೆ ಸಂವಿಧಾನದಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುವುದು ತಪ್ಪು’ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಪ್ರಕಾಶ್ ಅಭಿಪ್ರಾಯಪಟ್ಟರು.

‘ಗೋ ಹತ್ಯೆ ನಿಷೇಧ ವಿಷಯ ಹೊಸದೇನಲ್ಲ. ಈ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಅಧಿವೇಶನಗಳಲ್ಲಿ ಸಾಕಷ್ಟು ಚರ್ಚೆಯಾಗಿ ಗೋ ಹತ್ಯೆ ನಿಷೇಧವನ್ನು ತಿರಸ್ಕರಿಸಲಾಗಿದೆ. ಆದರೆ, ಈಗೀನ ಕೇಂದ್ರ ಸರ್ಕಾರ ಮಾಂಸದ ಉದ್ದೇಶಕ್ಕೆ ಗೋವುಗಳನ್ನು ಮಾರಾಟ ಮಾಡಬಾರದೆಂದು ಆದೇಶ ಜಾರಿಗೊಳಿಸಲು ಮುಂದಾಗಿದೆ. ನಿರುಪಯುಕ್ತ ಗೋವುಗಳನ್ನು ಮಾತೃ ಸಮಾನವೆಂದು ಬಿಂಬಿಸುವ ಪ್ರಯತ್ನ ನಡೆದಿದೆ’ ಎಂದು ಹೇಳಿದರು.

‘ಸಂವಿಧಾನ ರಚನಾ ಸಮಿತಿಯಲ್ಲಿದ್ದ ಮೇಲ್ವರ್ಗದವರು ಮತ್ತು ಪಂಡಿತರು ಗೋವುಗಳನ್ನು ಕೊಲ್ಲಬಾರದೆಂದು ಪ್ರತಿಪಾದಿಸಿದ್ದರು. ಕೃಷಿ, ಹೈನುಗಾರಿಕೆ ಮತ್ತು ಸಾಗಾಣಿಕೆಯ ಜತೆಗೆ 12 ವರ್ಷದ ಮೇಲಿನ ಹಸು, ಎಮ್ಮೆ, ಎತ್ತುಗಳನ್ನು ಆಹಾರವಾಗಿ ಬಳಸಿಕೊಳ್ಳಲು ಸಂವಿಧಾನವು ರಾಜ್ಯಗಳಿಗೆ ಅಧಿಕಾರ ನೀಡಿದೆ’ ಎಂದು ವಿವರಿಸಿದರು.

‘ಈ ಹಿಂದೆ ಪುರೋಹಿತಶಾಹಿ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿ ದನದ ಮಾಂಸ ತಿನ್ನುತ್ತಿದ್ದರು. ದನದ ಮಾಂಸವಿಲ್ಲದೆ ಬದುಕೇ ಇಲ್ಲ ಎಂಬಂತೆ ಇದ್ದರು. ಋಗ್ವೇದ ಕಾಲದ ಇತಿಹಾಸದಲ್ಲಿ ಇದಕ್ಕೆ ಸಾಕಷ್ಟು ಪುರಾವೆಗಳಿವೆ. ಮನುಸ್ಮೃತಿಯ ಶ್ಲೋಕಗಳಲ್ಲಿ ದನದ ಮಾಂಸ ತಿನ್ನಬಾರದೆಂದು ಎಲ್ಲಿಯೂ ಹೇಳಿಲ್ಲ’ ಎಂದು ಪ್ರತಿಪಾದಿಸಿದರು.

ನಗರಸಭೆ ಸದಸ್ಯ ನಾರಾಯಣಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ದಲಿತ ಮುಖಂಡರಾದ ರಾಜಪ್ಪ, ಟಿ.ವಿಜಯ್‌ಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

**

ದೇಶದಲ್ಲಿ ಜಾನುವಾರು ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸೀಮೆ ಹಸುಗಳ ಸಂಖ್ಯೆ ಶೇ 32ರಷ್ಟು ಹೆಚ್ಚಳವಾಗಿದ್ದು, ದೇಸಿ ಹಸುಗಳ ಸಂಖ್ಯೆ ಶೇ 20ರಷ್ಟು ಕಡಿಮೆಯಾಗಿದೆ

-ಪ್ರಕಾಶ್, ಸಿಪಿಎಂ ರಾಜ್ಯ ಸಮಿತಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry