ಉ.ಕ. ಅಲೆಮಾರಿಗಳ ಬದುಕು ಅತಂತ್ರ

7
ಗುಂಡೂರಾವ್ ಬಡಾವಣೆ ಅಭಿವೃದ್ಧಿಗೆ ಮುಂದಾದ ಪಟ್ಟಣ ಪಂಚಾಯಿತಿ

ಉ.ಕ. ಅಲೆಮಾರಿಗಳ ಬದುಕು ಅತಂತ್ರ

Published:
Updated:
ಉ.ಕ. ಅಲೆಮಾರಿಗಳ ಬದುಕು ಅತಂತ್ರ

ಕುಶಾಲನಗರ: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯಲ್ಲಿ 8 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ಉತ್ತರ ಕರ್ನಾಟಕದ 24 ಅಲೆಮಾರಿ ಕುಟುಂಬಗಳ ಬದುಕು ಅತಂತ್ರವಾಗಿದೆ.

18 ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಣಿಸಿಕೊಂಡ ಭೀಕರ ಬರಗಾಲ ಹಾಗೂ ಕುಡಿಯುವ ನೀರಿನ ಹಾಹಾಕಾರದಿಂದ ತೀವ್ರ ಸಮಸ್ಯೆಗೆ ಸಿಲುಕಿದ್ದ ಜನರು ನಗರ ಪ್ರದೇಶಗಳಿಗೆ ಗುಳೆ ಹೊರಟು ತಮ್ಮ ಬದುಕು ಕಟ್ಟಿಕೊಂಡರು.

ಅದರಂತೆ ಹುಬ್ಬಳ್ಳಿ ಹಾಗೂ ತುಮಕೂರು ಜಿಲ್ಲೆಗಳಿಂದ ಕೂಲಿ ಅರಸಿ ಕೊಂಡು ಗುಳೆ ಹೊರಟ ಈ ಕುಟುಂಬ ಗಳು ಕೊಡಗು ಜಿಲ್ಲೆಗೆ ಬಂದು ಇಲ್ಲಿನ ಬೈಚನಹಳ್ಳಿ ಗ್ರಾಮದಲ್ಲಿ ಬಂದು ಟೆಂಟ್ ನಿರ್ಮಿಸಿಕೊಂಡು ಕೂಲಿ ಕೆಲಸ ಮಾಡಿ  ಜೀವನ ನಡೆಸುತ್ತಿದ್ದರು.

ಹತ್ತಾರು ವರುಷಗಳೇ ಕಳೆದರೂ ಈ ಕುಟುಂಬಗಳು ಮತ್ತೆ ತಮ್ಮ ಊರುಗಳ ಕಡೆಗೆ ಹೋಗಲಿಲ್ಲ. ಏಕೆಂದರೆ ಇಲ್ಲಿ ನಿತ್ಯ ಸಿಗುವ ಕೂಲಿಯಿಂದ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಅಲ್ಲದೆ ತಲೆಯ ಮೇಲೊಂದು ಶಾಶ್ವತ ಸೂರಿ ಗಾಗಿ ನಿತ್ಯ ಪರಿತಪಿಸುತ್ತಿದ್ದಾರೆ.

ಬೈಚನಹಳ್ಳಿಯಲ್ಲಿ 10 ವರ್ಷ ಕಾಲ ಜೀವನ ನಡೆಸಿದ ಈ ಕುಟುಂಬಗಳನ್ನು ಜನರು ಗಲಾಟೆ ಮಾಡಿ ಅಲ್ಲಿಂದಲೂ ಒಕ್ಕಲೆಬ್ಬಿಸಿದರು. ನಂತರ ಗುಂಡೂರಾವ್ ಬಡಾವಣೆಗೆ ಬಂದು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ತಮ್ಮ ಬದುಕು ಕಂಡುಕೊಂಡಿದ್ದರು. ಬಡಾವಣೆ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಿಗಳು ಇಲ್ಲಿಂದಲೂ ಆ ಕುಟುಂಬಗಳನ್ನು ಎತ್ತಂಗಡಿ ಮಾಡಿಸುತ್ತಿದ್ದಾರೆ.

ಈ ಕುಟುಂಬಗಳಿಗೆ ಶಾಶ್ವತ ಮನೆ ಇಲ್ಲದೆ ಹೋದರೂ ಮತದಾರರ ಚೀಟಿ ಯನ್ನು ಹೊಂದಿವೆ. ಬಿಪಿಎಲ್ ಕಾರ್ಡ್‌ ನೀಡಲಾಗಿದೆ. ಪಟ್ಟಣ ಪಂಚಾಯಿತಿ ಕುಡಿಯುವ ನೀರಿನ ವ್ಯವಸ್ಥೆ  ಬಿಟ್ಟರೆ ಇತರೆ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ.

ಆದರೂ ಕೊರತೆಯ ನಡುವೆ ಸಣ್ಣಪುಟ್ಟ ಮಕ್ಕಳೊಂದಿಗೆ ಜೀವನ ನಡೆಸಿ ಕೊಂಡು ಬಂದ ಕುಟುಂಬಗಳಿಗೆ ಅಲೆಮಾರಿ ಬದುಕು ನಿತ್ಯ ನರಕಯಾತನೆ ಯಾಗಿದೆ.

ಗುಂಡೂರಾವ್ ಬಡಾವಣೆಯಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಬಹಿ ರಂಗ ಹರಾಜು ಹಾಕಲು ಪಂಚಾಯಿತಿ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ  ಗುಡಿ ಸಲು ತೆರವುಗೊಳಿಸಿ ಜಾಗ ಸಮತಟ್ಟು ಗೊಳಿಸುವ ಕಾರ್ಯ ನಡೆಸಿದೆ.

ನಿವಾಸಿಗಳು ತಮ್ಮ ಗುಡಿಸಲು ಗಳಲ್ಲಿದ್ದ ಸಾಮಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ಪರ್ಯಾಯ ಸ್ಥಳಕ್ಕೆ ತೆರಳುತ್ತಿದ್ದಾರೆ. ಈ ವಸತಿ ರಹಿತ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ವಸತಿ ವಿದ್ಯಾರ್ಥಿ ನಿಲಯದ ಬಳಿ ತಾತ್ಕಾಲಿಕ ವಾಗಿ ಜಾಗ ನೀಡಿದೆ.

ಕೂಲಿ ಅರಸಿಕೊಂಡು ಇಲ್ಲಿಗೆ ಬಂದಿದ್ದೇವೆ. ಆದರೆ ನಮಗೆ ಮನೆ ಇಲ್ಲ, ಮಠ ಇಲ್ಲ , ಗಾಳಿಮಳೆ ನಡುವೆ ಟೆಂಟ್ ನಿರ್ಮಿಸಿಕೊಂಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದೇವೆ. ನಮ್ಮ ಸಮಸ್ಯೆಗೆ ಪರಿಹಾರ ಯಾವಾಗ? ಎಂದು ಕಮಲಮ್ಮ ತಮ್ಮ ಅಳಲು ತೋಡಿ ಕೊಂಡಿದ್ದಾರೆ.

**

ಗುಂಡೂರಾವ್ ಬಡಾವಣೆ ಬಳಿ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಳ್ಳಲು ಜಾಗ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲಾಗುವುದು.

-ಶ್ರೀಧರ್

ಪ.ಪಂ ಮುಖ್ಯಾಧಿಕಾರಿ

**

ಒಂದು ವರ್ಷದ ನಂತರ ಮಾರುಕಟ್ಟೆ ಬಳಿ ಮನೆ ನಿರ್ಮಿಸಿಕೊಡುವುದಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

-ಮಂಜುನಾಥ್

ಅಲೆಮಾರಿ ನಿವಾಸಿ

**

-ರಘು ಹೆಬ್ಬಾಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry