ಸಾಮಾಜಿಕ ಕಳಕಳಿಯ ‘ಜಗಚಿತ್ರ’

7

ಸಾಮಾಜಿಕ ಕಳಕಳಿಯ ‘ಜಗಚಿತ್ರ’

Published:
Updated:
ಸಾಮಾಜಿಕ ಕಳಕಳಿಯ ‘ಜಗಚಿತ್ರ’

ಕಲೆ ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವ ಸೇತು. ನಿಸ್ವಾರ್ಥ ಸೇವೆಯ ಉದ್ದೇಶಕ್ಕೆ ಕಲಾಮಾಧ್ಯಮವನ್ನು ಬಳಸಿಕೊಂಡಾಗ ಕಲೆಯ ಮೌಲ್ಯವೂ ಹೆಚ್ಚುತ್ತದೆ.

‘ಥ್ಯಾಂಕ್ ಗಾಡ್ ಇಟ್ಸ್ ಸಾಟರ್ಡೆ’ (ಟಿಜಿಐಎಸ್) ಎನ್ನುವ ಛಾಯಾಗ್ರಾಹಕರ ಗುಂಪು, ಮಲ್ಟಿಪಲ್ ಸ್ಕ್ಲೆರಾಸಿಸ್ (ಎಂಎಸ್) (ಜೀವಕೋಶಗಳ ಮರಗಟ್ಟುವಿಕೆ) ಕಾಯಿಲೆಗೆ ತುತ್ತಾದವರ ಆರೈಕೆ, ಚಿಕಿತ್ಸೆಗೆ ನೆರವಿನ ಹಸ್ತ ಚಾಚುತ್ತಿದೆ. ಛಾಯಾಚಿತ್ರ ಪ್ರದರ್ಶನ ನಡೆಸಿ, ಅಲ್ಲಿ ಮಾರಾಟವಾಗುವ ಛಾಯಾಚಿತ್ರಗಳು ಹಾಗೂ ಪೋಸ್ಟ್ ಕಾರ್ಡ್ ಗ್ರೀಟಿಂಗ್‌ಗಳಿಂದ ದೊರಕುವ ಹಣವನ್ನು ಮಲ್ಟಿಪಲ್ ಸ್ಕ್ಲೆರಾಸಿಸ್ ಸೊಸೈಟಿ ಆಫ್ ಇಂಡಿಯಾ (ಎಂಎಸ್‍ಎಸ್‍ಐ) ಸಂಸ್ಥೆಗೆ ದೇಣಿಗೆ ನೀಡುತ್ತಿದೆ. ಟಿಜಿಐಎಸ್ ಕಳೆದ ಐದು ವರ್ಷಗಳಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನ ನಡೆಸುತ್ತಿದೆ.

ಈ ಬಾರಿ ‘ಜಗಚಿತ್ರ’ ಶೀರ್ಷಿಕೆ ಅಡಿಯಲ್ಲಿ 110 ಚಿತ್ರಗಳ ಪ್ರದರ್ಶನ ಆರಂಭವಾಗಿದೆ. ಹೆಸರೇ ಹೇಳುವಂತೆ ಜಗತ್ತಿನ ವಿವಿಧ ಭಾಗಗಳ ಸಂಸ್ಕೃತಿ, ಪ್ರಕೃತಿ, ವಾಸ್ತುಶಿಲ್ಪ, ಜನಜೀವನ, ವನ್ಯಜೀವನದ ಇಣುಕು ನೋಟ ನೀಡುವ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.

‘ದೇಶದ ವಿವಿಧ ಸ್ಥಳಗಳಷ್ಟೇ ಅಲ್ಲದೆ, ಬ್ರುಗ್ಸ್, ಸ್ವಿಸ್ ಪರ್ವತ ಶ್ರೇಣಿ, ಅರಿಜೋನಾ, ಕ್ರಾಬಿ ದ್ವೀಪ, ಲಂಡನ್, ಕಾಂಬೋಡಿಯಾ ಸೇರಿದಂತೆ ವಿವಿಧ ಪ್ರದೇಶಗಳ ಚಿತ್ರಗಳನ್ನೂ ಕಣ್ತುಂಬಿಕೊಳ್ಳಬಹುದಾಗಿದೆ. ಚಿತ್ರಗಳನ್ನು ವಿಶೇಷ ಗುಣಮಟ್ಟದ ಕಾಗದಗಳಲ್ಲಿ ಮುದ್ರಿಸಲಾಗಿದ್ದು, 40 ವರ್ಷಕ್ಕೂ ದೀರ್ಘಕಾಲ ಬಾಳಿಕೆ ಬರುತ್ತವೆ. ಛಾಯಾಚಿತ್ರಗಳನ್ನು ಖರೀದಿಸುವ ಮೂಲಕ ಮಲ್ಟಿಪಲ್ ಸ್ಕ್ಲೆರಾಸಿಸ್‌ಗೆ ತುತ್ತಾದವರಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗೆ ದೇಣಿಗೆ ನೀಡಬಹುದು. ಇದಕ್ಕೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ’ ಎನ್ನುತ್ತಾರೆ ಪ್ರದರ್ಶನದ ಸಂಘಟಕರು.

ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಆನಂದ್ ಶರಣ್ ಅವರ ಛಾಯಾಗ್ರಹಣ ಕಾರ್ಯಾಗಾರಗಳಲ್ಲಿ ಪಾಲ್ಗೊಂಡವರೇ ಬಹುತೇಕ ಟಿಜಿಐಎಸ್ ಸದಸ್ಯರಾಗಿದ್ದಾರೆ.

 

ಬಣ್ಣಗಳ ಸಂಗದಲ್ಲಿ ಕಾಯಿಲೆ ಮೀರುವ ಹಂಬಲ

ಮಲ್ಟಿಪಲ್ ಸ್ಕ್ಲೆರಾಸಿಸ್ ಇದ್ದರೂ ಸಹ ಅದನ್ನು ಮೀರಿ ಜೀವನ ಸಾಗಿಸುವ ಸಲುವಾಗಿ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಪ್ರಿಯಾ.

‘ಉದ್ಯೋಗಿಯಾಗಿದ್ದ ನಾನು ಮಲ್ಪಿಪಲ್ ಸ್ಕ್ಲೆರಾಸಿಸ್‌ಗೆ ತುತ್ತಾದ ಬಳಿಕ ಉದ್ಯೋಗ ತೊರೆದೆ. ಬಾಲ್ಯದಲ್ಲಿ ಚಿತ್ರಕಲೆ ಕುರಿತು ಆಸಕ್ತಿಯಿತ್ತು. ಚಿತ್ರಗಳನ್ನೂ ರಚಿಸುತ್ತಿದ್ದೆ. ಉದ್ಯೋಗ ತೊರೆದ ಬಳಿಕ ನನ್ನನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಪುನಃ ಚಿತ್ರಕಲೆಯಲ್ಲಿ ತೊಡಗಿಸಿಕೊಂಡೆ. ಆಕ್ರಿಲಿಕ್ ಮಾಧ್ಯಮದಲ್ಲಿ ಚಿತ್ರಗಳನ್ನು ರಚಿಸುತ್ತೇನೆ. ಈವರೆಗೂ ಸುಮಾರು 25 ಕೃತಿಗಳನ್ನು ರಚಿಸಿದ್ದೇನೆ’ ಎನ್ನುತ್ತಾರೆ ಇವರು.

ಏನಿದು ಮಲ್ಟಿಪಲ್ ಸ್ಕ್ಲೆರಾಸಿಸ್?

ಮಲ್ಟಿಪಲ್ ಸ್ಕ್ಲೆರಾಸಿಸ್ ನರಮಂಡಲಕ್ಕೆ ಸಂಬಂಧಿಸಿದ ಒಂದು ರೀತಿಯ ನಿಗೂಢ ಕಾಯಿಲೆ. ಮೆದುಳು ಹಾಗೂ ಬೆನ್ನುಹುರಿಗೆ ಹಾನಿ ಮಾಡುವ ಈ ಕಾಯಿಲೆಯಿಂದ ದಿನನಿತ್ಯದ ಸರಳ ಚಟುವಟಿಕೆಗಳು ಸಹ ಸವಾಲಾಗಿ ಪರಿಣಮಿಸಿಬಿಡುತ್ತವೆ. ದೃಷ್ಟಿ ಕೊಂಚ ಮಂಜಾಗುವುದರಿಂದ ಆರಂಭಿಸಿ ಸ್ಪರ್ಶಜ್ಞಾನ ಕಳೆದುಕೊಳ್ಳುವುದು, ಮಾತು ತೊದಲುವುದು, ಸ್ನಾಯುಗಳು ನಿಶ್ಶಕ್ತವಾಗುವುದು, ಅತಿ ಎನ್ನಿಸುವಷ್ಟು ಆಯಾಸವಾಗುವುದರಿಂದ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾಗುವುದೂ ಸಹ ಈ ಕಾಯಿಲೆಯ ಲಕ್ಷಣ. ಈ ಕಾಯಿಲೆಗೆ ಸ್ಪಷ್ಟ ಕಾರಣ ತಿಳಿಯದೆ ಇರುವುದರಿಂದ ಇದು ಸಂಪೂರ್ಣ ವಾಸಿಯಾಗುವುದೂ ಇಲ್ಲ. ಈ ಕಾಯಿಲೆ ‘ಜತೆಗೇ ಜೀವಿಸುವುದನ್ನು’ ಕಾಯಿಲೆಗೆ ಗುರಿಯಾದವರು ಹಾಗೂ ಕುಟುಂಬದವರು ಸಹ ಕಲಿಯಬೇಕಾಗುತ್ತದೆ. ಇಂಥವರಿಗೆ ನೆರವಾಗುವ ಸಲುವಾಗಿ ಎಂಎಸ್‌ಎಸ್‌ಐ ಶ್ರಮಿಸುತ್ತಿದೆ.

(ದಾಲ್‌ ಸರೋವರದ ಚಾರ್‌ ಚಿನಾರ್‌ ದ್ವೀಪ ಚಿತ್ರ: ಫಸೀಹಾ ತಬಸ್ಸುಮ್‌)

ಕಲಾಪ

ಕಲಾವಿದರು: ‘ಥ್ಯಾಂಕ್ ಗಾಡ್ ಇಟ್ಸ್ ಸಾಟರ್ಡೆ’ತಂಡ

ಪ್ರಕಾರ: ಛಾಯಾಚಿತ್ರ ಪ್ರದರ್ಶನ

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು

ಅವಧಿ: ಜೂನ್ 6ರವರೆಗೆ

ಸಮಯ: ಬೆಳಿಗ್ಗೆ 10ರಿಂದ ಸಂಜೆ 7.

ಪ್ರವೇಶ: ಉಚಿತ

ಸಂಪರ್ಕ: ಶಂಕರ್ ಸುಬ್ರಮಣಿಯನ್, 9448478147

ಇ–ಮೇಲ್: tgis.jagachitra@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry