ನವ ಮಾಧ್ಯಮಗಳಿಂದ ಕಥೆ ಹೇಳುವ ಕಲೆ ನಾಶ

7

ನವ ಮಾಧ್ಯಮಗಳಿಂದ ಕಥೆ ಹೇಳುವ ಕಲೆ ನಾಶ

Published:
Updated:
ನವ ಮಾಧ್ಯಮಗಳಿಂದ ಕಥೆ ಹೇಳುವ ಕಲೆ ನಾಶ

ಮೈಸೂರು: ವಿದ್ಯುನ್ಮಾನ ಹಾಗೂ ನವ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿರುವ ಮಹಿಳೆಯರು ಕಥೆ ಹೇಳುವ ಕಲೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ ಎಂದು ಸಾಹಿತಿ ಗಿರೀಶ ಕಾರ್ನಾಡ ವಿಷಾದ ವ್ಯಕ್ತಪಡಿಸಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಹಾಗೂ ಬುಕ್‌ ಕ್ಲಬ್ಸ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ ನಮ್ಮ ಬದುಕು ಕಥೆಗಳಿಂದಲೇ ತುಂಬಿಹೋಗಿದೆ. ನಮ್ಮ ಸುತ್ತಮುತ್ತಲಿನ ಎಲ್ಲ ಮಗ್ಗಲುಗಳಿಂದ ಕಥೆಗಳು ಕೇಳಿಬರುತ್ತಲೇ ಇರುತ್ತವೆ. ಟಿ.ವಿ, ರೇಟಿಯೊ, ಇಂಟರ್ನೆಟ್‌ ಇವಕ್ಕೆ ಪೂರಕವಾಗಿವೆ. ಆದರೆ, ಹಿಂದೆ ಈ ರೀತಿ ಇರಲಿಲ್ಲ. ವಿದ್ಯುತ್‌ ಸಂಪರ್ಕವೇ ಇಲ್ಲದ ಕಾಲದಲ್ಲಿ ಮನೆಯ ಹೆಣ್ಣುಮಕ್ಕಳು ಕಥೆಗಳನ್ನು ತಲೆಮಾರುಗಳಿಂದ ತಲೆಮಾರುಗಳಿಗೆ ತಲುಪಿಸಿದ್ದಾರೆ. ಕಥೆಗಳು ಅಡುಗೆಮನೆಯಿಂದಲೇ ಹುಟ್ಟಿಕೊಳ್ಳುತ್ತಿದ್ದವು. ಅಜ್ಜಿ ಹೇಳುತ್ತಿದ್ದ ಅಂದಿನ ಕಥೆಗಳಿಗೆ ಇಂದಿನ ಆಧುನಿಕ ಕಥೆಗಳನ್ನು ಹೋಲಿಸುವಂತೆಯೇ ಇಲ್ಲ ಎಂದರು.

ಈಗ ಬಹುತೇಕ ಅಮ್ಮಂದಿರು ತಮ್ಮ ಮಕ್ಕಳಿಗೆ ಕಥೆ ಹೇಳುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಟಿ.ವಿ ಮುಂದೆ ಕುಳಿತು ಧಾರಾವಾಹಿ ವೀಕ್ಷಣೆಯಲ್ಲೇ ಮುಳಿಗಿರುತ್ತಾರೆ. ಇದರಿಂದ ಕಥೆ ಹೇಳುವ ಸಂಸ್ಕೃತಿ ಶಿಥಿಲಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅವ್ಯಕ್ತ ಕಥೆಗಾರರೂ ಇದ್ದಾರೆ: ಸಂಸ್ಕೃತಿ ಎಂದರೆ ನಮ್ಮ ಸ್ಮೃತಿಗೆ ಮೊದಲು ಬರುವುದು ಮಹಾಭಾರತ, ರಾಮಾಯಣ. ಆದರೆ, ಈ ಮಹಾಕಾವ್ಯಗಳಿಂದ ವ್ಯಕ್ತವಾಗಿರುವ ಸಂಸ್ಕೃತಿಯು ಕೇವಲ ಶೇ 10ರಷ್ಟು ಮಾತ್ರ. ಬಾಕಿ ಶೇ 90 ಭಾಗವನ್ನು ಜನಸಾಮಾನ್ಯರು ಕಟ್ಟಿದ್ದಾರೆ. ಅವರಿಗೆ ಸಂಸ್ಕೃತಿಯನ್ನು ಬರವಣಿಗೆಯ ಮೂಲಕ ಹೇಳಲು ಬಂದಿಲ್ಲ. ತಮ್ಮ ಜೀವನದ ಮೂಲಕವೇ ಅವರು ಸಂಸ್ಕೃತಿಯನ್ನು ಕಟ್ಟಿ, ಶ್ರೀಮಂತಗೊಳಿಸಿದ್ದಾರೆ. ಹಾಗಾಗಿ, ಈ ಜನಸಾಮಾನ್ಯರ ಬದುಕಿಗೆ ಗೌರವ ನೀಡುವುದು ಆದ್ಯತೆಯಾಗಬೇಕು’ ಎಂದು ಕಿವಿಮಾತು ಹೇಳಿದರು.

ರಾಜವಂಶಸ್ಥರಾದ ಪ್ರಮೋದಾ­ದೇವಿ ಒಡೆಯರ್‌ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಉದ್ಯಮಿ ಜಗನ್ನಾಥ ಶೆಣೈ ಲಾಂಛನ ಬಿಡುಗಡೆಗೊಳಿಸಿದರು. ಟ್ರಸ್ಟ್‌ ಅಧ್ಯಕ್ಷೆ ಶುಭಾ ಅರಸ್‌, ಸದಸ್ಯೆ ವಿನಯಾ ಪ್ರಭಾವತಿ ಭಾಗವಹಿಸಿದ್ದರು.

**

ಸಹಿಷ್ಣುತೆಯೇ ಏಕತೆಯ ಮಂತ್ರ...

ಮೈಸೂರು: ವಿವಿಧತೆಯೇ ಹೆಚ್ಚಿರುವ ಭಾರತವನ್ನು ಒಂದು ರಾಷ್ಟ್ರವನ್ನಾಗಿ ಹಿಡಿದಿಡಲು ಇಲ್ಲಿನ ಸಹಿಷ್ಣುತೆಯೇ ಮಂತ್ರವಾಗಿದೆ. ಇದನ್ನು ಧಿಕ್ಕರಿಸಿ ಅಸಹಿಷ್ಣುತೆಯನ್ನು ಪಾಲಿಸಿದರೆ ಈ ದೇಶವನ್ನೇ ಕೊಂದಂತೆ ಆಗುತ್ತದೆ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಹಾಗೂ ಬುಕ್‌ ಕ್ಲಬ್ಸ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಗರದಲ್ಲಿ ಹಮ್ಮಿಕೊಂಡಿದ್ದ ‘ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ವಿಧ ಭಾಷೆ, ಧರ್ಮ, ಜಾತಿಗಳನ್ನು ಹೊಂದಿರುವ ಈ ದೇಶವನ್ನು ಸಹಿಷ್ಣುತೆ ಎನ್ನುವ ತೆಳುವಾದ ಪರದೆಯು ಒಂದಾಗಿ ಇರುವಂತೆ ಕಾಪಾಡಿಕೊಂಡು ಬಂದಿದೆ. ಇದನ್ನು ಹರಿದು, ಅಸಹಿಷ್ಣುತೆಯನ್ನು ಪಠಿಸಿದರೆ ದೇಶವು ಕವಲುದಾರಿಯನ್ನು ಅನುಸರಿಸುವ ಅಪಾಯ ಇದೆ ಎಂದು ಅವರು ಹೇಳಿದರು.

ಅಧಿಕಾರಕ್ಕೆ ಅಂಕುಶ ಇರಲೇಬೇಕು. ನಿರಂಕುಶ ಪ್ರಭುತ್ವದಿಂದ ಯಾರಿಗೂ ಒಳಿತಾಗುವುದಿಲ್ಲ. ಇತಿಹಾಸ ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ, ಈ ದೇಶವನ್ನು ಕಟ್ಟಲು ಹೊರಟವರು ಇತಿಹಾಸವನ್ನು ಅಧ್ಯಯನ ಮಾಡಿ ಮುಂದುವರಿಯಬೇಕು ಎಂದು ಅವರು ಕಿವಿಮಾತು ಹೇಳಿದರು.

**

ಜಾವಗಲ್‌ ಶ್ರೀನಾಥ್‌ ಆಕರ್ಷಣೆ

ಮೈಸೂರು: ‘ನಾನು ಬೌಲರ್‌ ಆಗಿದ್ದು ನನ್ನ ಸ್ವಂತ ಶ್ರಮದಿಂದ. ಕೀರ್ತಿಯನ್ನು ಕ್ರಿಕೆಟ್‌ ತಂದುಕೊಡುತ್ತದೆ. ಆದರೆ, ಕೀರ್ತಿಯ ಉತ್ತುಂಗಕ್ಕೆ ಏರಿದ ಮೇಲೆ ಕ್ರೀಡಾ ಮಾನವೀಯತೆಯನ್ನು ಮರೆಯ­ಬಾರದು’ ಎಂದು ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಕಿವಿಮಾತು ಹೇಳಿದರು.

ಕ್ರಿಕೆಟ್‌ ಕುರಿತಂತೆ ನಡೆದ ಸಂವಾದ ಗೋಷ್ಠಿಯಲ್ಲಿ ಪತ್ರಕರ್ತರಾದ ಸುರೇಶ್‌ ಮೆನನ್‌ ಹಾಗೂ ಆರ್‌.ಕೌಶಿಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಶ್ರೀನಾಥ್‌, ‘ವೇಗದ ಬೌಲರುಗಳಿಗೆ ಬೌನ್ಸರ್ ಹಾಕುವುದು ಕೆಲವೊಮ್ಮೆ ರೋಮಾಂಚನವನ್ನು ನೀಡುತ್ತದೆ. ಆದರೆ, ಬೌನ್ಸರ್‌ ಹಾಕುವುದು ಮೋಜಾಗಬಾರದು. ಬೌನ್ಸರ್‌ ಎಸೆದಾಗ ಅದು ಬ್ಯಾಟ್ಸ್‌ಮನ್‌ ತಲೆಗೆ ತಗುಲಿ ಪ್ರಾಣವೇ ಹೋಗಿರುವ ಉದಾಹರಣೆ ಇವೆ. ಕ್ರಿಕೆಟಿಗ ಮಾನವೀಯತೆಯನ್ನು ಉಳಿಸಿಕೊಳ್ಳ­ಬೇಕು. ಅದು ಅವನ ಕೀರ್ತಿಯನ್ನು ಹೆಚ್ಚಿಸುತ್ತದೆ’ ಎಂದರು.

ಕ್ರಿಕೆಟ್‌ನಲ್ಲಿ ಅಡ್ಡದಾರಿಗಳಿಲ್ಲ. ಸ್ವಜನಪಕ್ಷಪಾತ, ರಾಜಕಾರಣದ ಮೂಲಕ ಸಾಧನೆ ಸಾಧ್ಯವಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry