ದಲಿತರ ಮನೆಗೆ ಬೇಡ, ಅಂತರ್ಜಾತಿ ಮದುವೆ ಮಾಡ್ಸಿ

7

ದಲಿತರ ಮನೆಗೆ ಬೇಡ, ಅಂತರ್ಜಾತಿ ಮದುವೆ ಮಾಡ್ಸಿ

Published:
Updated:
ದಲಿತರ ಮನೆಗೆ ಬೇಡ, ಅಂತರ್ಜಾತಿ ಮದುವೆ ಮಾಡ್ಸಿ

ಗದಗ: ‘ಯಡಿಯೂರಪ್ಪ ಅವರಿಗೆ ನಿಜವಾಗಲೂ ಜಾತ್ಯತೀತ ತತ್ವದಲ್ಲಿ ನಂಬಿಕೆ ಇದ್ದರೆ, ಪರಿಶಿಷ್ಟ ಜಾತಿಯವರ ಮನೆಗೆ ಹೋಗುವ ಬದಲು ಬಸವಣ್ಣನವರ ಆಶಯದಂತೆ ಅಂತರ್ಜಾತಿ ಮದುವೆ ಮಾಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದರು.

ಗದಗ–ಬೆಟಗೇರಿ ನಗರಗಳಿಗೆ 24x7 ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರ ಯೋಜನೆಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಪರಿಶಿಷ್ಟರ ಮನೆಗೆ ಹೋಗುವ ಯಡಿಯೂರಪ್ಪ ಅವರ ಮನೆಯಲ್ಲಿ ಮಾಡಿದ ಒಳ್ಳೆಯ ಪುಲಾವ್‌ ತಿನ್ನದೇ, ಹೋಟೆಲ್‌ನಿಂದ ಕಟ್ಟಿಸಿಕೊಂಡು ಹೋದ ಇಡ್ಲಿ ತಿನ್ನುತ್ತಾರೆ. ಇದೇನಾ ಅವರ ಜಾತ್ಯತೀತತೆ? ಸಾಲದ್ದಕ್ಕೆ ಅವರೀಗ ಮುಖ್ಯಮಂತ್ರಿ ಭ್ರಮೆಯಲ್ಲಿದ್ದಾರೆ. ಮಿಷನ್ 150 ಎಂದು ಹೇಳಿಕೊಂಡು ರಾಜ್ಯವೆಲ್ಲಾ ಓಡಾಡುತ್ತಿದ್ದಾರೆ. ಆದರೆ, ಏನೇ ತಿಪ್ಪರಲಾಗ ಹಾಕಿದರೂ ಅವರಿಗೆ ಅಧಿಕಾರ ಸಿಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಈ ಊರಿಗೆ ನಮ್ಮ ಸರ್ಕಾರ ನಿರಂತರ ಕುಡಿಯುವ ನೀರು ಕೊಡುತ್ತದೆ ಎಂದಾಗ, ತಮ್ಮ ಪರಿವಾರ ಸಮೇತ ಬಂದು ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ಉದ್ಘಾಟಿಸುತ್ತಿದ್ದಾರೆ ಎಂದು ನಗರಸಭಾ ಸದಸ್ಯರಂತೆ ಪ್ರತಿಭಟಿಸಿ ಹೋಗಿದ್ದಾರೆ. ಕುಡಿಯುವ ನೀರಿನ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇಲ್ಲೇ ಗೊತ್ತಾಗುತ್ತದೆ ಅವರು ಯಾವ ಮಟ್ಟಕ್ಕೆ ಹೋಗಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಯವರಿಗೆ ನೀರು ಹಾಗೂ ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ಮೊಸರಿನಲ್ಲಿ ಕಲ್ಲು ಹುಡುಕುವುದೇ ಅವರ ಕೆಲಸ. ಅವರಿಗೆ ಅಭಿವೃದ್ಧಿ ಬದಲು, ಪ್ರಚಾರ ಮತ್ತು ಘೋಷಣೆಯಲ್ಲಷ್ಟೇ ನಂಬಿಕೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪನವರಿಗೆ ಏನು ಮಾತನಾಡುತ್ತಿದ್ದೇನೆ ಎಂಬುದರ ಅರಿವೇ ಇರುವುದಿಲ್ಲ’ ಎಂದು ಸಿದ್ದರಾಮಯ್ಯ ಚಾಟಿ ಬೀಸಿದರು.

ಸಾಲ ಮನ್ನಾದಲ್ಲೂ ರಾಜಕೀಯ: ‘ರೈತರ ಸಾಲ ಮನ್ನಾ ಮಾಡಬಾರದು ಎಂಬ ಆಲೋಚನೆ ನನಗಿಲ್ಲ. ಆದರೆ, ಶೇ 100ರಷ್ಟು ಮನ್ನಾ ಮಾಡಬೇಕು ಎಂಬುದು ನನ್ನ ಕಾಳಜಿ. ಏಕೆಂದರೆ, ರೈತರ ತಲೆ ಮೇಲೆ ₹ 53 ಸಾವಿರಕೋಟಿ ಸಾಲವಿದೆ.  ಈ ಸಾಲ ಮನ್ನಾ ನನ್ನೊಬ್ಬನಿಂದಲೇ ಸಾಧ್ಯವಿಲ್ಲ. ಕೇಂದ್ರ ಸರ್ಕಾರವೂ ಕೈ ಜೋಡಿಸಬೇಕು. ಅದಕ್ಕಾಗಿ, ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲು ನಮ್ಮೊಂದಿಗೆ ಬಿಜೆಪಿ ಸಂಸದರನ್ನು ಸಹ ಕರೆದೊಯ್ದೆ. ಇಲ್ಲಿ ರೈತರ ಸಾಲ ಮನ್ನಾ ಮಾಡಿ ಎಂದು ಅರಚಿಕೊಳ್ಳುವ ಅವರು, ಪ್ರಧಾನಿ ಎದುರು ತುಟಿ ಬಿಚ್ಚಲಿಲ್ಲ’ ಎಂದು ಟೀಕಿಸಿದರು.

ಸಮಾರಂಭದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ ಖಂಡ್ರೆ, ಆಹಾರ ಸಚಿವ ಯು.ಟಿ. ಖಾದರ್‌, ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಹಾವೇರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಇದ್ದರು.

ಯೋಜನೆ ಪೂರ್ಣಕ್ಕೆ ಡಿಸೆಂಬರ್ ಗಡುವು

‘ಗದಗ–ಬೆಟಗೇರಿ ಅವಳಿನಗರಗಳಿಗೆ 24x7 ಕುಡಿಯುವ ನೀರು ಪೂರೈಸುವ ಯೋಜನೆಯ 12 ವಲಯಗಳ ಪೈಕಿ, 4 ವಲಯಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನುಳಿದ 8 ವಲಯಗಳ ಕಾಮಗಾರಿಯನ್ನು ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಯೋಜನೆಯ ಕಾಮಗಾರಿ ಅಪೂರ್ಣವಾಗಿದೆ ಎಂದು ಬಿಜೆಪಿಯವರು ಪ್ರತಿಭಟಿಸಿದ್ದಾರೆ. ಪೂರ್ಣಗೊಂಡಿಲ್ಲ ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ, ಉದ್ಘಾಟನೆಯ ಆರಂಭದಲ್ಲಿ 15 ಸಾವಿರ ಮನೆಗಳಿಗೆ ನೀರು ಕೊಡುವುದನ್ನು ವಿರೋಧಿಸುವುದು ಎಷ್ಟು ಸರಿ? ಅದಕ್ಕಾಗಿಯೇ ಡಿಸೆಂಬರ್‌ನೊಳಗೆ ಕಾಮಗಾರಿ ಮುಗಿಸುವಂತೆ ಹೇಳಿದ್ದೇನೆ. ಆಗ ನಾನೇ ಬಂದು ಉದ್ಘಾಟಿಸಿ ಹೋಗುತ್ತೇನೆ’ ಎಂದು ಸವಾಲು ಹಾಕಿದರು.

‘ನೀರಿನ ವಿಷಯದಲ್ಲಿ ರಾಜಕಾರಣ ಸಲ್ಲ’

‘ಕುಡಿಯುವ ನೀರಿನ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ರಾಜಕಾರಣಕ್ಕಿಂತ ಜನತೆಗೆ ನೀರು ಕೊಡುವುದು ಮುಖ್ಯವಾಗಿದೆ ಬಿ.ಎಸ್.ಯಡಿಯೂರಪ್ಪನವರ ಪ್ರತಿಭಟನೆಗೆ ಮಹತ್ವ ನೀಡಬಾರದಿತ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಎಸ್‌ವೈ ಗದಗಕ್ಕೆ ಬಂದು ರಾಜಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗದಗ–ಬೆಟಗೇರಿ ಅವಳಿನಗರಕ್ಕೆ ಜನತೆಗೆ ಕುಡಿಯುವ ನೀರು ಒದಗಿಸಲು ಸಾಕಷ್ಟು ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry