ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರು ಸೇರಿದಂತೆ ಎಲ್ಲರೂ ಗೋಮಾಂಸ ತಿನ್ನುತ್ತಿದ್ದರು, ಗೋವು ಮಾತೆಯೇ ಅಲ್ಲ!

Last Updated 5 ಜೂನ್ 2017, 10:32 IST
ಅಕ್ಷರ ಗಾತ್ರ

ಬೆಂಗಳೂರು: ಹಸುವನ್ನು ಬ್ರಾಹ್ಮಣರು ಸೇರಿದಂತೆ ಎಲ್ಲ ಜಾತಿಯವರೂ ತಿನ್ನುತ್ತಿದ್ದರು. ಗೋವು ಮಾತೆಯೇ ಅಲ್ಲ. ಅದು ಪೂಜನೀಯವೂ ಅಲ್ಲ. ವೈಜ್ಞಾನಿಕ ಕಸಾಯಿಖಾನೆಗಳನ್ನು ತೆರೆಯಲು ನಾನೇ ಅನುಮತಿ ಕೊಟ್ಟಿದ್ದೇನೆ. ನಾನೊಬ್ಬ ವೈಜ್ಞಾನಿಕ ಮನುಷ್ಯನಾಗಿ ನನಗೇನೂ ಗೋವು ಮಾತೆ ಅನಿಸಿಲ್ಲ. ಹಸುಗಳನ್ನು ಕೃಷಿ ಕೆಲಸಗಳಿಗೆ ಅವಲಂಬಿಸುವ ಮುನ್ನವೇ ಅದನ್ನು ಕಡಿದು ತಿನ್ನುವ ಪದ್ದತಿ ಇತ್ತು. ಮುದಿ ಹಸುಗಳನ್ನು ಯಾರು ತಿನ್ನುವುದಿಲ್ಲ. ಎಳೆಯ ಹಸುಗಳನ್ನೇ ತಿನ್ನುತ್ತಾರೆ. -ಹೀಗೆ ಹೇಳಿದ್ದು ಬಿಜೆಪಿ ವಕ್ತಾರ  ಡಾ. ವಾಮನಾಚಾರ್ಯ.

ಗೋ ಹತ್ಯೆ ಬಗ್ಗೆ ದೇಶದೆಲ್ಲೆಡೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಬಿಜೆಪಿ ವಕ್ತಾರ ಈ ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ.

ಮೇ.28ರಂದು ಸುವರ್ಣ ಸುದ್ದಿ ವಾಹಿನಿಯಲ್ಲಿ ಗೋಹತ್ಯೆ ಸಂಬಂಧ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಾಮನಾಚಾರ್ಯರು ಭಾರತ ಕೃಷಿ ಪ್ರಧಾನ ದೇಶವಾಗುವ ಮುನ್ನ ಹಸುವನ್ನು ಆಹಾರವಾಗಿ ಎಲ್ಲ ಜನರು ಸೇವಿಸುತ್ತಿದ್ದರು. ಬ್ರಾಹ್ಮಣರೂ ಗೋಮಾಂಸ ತಿನ್ನುತ್ತಿದ್ದರು. ಇಷ್ಟೇ ಅಲ್ಲ ನಾನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ರಾಜ್ಯದ 16 ಕಡೆ ವೈಜ್ಞಾನಿಕ ಕಸಾಯಿಖಾನೆಗಳನ್ನು ತೆರೆಯಲು ಅನುಮತಿ ನೀಡಿದ್ದೆ. ದೇಶದಲ್ಲಿರುವ ಶೇ.90 ರಷ್ಟು ದಲಿತರು ಗೋಮಾಂಸ ಸೇವಿಸುವುದಿಲ್ಲ. ಮುದಿ ಹಸುಗಳನ್ನು ಯಾರೂ ತಿನ್ನುವುದಿಲ್ಲ. ಗೋಮಾಂಸ ಸೇವನೆ ಮಾಡುವವರು ಎಳೆಯ ಹಸುಗಳನ್ನೇ ಕೊಂದು ತಿನ್ನುತ್ತಾರೆ ಎಂದಿದ್ದಾರೆ.

ವಾಮನಾಚಾರ್ಯರ ಈ ಹೇಳಿಕೆ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಬಿಜೆಪಿ ನಾಯಕರು ಏನಂತಾರೆ?

ಸಿಟಿ ರವಿ ಪ್ರತಿಕ್ರಿಯೆ: ಗೋಮಾಂಸ ಸೇವನೆ ಬಗ್ಗೆ ವಾಮನಾಚಾರ್ಯ ನೀಡಿರುವ ಹೇಳಿಕೆ ಪಕ್ಷದ ಹೇಳಿಕೆ ಅಲ್ಲ.ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಗೋಹತ್ಯೆ ನಿಷೇಧ ಆಗಬೇಕು ಎನ್ನುವುದೇ ಬಿಜೆಪಿಯ ನಿಲುವು. ಜನಸಂಘದ ಕಾಲದಿಂದಲೂ ನಾವು ಗೋಹತ್ಯೆ ನಿಷೇಧ ಜಾರಿಗೆ ಹೋರಾಟ ನಡೆಸುತ್ತಿದ್ದೇವೆ. ಸಂವಿಧಾನವನ್ನು ಗೌರವಿಸುವವರು ಗೋಹತ್ಯೆಯನ್ನು ವಿರೋಧಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಸುದ್ದಿವಾಹಿನಿಯೊಂದರ ಪ್ಯಾನಲ್ ಚರ್ಚೆಯೊಂದರಲ್ಲಿ "ಜಾನುವಾರುಗಳ ಮಾರಾಟ" (ಗೋ ಹತ್ಯೆ ನಿಷೇಧ ಎಂದೇ ವಿಶ್ಲೇಷಿಸಲ್ಪಡುತ್ತಿರುವ) ಕುರಿತ ಕೇಂದ್ರ ಸರಕಾರದ ಸುತ್ತೋಲೆ ಬಗ್ಗೆ ಬಿಜೆಪಿಯ ಡಾ. ವಾಮನಾಚಾರ್ಯ ರವರು ವ್ಯಕ್ತ ಪಡಿಸಿರುವ ಭಾವನೆಗಳಿಗೆ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂದವಿಲ್ಲವೆಂದು ಈ ಮೂಲಕ ಸ್ಪಷ್ಟ ಪಡಿಸುತ್ತಿದ್ದೇವೆ. ಅವರ ಮಾತುಗಳು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತಗಳಿಗೆ ಸಂಪೂರ್ಣ ವಿರೋಧವಾಗಿದೆಯೆಂದೂ ಸ್ಪಷ್ಟ ಪಡಿಸುತ್ತಿದ್ದೇವೆ.
ಈ ಕುರಿತು ಸ್ವತಃ ಡಾ.‌ವಾಮನಾಚಾರ್ಯರವರು ಹೇಳಿಕೆ ನೀಡಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಮತ್ತು ತಮ್ಮ ಮಾತುಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನೇತಾರ ಸುರೇಶ್ ಕುಮಾರ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ವಾಮನಾಚಾರ್ಯ ವಜಾಗೆ ಆಗ್ರಹಿಸಿ ಮೋದಿಗೆ ಪತ್ರ

ಗೋಹತ್ಯೆ ಪರವಾಗಿ ಹೇಳಿಕೆ ನೀಡಿರುವ ವಾಮನಾಚಾರ್ಯ  ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಬಿ.ಎಸ್. ವೆಂಕಟನಾರಾಯಣ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಪಕ್ಷದ ನಿಲುವಿಗೆ ವಿರುದ್ಧವಾಗಿ ವಾಮನಾಚಾರ್ಯ ನಡೆದುಕೊಳ್ಳುತ್ತಿದ್ದಾರೆ.  ಹೀಗಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT