ಪರಿಸರ ಉಳಿಸುವತ್ತ ನಮ್ಮ ಚಿತ್ತ...

7

ಪರಿಸರ ಉಳಿಸುವತ್ತ ನಮ್ಮ ಚಿತ್ತ...

Published:
Updated:
ಪರಿಸರ ಉಳಿಸುವತ್ತ ನಮ್ಮ ಚಿತ್ತ...

‘ಪರಿಸರ ಉಳಿಸಲು ನೀವೇನು ಮಾಡುತ್ತೀರಿ’ ಎನ್ನುವ ‘ಮೆಟ್ರೊ’ ಪುರವಣಿಯ ಪ್ರಶ್ನೆಗೆ ಅನೇಕ ಓದುಗರು ಪ್ರತಿಕ್ರಿಯಿಸಿದ್ದಾರೆ.  ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ...

ಹಣ್ಣಿನ ಮರ ಬೆಳೆಸಿದೆ

ನಾನು ಮನೆಯ ಸುತ್ತಾ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದೇನೆ. ಹಕ್ಕಿಗಳನ್ನು ಆಕರ್ಷಿಸುವಂತಹ ಹಣ್ಣಿನ ಮರಗಳನ್ನೇ ಹೆಚ್ಚು ಬೆಳೆಸಲು ಪ್ರಯತ್ನ ಪಟ್ಟಿದ್ದೇನೆ. ಸಣ್ಣ ಹೂವಿನ ಗಿಡಗಳಿಗಿಂತ ಮರಗಳನ್ನು ಬೆಳೆಸುವುದು ಪರಿಸರಕ್ಕೆ ಉಪಯುಕ್ತವಾಗಬಲ್ಲದು ಎಂಬುದು ನನ್ನ ನಂಬಿಕೆ.

ಹೂವು ಬಿಡುವ ಸಸಿಗಳನ್ನು ಕೆಲವು ಬಳ್ಳಿಗಳನ್ನೂ ಬೆಳೆಸಿದ್ದೇನೆ. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಇವುಗಳ ಆರೈಕೆ ಮಾಡಿ ಮುಂದಿನ ಕಾರ್ಯ ಮಾಡುತ್ತೇನೆ.

ಎಸ್.ಪದ್ಮಾವತಿ, ಚಾಮರಾಜಪೇಟೆ

****

ಕೈಪಂಪ್ ಬಳಸುತ್ತೇವೆ

ನಾವು ಪರಿಸರ ಉಳಿಸುವ ಪ್ರಯತ್ನ ಮಾಡದೇ ಇದ್ದರೂ, ತೊಂದರೆ ಮಾತ್ರ ಕೊಡಬಾರದು. ನಮಗೆ ನೀರಿನ ಕೊರತೆ ಬಹಳ ಇದೆ. ಆದ್ದರಿಂದ ಮಳೆ ನೀರು ಶೇಖರಣೆಗೆ ಇಪ್ಪತ್ತು ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ನಿರ್ಮಿಸಿದ್ದೇವೆ. ಈ ನೀರನ್ನು ಬಳಸಲು ವಿದ್ಯುತ್ ಪಂಪ್ ಬದಲು ಕೈ ಪಂಪ್ ಅಳವಡಿಸಿದ್ದೇವೆ. ಬಾಡಿಗೆಗೆ ನೀಡಿರುವ ಮನೆಗಳ ಬಚ್ಚಲು ನೀರನ್ನು ವ್ಯರ್ಥವಾಗಿ ಹರಿಸದೆ ವ್ಯಯಸಾಯಕ್ಕೆ ಬಳಸುತ್ತೇವೆ.

ಜಮೀನಿನಲ್ಲಿ ತೆಂಗು, ತೇಗದ ಮರಗಳಿಂದ ಸಿಗುವ ಸೌದೆಯನ್ನು ಒಲೆಗೆ ಉರುವಲಾಗಿ ಬಳಸುತ್ತೇವೆ. ನೀರಿನ ಫಿಲ್ಟರ್‌ನಿಂದ ಸಿಗುವ ವ್ಯರ್ಥ ನೀರನ್ನು ಶೌಚಾಲಯದ ಬಳಕೆ ಮತ್ತು ಮನೆ ತೊಳೆಯಲು ಬಳಸುತ್ತೇವೆ. ಯುಪಿಎಸ್ ಚಾರ್ಜ್ ಮಾಡಲು ಹೆಚ್ಚುವರಿಯಾಗಿ ಸೋಲಾರ್ ಪ್ಯಾನೆಲ್ ಜೋಡಿಸಲಾಗಿದೆ. ಸ್ಥಳೀಯವಾಗಿ 3-4 ಕಿ.ಮೀ ಸಂಚರಿಸಲು ಸೈಕಲ್ ಬಳಸುತ್ತೇವೆ.

ಅಂಗಡಿಯಿಂದ ದಿನಸಿ ಪದಾರ್ಥಗಳನ್ನು ತರಲು ಮನೆಯಿಂದಲೇ ಚಿಕ್ಕಚಿಕ್ಕ ಬಟ್ಟೆಯ ಚೀಲಗಳನ್ನು ಒಯ್ಯುತ್ತೇವೆ. ಮಾಂಸದಂಥ ಪದಾರ್ಥ ತರಲು ಸ್ಟೀಲ್ ಕ್ಯಾರಿಯರ್ ಬಳಸುತ್ತೇವೆ. ಇದರಿಂದ ಪ್ಲಾಸ್ಟಿಕ್ ಕವರ್ ಬಳಕೆ ತಪ್ಪುತ್ತದೆ.

ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಕನಿಷ್ಠ ಎರಡು ಗಿಡ ನೆಟ್ಟು ಅವು ಮರಗಳಾಗುವವರಗೆ ಪೋಷಿಸಬೇಕು. ಅತಿಮುಖ್ಯವಾಗಿ ಜನಸಂಖ್ಯೆಯು ಇಳಿಮುಖವಾದರೆ ನಮ್ಮ ಪರಿಸರ ಕ್ರಮೇಣ ತನ್ನಿಂದ ತಾನೇ ಶುಚಿಯಾಗಿ ಆರೋಗ್ಯವಾಗಿರುತ್ತದೆ.

ಬೊ.ನಾ.ಮಂಜುನಾಥ, ಬೊಮ್ಮೇನಹಳ್ಳಿ, ಮಂಡೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry