‘ಅಪ್ಪ’ ಎನ್ನಿಸಿಕೊಂಡು ಅತ್ಯಾಚಾರ ಎಸಗಿದ!

7

‘ಅಪ್ಪ’ ಎನ್ನಿಸಿಕೊಂಡು ಅತ್ಯಾಚಾರ ಎಸಗಿದ!

Published:
Updated:
‘ಅಪ್ಪ’ ಎನ್ನಿಸಿಕೊಂಡು ಅತ್ಯಾಚಾರ ಎಸಗಿದ!

ಬೆಂಗಳೂರು: ‘ನನ್ನ ಮಗಳು ವೀರೇಶ್‌ನನ್ನು ‘ಅಪ್ಪ’ ಎಂದೇ ಕರೆಯುತ್ತಿದ್ದಳು. ಆತ ಈಕೆಯನ್ನು ‘ಪಾಪು’ ಎನ್ನುತ್ತಿದ್ದ. ಆದರೆ, ತಂದೆ ಸ್ಥಾನದಲ್ಲಿಟ್ಟಿದ್ದ ಕಂದಮ್ಮನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಆತನನ್ನು ನಡುರಸ್ತೆಯಲ್ಲಿ ನೇಣಿಗೇರಿಸಬೇಕು...’

ಜೂನ್ 3ರ ರಾತ್ರಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವೀರೇಶ್‌ ವಿರುದ್ಧ ಸಂತ್ರಸ್ತೆಯ ತಾಯಿ ಆಡಿರುವ ಆಕ್ರೋಶದ ಮಾತುಗಳಿವು.

‘ಗಂಡನ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಓಡಾಡಲು ಆಗುವುದಿಲ್ಲ. ಹೀಗಾಗಿ ನಾನೇ ಚೌಲಿ ಮಾರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ನಮ್ಮ ಗುಡಿಸಲಿನ ಪಕ್ಕದಲ್ಲೇ ವೀರೇಶ್ ಪತ್ನಿ–ಮಗುವಿನ ಜತೆ ನೆಲೆಸಿದ್ದ. ಆತ ಕೂಲಿ ಕೆಲಸದ ಜತೆಗೆ, ಚಿಂದಿಯನ್ನೂ ಆಯುತ್ತಿದ್ದ’ ಎಂದು ಅವರು ಕೆ.ಜಿ.ಹಳ್ಳಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಆಗಾಗ್ಗೆ ಚಾಕೊಲೇಟ್, ಬಿಸ್ಕತ್ ಕೊಡಿಸುತ್ತಿದ್ದ ಕಾರಣಕ್ಕೆ ನನ್ನ ಮಗಳು ವೀರೇಶ್‌ನನ್ನು ತುಂಬ ಹಚ್ಚಿಕೊಂಡಿದ್ದಳು. ಆತನನ್ನು ‘ಅಪ್ಪ, ಮಾಮಾ’ ಎಂದೆಲ್ಲ ಕರೆಯುತ್ತಿದ್ದಳು. ಗರ್ಭಿಣಿ ಪತ್ನಿಯನ್ನು ತಿಂಗಳ ಹಿಂದೆ ತವರುಮನೆಗೆ ಬಿಟ್ಟು ಬಂದಿದ್ದ ಆತ, ಗುಡಿಸಲಿನಲ್ಲಿ ಒಬ್ಬನೇ ಇದ್ದ.’

‘ಶನಿವಾರ ರಾತ್ರಿ ನನ್ನ ಮಗಳು ಮೂತ್ರ ವಿಸರ್ಜನೆಗೆಂದು ಗುಡಿಸಲಿನಿಂದ ಹೊರ ಹೋಗಿದ್ದಾಗ, ‘ಚಾಕೊಲೇಟ್ ಕೊಡುತ್ತೇನೆ ಬಾ ಪಾಪು...’ ಎಂದು ಹೇಳಿಯೇ ಆತ ಹೊತ್ತುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಇದನ್ನು ಸ್ವತಃ ಮಗಳೇ ಹೇಳುತ್ತಿದ್ದಾಳೆ. ಇಂಥ ಕ್ರೂರಿಯನ್ನು ನೇಣಿಗೇರಿಸಿದಾಗ ಮಾತ್ರ ನಮಗೆ ನ್ಯಾಯ ಸಿಕ್ಕಂತಾಗುತ್ತದೆ’ ಎಂದು ತಾಯಿ ಪೊಲೀಸರೆದುರು ಕಣ್ಣೀರು ಸುರಿಸಿದ್ದಾರೆ.

ಜತೆಗಿದ್ದೇ ನಾಟಕ: ‘ಅತ್ಯಾಚಾರ ಎಸಗಿದ ಬಳಿಕ ಆಕೆಯನ್ನು ಮೋರಿ ಪಕ್ಕದಲ್ಲಿ ಬಿಸಾಡಿದ್ದ ವೀರೇಶ್, ನಂತರ ಗುಡಿಸಲು ಸೇರಿಕೊಂಡಿದ್ದ. ಮಗಳು ಕಾಣಿಸುತ್ತಿಲ್ಲವೆಂದು ರಾತ್ರಿ 2.30ರ ಸುಮಾರಿಗೆ ನಾನು ಸ್ಥಳೀಯರ ಜತೆ ಹುಡುಕಾಟದಲ್ಲಿ ತೊಡಗಿದ್ದೆ. ಆಗ ನಮ್ಮೊಟ್ಟಿಗೇ ಇದ್ದ ಆತ, ಏನೂ ಗೊತ್ತಿಲ್ಲದವನಂತೆ ನಟಿಸಿದ್ದ’ ಎಂದು ಅವರು ಹೇಳಿದ್ದಾರೆ.

‘ಪತ್ನಿಗೆ ಹೇಳಬೇಡಿ’

‘ಕುಡಿದ ಮತ್ತಿನಲ್ಲಿ ಏನು ಮಾಡಿದೆ ಎಂಬುದು ತಿಳಿಯಲಿಲ್ಲ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಬಳಿಕ ಭಯ ಶುರುವಾಯಿತು. ಹೀಗಾಗಿ ಕಲ್ಲಿನಿಂದ ಜಜ್ಜಿ ಕೊಲ್ಲುವುದಕ್ಕೆ ಯತ್ನಿಸಿದ್ದೆ. ದಯವಿಟ್ಟು ಈ ವಿಷಯವನ್ನು ನನ್ನ ಪತ್ನಿಗೆ ತಿಳಿಸಬೇಡಿ’ ಎಂದು ಆರೋಪಿ ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry