’ಗಿಡ ಮರ ಪೋಷಣೆ ಅನಿವಾರ್ಯ'

7

’ಗಿಡ ಮರ ಪೋಷಣೆ ಅನಿವಾರ್ಯ'

Published:
Updated:
’ಗಿಡ ಮರ ಪೋಷಣೆ ಅನಿವಾರ್ಯ'

ಕೋಲಾರ: ‘ಗಿಡ ಮರಗಳನ್ನು ಮಕ್ಕಳಂತೆ ಪೋಷಿಸುವ ಮನೋಭಾವ ಬಲಗೊಳ್ಳಲಿ. ಮನೆಗೊಂದು ಮರ, ಊರಿಗೊಂದು ವನ ಘೋಷಣೆಯಾಗಿ ಉಳಿಯದೆ ಕಾರ್ಯರೂಪಕ್ಕೆ ಬರಲಿ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಶಿರೋಳ್ ಸಲಹೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಗಾಜಲದಿನ್ನೆ ಅತಿಥಿಗೃಹ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೀಜದುಂಡೆ ಬಿತ್ತುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಡೀ ವಿಶ್ವ ಇಂದು ಅಧಿಕ ತಾಪಮಾನ ಮತ್ತು ಪರಿಸರ ಮಾಲಿನ್ಯದಿಂದ ಕಂಗೆಟ್ಟಿದೆ. ಜೀವಸಂಕುಲ ಆತಂಕಕ್ಕೆ ಒಳಗಾಗಿದೆ. ಇಷ್ಟೊಂದು ಸಂಕಷ್ಟ ಎದುರಾಗಿದ್ದರೂ ಮರಗಿಡ ಬೆಳೆಸುವಲ್ಲಿ ಜನ ಹಿಂದುಳಿದರೆ ಪ್ರಕೃತಿ ನಮ್ಮನ್ನು ಕ್ಷಮಿಸುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಸಸಿಗಳನ್ನು ನೆಟ್ಟು ಪ್ರತಿ ಮಗುವಿಗೊಂದು ಗಿಡದ ಉಸ್ತುವಾರಿ ಕೊಡಿ. ಮಕ್ಕಳಿಂದಾದರೂ ಪ್ರಕೃತಿ ಹಸಿರಾಗಲಿ’ ಎಂದು ಆಶಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನರಸಿಂಹರಾಜ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಮಹಾಲಕ್ಷ್ಮಿ ಎಸ್.ನೇರಳೆ, ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಗಿಡ ಮರ ಬೆಳೆಸಲು ಮಕ್ಕಳು ಮಾತ್ರವಲ್ಲ ಹಿರಿಯರೂ ಮುಂದೆ ಬರಬೇಕು. ಒಳ್ಳೆಯ ಗಾಳಿ ಆರೋಗ್ಯ ಸಿಗಲು ಮರ ಗಿಡಗಳ ಅತ್ಯಗತ್ಯ’ ಎಂದು ಕಿವಿಮಾತು ಹೇಳಿದರು.

5 ಲಕ್ಷ ಬೀಜದುಂಡೆ: ‘ಇಲಾಖೆಯು ವಿವಿಧ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಸುಮಾರು 5 ಲಕ್ಷ ಬೀಜದುಂಡೆ ತಯಾರಿಸಿದೆ. ಜಿಲ್ಲೆಯ ವಿವಿಧ ಶಾಲೆಗಳ 75 ಇಕೋ ಕ್ಲಬ್‌ಗಳ ಮೂಲಕ 7.50 ಲಕ್ಷ ಬೀಜದುಂಡೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ವಿಭಾಗ) ಎಸ್. ಶ್ರೀನಿವಾಸರಾವ್ ಹೇಳಿದರು.

‘ರೈತರಲ್ಲಿ ಗಿಡಮರ ಬೆಳೆಸುವ ಮನೋಭಾವ ಬಲಗೊಳಿಸಲು ಇಲಾಖೆಯು ವಿವಿಧ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದೆ. ನರೇಗಾದಡಿ ಪ್ರತಿ ಗುಣಿಗೆ ₹ 80 ನೀಡಲಾಗುತ್ತಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಗಿಡಗಳನ್ನು ಬೆಳೆಸಲು ಮೂರು ವರ್ಷಗಳ ಕಾಲ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪ್ರತಿ ಗಿಡಕ್ಕೆ ಮೂರು ವರ್ಷಗಳಿಗೆ ಕೊಡುತ್ತಿದ್ದ ₹ 40 ಪ್ರೋತ್ಸಾಹಧನವನ್ನು ₹ 100ಕ್ಕೆ ಹೆಚ್ಚಿಸಲಾಗಿದೆ’ ಎಂದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ ವಿಭಾಗ) ರಾಮಲಿಂಗೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್, ವಿಸ್ತರಣಾಧಿಕಾರಿ ಬಾಬು, ಉಪನ್ಯಾಸಕ ಗೋಪಿಕೃಷ್ಣನ್ ಪಾಲ್ಗೊಂಡಿದ್ದರು.

ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಅಗತ್ಯ

ಮಾಲೂರು: ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಸಮತೋಲನ  ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪುರಸಭಾ ಅಧ್ಯಕ್ಷ ಎಂ. ರಾಮಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪುರಸಭೆ ವತಿಯಿಂದ ವಿಶ್ವ ಪರಿಸರ  ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತು ಇಂದು ಪರಿಸರ ಮಾಲಿನ್ಯದ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಮನುಷ್ಯ ತನ್ನ ಜೀವನ ಸೌಕರ್ಯದ  ಲಾಲಸೆಗಾಗಿ ಪರಿಸರವನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಧಾವಂತದಲ್ಲಿ ಮಾಲಿನ್ಯದ ಪರಿಣಾಮ ಹೆಚ್ಚಾಗಿದೆ. ಕೈಗಾರಿಕಾ ಬೆಳವಣಿಗೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜೀವ ಜಗತ್ತಿನ ಜೀವನಾಧಾರ ವ್ಯವಸ್ಥೆಯನ್ನು ಮನುಷ್ಯ ತನ್ನದೇ ಸ್ವಂತ ಸ್ವತ್ತು ಎಂಬಂತೆ ಬದಲಾಯಿಸಿ ಬಿಟ್ಟಿದ್ದಾನೆ. ಇದರಿಂದಾಗಿ ಪರಿಸರದ  ನೈಸರ್ಗಿಕ ಸಮತೋಲನ ಏರುಪೇರಾಗಿದೆ ಎಂದು ಹೇಳಿದರು.

ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ಸುಮಾರು 1 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಬಳಿ ಇರುವ ಗಿಡ ಸಂರಕ್ಷಣೆ ಮಾಡಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಜಾಗೃತಿಯ ನಾಮಫಲಕ ಗಳನ್ನು ಹಿಡಿದು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ಪುರಸಭೆ ಉಪಾಧ್ಯಕ್ಷೆ ಗೀತಾ ರಮೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್ ಸದಸ್ಯರಾದ ಭಾರತಮ್ಮ, ನಂಜುಂಡಪ್ಪ, ಹನುಮಂತರೆಡ್ಡಿ, ಶ್ರೀವಳ್ಳಿ ರಮೇಶ್, ಗೀತಮ್ಮ, ಲಕ್ಷ್ಮಮ್ಮ, ಪಚ್ಚಪ್ಪ, ಮಾಲಾದ್ರಿ ಸಿಒ ಪ್ರಸಾದ್, ಕೃಷ್ಣಪ್ಪ ಭಾಗವಹಿಸಿದ್ದರು.

ಪರಿಸರ ರಕ್ಷಿಸಿ

ಜನಸಂಖ್ಯೆ ಹೆಚ್ಚಳದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ನಂಜುಂಡಪ್ಪ ತಿಳಿಸಿದರು.

ನಗರದ ಸರ್ವಜ್ಞ ಉದ್ಯಾನದಲ್ಲಿ ರವಿ ಶಿಕ್ಷಣ ಸಂಸ್ಥೆ ವತಿಯಿಂದ ಸೋಮವಾರ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕಾಡು ಸೇರಿದಂತೆ ನೀರಿನ ಮೂಲಗಳ ಪ್ರಮಾಣ ಕಡಿಮೆಯಾಗಿದೆ. ನೀರಿನ ಅಭಾವವೂ ಹೆಚ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಇ. ಗೋಪಾಲಪ್ಪ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜು ಬಳಿಯಿಂದ ನೀರಾವರಿ ಹೋರಾಟ ವೇದಿಕೆವರೆಗೂ ಜಾಥಾ ನಡೆಸಿ, ಪರಿಸರ ಸಂರಕ್ಷಣೆಯ ಕುರಿತು ಕಾಲೇಜು ವೃತ್ತದಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry