ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆ: ಯುವಜನತೆ ಕಾಳಜಿ ಅಗತ್ಯ

Last Updated 6 ಜೂನ್ 2017, 9:58 IST
ಅಕ್ಷರ ಗಾತ್ರ

ಆನೇಕಲ್‌: ‘ಪ್ರಕೃತಿಯ ಸಮತೋಲನ ಕಾಪಾಡಿ ಪರಿಸರ ಸಂರಕ್ಷಣೆ ಮಾಡುವ ದಿಸೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಕಾಳಜಿ ವಹಿಸಬೇಕು’ ಎಂದು ಸಂಸದ ಡಿ.ಕೆ.ಸುರೇಶ್ ಸೋಮವಾರ ತಿಳಿಸಿದರು. ಅವರು ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಪರಿಸರ ಹಾಗೂ ಗಿಡ ಮರಗಳು ನಾಶವಾಗುತ್ತಿವೆ. ಇದು ಪರಿಸರ ನಾಶವಲ್ಲ ಮನುಕುಲದ ನಾಶಕ್ಕೆ ದಾರಿಯಾಗುತ್ತದೆ ಎಂಬ ಅರಿವನ್ನು ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಹಾಗಾಗಿ ಪರಿಸರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ಕೈಗಾರಿಕೆಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ವಾಹನಗಳಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು ಹಾಗಾಗಿ ಸಾರ್ವಜನಿಕ ಸಾರಿಗೆಯ ಬಳಕೆ ಸೇರಿದಂತೆ ಪರಿಸರ ಸಂರಕ್ಷಣೆಯ ಆಯಾಮಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಬನ್ನೇರುಘಟ್ಟ, ಮಂಟಪ, ರಾಗಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 10 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ಜೋಪಾನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ದಿನಾಚರಣೆ ಕೇವಲ ಜೂನ್ 5ಕ್ಕೆ ಸೀಮಿತವಾಗದೇ ಸದಾ ಪರಿಸರದ ಬಗ್ಗೆ ಕಾಳಜಿ ಹಾಗೂ ಸಂರಕ್ಷಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಬೇಕು ಎಂದರು.

ಎಪಿಎಂಸಿ ಅಧ್ಯಕ್ಷ ನರೇಂದ್ರಬಾಬು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಶ್ರೀ, ಆಶಾ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್.ಬಿ.ಐ. ನಾಗರಾಜು, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲರೆಡ್ಡಿ, ಪದವಿಧರ ವೇದಿಕೆಯ ಅಧ್ಯಕ್ಷ ರಾಮೋಜಿಗೌಡ, ಮೀನುಗಾರಿಕೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾ.ವೇ.ವೆಂಕಟೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಜಿಗಣಿ ಪುನೀತ್, ಮಂಟಪ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಧ ತಿಮ್ಮಾರೆಡ್ಡಿ, ಮುಖಂಡರಾದ ವಿನೋದ್‌, ಸಂಪಂಗಿರಾಮಯ್ಯ, ಎ.ಶ್ರೀನಿವಾಸಯ್ಯ ಹಾಜರಿದ್ದರು. 

ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ದೇವಾಲಯದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ಸಾವಿರ ಗಿಡ ನೆಟ್ಟು ಬೆಳೆಸುತ್ತಿರುವ ಕದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ನಾಟಕ ಹಾಗೂ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಗಿಡ ನೀಡಲಾಯಿತು.

ರಾಮನಗರದಲ್ಲೂ ಅನುಷ್ಠಾನ
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರತಿ ಮನೆಗಳಿಗೂ ಗಿಡಗಳನ್ನು ನೀಡಿ ಬೆಂಗಳೂರು ಉದ್ಯಾನ ನಗರಿಯಾಗುವಂತೆ ಮಾಡಿದ ಹೆಗ್ಗಳಿಕೆ ಇದೆ ಎಂದರು.

ಇದೇ ಮಾದರಿಯನ್ನು ರಾಮನಗರದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಹಮ್ಮಿಕೊಂಡು ಪರಿಸರದ ಸಂರಕ್ಷಣೆ ಮಾಡಲಾಗುವುದು ಎಂದರು.

* * 

ಬನ್ನೇರುಘಟ್ಟ–ಬೆಂಗಳೂರು ಹಾಗೂ ಜಿಗಣಿ–ಬನ್ನೇರುಘಟ್ಟ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ. ಇವುಗಳಿಗೆ ಪರ್ಯಾಯವಾಗಿ ಗಿಡ ನೆಡಲಾಗಿದೆ
ಅಚ್ಯುತರಾಜು, ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT