ಮೆಟ್ರೊ ರೈಲಿನಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಶೀಘ್ರ: ಜಾರ್ಜ್‌ ಭರವಸೆ

7

ಮೆಟ್ರೊ ರೈಲಿನಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಶೀಘ್ರ: ಜಾರ್ಜ್‌ ಭರವಸೆ

Published:
Updated:
ಮೆಟ್ರೊ ರೈಲಿನಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಶೀಘ್ರ: ಜಾರ್ಜ್‌ ಭರವಸೆ

ಬೆಂಗಳೂರು: ‘ಮೆಟ್ರೊ ರೈಲಿನಲ್ಲಿ ಸದ್ಯ ಮೂರು ಬೋಗಿಗಳನ್ನು ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಆರಕ್ಕೆ ಹೆಚ್ಚಿಸಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಮಾಡಲಾಗುವುದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದರು.

ಕಾಂಗ್ರೆಸ್ಸಿನ ಎಸ್. ಷಡಕ್ಷರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮೆಟ್ರೊ ರೈಲಿಗೆ ಇನ್ನೂ 150 ಬೋಗಿ ಪೂರೈಸಲು ಬಿಇಎಂಎಲ್ ಸಂಸ್ಥೆಗೆ ಮಾರ್ಚ್‌ನಲ್ಲೇ ಆದೇಶ ನೀಡಲಾಗಿದೆ. ಡಿಸೆಂಬರ್‌ನಲ್ಲಿ ಆರು ಹೊಸ ಬೋಗಿಗಳನ್ನು ನಿರೀಕ್ಷಿಸಲಾಗುತ್ತಿದೆ. ಅವು ಬಂದ ಬಳಿಕ ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ವಿವರಿಸಿದರು.

ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಡಾ. ಸುಧಾಕರ್, ‘ದೇವನಹಳ್ಳಿ ವಿಮಾನ ನಿಲ್ದಾಣದವರೆಗೂ ಮೆಟ್ರೊ ರೈಲು ವಿಸ್ತರಣೆ ಮಾಡುವ ಯೋಜನೆ ಇದೆಯೇ’ ಎಂದು ಕೇಳಿದ ಪ್ರಶ್ನೆಗೆ, ‘ಈ ಸಂಬಂಧ ಈಗಾಗಲೇ ಮಾರ್ಗ ಅಂತಿಮಗೊಳಿಸಲಾಗಿದೆ. ವಿಸ್ತೃತ ಯೋಜನಾ ವರದಿ   ಸಿದ್ಧಪಡಿಸಲಾಗುತ್ತಿದೆ’ ಎಂದರು.

‘ಎಂ.ಜಿ. ರಸ್ತೆಯಿಂದ ನಾಗವಾರದವರೆಗೂ ಸುರಂಗ ಮಾರ್ಗ ನಂತರ ಜಕ್ಕೂರು, ಜಾಲಾ ಮೂಲಕ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸೌಲಭ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಬೆಂಗಳೂರಿನ ನೈರುತ್ಯ ಭಾಗದಲ್ಲಿ ನಿರ್ಮಾಣ ಮಾಡುತ್ತಿರುವ ಮೆಟ್ರೊ ರೈಲು ಮಾರ್ಗದ ನಿರ್ಮಾಣ ಯಾವಾಗ ಪೂರ್ಣ ಆಗಬಹುದು ಎಂದು ಬಿಜೆಪಿಯ ಸುರೇಶ್‌ ಕುಮಾರ್ ಕೇಳಿದ ಪ್ರಶ್ನೆಗೆ, ‘ಈ ಕಾರಿಡಾರ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರೈಲ್ವೆ ಸುರಕ್ಷತಾ ವಿಭಾಗ ಎರಡು ದಿನಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ಆ ವರದಿ ಬಂದ ಬಳಿಕ ಸಂಚಾರ ಆರಂಭಿಸುವ ದಿನ ನಿಗದಿಪಡಿಸಲಾಗುವುದು’ ಎಂದರು.

ತುಮಕೂರಿನ ಶಾಸಕ ಡಾ. ರಫೀಕ್ ಅಹಮದ್, ‘ಬೆಂಗಳೂರಿನ ಪೀಣ್ಯವರೆಗೂ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲಾಗಿದ್ದು, ಅದನ್ನು ನೆಲಮಂಗಲದವರೆಗೂ ವಿಸ್ತರಿಸಿದರೆ, ತುಮಕೂರಿನಿಂದ ನಿತ್ಯ ನಗರಕ್ಕೆ ಬರುವವರಿಗೆ ಅನುಕೂಲವಾಗುತ್ತದೆ. ಈ ಯೋಜನೆ ಸರ್ಕಾರದ ಮುಂದಿದೆಯೇ’ ಎಂದು ಪ್ರಶ್ನಿಸಿದರು.

ಅದಕ್ಕೆ ಸಚಿವರು, ‘ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನದವರೆಗೆ ಎರಡನೇ ಹಂತದಲ್ಲಿ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಅದನ್ನು ನೆಲಮಂಗಲದವರೆಗೂ ಮುಂಬರುವ ದಿನಗಳಲ್ಲಿ ವಿಸ್ತರಿಸುವ ಬಗ್ಗೆ ಚಿಂತನೆ ಇದೆ. ಅಲ್ಲಿಂದ ತುಮಕೂರಿಗೆ ಸಂಪರ್ಕಿಸಲು ಮೆಮು ರೈಲು (ಮೇನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯುನಿಟ್‌)  ಸೌಲಭ್ಯ ಕಲ್ಪಿಸುವ ಉದ್ದೇಶ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry