ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ

7

ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ

Published:
Updated:
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ

ಚಾಮರಾಜನಗರ: ‘14ನೇ ಶತಮಾನದ ಶಿವಶರಣರ ಸಾಲಿನಲ್ಲಿ ದಿವ್ಯ ಜ್ಯೋತಿಯಾಗಿ ಪ್ರಜ್ವಲಿಸಿದ ಹೇಮರಡ್ಡಿ ಮಲ್ಲಮ್ಮ ಅವರ ದೈವಭಕ್ತಿ, ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ಅನುಕರಣೀಯ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನೀಗೂರಮೇಶ್‌ ಹೇಳಿದರು.

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯಭಾಷಣ ಮಾಡಿದರು.

ಮನುಷ್ಯ ಸಾಧನೆಯಿಂದ ಅಥವಾ ಬದುಕಿನಿಂದ ಮಾತ್ರ ಶಾಶ್ವತವಾಗಿ ಉಳಿಯುತ್ತಾನೆ. ಆದರೆ, ಹೇಮರಡ್ಡಿ ಮಲ್ಲಮ್ಮ ಅವರು ಬದುಕನ್ನೇ ಸಾಧನೆಯಾಗಿ ತೋರಿಸಿಕೊಟ್ಟಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.

ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸುತ್ತಿದ್ದ ಮಲ್ಲಮ್ಮ, ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೆ ಸಾಂಸಾರಿಕ ಬದುಕಿನೊಂದಿಗೆ ಸಾಗುತ್ತಲೇ ಸದ್ಗತಿ ಹೊಂದಿದಳು. ಜೀವನವಿಡೀ ಕಷ್ಟಗಳನ್ನು ಎದುರಿಸಿದರೂ, ತನಗೆ ನೋವುಂಟು ಮಾಡಿದವರ ಹಿತ ಬಯಸಿದಳು. ಸದಾ ಶಿವನನ್ನು ಸ್ಮರಿಸುತ್ತಿದ್ದಳು ಎಂದರು.

ನಗರಸಭೆ ಅಧ್ಯಕ್ಷೆ ಎಸ್‌.ಎನ್.ರೇಣುಕಾ ಮಾತನಾಡಿ, ಮಲ್ಲಿಕಾರ್ಜುನನ ಪರಮ ಭಕ್ತೆಯಾದ ಮಲ್ಲಮ್ಮಳಿಗೆ ಗಂಡನ ಮನೆಯಲ್ಲಿ ಅತ್ತೆ ಹಾಗೂ ಗಂಡನ ಸಹೋದರರ ಹೆಂಡತಿಯರು ಕಿರುಕುಳ ನೀಡುತ್ತಿದ್ದರು. ಆ ಎಲ್ಲ ನೋವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಮಲ್ಲಮ್ಮನ ಸಹಾಯಕ್ಕೆ ಈಶ್ವರನೇ ಭೂಮಿಗಿಳಿದು ಬರುತ್ತಾನೆ. ಆಕೆಯ ಭಕ್ತಿಗೆ ಮೆಚ್ಚಿ ದರ್ಶನ ನೀಡುತ್ತಾನೆ ಎಂದರು.

ಮಲ್ಲಮ್ಮಳ ಸಾಮಾಜಿಕ, ನೈತಿಕ ಕಳಕಳಿಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಸಕ್ತ ವರ್ಷದಿಂದ ಆಕೆಯ ಜಯಂತಿಯನ್ನು ರಾಜ್ಯದಾದ್ಯಂತ ಆಚರಿಸುತ್ತಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಹೆಣ್ಣು ಮಕ್ಕಳು ಹೇಗೆ ಸಾಧನೆ ಮಾಡಬೇಕು ಎಂಬುದನ್ನು ಮಲ್ಲಮ್ಮ ತೋರಿಸಿಕೊಟ್ಟಿದ್ದಾಳೆ. ಜೀವನದಲ್ಲಿ ತಾಳ್ಮೆ ಮೈಗೂಡಿಸಿಕೊಂಡು ಜಾಣತನದಿಂದ ನಮ್ಮ ವಿರೋಧಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಸದಸ್ಯ ಸಿ.ಎಸ್. ಬಾಲರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್, ಉಪಕಾರ್ಯದರ್ಶಿ ಮುನಿರಾಜಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಜೆ.ಎಂ. ರೂಪಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನಾಗವೇಣಿ ಹಾಜರಿದ್ದರು.

**

ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಚರಿತ್ರೆಯನ್ನು ಜನಪದಗೀತೆ, ಕಥೆ, ಪುರಾಣಗಳಲ್ಲಿ ಸಮೃದ್ಧವಾಗಿ ಬೆಳೆಸಿದ್ದಾರೆ. ಅವರ ಜೀವನ ಸಂದೇಶ ಯುವಜನರು ಪಾಲಿಸಬೇಕು

-ನೀಗೂ ರಮೇಶ್‌ ಉಪನ್ಯಾಸಕರು, ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry