ದಕ್ಷಿಣ ಆಫ್ರಿಕಾ ಹೋರಾಟಕ್ಕೆ ಮಳೆ ಅಡ್ಡಿ

7

ದಕ್ಷಿಣ ಆಫ್ರಿಕಾ ಹೋರಾಟಕ್ಕೆ ಮಳೆ ಅಡ್ಡಿ

Published:
Updated:
ದಕ್ಷಿಣ ಆಫ್ರಿಕಾ ಹೋರಾಟಕ್ಕೆ ಮಳೆ ಅಡ್ಡಿ

ಬರ್ಮಿಂಗ್‌ಹ್ಯಾಮ್‌: ಸೆಮಿಫೈನಲ್‌ಗೆ ಏರಲು ಜಯ ಅನಿವಾರ್ಯವಾಗಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡದವರು ಸಮಬಲದ ಹೋರಾಟ ಮುಂದಿಟ್ಟಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆ ಹಾಕಿದ ದಕ್ಷಿಣ ಆಫ್ರಿಕಾ, ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.

220 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ 27 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 119 ರನ್‌ ಗಳಿಸಿದೆ. ಅಜರ್ ಅಲಿ ಮತ್ತು ಫಕರ್‌ ಜಮಾನ್‌ ಮೊದಲ ವಿಕೆಟ್‌ಗೆ 40 ರನ್‌ ಸೇರಿಸಿ ಭರವಸೆ ಮೂಡಿಸಿದ್ದರು.

ಎರಡು ರನ್‌ಗಳ ಅಂತರದಲ್ಲಿ ಇವರಿಬ್ಬರನ್ನು ಕಳೆದುಕೊಂಡ ತಂಡಕ್ಕೆ ನಂತರ ಬಾಬರ್ ಆಜಮ್‌ ಮತ್ತು ಮಹಮ್ಮದ್ ಹಫೀಜ್ ಆಸರೆಯಾದರು. ಮೂರನೇ ವಿಕೆಟ್‌ಗೆ ಇವರು 52 ರನ್ ಸೇರಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಎಡಗೈ ವೇಗಿ ಜುನೈದ್ ಖಾನ್‌, ಎಡಗೈ ಸ್ಪಿನ್ನರ್‌ ಐಮದ್‌ ವಾಸಿಮ್‌ ಮತ್ತು ವೇಗಿ ಹಸನ್ ಅಲಿ ದಾಳಿಗೆ ನಲುಗಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡರೂ ಡೇವಿಡ್‌ ಮಿಲ್ಲರ್‌ (ಔಟಾಗದೆ 75; 104 ಎಸೆತ, 3 ಸಿಕ್ಸರ್ಸ್‌, 1 ಬೌಂಡರಿ) ಅವರ ಅಮೋಘ ಅರ್ಧಶತಕ ಮತ್ತು ಅವರೊಂದಿಗೆ ಕ್ರಿಸ್‌ ಮಾರಿಸ್‌ ಏಳನೇ ವಿಕೆಟ್‌ಗೆ ಸೇರಿಸಿದ 47 ರನ್‌ಗಳು ತಂಡ 200ಕ್ಕೂ ಅಧಿಕ ರನ್‌ ಗಳಿಸಲು ನೆರವಾಯಿತು.

ಆರಂಭಿಕ ಜೋಡಿ ಕ್ವಿಂಟನ್ ಡಿಕಾಕ್‌ ಮತ್ತು ಹಾಶಿಮ್ ಆಮ್ಲಾ 40 ರನ್‌ ಮಾತ್ರ ಸೇರಿಸಿದರು. ಇವರನ್ನು ಒಂಬತ್ತನೇ ಓವರ್‌ನಲ್ಲಿ ಐಮದ್ ವಾಸಿಮ್‌ ಬೇರ್ಪಡಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಫಾಫ್‌ ಡು ಪ್ಲೆಸಿಸ್‌ ಮತ್ತು ಎಬಿ ಡಿವಿಲಿಯರ್ಸ್ ಅವರೂ ಬೇಗನೇ ಔಟಾದರು. ಡಿವಿಲಿಯರ್ಸ್‌ ಶೂನ್ಯಕ್ಕೆ ಔಟಾದರೆ ಫಾಫ್‌ 44 ಎಸೆತಗಳಲ್ಲಿ 26 ರನ್‌ ಗಳಿಸಿದರು.

26ನೇ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿ ಡೇವಿಡ್ ಮಿಲ್ಲರ್‌ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇದು ಇನಿಂಗ್ಸ್‌ನ ಮೊದಲ ಸಿಕ್ಸರ್‌ ಕೂಡ ಆಗಿತ್ತು. 28ನೇ ಓವರ್‌ನಲ್ಲಿ ಮಿಲ್ಲರ್‌ ಎರಡನೇ ಸಿಕ್ಸರ್‌ ಸಿಡಿಸಿದರು. ನಂತರದ ಓವರ್‌ನಲ್ಲಿ ಹಸನ್ ಅಲಿ ಎರಡು ವಿಕೆಟ್‌ ಕಬಳಿಸಿ ಆಫ್ರಿಕನ್ನರ ಸಂಕಷ್ಟ ಹೆಚ್ಚಿಸಿದರು.

ಈ ಓವರ್‌ನ ಐದನೇ ಎಸೆತದಲ್ಲಿ ಜೆಪಿ ಡುಮಿನಿ ವಿಕೆಟ್‌ ಪಡೆದ ಅಲಿ ನಂತರದ ಎಸೆತದಲ್ಲಿ ವಾಯ್ನೆ ಪಾರ್ನೆಲ್ ಅವರನ್ನು ಬೌಲ್ಡ್ ಮಾಡಿದರು. ಒಂದು ತುದಿಯಲ್ಲಿ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಮಿಲ್ಲರ್‌ ಎದೆಗುಂದದೆ ಕ್ರೀಸ್‌ನಲ್ಲಿ ಉಳಿದರು. ಅವರ ಜೊತೆಗೂಡಿದ ಕ್ರಿಸ್ ಮಾರಿಸ್‌ 43ನೇ ಓವರ್‌ಗಳ ವರೆಗೆ ಇನಿಂಗ್ಸ್‌ ಮುನ್ನಡೆಸಲು ನೆರವಾದರು.

ಏಳನೇ ವಿಕೆಟ್‌ಗೆ 47 ರನ್‌ ಜೋಡಿಸಿದ ಮಾರಿಸ್‌ ಔಟಾದ ನಂತರ ಜುನೈದ್‌ ಖಾನ್ ಅವರ ಯಾರ್ಕರ್ ಎಸೆತವನ್ನು ಮಿಡ್‌ಆಫ್‌ಗೆ ತಳ್ಳಿ ಒಂಟಿ ರನ್‌ ಗಳಿಸಿದ ಮಿಲ್ಲರ್‌ ಅರ್ಧಶತಕ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ:
50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 219 (ಕ್ವಿಂಟನ್ ಡಿಕಾಕ್‌ 33, ಫಾಫ್ ಡಿ ಪ್ಲೆಸಿಸ್‌ 26, ಡೇವಿಡ್‌ ಮಿಲ್ಲರ್‌ ಔಟಾಗದೆ 75, ಕ್ರಿಸ್ ಮಾರಿಸ್‌ 28, ಕಗಿಸೊ ರಬಾಡ 26; ಜುನೈದ್ ಖಾನ್‌ 53ಕ್ಕೆ2, ಐಮದ್ ವಾಸಿಮ್‌ 20ಕ್ಕೆ2, ಹಸನ್‌ ಅಲಿ 24ಕ್ಕೆ3); ಪಾಕಿ ಸ್ತಾನ: 27 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 119 (ಫಕರ್ ಜಮಾನ್‌ 31, ಬಾಬರ್ ಆಜಮ್‌ ಬ್ಯಾಟಿಂಗ್‌ 31, ಮಹಮ್ಮದ್‌ ಹಫೀಜ್‌ 26, ಶೊಯೆಬ್‌ ಮಾಲಿಕ್‌ ಬ್ಯಾಟಿಂಗ್‌ 16; ಮಾರ್ನೆ ಮಾರ್ಕೆಲ್‌ 8ಕ್ಕೆ3). ವಿವರ ಅಪೂರ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry