ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಉಪ ಉತ್ಪನ್ನಗಳಿಗೂ ತೆರಿಗೆ ವಿನಾಯಿತಿ ನೀಡಿ’

Last Updated 8 ಜೂನ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಏಕರೂಪದ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಸಂಪೂರ್ಣ ಕೃಷಿ ಕ್ಷೇತ್ರವನ್ನೇ ಹೊರಗಿಡಬೇಕು’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

‘ರೈತರ ಮೇಲೆ ಜಿಎಸ್‌ಟಿ ಬೀರುವ ಪ್ರಭಾವ’ ಕುರಿತು ಚರ್ಚಿಸಲು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಈಗ ಕೃಷಿ ನೇರ ಉತ್ಪನ್ನಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಆದರೆ, ಕೃಷಿ ಉಪ ಉತ್ಪನ್ನಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನೂ ತೆರಿಗೆಯಿಂದ ಹೊರಗಿಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುತ್ತೇವೆ. ಜಿಎಸ್‌ಟಿ ಮಸೂದೆಗೆ ತಿದ್ದುಪಡಿ ತರದಿದ್ದರೆ  ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಭತ್ತವನ್ನು ಅಕ್ಕಿಯನ್ನಾಗಿ ಮಾಡಿ ಮಾರಾಟ ಮಾಡಿದರೆ ಅದಕ್ಕೆ ತೆರಿಗೆ ಪಾವತಿಸಬೇಕು. ಅದೇ ರೀತಿ ಹಣ್ಣು, ಹಾಲು, ಆಲೂಗಡ್ಡೆ , ರೇಷ್ಮೆ, ಹತ್ತಿ ಹಾಗೂ ಸಾವಯವ ಕೃಷಿ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ. ಈ ರೀತಿ ಸರ್ಕಾರ ಪರೋಕ್ಷವಾಗಿ ಕೃಷಿಕರ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ’ ಎಂದು ಆರೋಪಿಸಿದರು.

‘ಅಲ್ಲದೆ, 20 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ರೈತರಿಗೂ ತೆರಿಗೆ ವಿಧಿಸಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದು ಅಪಾಯಕಾರಿ
ಧೋರಣೆ. ಇದನ್ನು ನಾವು ಒಗ್ಗಟ್ಟಾಗಿ ಖಂಡಿಸಬೇಕು’ ಎಂದು ಹೇಳಿದರು.

ಗೋಲಿಬಾರ್‌ಗೆ ಖಂಡನೆ: ಮಧ್ಯಪ್ರದೇಶದಲ್ಲಿ ರೈತರ ಮೇಲೆ  ಗೋಲಿಬಾರ್ ನಡೆಸಿದ ಸರ್ಕಾರದ ಕ್ರಮವನ್ನು ರೈತ ಮುಖಂಡರು ಸಭೆಯಲ್ಲಿ ಖಂಡಿಸಿದರು. ‘ರೈತರ ಸಮಸ್ಯೆ ಕೇಳಿಸಿಕೊಳ್ಳುವ ವ್ಯವಧಾನವಿಲ್ಲದೆ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಖಂಡನೀಯ. ಈ ಪರಿಸ್ಥಿತಿ ಎಲ್ಲ ರಾಜ್ಯಗಳ ರೈತರಿಗೂ ಎದುರಾಗಲಿದೆ. ಅದನ್ನು ತಡೆಯಲು ರೈತರು ಒಗ್ಗಟ್ಟಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT