ಮಕ್ಕಳ ಕಣ್ಣಲ್ಲಿ ಬೇಸಿಗೆಯ ಬಣ್ಣ

7

ಮಕ್ಕಳ ಕಣ್ಣಲ್ಲಿ ಬೇಸಿಗೆಯ ಬಣ್ಣ

Published:
Updated:
ಮಕ್ಕಳ ಕಣ್ಣಲ್ಲಿ ಬೇಸಿಗೆಯ ಬಣ್ಣ

ಮಕ್ಕಳಿಗೆ ಬೇಸಿಗೆಯ ರಸಾನುಭವವನ್ನು ಉಣಿಸಲೆಂದೇ ವಿಷುವಲ್‌ ಆರ್ಟ್‌ ಹಾಗೂ ಅನನ್ಯ ದೃಶ್ಯ ಸಂಸ್ಥೆ ಒಟ್ಟಾಗಿ, ಬಸವನಗುಡಿ ರಸ್ತೆಯ ಗೋಖಲೆ ಇನ್‌ಸ್ಟಿಟ್ಯೂಟ್‌ ಆವರಣದಲ್ಲಿ ಒಂದು ತಿಂಗಳ ಚಿತ್ರಕಲೆ ಹಾಗೂ ಫೋಟೊಗ್ರಫಿ ಶಿಬಿರವನ್ನು ಆಯೋಜಿಸಿತ್ತು.

ಕಳೆದ 18 ವರ್ಷಗಳಿಂದ ಈ ರೀತಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿ ಶಿಬಿರದಲ್ಲಿ ಕಲಾವಿದರಾದ ಆರ್‌.ರಾಜ, ವೈದೇಹಿ ರಾಜ ಹಾಗೂ ಸಿ.ಪಿ. ಚಂದ್ರಮೋಹನ್‌ ತರಬೇತಿಯ ಉಸ್ತುವಾರಿ ವಹಿಸಿದ್ದರು. ಪ್ರತಿ ವರ್ಷವೂ ಮಕ್ಕಳಿಗೆ ಒಂದೊಂದು ವಿಷಯ ನೀಡಿ, ಅವರ ಕಲ್ಪನೆ, ಅನುಭವದ ಚಿತ್ರ ಹಾಗೂ ಫೋಟೊಗಳನ್ನು ಸೆರೆ ಹಿಡಿಯಲು ತಿಳಿಸುತ್ತಾರೆ.

ಅಂತೆಯೇ ಈ ವರ್ಷ ಮಕ್ಕಳಿಗೆ ನೀಡಿದ್ದ ವಿಷಯ– ‘ಸಮ್ಮರ್‌ಟೈಮ್‌’.   ಇಲ್ಲಿ, ಮಕ್ಕಳು ಬೇಸಿಗೆ ಕುರಿತಾದ ತಮ್ಮ ಅನುಭವಗಳನ್ನು ಚಿತ್ರರೂಪಕ್ಕೆ ಭಟ್ಟಿ ಇಳಿಸಿದ್ದಾರೆ.

ಶಿಬಿರದಲ್ಲಿ ಭಾಗವಹಿಸಿದ 11 ಮಕ್ಕಳ ಕಲಾಕೃತಿಗಳು ಪ್ರದರ್ಶನದಲ್ಲಿದೆ. ಕರಗುತ್ತಿರುವ  ಮಂಜುಗಡ್ಡೆ, ಕಪ್ಪು ಡಾಂಬರು ರೋಡಿನಲ್ಲಿ ಬಿಸಿಲಿನಿಂದ ಬಸವಳಿದ ವ್ಯಕ್ತಿಯ ನೆರಳು, ಶ್ರೀಮಂತ ವ್ಯಕ್ತಿಯೊಬ್ಬ ದ್ವೀಪದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು... ಹೀಗೆ ಹಲವು ಚಿತ್ರಣಗಳನ್ನು ಕಾಣಬಹುದು. 11 ವರ್ಷದ ಹಿತೇಶ್‌ ಬರೆದ ಚಿತ್ರದಲ್ಲಿ  ಬಿರು ಬಿಸಿಲಿನಿಂದ ಬಸವಳಿದು ಮರದ ನೆರಳಿನಲ್ಲಿ ದಣಿವಾರಿಸಿಕೊಳ್ಳುತ್ತಿರುವ ವ್ಯಕ್ತಿ, ಆತನ ಮುಖದಲ್ಲಿ ಹರಿಯುತ್ತಿರುವ ಬೆವರು ಆತನ ಸುಸ್ತನ್ನು ಸಮರ್ಥವಾಗಿ ತೋರಿಸುತ್ತದೆ.

16 ವರ್ಷದ ಕಮಲಾ ಆರ್‌. ಮಳೆಗಾಲಕ್ಕೆ ಸಂಡಿಗೆ ತಯಾರಿಸುತ್ತಿರುವ ಮಹಿಳೆಯ ಧಾವಂತವನ್ನು ಕಟ್ಟಿಕೊಟ್ಟಿದ್ದರೆ, ಸೂರ್ಯನ ಪ್ರಖರ ಬೆಳಕನ್ನು ತಡೆಯಲು ಮುಖಕ್ಕೆ ಕೈ ಅಡ್ಡ ಹಿಡಿದುಕೊಂಡ ಮಗುವಿನ ಚಿತ್ರವನ್ನು ಭಾರ್ಗವಿ ಕೆ. ಬರೆದಿದ್ದಾರೆ. ಫೋಟೊಗ್ರಫಿಯಲ್ಲೂ ಮಕ್ಕಳು ಬೇಸಿಗೆಯನ್ನು ಅನುಭವಕ್ಕೆ ದಕ್ಕಿಸಿಕೊಂಡಿದ್ದಾರೆ.  ಇಲ್ಲಿ ಈ ಮಕ್ಕಳು,  ಫೋಟೊಗ್ರಫಿಯ ಬೆಳಕು, ಹಿನ್ನೆಲೆ, ವಿಷಯದ ಕುರಿತು ಪೂರ್ವತಯಾರಿ ಮಾಡಿಕೊಂಡಿರುವುದು ಸ್ಪಷ್ಟ.

**

‘ಸಮ್ಮರ್‌ಟೈಮ್‌’ ಚಿತ್ರಕಲೆ ಪ್ರದರ್ಶನ- 11 ಮಕ್ಕಳು ಬಿಡಿಸಿದ ಕಲಾಕೃತಿ ಹಾಗೂ ಫೋಟೊಗ್ರಫಿಗಳ ಪ್ರದರ್ಶನ.  ಭಾನುವಾರ ಬೆಳಿಗ್ಗೆ 11ಕ್ಕೆ ಉದ್ಘಾಟನೆ– ಚಿತ್ರ ಕಲಾವಿದ ಎಸ್‌.ಜಿ.ವಾಸುದೇವ, ಡಾ.ವಿಜಯಾ, ಆಯೋಜನೆ– ವಿಷುವಲ್‌ ಆರ್ಟ್‌ ವರ್ಕ್‌ಶಾಪ್‌, ಅನನ್ಯ ದೃಶ್ಯ, ಭಾರತೀಯ ವಿದ್ಯಾ ಭವನ,

**

ಕಲಾಪ

ಕಲಾವಿದರು: ಮಕ್ಕಳು

ಸ್ಥಳ: ಹನುಮಂತಪ್ಪ ರಾವ್‌ ಆರ್ಟ್‌ ಗ್ಯಾಲರಿ, ಭಾರತೀಯ ವಿದ್ಯಾಭವನ, ನಂ.43, ರೇಸ್‌ ಕೋರ್ಸ್‌ ರಸ್ತೆ,

ಸಮಯ: ಬೆಳಿಗ್ಗೆ 11ರಿಂದ ಸಂಜೆ 7.

ದಿನಾಂಕ: ಜೂನ್ 11ರಿಂದ 13ರವರೆಗೆ

ಸಂಪರ್ಕ: 80222 67421

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry