ಪ್ರಧಾನಿಯಾದರೆ ಪ್ರಾಣಿ ಕ್ರೌರ್ಯ ತಡೆ ನಿಯಮ ಹಿಂಪಡೆಯುವೆ

7

ಪ್ರಧಾನಿಯಾದರೆ ಪ್ರಾಣಿ ಕ್ರೌರ್ಯ ತಡೆ ನಿಯಮ ಹಿಂಪಡೆಯುವೆ

Published:
Updated:
ಪ್ರಧಾನಿಯಾದರೆ ಪ್ರಾಣಿ ಕ್ರೌರ್ಯ ತಡೆ ನಿಯಮ ಹಿಂಪಡೆಯುವೆ

ಬೆಂಗಳೂರು: ‘ನಾನು ಪ್ರಧಾನಿಯಾದರೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು– 2017 ಅಧಿಸೂಚನೆಯನ್ನು ವಾಪಸ್‌ ಪಡೆಯುತ್ತೇನೆ.’

ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಸಮಿತಿಯು ‘ಕಲಾಕ್ಷೇತ್ರ ಪ್ರತಿಭೆ ವಿಶ್ವದಂಗಳದಲಿ’ ನೆನಪಿನ ಉತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಲೇಖಕಿ ಡಾ.ವಿಜಯಾ ಕೇಳಿದ ಪ್ರಶ್ನೆಯೊಂದಕ್ಕೆ ರಂಗಕರ್ಮಿ ಎಂ.ಎಸ್‌.ಸತ್ಯು ಅವರು ಉತ್ತರಿಸಿದ್ದು ಹೀಗೆ.

‘ಗೋವುಗಳನ್ನು ಕಾಪಾಡಬೇಕು ಹಾಗೆಯೇ ಅವುಗಳ ಉಪಯೋಗವನ್ನೂ ಪಡೆಯಬೇಕು ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದ್ದರು. ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಬೇರೆಯವರ ತಿನ್ನುವ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ಇದು ಫ್ಯಾಸಿಸಂನ ಧೋರಣೆ’ ಎಂದು ಟೀಕಿಸಿದರು.

‘ಚಲನಚಿತ್ರ ಮಂದಿರ, ಮಲ್ಟಿಪ್ಲೆಕ್ಸ್ ಹಾಗೂ ಸಿನಿಮಾ ಪ್ರದರ್ಶಿಸುವ ಸ್ಥಳಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವುದು ಸರಿಯಲ್ಲ. ಅಲ್ಲೇ ಏಕೆ ಹಾಡಬೇಕು? ನ್ಯಾಯಾಲಯ, ಸರ್ಕಾರಿ ಕಚೇರಿಗಳಲ್ಲಿ ಏಕೆ ಕಡ್ಡಾಯ ಮಾಡಬಾರದು’ ಎಂದು ಪ್ರಶ್ನಿಸಿದರು.

‘ಅಂತರ್ಜಾತಿ ವಿವಾಹ ಆದವರನ್ನು ಪೋಷಕರೇ ಮರ್ಯಾದೆಗೇಡು ಹತ್ಯೆ ಮಾಡುವಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಶಮಾ ಜೈದಿ ಅವರನ್ನು ನೀವು ಮದುವೆ ಆದಾಗ ಅದನ್ನು ಪೋಷಕರು ವಿರೋಧಿಸಲಿಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ತಂದೆ–ತಾಯಿ ವಿರೋಧ ಮಾಡಲಿಲ್ಲ. ದ್ರೋಣಾಚಾರ್ಯರಿಗೆ ಜಾತಿ ಮುಖ್ಯವಾಗಬಹುದು, ನನಗಲ್ಲ ಎಂದರು. 

‘ಇಷ್ಟು ಸುಂದರವಾಗಿರುವ ನಿಮಗೆ ನಾಯಕ ನಟನಾಗಬೇಕು ಅನಿಸಲಿಲ್ಲವೇ’ ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಆದರೂ ಘಳಿಗೆ ಚಿತ್ರದಲ್ಲಿ ಪಾತ್ರ ಮಾಡಿದ್ದೆ’ ಎಂದರು.

ಕಲೆಯ ನಿರ್ಲಕ್ಷ್ಯ: ‘ನೇಪಥ್ಯ ಕಲೆ ನಿರ್ಲಕ್ಷಿತ ಕ್ಷೇತ್ರ. ಈಗ ಸ್ವಲ್ಪ ಸುಧಾರಿಸಿದೆ. ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಯುರೋಪಿಯನ್‌ ಚಿತ್ರಕಲೆಯನ್ನು ನಕಲು ಮಾಡುತ್ತಿದ್ದೆ. ಹೀಗಾಗಿ ನೇಪಥ್ಯ ಕಲೆಯ ಕಡೆಗೆ ಆಸಕ್ತಿ ಬೆಳೆದು, ರಂಗ ವಿನ್ಯಾಸಕನಾದೆ’ ಎಂದು ನೆನಪಿಸಿಕೊಂಡರು.

‘ಗುಜರಾತಿಗಳೇ ಹೀಗೆ...’

‘ಚುನಾಯಿತ ಸರ್ಕಾರವನ್ನು ಗೌರವಿಸಬೇಕು. ಆದರೆ, ಕೇಂದ್ರ ಸರ್ಕಾರವು ನೋಟು ರದ್ದತಿ ಮಾಡಿದ್ದು ಸರಿಯಲ್ಲ. ಈ ಹಿಂದೆ ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದಾಗಲೂ ನೋಟು ರದ್ದತಿ ಮಾಡಲಾಗಿತ್ತು. ಇದು ಗುಜರಾತಿಗಳ ದೌರ್ಬಲ್ಯ’ ಎಂದು ಸತ್ಯು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry