ರೈತರ ಮೇಲೆ ಗೋಲಿಬಾರ್ ಆಕಸ್ಮಿಕ: ಯಶೋಧರಾ ರಾಜೇ ಸಿಂಧಿಯಾ

7
ಕಲಬುರ್ಗಿಯಲ್ಲಿ ಮೋದಿ ಫೆಸ್ಟ್‌

ರೈತರ ಮೇಲೆ ಗೋಲಿಬಾರ್ ಆಕಸ್ಮಿಕ: ಯಶೋಧರಾ ರಾಜೇ ಸಿಂಧಿಯಾ

Published:
Updated:
ರೈತರ ಮೇಲೆ ಗೋಲಿಬಾರ್ ಆಕಸ್ಮಿಕ: ಯಶೋಧರಾ ರಾಜೇ ಸಿಂಧಿಯಾ

ಕಲಬುರ್ಗಿ: ‘ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿರುವುದು ಆಕಸ್ಮಿಕ’ ಎಂದು ಮಧ್ಯಪ್ರದೇಶದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವೆ ಯಶೋಧರಾ ರಾಜೇ ಸಿಂಧಿಯಾ ಹೇಳಿದರು.

ಇಲ್ಲಿನ ಶ್ರೀ ಶರಣಬಸವೇಶ್ವರ ದೇವಸ್ಥಾನ ಮುಂಭಾಗದ ಜಾತ್ರಾ ಮಹೋತ್ಸವ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮೋದಿ ಫೆಸ್ಟ್‌’ನ 3ನೇ ದಿನದ ಉದ್ಘಾಟನಾ ಸಮಾರಂಭದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಹಿಂದೆ ಎರಡು ಬಾರಿ ನಮ್ಮ ಸರ್ಕಾರವಿದ್ದಾಗ ಇಂತಹ ಘಟನೆ ನಡೆದಿರಲಿಲ್ಲ. ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌವಾಣ್ ಅವರು ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ಈ ಘಟನೆ ನಡೆಯಬಾರದಿತ್ತು. ಆದರೆ ನಡೆದು ಹೋಗಿದ್ದು, ವಿಷಾದದ ಸಂಗತಿಯಾಗಿದೆ. ಮಧ್ಯಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸಿ, ರೈತರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವೆ, ‘ಸಿದ್ದರಾಮಯ್ಯ ಅವರು ಮೋದಿ ಸರ್ಕಾರದ ಸಾಧನೆಯ ಬಗ್ಗೆ ಕಣ್ಣು ಮುಚ್ಚಿ ಮಾತನಾಡದೆ, ಕಣ್ಣು ಬಿಟ್ಟು ನೋಡಬೇಕು. ಮೋದಿ ಜಾರಿಗೆ ತಂದಿರುವ ಯೋಜನೆಗಳಿಂದ ಶ್ರೀಸಾಮಾನ್ಯನಿಗೆ ಆಗಿರುವ ಅನುಕೂಲಗಳ ಬಗ್ಗೆ ಅರಿತುಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

ಸರ್ಕಾರದ ಸಾಧನೆ ಜನರಿಗೆ ತಲುಪಿಸಿ: ‘ನರೇಂದ್ರ ಮೋದಿ ಸರ್ಕಾರದ ಸಾಧನೆ ಮತ್ತು ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು’ ಎಂದು ಸಿಂಧಿಯಾ ಹೇಳಿದರು.

‘ಮೋದಿ ಫೆಸ್ಟ್‌’ನ 3ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘60 ವರ್ಷ ಆಡಳಿತ ನಡೆಸಿರುವ ಸರ್ಕಾರಗಳು ಜಾರಿಗೆ ತರದ ಅನೇಕ ಯೋಜನೆಗಳನ್ನು ಮೋದಿ ಜಾರಿಗೆ ತಂದಿದ್ದಾರೆ. ಜನ ಧನ, ಫಸಲ್ ಬಿಮಾ ಯೋಜನೆ, ಬೇಟಿ ಬಚಾವೋ ಬೇಟಿ ಪಢಾವೋ, ಉಜ್ವಲ್ ಯೋಜನೆ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಜನರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೋದಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಹೇಳಬೇಕು. ಅವರನ್ನು ಫಲಾನುಭವಿಗಳನ್ನಾಗಿ ಮಾಡಬೇಕು’ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಿ.ಜಿ.ಪಾಟೀಲ, ಅಮರನಾಥ ಪಾಟೀಲ, ಮಾಜಿ ಸಚಿವ ಬಾಬುರಾವ್ ಚವಾಣ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry