ಆಧಾರ್‌: ರಾಜೀವ್‌ ನೆನಪಿಸಿದ ‘ಸುಪ್ರೀಂ’

7
ಸರ್ಕಾರದ ಒಂದು ರೂಪಾಯಿ ವೆಚ್ಚದಲ್ಲಿ ಫಲಾನುಭವಿಗೆ ದಕ್ಕುವುದು ಬರೇ 15 ಪೈಸೆ

ಆಧಾರ್‌: ರಾಜೀವ್‌ ನೆನಪಿಸಿದ ‘ಸುಪ್ರೀಂ’

Published:
Updated:
ಆಧಾರ್‌: ರಾಜೀವ್‌ ನೆನಪಿಸಿದ ‘ಸುಪ್ರೀಂ’

ನವದೆಹಲಿ: ‘ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಒಂದು ರೂಪಾಯಿ ಖರ್ಚು ಮಾಡಿದರೆ, ಅದರಲ್ಲಿ ಫಲಾನುಭವಿಗೆ ತಲುಪುವುದು ಬರೀ 15 ಪೈಸೆ’.–ಮಾಜಿ ಪ್ರಧಾನಿ, ದಿವಂಗತ ರಾಜೀವ್‌ ಗಾಂಧಿ ಅವರು 1985ರಲ್ಲಿ ನೀಡಿದ್ದ ಈ ಹೇಳಿಕೆ ತುಂಬಾ ಪ್ರಸಿದ್ಧ.

ಪ್ಯಾನ್‌ ಕಾರ್ಡ್‌ ಪಡೆಯಲು ಮತ್ತು ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐಟಿಆರ್‌) ಸಲ್ಲಿಸಲು ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಕಾನೂನನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ಪ್ರಮುಖವಾಗಿ ಉಲ್ಲೇಖಿಸಿದೆ.

‘ಈ ಸಮಸ್ಯೆಗೆ (ಫಲಾನುಭವಿಗಳಿಗೆ ನಿಗದಿಪಡಿಸಿದಷ್ಟು ಅನುದಾನ ಸಿಗದೇ ಇರುವುದು) ಆಧಾರ್‌ ಯೋಜನೆ ಪರಿಹಾರವಾಗಬಲ್ಲುದು’ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರಿದ್ದ ನ್ಯಾಯಪೀಠ ಪ್ರತಿಪಾದಿಸಿದೆ.

1985ರಲ್ಲಿ ಒಡಿಶಾದ ಬರಪೀಡಿತ ಕಾಳಹಂಡಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜೀವ್‌ ಗಾಂಧಿ ಅವರು ಈ ಹೇಳಿಕೆ ನೀಡಿದ್ದರು.

ಅರ್ಹ ಬಡವರಿಗೆ ಮೀಸಲಾದ ಜನ ಕಲ್ಯಾಣ ಯೋಜನೆಗಳ ಲಾಭವನ್ನು ನಕಲಿ ಫಲಾನುಭವಿಗಳು ಪಡೆಯುವುದನ್ನು ಆಧಾರ್‌ ಸಂಖ್ಯೆಯಿಂದ ತಪ್ಪಿಸಬಹುದು ಎಂದು 157 ಪುಟಗಳ ತೀರ್ಪಿನಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಅರ್ಹ ಫಲಾನುಭವಿಗಳನ್ನು ಸರಿಯಾಗಿ ಗುರುತಿಸದೇ ಇರುವುದರಿಂದ  ಯೋಜನೆಯ ಲಾಭವನ್ನು ಅವರಿಗೆ ನೇರವಾಗಿ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನರ್ಹರು, ನಕಲಿ ಫಲಾನುಭವಿಗಳು ಅನುಕೂಲ ಪಡೆದುಕೊಳ್ಳುತ್ತಿದ್ದಾರೆ’ ಎಂದು ಅದು ಹೇಳಿದೆ.

ಬಡವರ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ಅವರಿಗೆ ಸಾಕಷ್ಟು ಅವಕಾಶ ನೀಡುವುದಕ್ಕೆ ಅಗತ್ಯವಾದ ಯೋಜನೆಗಳನ್ನು ರೂಪಿಸುವುದು ಸರ್ಕಾರಗಳ ಜವಾಬ್ದಾರಿ ಎಂದೂ ನ್ಯಾಯಪೀಠ ಹೇಳಿದೆ. ಭ್ರಷ್ಟಾಚಾರ ಸೇರಿದಂತೆ ಹಲವಾರು ಕಾರಣಗಳಿಗಾಗಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದೂ ಅದು ಅಭಿಪ್ರಾಯಪಟ್ಟಿದೆ.

ಸಣ್ಣ ಸಂಖ್ಯೆ ಅಲ್ಲ:  ದೇಶದ ವೈಯಕ್ತಿಕ ತೆರಿಗೆದಾರರ ಬಳಿ ಇರುವ 10.52 ಲಕ್ಷ ನಕಲಿ ಪ್ಯಾನ್‌ ಕಾರ್ಡ್‌ಗಳು ಸಣ್ಣ ಸಂಖ್ಯೆ ಅಲ್ಲ. ಇವುಗಳಿಂದ ದೇಶದ ಅರ್ಥವ್ಯವಸ್ಥೆಗೆ ಹಾನಿಯಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ದೇಶದಲ್ಲಿ ಒಟ್ಟು 11.35 ಲಕ್ಷ ನಕಲಿ  ಅಥವಾ ವಂಚನೆ ಉದ್ದೇಶಕ್ಕಾಗಿ ಮಾಡಿರುವ ಪ್ಯಾನ್‌ ಕಾರ್ಡ್‌ಗಳಿರುವುದು ಪತ್ತೆಯಾಗಿದೆ. ಈ ಪೈಕಿ 10.52 ಪ್ಯಾನ್‌ ಕಾರ್ಡ್‌ಗಳು ವೈಯಕ್ತಿಕ ತೆರಿಗೆದಾರರಿಗೆ ಸೇರಿವೆ ಎಂದು ಅದು ಹೇಳಿದೆ.

‘ನಕಲಿ ಪ್ಯಾನ್‌ ಕಾರ್ಡ್‌ಗಳು ಕೇವಲ ಶೇ 0.4ರಷ್ಟು ಜನರ ಬಳಿ ಮಾತ್ರ ಇವೆ. ಹಾಗಾಗಿ, ಪ್ಯಾನ್‌ ಕಾರ್ಡ್‌ಗೆ ಅರ್ಜಿ ಹಾಕುವಾಗ ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವಾಗ ಆಧಾರ್‌ ಸಂಖ್ಯೆ ನಮೂದಿಸುವ ಅಗತ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

ಆದರೆ, ಶೇಕಡಾವಾರು ಲೆಕ್ಕಾಚಾರವನ್ನು ನಾವು ಪರಿಗಣಿಸಲು ಸಾಧ್ಯವಿಲ್ಲ. ಇದು ಸಣ್ಣ ಸಂಖ್ಯೆಯಾಗಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರದು ಎಂದು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

****

ನಕಲಿ ಆಧಾರ್‌: ಮಾಹಿತಿ ನಿರಾಕರಣೆ

ನಕಲಿ ಆಧಾರ್‌ ಕಾರ್ಡ್‌ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನಿರಾಕರಿಸಿದೆ.

ಮಾಹಿತಿ ಬಹಿರಂಗಪಡಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಬಹುದು ಅಥವಾ ಅಪರಾಧಕ್ಕೆ ಪ್ರಚೋದನೆ ನೀಡಿದಂತಾಗಬಹುದು ಎಂದು ಪ್ರಾಧಿಕಾರ ಹೇಳಿದೆ.

ಸುದ್ದಿಸಂಸ್ಥೆಯ ವರದಿಗಾರರೊಬ್ಬರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ಅಡಿಯಲ್ಲಿ ಮಾಹಿತಿಗಳನ್ನು ಕೇಳಿದ್ದರು. ನಕಲಿ ಆಧಾರ್‌ ಕಾರ್ಡ್‌ ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ನೀಡಲೂ ಯುಐಡಿಎಐ ನಿರಾಕರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry