ದಲಿತ ಕಾಲೊನಿಯಲ್ಲಿ ಮೂಲಸೌಕರ್ಯ ಕೊರತೆ

7

ದಲಿತ ಕಾಲೊನಿಯಲ್ಲಿ ಮೂಲಸೌಕರ್ಯ ಕೊರತೆ

Published:
Updated:
ದಲಿತ ಕಾಲೊನಿಯಲ್ಲಿ ಮೂಲಸೌಕರ್ಯ ಕೊರತೆ

ಮೈಸೂರು: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ದಲಿತ ಕಾಲೊನಿಯಲ್ಲಿ ಮೂಲಸೌಕರ್ಯಗಳಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು. ‘ಬಿಜೆಪಿ ನಡೆ, ದಲಿತರ ಕಡೆ’ ಕಾರ್ಯಕ್ರಮದಡಿ ಅವರು ಕೆಸರೆಯ ಕುರಿಮಂಡಿಯಲ್ಲಿನ ದಲಿತ ಜನಾಂಗದ ನರಸಿಂಹಮೂರ್ತಿ ಅವರ ಮನೆಯಲ್ಲಿ ಉಪಾಹಾರ ಸೇವಿಸಿದ ಬಳಿಕ ‘ದಲಿತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಲ್ಲಿ 330 ಮನೆಗಳಿವೆ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಸ್ವಚ್ಛತೆ ಬಹುದೂರದ ಮಾತಾಗಿದೆ. ಡೆಂಗಿ ಸೇರಿದಂತೆ ಅನೇಕ ಜ್ವರಗಳು ಜನರನ್ನು ಬಾಧಿಸುತ್ತಿವೆ. 40 ಜನರು ವಿವಿಧ ಜ್ವರಗಳಿಂದ ಬಳಲುತ್ತಿದ್ದಾರೆ. ಇವೆಲ್ಲವೂ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಸಿದ್ದರಾಮಯ್ಯನವರೇ’ ಎಂದು ಅವರು ಪ್ರಶ್ನಿಸಿದರು.

‘ಸಿದ್ದರಾಮಯ್ಯನವರೇ ನಿಮಗೆ ಕಿವಿ ಕೇಳುತ್ತಿದೆ ತಾನೆ? ನಿಮ್ಮ ಸರ್ಕಾರ ಬದುಕಿದೆ ತಾನೆ? ನಾಲ್ಕು ವರ್ಷದಲ್ಲಿ ಒಮ್ಮೆಯೂ ದಲಿತರ ಕಾಲೊನಿಗೆ ಹೋಗಿ ಅವರ ಕಷ್ಟ ಸುಖ ವಿಚಾರಿಸಿಲ್ಲ. ಈಗ ನಾನು ಆ ಕೆಲಸ ಆರಂಭಿಸಿರುವುದಕ್ಕೆ ಸಿಗುತ್ತಿರುವ ಜನಬೆಂಬಲ ಕಂಡು ನಿಮಗೆ ಸಹಿಸಲು ಆಗದೆ ಹಗುರ ಮಾತುಗಳನ್ನಾಡುತ್ತಿದ್ದೀರಿ’ ಎಂದು ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಬಾಬೂ ಜಗಜೀವನ್‌ರಾಂ ಅವರನ್ನು ಪ್ರಧಾನಿ ಮಾಡಲು ಹೊರಟಾಗ ಅದಕ್ಕೆ ಕಲ್ಲು ಹಾಕಿದ್ದು ಕಾಂಗ್ರೆಸ್‌ನವರು. ಗರೀಬಿ ಹಠಾವೊ ಯೋಜನೆಯಿಂದ ಕಾಂಗ್ರೆಸ್‌ನವರ ಗರೀಬಿ ಅಷ್ಟೇ ದೂರವಾಗಿದೆ. ದಲಿತರ ಹೆಸರು ಹೇಳಲೂ ನೈತಿಕ ಹಕ್ಕನ್ನು ಕಾಂಗ್ರೆಸ್ ಹೊಂದಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ರವಿಕುಮಾರ್, ಎಸ್.ಎ.ರಾಮದಾಸ್, ಎಚ್.ವಿ.ರಾಜೀವ್ ಹಾಜರಿದ್ದರು.

ರೈತರ ರಕ್ಷಣೆಗಾಗಿ ಸಮಾವೇಶ

ಹುಣಸೂರು: ರಾಜ್ಯದಲ್ಲಿ ಜನಸಂಪರ್ಕ ಅಭಿಯಾನ ಸಭೆಯನ್ನು ಮುಂದಿನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ನಡೆಸುತ್ತಿಲ್ಲ. ರಾಜ್ಯದ ಜನರ ಹಾಗೂ ರೈತರ ರಕ್ಷಣೆಗೆ ಹೋರಾಟ ನಡೆಸಿ ಎಚ್ಚರಿಸಲು ಪ್ರವಾಸ ನಡೆಸಿದ್ದೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹೇಳಿದರು.

ನಗರದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಬೃಹತ್‌ ಜನಸಂಪರ್ಕ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು,  ಬರಗಾಲ ಎದುರಾಗಿ ರೈತರು ಬೀದರ್‌ನಿಂದ ಚಾಮರಾಜನಗರದ ವರೆಗೂ ತತ್ತರಿಸಿದ್ದರೂ, ಕೃಷಿ ಸಚಿವರು ಒಂದು ಬಾರಿಯೂ ಯಾವುದೇ ಕ್ಷೇತ್ರಕ್ಕೂ ಭೇಟಿ ನೀಡಿ ರೈತರ ಕಷ್ಟ ತಿಳಿಯುವ ಪ್ರಯತ್ನ ಮಾಡದಿರುವುದು ಸರ್ಕಾರದ ಕಾರ್ಯವೈಖರಿಗೆ ಕನ್ನಡಿಯಾಗಿದೆ ಎಂದರು.

ಸಾಲಮನ್ನಾ: ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರೆ, ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯದ ಸಹಕಾರ ಸಂಘದ ಸಾಲ ಮನ್ನಾ ಮಾಡುವಷ್ಟು ಕಾಳಜಿ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎರಡು ಬಾರಿ ಸಾಲ ಮನ್ನಾ ಮಾಡಿದ್ದೇವೆ. ಅಂದು ಮನಮೋಹನ್ ಸಿಂಗ್‌ ಅವರತ್ತ ಬೆರಳು ಮಾಡಿ ತೋರಿಸದೆ ರೈತರ ಕಣ್ಣೀರು ಒರೆಸಿದ್ದೇವೆ. ಆದರೆ, ಸಿದ್ದರಾಮಯ್ಯ ಕೇಂದ್ರದತ್ತ ಬೆಟ್ಟು ಮಾಡುವುದು ಎಷ್ಟು ಸಮಂಜಸ? ಎಂದು ಪ್ರಶ್ನಿಸಿದರು.

ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಈ ರಾಜ್ಯಗಳು ಕೇಂದ್ರದ ಅನುದಾನಕ್ಕೆ ಕಾದು ಕುಳಿತಿಲ್ಲ. ಖಜಾನೆ ಖಾಲಿ ಮಾಡಿರುವ ಸಿದ್ದರಾಮಯ್ಯ ಸಾಲ ಮನ್ನಾ ಮಾಡಲು ಖಜಾನೆಯಲ್ಲಿ ಹಣವಿಲ್ಲದಂತಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ಮೊದಲು ಸಾಲ ಮನ್ನಾ ಮಾಡಲಿ ಎಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ರಾಜ್ಯದಲ್ಲಿ ಜಾತೀಯತೆ ಹುಟ್ಟು ಹಾಕುತ್ತಿದ್ದಾರೆ. ಕುರುಬ ಸಮುದಾಯಕ್ಕೆ ತಾವೊಬ್ಬರೇ ಎಲ್ಲಾ ಸವಲತ್ತು ನೀಡಿದ ನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಕಾಗಿನೆಲೆಯಲ್ಲಿ ಕುರುಬ ಸಮುದಾಯದ ಮಠ ಅಭಿವೃದ್ಧಿಗೆ ₹40 ಕೋಟಿ ಅನುದಾನ ನೀಡಲಾಗಿದೆ. ಬಿಜೆಪಿ ಯಾವುದೇ ಒಂದು ಕೋಮಿಗೆ ಮಣೆ ಹಾಕದೆ ಎಲ್ಲರಿಗೂ ಆದ್ಯತೆ ನೀಡುವ ಮೂಲಕ ಜಾತ್ಯತೀತ ಸಂಸ್ಕೃತಿ ಅನುಸರಿಸಿದೆ ಎಂದು ಹೇಳಿದರು.

ರಾಜ್ಯದ ಮಾಧ್ಯಮಗಳಿಗೆ ನೀರಾವರಿ ಇಲಾಖೆ ನೀಡಿರುವ ಜಾಹೀರಾತು ಕುರಿತಂತೆ ಬಿಜೆಪಿಯು ಈಗಾಗಲೇ ಸರ್ಕಾರ ಯಾವ ಯೋಜನೆಗೆ ನಿಜವಾಗಿ ಎಷ್ಟು ಅನುದಾನ ನೀಡಿದೆ? ಇದರಲ್ಲಿ ಸುಳ್ಳು ಎಷ್ಟು ಎಂಬ ಬಗ್ಗೆ ಕುಲಂಕಷವಾಗಿ ಅಧ್ಯಯನ ನಡೆಸಿದೆ.

ನೀರಾವರಿ ಇಲಾಖೆಯಲ್ಲಿನ ಹಗರಣ ಕುರಿತು ಮುಂದಿನ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸುತ್ತೇನೆ. ಹಾಗೂ 24 ಗಂಟೆಯೊಳಗೆ ರೈತನ ಸಹಕಾರ ಸಂಘಗಳ ಸಾಲ ಮನ್ನಾ ಮಾಡಲು ಆದೇಶ ಹೊರಡಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಮುಖಂಡರು ದಲಿತರ ಮನೆಯಲ್ಲಿ ತಿಂಡಿ– ಊಟ ಮಾಡಿದರೆ ಹಾಸ್ಯ ಮಾಡುವ ಕಾಂಗ್ರೆಸ್‌, ಬಿ.ಆರ್‌.ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಮಾಡಿದ ತಂತ್ರಗಾರಿಕೆ ಯಾರದ್ದು? ಬಾಬು ಜಗಜೀವನರಾಂ ಪ್ರಧಾನಮಂತ್ರಿ ಗದ್ದುಗೆ ಏರದಂತೆ ವ್ಯವಸ್ಥಿತ ಸಂಚು ಮಾಡಿದವರು ಯಾರು? ಎಂದು ಲೇವಡಿ ಮಾಡಿದರು.

ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಬಿ.ಜಿ.ಪುಟ್ಟಸ್ವಾಮಿ, ಶಿವರಾಂ ಮಾತನಾಡಿದರು. ಅರವಿಂದ ಲಿಂಬಾವಳಿ, ರವಿಕುಮಾರ್‌, ಎಂ.ಶಿವಣ್ಣ, ನಾಗೇಂದ್ರ, ಸುಲೋಚನಾ ಭಟ್‌, ಜಿಲ್ಲೆಯ ಪಕ್ಷದ ಮುಖಂಡರು ಹಾಜರಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಯೋಗಾನಂದಕುಮಾರ್ ಸ್ವಾಗತಿಸಿದರು. ರಮೇಶ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಡವಾಗಿ ಬಂದ ಯಡಿಯೂರಪ್ಪ

ಯಡಿಯೂರಪ್ಪ ಅವರು ಎರಡು ಗಂಟೆಗಳಷ್ಟು ತಡವಾಗಿ  ಬಂದರು. ಅವರ ಬರುವಿಕೆಗೆ ಬೆಳಿಗ್ಗೆ 8.30ರಿಂದಲೇ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಎಫ್‌ಟಿಎಸ್‌ ವೃತ್ತ)ದಲ್ಲಿ ಕಾರ್ಯಕರ್ತರು ಕಾದು ನಿಂತಿದ್ದರು. ಯಡಿಯೂರಪ್ಪ ಬಂದವರೇ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೆಸರೆಯ ಕುರಿಮಂಡಿಯಲ್ಲಿನ ದಲಿತ ಜನಾಂಗದ ನರಸಿಂಹಮೂರ್ತಿ ಅವರ ಮನೆಗೆ ತೆರಳಿದರು. ಕಾಲೊನಿಗೆ ಬರುತ್ತಿದ್ದಂತೆ ಮುಖಂಡರು ಆರತಿ ಬೆಳಗಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry