ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಬಾರದ ದಶಕದ ದೊಡ್ಡ ಮಳೆ

Last Updated 13 ಜೂನ್ 2017, 5:40 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಹೋಬಳಿಯಾದ್ಯಂತ ಜೂನ್‌ 7ರಂದು ಬಿದ್ದ ದಶಕದ ದೊಡ್ಡ ಮಳೆಯಿಂದ ಅಂತರ್ಜಲ ವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುಕೂಲವಾಗಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ, ಅಪಾರ ಪ್ರಮಾಣದ ನೀರು ಹರಿದು ಆಂಧ್ರಪ್ರದೇಶದ ಪಾಲಾಗಿದೆ. ಇಲ್ಲಿನ ಮಳೆಗೆ ಅಲ್ಲಿನ ಗಡಿಭಾಗದ ಬೃಹತ್‌ ಚೆಕ್‌ಡ್ಯಾಂಗಳು ಮೈದುಂಬಿಕೊಂಡು, ಅಂತರ್ಜಲ ವೃದ್ಧಿಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹೋಬಳಿಯ ಯಾವ ಕೆರೆಗೂ ನೀರು ಬಂದಿಲ್ಲ.

ಚೆಕ್‌ಡ್ಯಾಂ, ಗೋಕಟ್ಟೆಗಳು ಮಾತ್ರ ತುಂಬಿಕೊಂಡಿವೆ. ಅನೇಕ ಚೆಕ್‌ಡ್ಯಾಂಗಳು ಒಡೆದಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದ ಚೆಕ್‌ಡ್ಯಾಂಗಳು ಹಾನಿಗೀಡಾಗಿವೆ. ಕಳಪೆ ಕಾಮಗಾರಿ ನಡೆದಿರುವ ಸಾಧ್ಯತೆಯಿದೆ. ಎರಡು ವರ್ಷಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಈ ಹೋಬಳಿ ಗ್ರಾಮಸ್ಥರಿಗೆ ದೊಡ್ಡ ಮಳೆ ಹೆಚ್ಚೇನೂ ಸಮಾಧಾನ ತಂದಿಲ್ಲ ಎಂದು ಕುಮಾರಸ್ವಾಮಿ, ರಾಮಣ್ಣ, ನಿಂಗಪ್ಪ, ಶರಣಪ್ಪ ಹೇಳುತ್ತಾರೆ.

ತಮ್ಮೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚು ಮಳೆಯಾಗಿದ್ದು, ತಮ್ಮೇನಹಳ್ಳಿ, ಶಿರೇಕೊಳ, ಉರ್ತಾಳ್‌, ಕರಡಿಹಳ್ಳ ಗ್ರಾಮಗಳ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಸೋಮೇನಹಳ್ಳಿ ಮೂಲಕ ನೆರೆ ರಾಜ್ಯದ ಪಾಲಾಗಿದೆ. ಈ ನೀರನ್ನು ಹಿಡಿದಿಟ್ಟುಕೊಂಡಿದ್ದರೆ ಎರಡು– ಮೂರು ವರ್ಷ ಹೋಬಳಿಯಲ್ಲಿ ಕುಡಿಯುವ ನೀರಿನ
ಸಮಸ್ಯೆ ಎದುರಾಗುತ್ತಿರಲಿಲ್ಲ. ಆಂಧ್ರಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಮಾದರಿ ಕೆಲಸ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೃಷಿ ಬಾವಿ ತುಂಬಿಸಿ
ಹೋಬಳಿಯಲ್ಲಿ ನೂರಾರು ವ್ಯರ್ಥ ಕೃಷಿ ಬಾವಿಗಳಿವೆ. ಅದರ ಸಮೀಪವೇ ಹಳ್ಳ–ಕೊಳ್ಳಗಳಿವೆ. ಬಾವಿಗಳಿಗೆ ನೀರು ಹಾಯಿಸಿದರೆ ನೀರು ವ್ಯರ್ಥಗೊ ಳ್ಳುವುದನ್ನು ತಡೆಯುವುದರ ಜೊತೆಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ಸಾಧ್ಯವಿದೆ ಎಂದು ಪಿಎಲ್‌ ಡಿ ಬ್ಯಾಂಕ್‌ ಅಧ್ಯಕ್ಷ ಎಚ್‌.ಟಿ. ನಾಗರೆಡ್ಡಿ ಹೇಳುತ್ತಾರೆ.

ಕೃಷಿ ಹೊಂಡಕ್ಕೆ ಒತ್ತು
ಮಳೆಯಿಂದ 40 ಚೆಕ್‌ಡ್ಯಾಂ, ಬೃಹತ್‌ ಕೃಷಿಹೊಂಡಗಳು ಭರ್ತಿಯಾಗಿವೆ. ಇದನ್ನು ಚಿತ್ರೀಕರಿಸಲು ದಾವಣಗೆರೆಯಿಂದ ಡ್ರೋಣ್‌ ಕ್ಯಾಮೆರಾ ತರಿಸಲಾಗಿತ್ತು. ಈ ವರ್ಷ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು ಎಂದು ಕೃಷಿ ಅಧಿಕಾರಿ ಮಹಮದ್ ಒಬೇದುಲ್ಲಾ ಹೇಳಿದರು.

ಮಳೆ ನೀರು ಬಳಕೆಯಾಗಿಲ್ಲ
ಬಿದ್ದ ಮಳೆ ನೀರು ಶೇ 10ರಷ್ಟೂ ಹೋಬಳಿಯಲ್ಲಿ ಬಳಕೆಯಾಗಿಲ್ಲ. ಹೆಚ್ಚಿನ ಆಂಧ್ರ ಪ್ರದೇಶದ ಪಾಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ ನೀರು ಇಂಗಿಸುವ ಕಾರ್ಯಗಳನ್ನು ಮಾಡಿಸಬೇಕು. ಗ್ರಾಮ ಪಂಚಾಯ್ತಿಗೆ ಒಂದರಂತೆ ಬೃಹತ್ ಚೆಕ್‌ಡ್ಯಾಂ ನಿರ್ಮಿಸಿದರೆ ರೈತರಿಗೆ ಅನುಕೂಲವಾಗು ತ್ತದೆ ಎನ್ನುತ್ತಾರೆ ಕೃಷಿಕ ಎಂ.ಡಿ. ಮಂಜುನಾಥ್‌.

ಅಂಕಿ ಅಂಶಗಳು
* 40 ಚೆಕ್‌ಡ್ಯಾಂ, ಹೊಂಡಗಳು ಭರ್ತಿ

* ಆಂಧ್ರಪ್ರದೇಶದ ಮಾದರಿಯಲ್ಲಿ ಬೃಹತ್‌ ಚೆಕ್‌ಡ್ಯಾಂಗಳನ್ನು ನಮ್ಮ ಗ್ರಾಮ ಪಂಚಾಯ್ತಿಗಳೂ ನಿರ್ಮಿಸಬೇಕು
  ಎಂ.ಡಿ. ಮಂಜುನಾಥ್‌, ಕೃಷಿಕ

* ಶೇ 10 ರಷ್ಟು ನೀರು ಕೂಡಾ ಬಳಕೆಗೆ ಸಿಕ್ಕಿಲ್ಲ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT