‘ಪಾಕ್‌ ಷಡ್ಯಂತ್ರಕ್ಕೆ ಕಾಂಗ್ರೆಸ್‌ ಮುಖಂಡರ ಸಹಕಾರ’

7

‘ಪಾಕ್‌ ಷಡ್ಯಂತ್ರಕ್ಕೆ ಕಾಂಗ್ರೆಸ್‌ ಮುಖಂಡರ ಸಹಕಾರ’

Published:
Updated:
‘ಪಾಕ್‌ ಷಡ್ಯಂತ್ರಕ್ಕೆ ಕಾಂಗ್ರೆಸ್‌ ಮುಖಂಡರ ಸಹಕಾರ’

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ದೇಶವಾಸಿಗಳು ಮತ್ತು ಸೈನಿಕರ ನಡುವೆ ಬಾಂಧವ್ಯ ಹಾಳು ಮಾಡಲು ಪಾಕಿಸ್ತಾನ ಷಡ್ಯಂತ್ರ ರೂಪಿಸುತ್ತಿದೆ. ಕಾಂಗ್ರೆಸ್‌ನ ಕೆಲವರು ಈ ಕಾರ್ಯದ ಟೆಂಡರ್ ಪಡೆದಿದ್ದಾರೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ರಾಜ್ಯ ಸಚಿವ ರಾಜ್ಯವರ್ಧನಸಿಂಗ್ ರಾಠೋಡ್‌ ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ್ದಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇಲ್ಲಿನ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌’ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಆಂತರಿಕವಾಗಿ ಕುಗ್ಗಿಸಲು ಪಾಕಿಸ್ತಾನ ಹಲವು ತಿಂಗಳಿಂದಲೂ ಯತ್ನಿಸುತ್ತಿದೆ. ಮೊದಲು ಸಾಮಾಜಿಕ ಜಾಲತಾಣಗಳ ಮೂಲಕ ಷಡ್ಯಂತ್ರ ಮಾಡಲು ಯತ್ನಿಸಲಾಯಿತು. ಆದರೆ, ದೇಶದ ಯುವಕರು ಅದಕ್ಕೆ ಅವಕಾಶ ನೀಡಲಿಲ್ಲ. ಗಡಿಯನ್ನು ದಾಟಿ ಹೋಗಿ ಶತ್ರುಗಳ ಮೇಲೆ ದಾಳಿ ನಡೆಸುವುದಕ್ಕೆ ನಮ್ಮ ಸೈನಿಕರು ಸಮರ್ಥರಾಗಿದ್ದಾರೆ. ದಿಟ್ಟ ಪ್ರತ್ಯುತ್ತರವನ್ನು ನೀಡುತ್ತಿದ್ದಾರೆ’ ಎಂದು ಹೇಳಿದರು.

ಇಡೀ ಜಗತ್ತು ಮೆಚ್ಚಿದೆ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ನಮ್ಮ ಜನರು ಮಾತ್ರವಲ್ಲದೇ, ಇಡೀ ಜಗತ್ತು ಮೆಚ್ಚಿದೆ. ನೋಟು ರದ್ದತಿ ಮೂಲಕ, ಭ್ರಷ್ಟಾಚಾರ ಹಾಗೂ ಕಪ್ಪುಹಣಕ್ಕೆ ಸಂಪೂರ್ಣ ಕಡಿವಾಣ ಹಾಕಿದ್ದಾರೆ.

ಮಾಧ್ಯಮ ಹಾಗೂ ಸರ್ಕಾರದ ನಡುವೆ ಅಂತರ ಕಾಪಾಡಿಕೊಳ್ಳುತ್ತಿದ್ದೇವೆ. ಹಿಂದೆ ಸರ್ಕಾರದ ಹೊರಗೆ ನಿರ್ಧಾರಗಳು ಆಗುತ್ತಿದ್ದವು. ಪತ್ರಕರ್ತರೂ ನಿರ್ಧಾರದ ಭಾಗವಾಗುತ್ತಿದ್ದರು. ಆದರೆ, ಈಗ ಜನರಿಗೆ ಬೇಕಾದ ಕಾರ್ಯಕ್ರಮಗಳನ್ನು ಮಾತ್ರವೇ ಜಾರಿಗೊಳಿಸುತ್ತಿದ್ದೇವೆ. ಇದಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಇದೀಗ ಪುನಾರಂಭವಾಗುತ್ತಿರುವ ನ್ಯಾಷನಲ್ ಹೆರಾಲ್ಡ್‌ನಲ್ಲಿ ಬರುವ ಸುದ್ದಿಗಳು ಎಷ್ಟು ನಿಜವಿರಬಹುದು ಎನ್ನುವುದನ್ನು ಆಲೋಚಿಸಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘ಮೋದಿ ಅಧಿಕಾರಕ್ಕೆ ಬರುವ ಮುನ್ನ 18ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ. ಈಗ ಇವುಗಳ ಪ್ರಮಾಣವನ್ನು ಕೇವಲ 4,000ಕ್ಕೆ ಇಳಿಸಿದ್ದೇವೆ. ದೂರದ ಹಳ್ಳಿಗಳಿಗೂ ವಿದ್ಯುತ್‌ ಒದಗಿಸುತ್ತಿದ್ದೇವೆ. ನಿರುದ್ಯೋಗದ ಸಮಸ್ಯೆ ನಿವಾರಣೆಗೆ ಸರ್ಕಾರ ಪಣ ತೊಟ್ಟಿದೆ. ಕೌಶಲ ತರಬೇತಿ ಯೋಜನೆ ಆರಂಭಿಸಲಾಗಿದ್ದು, ಇದಕ್ಕಾ­ಗಿಯೇ ಪ್ರತ್ಯೇಕ ಸಚಿವಾಲಯ ಅಸ್ತಿತ್ವಕ್ಕೆ ತರಲಾಗಿದೆ. 9,000 ಕೇಂದ್ರಗಳಲ್ಲಿ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ. ಸ್ವಂತ ಉದ್ಯೋಗ ಕೈಗೊಳ್ಳುವವರ ನೆರವಿಗೆ ‘ಮುದ್ರಾ’ ಯೋಜನೆಯಡಿ ₹ 3,000 ಕೋಟಿ ಸಾಲ ನೀಡಲಾಗಿದೆ’ ಎಂದು ವಿವರಿಸಿದರು.

ಜನಾಭಿಪ್ರಾಯ ಸಂಗ್ರಹಿಸಿ:  ‘ಬಜೆಟ್‌ಗೆ ಮುನ್ನ ಸಚಿವರು ಹಾಗೂ ನಮ್ಮ ಸಂಸದರು ಜನರೊಂದಿಗೆ ಸಂವಾದ ನಡೆಸಿದ್ದೆವು. ಇಲ್ಲಿ ವ್ಯಕ್ತವಾದ ಸಲಹೆ ಒಳಗೊಂಡ ವರದಿ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಕ್ರಮ ಜಾರಿಗೊಳಿಸಿದ್ದೇವೆ ಹಾಗೂ ಸಮಸ್ಯೆಗಳ ನಿವಾರಣೆಗೆ ಶ್ರಮಿಸುತ್ತಿದ್ದೇವೆ’ ಎಂದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ‘ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸುವ ಮೂಲಕ ಕಪ್ಪುಹಣ ಚಲಾವಣೆಗೆ ಕಡಿವಾಣ ಹಾಕಲಾಗಿದೆ. ಹಲವು ಜನಪರ ಯೋಜನೆಗಳ ಮೂಲಕ ಬಡವರಿಗೆ ನೆರವಾಗುತ್ತಿದ್ದೇವೆ’ ಎಂದು ತಿಳಿಸಿದರು. ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ‘ದೇಶದಲ್ಲಿ ಭ್ರಷ್ಟಾಚಾರರಹಿತ ಆಡಳಿತವನ್ನು ಯಾರಾದರೂ ನೀಡಿದ್ದರೆ ಅವರು ನರೇಂದ್ರ ಮೋದಿ ಮಾತ್ರ’ ಎಂದು ಪ್ರತಿಪಾದಿಸಿದರು.

‘ಮತ್ತೆ ಪ್ರಧಾನಿಯಾಗಬೇಕು ಎನ್ನುವ ಆಸೆ ಇಲ್ಲ. ಆದರೆ, ಅಧಿಕಾರ ಇರುವವರೆಗೂ ಜನರ ಸೇವೆ ಮಾಡುತ್ತೇನೆ. ದೇಶದಲ್ಲಿರುವ ಭ್ರಷ್ಟಾಚಾರ ಹಾಗೂ ಕಪ್ಪುಹಣ ಚಲಾವಣೆಯ ರೋಗವನ್ನು ಬೇರುಸಮೇತ ಕಿತ್ತು ಹಾಕುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ. ಅವರಿಗೆ ದೇಶದ ಹಿತಮುಖ್ಯವೇ ಹೊರತು ಅಧಿಕಾರವಲ್ಲ. ಸ್ವಾತಂತ್ರ್ಯ ಬಂದ ನಂತರ ಇಂತಹ ಪ್ರಧಾನಿಯನ್ನು ದೇಶ ಕಂಡಿರಲಿಲ್ಲ’ ಎಂದು ಶ್ಲಾಘಿಸಿದರು. ಶಾಸಕರಾದ ಡಿ.ಎಂ. ಐಹೊಳೆ, ಶಶಿಕಲಾ ಜೊಲ್ಲೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಕರ್ನಲ್ ಎ.ಕೆ. ಜಾನಬಾಜ್ ಭಾಗವಹಿಸಿದ್ದರು.

* * 

ದೇಶದ ಅಭಿವೃದ್ಧಿ ಮತ್ತು ವಿಕಾಸಕ್ಕೆ ಜನರ ನಿರ್ಣಾಯಕ ಸಂಕಲ್ಪ ಮುಖ್ಯ. ಪ್ರಧಾನಿ ಈ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಗೆ ಜನರು ಸಹಕಾರ ನೀಡಬೇಕು

ರಾಜ್ಯವರ್ಧನಸಿಂಗ್‌ ರಾಠೋಡ್‌

ಕೇಂದ್ರ ಸಚಿವ

* *

ದೇಶಕ್ಕೆ ನಿಜವಾಗಿಯೂ ಸ್ವಾತಂತ್ರ್ಯ ಬಂದದ್ದು 2014ರಲ್ಲಿ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜನರ ಸಂಕಷ್ಟಗಳು ನಿವಾರಣೆಯಾಗುತ್ತಿವೆ

ಸುರೇಶ ಅಂಗಡಿ

ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry