ಅಂಕಗಳ ಹುಚ್ಚು ಹಿಡಿಸಬೇಡಿ

7

ಅಂಕಗಳ ಹುಚ್ಚು ಹಿಡಿಸಬೇಡಿ

Published:
Updated:
ಅಂಕಗಳ ಹುಚ್ಚು ಹಿಡಿಸಬೇಡಿ

ಆತ್ಮೀಯ ಶಿಕ್ಷಕ ಬಂಧುಗಳೇ,

ನನ್ನ ಮಗ ಸರ್ಕಾರಿ ಶಾಲೆಗೆ ಹೋಗ್ತಿನಿ ಅಂದಾಗ ಖುಷಿಪಟ್ಟು ಅವನೊಂದಿಗೆ ಈ ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದೇನೆ. ಸಾಧ್ಯವಾದರೆ ಓದಿ.

ಇದು ನನ್ನ ಸಲಹೆಯೂ ಅಲ್ಲ, ಆಗ್ರಹವೂ ಅಲ್ಲ. ಹಾಗೆಂದು ನಿಮಗೆ ವಿನಂತಿಯೂ ಅಲ್ಲ. ಇದು ನನ್ನ ಮಗನ ಕುರಿತಾದ ನನ್ನ ಮಿಡಿತ. ನನ್ನ ಮಗನಿಗೆ ಇದನ್ನೇ ಕಲಿಸಿ, ಹೀಗೆ ಕಲಿಸಿ ಅಂತ ಸೂಚಿಸುವ ಪ್ರಯತ್ನವೂ ಅಲ್ಲ ಇದು. ನನ್ನೊಂದಿಗೆ ಹುಟ್ಟಿಕೊಂಡ ಮಾತುಗಳ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ.

ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. ಒಂದು ಉನ್ನತ ಕೆಲಸ ಹಿಡಿಯುವುದಕ್ಕಾಗಿ ನಾನು ಓದಿಗೆ ಬಂದಿದ್ದೇನೆ ಎಂದು ಹೇಳಿಕೊಡಬೇಡಿ. ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ ಮಾಡುವುದು ಶ್ರೇಷ್ಠ ಎಂಬುದನ್ನು ಹೇಳಿಕೊಡಿ.

ಅವನಿಗೆ ಪುಸ್ತಕಗಳ ಓದಿನ ಹುಚ್ಚು ಹಿಡಿಯುವಂತೆ ಮಾಡಿ. ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ, ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ.

ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಹೇಳಿಕೊಡಿ. ನೋವಿನಲ್ಲೂ ನಗುವುದನ್ನು ಕಲಿಸಿ, ಎಲ್ಲರೂ ತನ್ನವರಂತೆ ಕಾಣುವುದನ್ನು ಕಲಿಸಿ, ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ, ಸಮಾಜದ ಮೋಸಗಳನ್ನು ಪರಿಚಯಿಸಿ ಅದರ ವಿರುದ್ದ ಹೋರಾಟಕ್ಕೆ ಮನಸ್ಸು ಜಾಗೃತವಾಗುವಂತೆ ಮಾಡಿ.

ಸಾಧ್ಯವಾದರೆ ಅವನಿಗೆ ಪ್ರಕೃತಿಯಲ್ಲಿ ಕಳೆದು ಹೋಗುವುದನ್ನು ಹೇಳಿಕೊಡಿ. ಸುರಿಯುವ ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದವನ್ನು ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಸಾಲಿನಲ್ಲಿ ನಡೆದು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ. ಗಿಡ ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಿ.

ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ.  ಜೀವನ ತುಂಬಾ ಸುಂದರವಾಗಿದೆ ಎಂಬುದನ್ನು ಹೇಳಿಕೊಡಿ. ಪ್ರತಿಕ್ಷಣದಲ್ಲೂ ಖುಷಿಯಿದೆ ಎಂಬುದನ್ನು ಅವನು ತಿಳಿಯಲಿ. ಹೆಣ್ಣನ್ನು ಗೌರವಿಸುವ, ದೀನ ದುರ್ಬಲರನ್ನು ವಯೋವೃದ್ದರನ್ನು ನೋಡಿ ಮರುಗುವ ಗುಣ ಕಲಿಸಿ. ಸಹಾಯಕ್ಕೆ ಧಾವಿಸುವ ಛಲ ಬರುವಂತೆ ಮಾಡಿ.

ಫೇಲಾದರೂ ಪರವಾಗಿಲ್ಲ ಬದುಕಿನಲ್ಲಿ ಖುಷಿಯಾಗಿ ದುಡಿದು ಜೀವಿಸುವುದನ್ನು ಕಲಿಸಿ. ನಾನು ಅವನನ್ನು ಒಬ್ಬ ಡಾಕ್ಟರ್, ಎಂಜಿನಿಯರ್, ರಾಜಕಾರಣಿ, ಒಬ್ಬ ಉನ್ನತ ಅಧಿಕಾರಿಗಿಂತ ಒಬ್ಬ ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ನಾನು ಕಾಣಬಯಸುತ್ತೇನೆ.

ಅವನಿಗೆ ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ.

ಇತಿ

ನಿಮ್ಮ ವಿದ್ಯಾರ್ಥಿಯ ತಂದೆ

ಸದಾಶಿವ್ ಸೊರಟೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry