13 ಬಸ್‌ ತಂಗುದಾಣಗಳ ಸ್ಥಳಾಂತರ

7
‘ನಮ್ಮ ಮೆಟ್ರೊ’ ನಾಗವಾರ–ಗೊಟ್ಟಿಗೆರೆ ಮಾರ್ಗ l 96 ಸಾವಿರ ಚದರ ಮೀಟರ್ ಭೂಮಿ ಸ್ವಾಧೀನ

13 ಬಸ್‌ ತಂಗುದಾಣಗಳ ಸ್ಥಳಾಂತರ

Published:
Updated:
13 ಬಸ್‌ ತಂಗುದಾಣಗಳ ಸ್ಥಳಾಂತರ

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ನಾಗವಾರ–ಗೊಟ್ಟಿಗೆರೆ ಮಾರ್ಗದ ಕಾಮಗಾರಿ ಸಲುವಾಗಿ  ಒಟ್ಟು 13 ಬಸ್‌ನಿಲ್ದಾಣಗಳನ್ನು  ಹಾಗೂ 87 ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಬೇಕಾಗುತ್ತದೆ.

ಈ ಮಾರ್ಗದಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತ ಅಧ್ಯಯನ ವರದಿಯಲ್ಲಿ ಈ ಅಂಶಗಳಿವೆ.

ಈ ಮಾರ್ಗದ ಬಹುತೇಕ ಭಾಗವು ಈಗಿರುವ ರಸ್ತೆಯ ಕೆಳಗಡೆಯೇ ಹಾದು ಹೋಗಲಿದೆ.  ನಿಲ್ದಾಣಗಳು ನಿರ್ಮಾಣವಾಗುವಲ್ಲಿ 13 ವಿದ್ಯುತ್‌ ಕಂಬಗಳು ಹಾಗೂ ಎತ್ತರಿಸಿದ ಮಾರ್ಗವು ಹಾದು ಹೋಗುವಲ್ಲಿ  74 ವಿದ್ಯುತ್‌ಕಂಬಗಳು ಸ್ಥಳಾಂತರಗೊಳ್ಳಲಿವೆ.

ಎರಡು ಕಡೆ ಮ್ಯಾನ್‌ಹೋಲ್‌, ಎರಡು ಒಳಚರಂಡಿ ಮಾರ್ಗಗಳಿಗೆ ಹಾನಿ ಉಂಟಾಗಲಿದೆ. ಕಾಮಗಾರಿ ಸಲುವಾಗಿ ಒಂದು ಟೆಲಿಪೋನ್‌ ಕೇಬಲ್‌ ಹಾಗೂ ನಾಲ್ಕು ವಿದ್ಯುತ್‌ ಮಾರ್ಗಗಳನ್ನು ಸ್ಥಳಾಂತರಿಸಬೇಕಾಗುತ್ತದೆ.

ಈ ಮಾರ್ಗದಲ್ಲಿ ನಾಗವಾರದಿಂದ ಡೇರಿ ವೃತ್ತದವರೆಗೆ ಸುರಂಗ ಹಾಗೂ   ಅಲ್ಲಿಂದ ಗೊಟ್ಟಿಗೆರೆವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ.  ಸುರಂಗ ಮಾರ್ಗದಲ್ಲಿ 12 ಕಡೆ ಹಾಗೂ  ಎತ್ತರಿಸಿದ ಮಾರ್ಗದಲ್ಲಿ 6 ಕಡೆ ನಿಲ್ದಾಣಗಳು ನಿರ್ಮಾಣವಾಗಲಿವೆ.  ಸುರಂಗ ಮಾರ್ಗದ ನಿಲ್ದಾಣಗಳು ನಿರ್ಮಾಣವಾಗುವಲ್ಲಿ ನೆಲವನ್ನು ಅಗೆದು ಕಾಮಗಾರಿ ನಡೆಸಬೇಕಾಗುತ್ತದೆ.

96,020 ಎಕರೆ ಭೂಸ್ವಾಧೀನ: ಒಟ್ಟು 96,020 ಚದರ ಮೀಟರ್‌ ಜಾಗ  ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಈ ಪೈಕಿ, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ  4,453 ಚದರ ಮೀಟರ್‌ ಜಾಗವೂ ಸೇರಿದೆ.

ಈ ಯೋಜನೆಗಾಗಿ ಜಾಗ ಹಾಗೂ ಆಸ್ತಿ ಕಳೆದುಕೊಳ್ಳುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಗಜೆಟಿಯರ್‌ನಲ್ಲಿ ಪ್ರಕಟಿಸಿದ ದರದಂತೆ ನಗದು ಪರಿಹಾರ ನೀಡಲಾಗುತ್ತದೆ.

ಕೊತ್ತನೂರಿನಲ್ಲಿ ಡಿಪೊ: ಈ ಮಾರ್ಗದ ದಕ್ಷಿಣದ ತುದಿಯಲ್ಲಿ ರುವ ಕೊತ್ತನೂರಿನಲ್ಲಿ  ಡಿಪೊ ನಿರ್ಮಾಣಕ್ಕೆ 33 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ.

700 ಘನ ಮೀಟರ್‌ ನೀರು ಬಳಕೆ:  ಈ ಯೋಜನೆಗೆ ಒಟ್ಟು 700 ಘನ ಮೀಟರ್‌ ನೀರು ಬಳಕೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.  ಕಾಂಕ್ರೀಟ್‌ ಮಿಕ್ಸಿಂಗ್‌, ಕ್ಯೂರಿಂಗ್‌ ಹಾಗೂ ಸ್ವಚ್ಛತಾ ಕಾರ್ಯಗಳಿಗೆ  ಆದಷ್ಟು ಜಲಮಂಡಳಿಯವರು ಪೂರೈಸುವ ಸಂಸ್ಕರಿಸಿದ ನೀರನ್ನೇ (ಒಮ್ಮೆ ಬಳಕೆಯಾದ ನೀರು)  ಉಪಯೋಗಿಸುವಂತೆ ಸಲಹೆ ನೀಡಲಾಗಿದೆ.

ಈ ಮಾರ್ಗದ ಕಾರ್ಯಾಚರಣೆ ಆರಂಭವಾದ ಬಳಿಕವೂ ದಿನವೊಂದಕ್ಕೆ  ಸ್ವಚ್ಛತಾ ಕಾರ್ಯಕ್ಕೆ, ಶೌಚಾಲಯಕ್ಕೆ  ಹಾಗೂ ಕುಡಿಯಲು ಸೇರಿ ದಿನವೊಂದಕ್ಕೆ 24,000 ಲೀಟರ್‌ ನೀರು ಬಳಕೆ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಉದ್ಯೋಗಾವಕಾಶ: ಈ ಮಾರ್ಗದ ಕಾಮಗಾರಿ ವೇಳೆ 2.4 ಲಕ್ಷ ಮಾನವ ದಿನಗಳ ಕೆಲಸ ಸೃಷ್ಟಿಯಾಗಲಿದೆ. ಕಾಮಗಾರಿ ಹಂತದಲ್ಲಿ ದಿನವೊಂದಕ್ಕೆ ಗರಿಷ್ಠ 2000 ಮಂದಿಗೆ ಕೆಲಸ ಸಿಗಲಿದೆ. ಕಾರ್ಯಾಚರಣೆ ಆರಂಭವಾದ ಬಳಿಕವೂ ಮಾರ್ಗದ ನಿರ್ವಹಣೆಗೆ 250 ಮಂದಿಗೆ ಉದ್ಯೋಗ ದೊರಕಲಿದೆ.

****

810 ಮರಗಳಿಗೆ ಹಾನಿ

ಈ ಮಾರ್ಗದ ಕಾಮಗಾರಿಯಿಂದಾಗಿ  ಒಟ್ಟು 810  ಮರಗಳಿಗೆ  ಹಾನಿ ಉಂಟಾಗುತ್ತದೆ. ಎತ್ತರಿಸಿದ ಮಾರ್ಗ ಹಾದುಹೋಗುವಲ್ಲಿ 438 ಮರಗಳಿಗೆ   ಹಾಗೂ ಸುರಂಗ ಮಾರ್ಗದ ನಿಲ್ದಾಣಗಳು ನಿರ್ಮಾಣವಾಗುವಲ್ಲಿ 252 ಮರಗಳಿಗೆ ಹಾಗೂ ಕೊತ್ತನೂರಿನಲ್ಲಿ ಡಿಪೊ  ನಿರ್ಮಾಣವಾಗುವಲ್ಲಿ  120 ಮರಗಳು ಕಾಮಗಾರಿಯ ಪರಿಣಾಮ ಎದುರಿಸಲಿವೆ. ಈ ಮಾರ್ಗಕ್ಕಾಗಿ  206 ಮರಗಳನ್ನು ಸಂಪೂರ್ಣ ಹಾಗೂ ಕೆಲವು ಮರಗಳನ್ನು ಭಾಗಶಃ ಕಡಿಯಬೇಕಾಗುತ್ತದೆ

ನೆಲೆ ಕಳೆದುಕೊಳ್ಳುವ 206 ಮರಗಳಿಗೆ  ಪ್ರತಿಯಾಗಿ 2060 ಸಸಿಗಳನ್ನು ಕಾರಿಡಾರ್‌ನ ಉದ್ದಕ್ಕೂ ನೆಟ್ಟು ಬೆಳೆಸಬೇಕು.  ಇದಕ್ಕೆ 2.06 ಹೆಕ್ಟೇರ್‌   ಜಾಗದ ಅಗತ್ಯವಿದೆ. ಪ್ರತಿ ಗಿಡವನ್ನು ಐದು ವರ್ಷ ಬೆಳೆಸುವುದಕ್ಕೆ ₹ 1,000 ವೆಚ್ಚವಾಗಲಿದೆ. ಗಿಡಗಳನ್ನು ಸಿದ್ಧಪಡಿಸುವುದು, ರಕ್ಷಾಕವಚ, ನೀರುಣಿಸುವುದು, ಕಳೆ ಹಾಗೂ ಕೀಟ ನಿಯಂತ್ರಣದ ವೆಚ್ಚ ಇದರಲ್ಲಿ ಸೇರಿದೆ. ಇದರಲ್ಲಿ ಭೂಮಿಯ ವೆಚ್ಚ ಸೇರಿಲ್ಲ. ಪರಿಹಾರ ರೂಪದಲ್ಲಿ ನಡೆಸುವ ಅರಣ್ಯೀಕರಣಕ್ಕೆ ಒಟ್ಟು ₹ 20.60 ಲಕ್ಷ ಖರ್ಚಾಗಲಿದೆ.

7 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದ ಕೆಳಗಡೆಯೂ ಹೆಚ್ಚು ಎತ್ತರಕ್ಕೆ ಬೆಳೆಯದ ಜಾತಿಯ ಗಿಡಗಳನ್ನು ಬೆಳೆಸಬೇಕು. ಇದಕ್ಕೆ ₹ 18.74 ಲಕ್ಷ ವೆಚ್ಚವಾಗಲಿದೆ ಎಂದು ಸಲಹೆ ನೀಡಲಾಗಿದೆ.

65 ಮರ ಸ್ಥಳಾಂತರ: 65 ಮರಗಳನ್ನು ಸಮೀಪದ ಉದ್ಯಾನಗಳಿಗೆ ಸ್ಥಳಾಂತರ ಮಾಡಬೇಕು. ಪ್ರತಿ ಮರದ ಸ್ಥಳಾಂತರಕ್ಕೆ  ₹ 3,000 ವೆಚ್ಚ ಆಗಲಿದೆ.  65 ಮರಗಳ ಸ್ಥಳಾಂತರಕ್ಕೆ 2 ಲಕ್ಷ ವೆಚ್ಚವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry