ಗುತ್ತಿಗೆ ಆಧರಿತ ಪೌರ ಕಾರ್ಮಿಕರ ಮುಷ್ಕರ ಅಂತ್ಯ

7

ಗುತ್ತಿಗೆ ಆಧರಿತ ಪೌರ ಕಾರ್ಮಿಕರ ಮುಷ್ಕರ ಅಂತ್ಯ

Published:
Updated:
ಗುತ್ತಿಗೆ ಆಧರಿತ ಪೌರ ಕಾರ್ಮಿಕರ ಮುಷ್ಕರ ಅಂತ್ಯ

ಬೆಂಗಳೂರು: ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಭರವಸೆ ನೀಡಿದ್ದರಿಂದ ಗುತ್ತಿಗೆ ಪೌರಕಾರ್ಮಿಕರು  ಧರಣಿಯನ್ನು ಮಂಗಳವಾರ ಹಿಂಪಡೆದರು.

‘ಎಲ್ಲ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವೇತನವನ್ನು ನೇರವಾಗಿ ಕಾರ್ಮಿಕರ ಬ್ಯಾಂಕಿನ ಖಾತೆಗಳಿಗೆ ಜಮೆ ಮಾಡಬೇಕು. ಗುತ್ತಿಗೆದಾರರ ಹಾವಳಿಯಿಂದ ಮುಕ್ತಿಗೊಳಿಸಬೇಕು’ ಎಂದು ಒತ್ತಾಯಿಸಿ ಪೌರಕಾರ್ಮಿಕರು ನಗರದ ಬನ್ನಪ್ಪ ಉದ್ಯಾನದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ  ಆರಂಭಿಸಿದ್ದರು.  ಸ್ಥಳಕ್ಕೆ ಎಚ್‌.ಆಂಜನೇಯ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಬೆಂಗಳೂರು ಮೇಯರ್‌ ಜಿ.ಪದ್ಮಾವತಿ ಭೇಟಿ ನೀಡಿ ಪೌರಕಾರ್ಮಿಕರ ಅಹವಾಲು ಆಲಿಸಿದರು.

ಬಳಿಕ ಮಾತನಾಡಿದ ಆಂಜನೇಯ, ‘ನಾನು, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌, ಈಶ್ವರ ಖಂಡ್ರೆ ಸೋಮವಾರ ಸಭೆ ನಡೆಸಿ ಕೆಲ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ.  ರಾಜ್ಯದಲ್ಲಿ ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು ರದ್ದುಪಡಿಸುತ್ತಿದ್ದೇವೆ.   ಅದರಿಂದ ನಿಮಗೆ ಮುಕ್ತಿ ಸಿಕ್ಕಿದೆ’ ಎಂದು ಹೇಳಿದರು.

‘ಗುತ್ತಿಗೆದಾರರು ನಿಮ್ಮ ಪಾಸ್‌ಬುಕ್‌ಗಳನ್ನು ಪಡೆದು ಹಣ ಲಪಟಾಯಿಸುತ್ತಿದ್ದರು. ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ. ಸಂಬಳವನ್ನು ಆಯಾ ಸ್ಥಳೀಯ ಸಂಸ್ಥೆಗಳ  ವತಿಯಿಂದ ನೇರವಾಗಿ ಕಾರ್ಮಿಕರ ಬ್ಯಾಂಕಿನ ಖಾತೆಗಳಿಗೆ ಪಾವತಿಸಲಾಗುತ್ತದೆ’ ಎಂದರು.

‘ರಾಜ್ಯದಲ್ಲಿ ಒಟ್ಟು 10,000 ಪೌರಕಾರ್ಮಿಕ ಹುದ್ದೆಗಳು ಖಾಲಿ ಇವೆ. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4,000 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿಕೊಳ್ಳುವ ವೇಳೆ ಈಗಾಗಲೇ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನೇ ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 10 ವರ್ಷಗಳಲ್ಲಿ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ಸಂದರ್ಭದಲ್ಲಿ 60 ಮಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಕಾಯಂ ಕೆಲಸ ನೀಡುತ್ತೇವೆ’ ಎಂದರು. ‘ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ನೀಡುತ್ತಿದ್ದ ₹85 ಕೋಟಿ ಅನುದಾನವನ್ನು ₹100 ಕೋಟಿಗೆ ಹೆಚ್ಚಿಸುತ್ತೇವೆ’ ಎಂದು ಹೇಳಿದರು.

ಇದೇ 19ಕ್ಕೆ ಸಭೆ, ಜಾರ್ಜ್‌: ಪೌರ ಕಾರ್ಮಿಕರ ಬೇಡಿಕೆಗಳ ಬಗ್ಗೆ ಇದೇ 19 ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ  ಸಚಿವ ಕೆ.ಜೆ.ಜಾರ್ಜ್‌  ತಿಳಿಸಿದರು.

‘ನಾ ಮಾಟೇ ಶಾಸನಂ’

ಆಂಜನೇಯ ಅವರ ಭರವಸೆಯ ಮಾತುಗಳನ್ನು ಕೇಳಿದ ಪೌರಕಾರ್ಮಿಕರು, ‘ನಿಮ್ಮ ಮಾತು ನಿಜವೇ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ‘ನಾ ಮಾಟೇ ಶಾಸನಂ (ನನ್ನ ಮಾತೇ ಶಾಸನ). ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತೇ ಶಾಸನಂ’ ಎಂದು ಬಾಹುಬಲಿ ಚಿತ್ರದಲ್ಲಿ ಬರುವ ಸಂಭಾಷಣೆಯ ರೀತಿಯಲ್ಲೇ ಹೇಳಿದರು. ಅವರ ಮಾತಿಗೆ ಪೌರಕಾರ್ಮಿಕರು ಸಿಳ್ಳೆ, ಚಪ್ಪಾಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry